I2U2 Summit: ಭಾರತದಲ್ಲಿ ಸಮಗ್ರ ಆಹಾರ ಪಾರ್ಕ್ ಸ್ಥಾಪನೆಗೆ 2 ಶತಕೋಟಿ ಡಾಲರ್ ಹೂಡಿಕೆ ಮಾಡಲಿದೆ ಯುಎಇ
Food Security: ಆಹಾರ ಭದ್ರತೆ, ಸ್ವಚ್ಛ ಇಂಧನ, ದೀರ್ಘಾವಧಿಗೆ ವೈವಿಧ್ಯಮಯ ಆಹಾರ ಉತ್ಪಾದನೆ ಹಾಗೂ ವಿತರಣೆ ವ್ಯವಸ್ಥೆ ರೂಪಿಸುವ ಬಗ್ಗೆ ಹಲವು ಅಂಶಗಳನ್ನು I2U2 ನಾಯಕರು ನೀಡಿದ ಜಂಟಿ ಹೇಳಿಕೆಯಲ್ಲಿ ಪ್ರಸ್ತಾಪಿಸಿದರು.

ದೆಹಲಿ: ಅರಬ್ ಸಂಯುಕ್ತ ಸಂಸ್ಥಾನವು (United Arab Emirates – UAE) ಭಾರತದಲ್ಲಿ ಸಮಗ್ರ ಆಹಾರ ಪಾರ್ಕ್ಗಳ ಸ್ಥಾಪನೆಗೆ 2 ಶತಕೋಟಿ ಡಾಲರ್ ಹೂಡಿಕೆ ಮಾಡಲಿದೆ. ನಾಲ್ಕು ಸದಸ್ಯ ದೇಶಗಳಿರುವ ‘I2U2′ ಸಭೆಯಲ್ಲಿ ಈ ಭರವಸೆಯನ್ನು ಯುಎಇ ನೀಡಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಇಸ್ರೇಲ್ ಪ್ರಧಾನಿ ಯಯೀರ್ ಲಪಿಡ್ ಮತ್ತು ಯುಎಇ ಅಧ್ಯಕ್ಷ ಮೊಹಮದ್ ಬಿನ್ ಜಯಾದ್ ಅಲ್ ಅನಹ್ಯಾನ್ ಪಾಲ್ಗೊಂಡಿದ್ದ ವರ್ಚುವಲ್ ಸಭೆಯಲ್ಲಿ ಯುಎಇ ತನ್ನ ಹೂಡಿಕೆ ನಿರ್ಧಾರ ಪ್ರಕಟಿಸಿತು.
ಆಹಾರ ಭದ್ರತೆ, ಸ್ವಚ್ಛ ಇಂಧನ, ದೀರ್ಘಾವಧಿಗೆ ವೈವಿಧ್ಯಮಯ ಆಹಾರ ಉತ್ಪಾದನೆ ಹಾಗೂ ವಿತರಣೆ ವ್ಯವಸ್ಥೆ ರೂಪಿಸುವ ಬಗ್ಗೆ ಹಲವು ಅಂಶಗಳನ್ನು I2U2 ನಾಯಕರು ನೀಡಿದ ಜಂಟಿ ಹೇಳಿಕೆಯಲ್ಲಿ ಪ್ರಸ್ತಾಪಿಸಿದರು. ‘I2U2′ ಎಂಬಲ್ಲಿ I ಎನ್ನುವುದು ಭಾರತ ಮತ್ತು ಇಸ್ರೇಲ್ (India and Israel) ದೇಶಗಳನ್ನು ಸಂಬೋಧಿಸಿದರೆ, U ಎನ್ನುವುದು ಅಮೆರಿಕ ಮತ್ತು ಅರಬ್ ಸಂಯುಕ್ತ ಸಂಸ್ಥಾನವನ್ನು (US and the UAE) ಸಂಬೋಧಿಸುತ್ತದೆ.
ಫುಡ್ ಪಾರ್ಕ್ಗಳಿಗೆ ಸಂಬಂಧಿಸಿದ ಯೋಜನೆ ಕುರಿತು ಪ್ರಸ್ತಾಪಿಸಿರುವ ಜಂಟಿ ಹೇಳಿಕೆಯು, ‘ಭಾರತವು ಈ ಯೋಜನೆಗೆ ಬೇಕಿರುವಷ್ಟು ಭೂಮಿಯನ್ನು ಒದಗಿಸುವ ಜೊತೆಗೆ ರೈತರಲ್ಲಿ ಯೋಜನೆಯ ಬಗ್ಗೆ ಜಾಗೃತಿ ಮೂಡಿಸುತ್ತದೆ. ಅಮೆರಿಕ ಮತ್ತು ಇಸ್ರೇಲ್ನ ಖಾಸಗಿ ವಲಯದ ಕಂಪನಿಗಳು ತಮ್ಮ ಪರಿಣತಿ ಮತ್ತು ಆವಿಷ್ಕಾರಗಳನ್ನು ಹಂಚಿಕೊಳ್ಳಬೇಕು. ಈ ಮೂಲಕ ಯೋಜನೆಯ ಒಟ್ಟಾರೆ ಸುಸ್ಥಿರತೆಗೆ ನೆರವಾಗಬೇಕು’ ಎಂದು ತಿಳಿಸಿದೆ.
ಈ ಹೂಡಿಕೆಯಿಂದ ಭಾರತದಲ್ಲಿ ಕೃಷಿ ಉತ್ಪನ್ನಗಳ ಇಳುವರಿ ಹೆಚ್ಚಾಗಲಿದೆ. ಇದರಿಂದ ದಕ್ಷಿಣ ಏಷ್ಯಾ ಮತ್ತು ಮಧ್ಯಪ್ರಾಚ್ಯದ ಆಹಾರ ಅಭದ್ರತೆಗೆ ನೂತನ ಪರಿಹಾರ ಒದಗಿಸುತ್ತದೆ. ಗುಜರಾತ್ನಲ್ಲಿ I2U2 ಸದಸ್ಯ ದೇಶಗಳು ಹೈಬ್ರಿಡ್ ನವೀಕರಿಸಬಹುದಾದ ಇಂಧನ ಯೋಜನೆಗೆ ವೇಗ ನೀಡಲಿವೆ. ಈ ಯೋಜನೆಯು ಕಾರ್ಯಾರಂಭ ಮಾಡಿದಾಗ ಗಾಳಿ ಮತ್ತು ಸೌರಶಕ್ತಿಯ ಮೂಲಕ 300 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗಲಿದೆ.
ಆಹಾರ ಭದ್ರತೆಯನ್ನು ಹೆಚ್ಚಿಸಲು ವೈಜ್ಞಾನಿಕವಾದ, ಎಲ್ಲರನ್ನೂ ಒಳಗೊಳ್ಳುವ ನೂತನ ತಂತ್ರಗಳ ಬಳಕೆಗೆ ನಾಲ್ಕೂ ದೇಶಗಳ ನಾಯಕರು ಸಹಮತ ವ್ಯಕ್ತಪಡಿಸಿದರು. ವಿಶ್ವವು ಎದುರಿಸುತ್ತಿರುವ ಗಂಡಾಂತರಗಳಿಗೆ ಪರಿಹಾರ ಕಂಡುಕೊಳ್ಳಲು ಉದ್ಯಮಶೀಲತೆಯ ಉತ್ಸಾಹ ಮತ್ತು ಸಾಮಾಜಿಕ ಬಲವನ್ನು ಬಳಸಿಕೊಳ್ಳುವ ಗುರಿಯನ್ನು ಒಪ್ಪಿಕೊಂಡರು. ಕಳೆದ ವರ್ಷ ಅಕ್ಟೋಬರ್ 18ರಂದು ನಡೆದಿದ್ದ ಸಭೆಯಲ್ಲಿ I2U2 ಗುಂಪು ರೂಪಿಸುವ ಚಿಂತನೆ ಹುಟ್ಟುಕೊಂಡಿತ್ತು. ಕಳೆದ ಕೆಲ ವರ್ಷಗಳಿಂದೀಚೆಗೆ ಈ ಮೂರೂ ದೇಶಗಳೊಂದಿಗೆ ಭಾರತವು ಸಹಕಾರ ಸಂಬಂಧಗಳು ಉತ್ತಮ ರೀತಿಯಲ್ಲಿ ವೃದ್ಧಿಯಾಗುತ್ತಿದೆ.
Published On - 12:45 pm, Fri, 15 July 22




