
ನವದೆಹಲಿ: ಮನೆ ಖರೀದಿಸಲು ಅನಿವಾಸಿ ಭಾರತೀಯರು (NRIs) ಬೆಂಗಳೂರು (Bengaluru), ದೆಹಲಿ (Delhi) ಹಾಗೂ ಹೈದರಾಬಾದ್ (Hyderabad) ನಗರಗಳನ್ನೇ ಪ್ರಮುಖ ಆಯ್ಕೆಯನ್ನಾಗಿ ಪರಿಗಣಿಸುತ್ತಿದ್ದಾರೆ. ಅತಿಹೆಚ್ಚಿನ ಮಾಲಿನ್ಯದಿಂದ ಸುದ್ದಿಯಾಗಿದ್ದರೂ, ಅಸಮರ್ಪಕ ಮೂಲಸೌಕರ್ಯಗಳಿಂದ ಚರ್ಚೆಗೆ ಗ್ರಾಸವಾಗಿದ್ದರೂ ದೆಹಲಿ ಮತ್ತು ಬೆಂಗಳೂರೇ ಮನೆ ಖರೀದಿಗೆ ಅನಿವಾಸಿ ಭಾರತೀಯರ ಪ್ರಮುಖ ಆದ್ಯತೆಯಾಗಿದೆ ಎಂದು ಸಮೀಕ್ಷಾ ವರದಿಯೊಂದು ತಿಳಿಸಿದೆ.
‘ಸಿಐಐ-ಅನರಾಕ್ ಕನ್ಸ್ಯೂಮರ್ ಸೆಂಟಿಮೆಂಟ್ ಸರ್ವೇ – ಎಚ್1-2022’ ಪ್ರಕಾರ, ಸಮೀಕ್ಷೆಯಲ್ಲಿ ಭಾಗಿಯಾದ ಕನಿಷ್ಠ ಶೇಕಡಾ 60ರಷ್ಟು ಮಂದಿ ಹೈದರಾಬಾದ್, ದೆಹಲಿ ಹಾಗೂ ಬೆಂಗಳೂರಿನಲ್ಲಿ ಮನೆ ಖರೀದಿಗೆ ಉತ್ಸುಕರಾಗಿರುವುದಾಗಿ ತಿಳಿಸಿದ್ದಾರೆ. ಮುಂಬೈ ಮೆಟ್ರೋಪಾಲಿಟನ್ ಪ್ರದೇಶವು ನಾಲ್ಕನೇ ಆಯ್ಕೆಯಾಗಿ ಪರಿಗಣಿಸಲ್ಪಟ್ಟಿದೆ. 2021ರ ಮೊದಲ ಆರು ತಿಂಗಳುಗಳಲ್ಲಿ ನಡೆಸಲಾಗಿದ್ದ ಸಮೀಕ್ಷೆಯಲ್ಲಿ ಅನಿವಾಸಿ ಭಾರತೀಯರು ಬೆಂಗಳೂರು, ಪುಣೆ ಹಾಗೂ ಚೆನ್ನೈ ಬಗ್ಗೆ ಒಲವು ವ್ಯಕ್ತಪಡಿಸಿದ್ದರು.
ಹೈದರಾಬಾದ್ಗೆ ಮೊದಲ ಆದ್ಯತೆ
ಹೈದರಾಬಾದ್ನಲ್ಲಿ ಮನೆ ಖರೀದಿಸುವುದಕ್ಕೆ ಅನಿವಾಸಿ ಭಾರತೀಯರು ಹೆಚ್ಚಿನ ಒಲವು ವ್ಯಕ್ತಪಡಿಸಿದ್ದಾರೆ. ಶೇಕಡಾ 22ರಷ್ಟು ಮಂದಿ ತೆಲಂಗಾಣದಲ್ಲಿ ಖರೀದಿಗೆ ಇಚ್ಛೆ ವ್ಯಕ್ತಪಡಿಸಿದ್ದಾರೆ. ಶೇಕಡಾ 20ರಷ್ಟು ಮಂದಿ ದೆಹಲಿ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ. ಐಟಿ ನಗರ ಬೆಂಗಳೂರಿನ ಬಗ್ಗೆ ಶೇಕಡಾ 18ರಷ್ಟು ಮಂದಿ ಆಸಕ್ತಿ ವ್ಯಕ್ತಪಡಿಸಿದ್ದಾರೆ.
ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಕುಸಿತ, ಗೃಹ ಸಾಲದ ಬಡ್ಡಿ ದರ ಹೆಚ್ಚಳ ಇತ್ಯಾದಿಗಳ ಹೊರತಾಗಿಯೂ ಸ್ವದೇಶದಲ್ಲಿ ಮನೆ ಹೊಂದಿರಬೇಕೆಂಬ ಭಾವನಾತ್ಮಕ ತುಡಿತ ಹೆಚ್ಚು ಕೆಲಸ ಮಾಡುತ್ತಿದೆ ಎಂದು ಅನರಾಕ್ ಸಮೂಹದ ಸಂಶೋಧನಾ ವಿಭಾಗದ ಮುಖ್ಯಸ್ಥ, ಹಿರಿಯ ನಿರ್ದೇಶಕ ಪ್ರಶಾಂತ್ ಠಾಕೂರ್ ತಿಳಿಸಿರುವುದಾಗಿ ‘ಎನ್ಡಿಟಿವಿ’ ವರದಿ ಮಾಡಿದೆ. 2021ಕ್ಕೆ ಹೋಲಿಸಿದರೆ 2022ರಲ್ಲಿ ಅನಿವಾಸಿ ಭಾರತೀಯರ ಮನೆ ಖರೀದಿ ಬೇಡಿಕೆ ಶೇಕಡಾ 15ರಿಂದ 20ರಷ್ಟು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: Income Tax Gold Sale: ಮನೆ ಖರೀದಿಗೋ ನಿರ್ಮಾಣಕ್ಕಾಗಿಯೋ ಚಿನ್ನ ಮಾರಾಟ ಮಾಡಿದಲ್ಲಿ ಆದಾಯ ತೆರಿಗೆ ಲೆಕ್ಕಾಚಾರ ಹೇಗೆ?
‘ಅನರಾಕ್ ಸಂಶೋಧನೆ ಪ್ರಕಾರ 2022ರ ಜನವರಿ – ಸೆಪ್ಟೆಂಬರ್ ಅವಧಿಯಲ್ಲಿ ಪ್ರಮುಖ 7 ನಗರಗಳಲ್ಲಿ ಅಂದಾಜು 2.73 ಲಕ್ಷ ಮನೆಗಳು ಮಾರಾಟವಾಗಿವೆ. ಇದರಲ್ಲಿ ಅನಿವಾಸಿ ಭಾರತೀಯರ ಪಾಲು ಶೇಕಡಾ 10ರಿಂದ 15ರಷ್ಟಿದೆ ಎಂದು ಪ್ರಶಾಂತ್ ಠಾಕೂರ್ ಮಾಹಿತಿ ನೀಡಿದ್ದಾರೆ.
ಭಾರತಕ್ಕೆ ಮರಳಲು ಎನ್ಆರ್ಐಗಳ ಆಸಕ್ತಿ
ಉಕ್ರೇನ್-ರಷ್ಯಾ ಯುದ್ಧದಿಂದ ಅನೇಕ ದೇಶಗಳಲ್ಲಿ ಆರ್ಥಿಕ ಹಿಂಜರಿತ ಉಂಟಾಗಿದೆ. ಈ ಬೆಳವಣಿಗೆಯಿಂದ ಅನೇಕ ಅನಿವಾಸಿ ಭಾರತೀಯರು ಈಗ ಭಾರತಕ್ಕೆ ಮರಳಲು ಬಯಸುತ್ತಿದ್ದಾರೆ . ಅವರು 90 ಲಕ್ಷ ರೂ.ನಿಂದ 1.5 ಕೋಟಿ ರೂ.ವರೆಗಿನ ಆಸ್ತಿಗಳನ್ನು ಬಯಸುತ್ತಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ