ಎಲ್ಲ ರಾಜ್ಯಗಳು ಅಧಿಸೂಚನೆ ಹೊರಡಿಸಿದ ಮೇಲೆ ಹೊಸ ವೇತನ ಸಂಹಿತೆಯು (New Wage Code) ದೇಶದಲ್ಲಿ ಶೀಘ್ರದಲ್ಲೇ ಜಾರಿಗೆ ಬರಲು ಸಿದ್ಧವಾಗಿದೆ. ಈ ಸಂಹಿತೆ ಜಾರಿಗೆ ಬಂದ ಮೇಲೆ ಅದು ಸಂಬಳದ ರಚನೆಯನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ. ವೇತನದ ಸ್ಲಿಪ್ ಮಾತ್ರವಲ್ಲದೆ, ಗ್ರಾಚ್ಯುಟಿ ಮೊತ್ತ ಮತ್ತು ಟಿಡಿಎಸ್ ಮೇಲೆ ಅನೇಕ ಬದಲಾವಣೆಗಳು ಆಗುತ್ತದೆ. ವೇತನದ ಸ್ಲಿಪ್ಗಳಲ್ಲಿ ಮೂಲ ವೇತನ, ಭತ್ಯೆಗಳು, ಎಚ್ಆರ್ಎ, ಕನ್ವೇಯನ್ಸ್, ಪಿಎಫ್ ಕಡಿತ, ಉದ್ಯೋಗಿಗಳ ಗುಂಪು ವಿಮೆ ಮತ್ತು ಟಿಡಿಎಸ್ ಇವೆಲ್ಲ ಒಳಗೊಂಡಿರುತ್ತವೆ. ಈ ಹೊಸ ಸಂಹಿತೆಯೊಂದಿಗೆ ಈ ಕೆಲವು ಅಂಶಗಳು ಸಂಪೂರ್ಣವಾಗಿ ಬದಲಾಗುತ್ತವೆ. ಇದು ಪೇ ಸ್ಲಿಪ್ ಅನ್ನು ಹೇಗೆ ಬದಲಾಯಿಸುತ್ತದೆ ಎಂಬುದನ್ನು ನೋಡೋಣ.
ಮೂಲ ವೇತನವು ಒಟ್ಟು ವೇತನದ ಶೇ 50ಕ್ಕಿಂತ ಕಡಿಮೆ ಇರುವಂತಿಲ್ಲ
ಹೊಸ ನಿಯಮಗಳ ಪ್ರಕಾರ, ಮೂಲ ವೇತನವು ಒಟ್ಟಾರೆ ವೇತನದ ಕನಿಷ್ಠ ಶೇ 50ರಷ್ಟು ಇರುತ್ತದೆ. ಮೂಲಭೂತ ಬದಲಾವಣೆಗಳ ನಂತರ, ಇಡೀ ರಚನೆಯು ಉದ್ಯೋಗಿಗಳ ಸಂಬಳದ ಸ್ಲಿಪ್ಗಳಲ್ಲಿ ಹೆಚ್ಚಿನ ಬದಲಾವಣೆಗೆ ಕಾರಣ ಆಗುತ್ತದೆ. ವೇತನ ಸಂಹಿತೆ ಮಸೂದೆ 2019ರಲ್ಲಿ ‘ವೇತನ’ದ ಅರ್ಥವನ್ನು ಬದಲಾಯಿಸಲಾಗಿದೆ. ಈಗ ಮೂಲ ವೇತನದ ಶೇಕಡಾವಾರು ಬದಲಾವಣೆಗಳಿಂದಾಗಿ ಪಿಎಫ್ ಕೊಡುಗೆ, ಗ್ರಾಚ್ಯುಟಿ ಮತ್ತು ಇತರ ಅಂಶಗಳಲ್ಲಿ ಬದಲಾವಣೆಗಳು ಅನಿವಾರ್ಯವಾಗಿದೆ. ತಕ್ಷಣದ ಪರಿಣಾಮವೆಂದರೆ ಟೇಕ್-ಹೋಮ್ ಅಥವಾ ಇನ್-ಹ್ಯಾಂಡ್ ಸಂಬಳದ ಕುಸಿತ. ಆದರೆ ಪಿಎಫ್ಗೆ ಉದ್ಯೋಗದಾತರ ಕೊಡುಗೆ ಹೆಚ್ಚಾಗುತ್ತದೆ.
ಭತ್ಯೆಗಳು ಮತ್ತು ವೇರಿಯಬಲ್ಸ್ಗಳು ಸಹ ಕಡಿಮೆ
ಹೊಸ ನಿಯಮಗಳ ಪ್ರಕಾರ, ಮೂಲ ವೇತನವು ಒಟ್ಟು ಸಂಬಳದ ಶೇಕಡಾ 50ರಷ್ಟಿರಬೇಕು. ಆದ್ದರಿಂದ ಕಂಪೆನಿಗಳು ಇತರ ಅಂಶಗಳನ್ನು ಸರಿಹೊಂದಿಸಲು ನೋಡುತ್ತವೆ. ಸದ್ಯಕ್ಕೆ, ಮೂಲ ವೇತನವು ಒಟ್ಟು ವೇತನದ ಶೇ 10 ರಿಂದ 40ರ ವರೆಗೆ ಇರುತ್ತದೆ. ಉಳಿದಂತೆ ಎಚ್ಆರ್ಎ, ಕನ್ವೇಯನ್ಸ್, ವಿಶೇಷ ಭತ್ಯೆ, ಫೋನ್ ಬಿಲ್ ಇತ್ಯಾದಿ ಭತ್ಯೆಗಳನ್ನು ಒಳಗೊಂಡಿದೆ. ಈಗ ಮೂಲ ವೇತನ ಹೆಚ್ಚಾಗುತ್ತಿರುವುದರಿಂದ ಭತ್ಯೆಗಳು ಕಡಿಮೆಯಾಗುತ್ತವೆ.
ಪಿಎಫ್ ಹೆಚ್ಚು ಹೋಗುತ್ತದೆ
ಪಿಎಫ್ ಅನ್ನು ಮೂಲ ವೇತನದ ಶೇಕಡಾವಾರು ಎಂದು ಲೆಕ್ಕ ಹಾಕಲಾಗುತ್ತದೆ. ಈಗ ಮೂಲ ವೇತನ ಹೆಚ್ಚಳದಿಂದ ಪಿಎಫ್ ಕೂಡ ಏರಿಕೆಯಾಗಲಿದೆ. ಇದು ಉದ್ಯೋಗಿಗಳ ಭವಿಷ್ಯವನ್ನು ಭದ್ರಪಡಿಸುತ್ತದೆ. ಆದರೆ ಒಟ್ಟು ಮೊತ್ತದಲ್ಲಿ ಹೆಚ್ಚಿನ ಪಿಎಫ್ ಅನ್ನು ಕಡಿತಗೊಳಿಸಲಾಗುತ್ತದೆ. ಇದು ಟೇಕ್-ಹೋಮ್ ಸಂಬಳದ ಮೇಲೆ ನಕಾರಾತ್ಮಕ ರೀತಿಯಲ್ಲಿ ಪರಿಣಾಮ ಬೀರಬಹುದು.
ತೆರಿಗೆ ಹೊಣೆಗಾರಿಕೆ ಹೆಚ್ಚಾಗಲಿದೆ
ಮೂಲ ವೇತನ, ಬೋನಸ್ ಮತ್ತು ಎಚ್ಆರ್ಎ ಕೆಲವು ಭಾಗಗಳ ಹೊರತಾಗಿ ಭತ್ಯೆಗಳು ಪ್ರಸ್ತುತ ನಿಯಮಗಳ ಅಡಿಯಲ್ಲಿ ತೆರಿಗೆಗೆ ಒಳಪಡುವುದಿಲ್ಲ. ಮೂಲವೇತನದ ಏರಿಕೆಯೊಂದಿಗೆ ತೆರಿಗೆಗಳು ಸಹ ಹೆಚ್ಚಾಗುತ್ತವೆ. ಹೊಸ ಬದಲಾವಣೆಗಳೊಂದಿಗೆ ತೆರಿಗೆಗೆ ಒಳಪಡದ ಭಾಗವು ಗಮನಾರ್ಹವಾಗಿ ಕುಗ್ಗುತ್ತದೆ. ಇದು ಶೇ 20ರಿಂದ 25 ರವರೆಗೆ ಇರುತ್ತದೆ. ಅದು ಈ ಹಿಂದೆ ಶೇ 50 ಅಥವಾ ಅದಕ್ಕಿಂತ ಹೆಚ್ಚಿತ್ತು. ಹೊಸ ನಿಯಮಗಳ ಪ್ರಕಾರ, ಎಚ್ಆರ್ಎ ಮೇಲಿನ ತೆರಿಗೆ ಕೂಡ ಗಣನೀಯವಾಗಿ ಏರುವ ನಿರೀಕ್ಷೆಯಿದೆ. ಮೂಲ ವೇತನ ಹೆಚ್ಚಳದಿಂದಾಗಿ ಎಚ್ಆರ್ಎ ಕೂಡ ಏರಿಕೆಯಾಗಲಿದೆ. ಇದು ಎಚ್ಆರ್ಎ ತೆರಿಗೆಯ ಭಾಗವನ್ನು ಹೆಚ್ಚಿಸುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ