ನವದೆಹಲಿ, ಜನವರಿ 9: ಭಾರತದ ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎನ್ನುವ ಇನ್ಫೋಸಿಸ್ ನಾರಾಯಣಮೂರ್ತಿ ಅವರ ವಾದಕ್ಕೆ ಹಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಎಲ್ ಅಂಡ್ ಟಿ ಛೇರ್ಮನ್ ಎಸ್ ಎನ್ ಸುಬ್ರಮಣಿಯನ್ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಉದ್ಯೋಗಿಗಳು ವಾರಕ್ಕೆ 90 ಗಂಟೆ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದ್ದಾರೆ. ಅಷ್ಟು ಮಾತ್ರವಲ್ಲ, ಉದ್ಯೋಗಿಗಳು ಶನಿವಾರದ ಜೊತೆಗೆ ಭಾನುವಾರವೂ ಕೆಲಸ ಮಾಡಬೇಕು ಎಂಬುದು ಅವರ ಅನಿಸಿಕೆ.
ಈಗ ಹೆಚ್ಚಿನ ದೊಡ್ಡ ಸಂಸ್ಥೆಗಳು ಉದ್ಯೋಗಿಗಳಿಗೆ ವಾರಕ್ಕೆ ಎರಡು ದಿನ ಆಫ್ ನೀಡುತ್ತವೆ. ಆದರೆ, ವಾರಕ್ಕೆ ಆರು ದಿನ ಕೆಲಸ ಮಾಡಿಸುವ ಕೆಲವೇ ದೊಡ್ಡ ಸಂಸ್ಥೆಗಳಲ್ಲಿ ಎಲ್ ಅಂಡ್ ಟಿಯೂ ಒಂದು. ಉದ್ಯೋಗಿಗಳೊಂದಿಗಿನ ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಸಂಸ್ಥೆಯ ಮುಖ್ಯಸ್ಥರು ಈ ವಿಚಾರವಾಗಿ ಮಾತನಾಡುತ್ತಾ, ವಾರಕ್ಕೆ ಆರು ದಿನ ಅಲ್ಲ, ಎಲ್ಲಾ ಏಳು ದಿನವೂ ಕೆಲಸ ಮಾಡುವ ಬಗ್ಗೆ ಹೇಳಿದ್ದಾರೆ. ‘ಭಾನುವಾರವೂ ನಿಮ್ಮಿಂದ ಕೆಲಸ ಮಾಡಿಸಲು ಸಾಧ್ಯವಾಗುತ್ತಿಲ್ಲದಿರುವುದಕ್ಕೆ ನನಗೆ ವಿಷಾದ ಇದೆ. ನಾನು ಭಾನುವಾರವೂ ಕೆಲಸ ಮಾಡುತ್ತೇನೆ. ನೀವೂ ಕೂಡ ಭಾನುವಾರ ಕೆಲಸ ಮಾಡಿದರೆ ನನಗೆ ಹೆಚ್ಚು ಖುಷಿಯಾಗುತ್ತದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಮುಂದಿನ ನಾಲ್ಕೈದು ವರ್ಷದಲ್ಲಿ ಮನುಷ್ಯರ ಎರಡು ಲಕ್ಷ ಬ್ಯಾಂಕ್ ಉದ್ಯೋಗಗಳನ್ನು ಕಿತ್ತುಕೊಳ್ಳಲಿದೆ ಎಐ
‘ನೀವು ಮನೆಯಲ್ಲಿ ಕೂತ್ಕೊಂಡು ಏನ್ ಮಾಡ್ತೀರಿ? ಎಷ್ಟು ಹೊತ್ತು ಹೆಂಡ್ತಿ ಮುಖ ನೋಡಿಕೊಂಡು ಇರುತ್ತೀರಿ? ಮನೆಯಲ್ಲಿ ಹೆಂಡ್ತಿ ಎಷ್ಟು ಹೊತ್ತು ನಿಮ್ಮ ಮುಖ ನೋಡಿಕೊಂಡು ಇರ್ತಾರೆ? ಆಫೀಸ್ಗೆ ಬಂದು ಕೆಲಸ ಮಾಡಿ’ ಎಂದು ಡಬಲ್ ವೀಕಾಫ್ ನಿರೀಕ್ಷೆಯಲ್ಲಿದ್ದ ಉದ್ಯೋಗಿಗಳಿಗೆ ಅವರು ಶಾಕ್ ಕೊಟ್ಟಿದ್ದಾರೆ. ಎಲ್ ಅಂಡ್ ಟಿ ಛೇರ್ಮನ್ ಎಸ್ ಎನ್ ಸುಬ್ರಮಣಿಯನ್ ಅವರ ಈ ಸಂವಾದದ ವಿಡಿಯೋ ತುಣುಕು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಎಲ್ ಅಂಡ್ ಟಿ ಮುಖ್ಯಸ್ಥರು ತಮ್ಮ 90 ಗಂಟೆ ಕೆಲಸದ ವಾದಕ್ಕೆ ಚೀನೀಯರ ನಿದರ್ಶನ ನೀಡಿದ್ದಾರೆ. ಚೀನೀ ವ್ಯಕ್ತಿಯೊಬ್ಬರೊಂದಿಗೆ ನಡೆದ ಸಂವಾದವೊಂದನ್ನು ಉದಾಹರಣೆಯಾಗಿ ನೀಡಿದ್ದಾರೆ. ತಾನು ಆ ಚೀನೀ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದಾಗ ಆತ ಚೀನಾ ಹೇಗೆ ಅಮೆರಿಕವನ್ನು ಹಿಂದಿಕ್ಕಲು ಸಫಲವಾಯಿತು ಎಂಬುದಕ್ಕೆ ಕಾರಣ ನೀಡಿದರಂತೆ. ಅವರ ಪ್ರಕಾರ ಅಮೆರಿಕನ್ನರು ವಾರಕ್ಕೆ 50 ಗಂಟೆ ಮಾತ್ರವೇ ಕೆಲಸ ಮಾಡುತ್ತಾರೆ. ಚೀನೀಯರು 90 ಗಂಟೆ ಕೆಲಸ ಮಾಡುತ್ತಾರೆ. ಹೀಗಾಗಿ, ಚೀನಾ ವೇಗದಲ್ಲಿ ಬೆಳೆಯಲು ಸಾಧ್ಯವಾಯಿತು ಎಂದಿದ್ದಾರೆ.
ಇದನ್ನೂ ಓದಿ: ವಿಶ್ವದ ದರ್ಜೆ ರೈಲು ಪ್ರಯಾಣ ವ್ಯವಸ್ಥೆಗೆ ಹೂಡಿಕೆ; ಮುಕ್ಕಾಲು ಪಾಲು ಬಜೆಟ್ ಅನುದಾನ ಬಳಸಿದ ರೈಲ್ವೆ ಇಲಾಖೆ
‘ಇಗೋ ಇಲ್ಲಿದೆ ನಿಮಗೆ ಉತ್ತರ. ನೀವು ಜಗತ್ತನ್ನು ಗೆಲ್ಲಬೇಕೆಂದಿದ್ದರೆ ವಾರದಲ್ಲಿ 90 ಗಂಟೆ ಕೆಲಸ ಮಾಡಬೇಕು. ಮುಂದೆ ಬನ್ನಿ ಜನರೇ…’ ಎಂದು ಅವರು ಈ ವಿಡಿಯೋದಲ್ಲಿ ಹೇಳಿರುವುದು ಕಾಣುತ್ತದೆ.
ರೆಡ್ಡಿಟ್ ಪ್ಲಾಟ್ಫಾರ್ಮ್ನಲ್ಲಿ ಈ ವಿಡಿಯೋ ಶೇರ್ ಆಗಿದೆ. ಸಾಕಷ್ಟು ಪರ ವಿರೋಧ ಚರ್ಚೆ ಆಗಿದೆ. ಪರಕ್ಕಿಂತ ವಿರೋಧ ಅನಿಸಿಕೆಗಳೇ ಹೆಚ್ಚಾಗಿವೆ. ಕುಟುಂಬದೊಂದಿಗೆ ಸಮಯ ಕಳೆಯಲು ಅವಕಾಶ ಇಲ್ಲದಿದ್ದರೆ ಅದೇನು ಚೆಂದ ಎಂದು ಹಲವು ಪ್ರತಿಕ್ರಿಯಿಸಿದ್ದಾರೆ. ಖ್ಯಾತ ಉದ್ಯಮಿ ಹರ್ಷ್ ಗೋಯಂಕಾ ಕೂಡ ಸುಬ್ರಮಣಿಯನ್ ವಾದವನ್ನು ವಿರೋಧಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ