AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bill Gates: ಬಿಲ್ ಅಂಡ್ ಮೆಲಿಂಡಾ ಗೇಟ್ಸ್ ಫೌಂಡೇಷನ್​ಗೆ ಬಿಲ್​ ಗೇಟ್ಸ್​ರಿಂದ ಈ ತಿಂಗಳು 1,59,811 ಕೋಟಿ ರೂಪಾಯಿ ದಾನ

ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಬಿಲ್​ ಗೇಟ್ಸ್​ ತಮ್ಮೆಲ್ಲ ಸಂಪತ್ತನ್ನೂ ದಾನ ಮಾಡುವುದಾಗಿ ಘೋಷಿಸಿದ್ದಾರೆ. ಮೊದಲಿಗೆ ಈ ತಿಂಗಳು 20 ಬಿಲಿಯನ್ ಯುಎಸ್​ಡಿ ವರ್ಗಾವಣೆ ಮಾಡಲಿದ್ದಾರೆ.

Bill Gates: ಬಿಲ್ ಅಂಡ್ ಮೆಲಿಂಡಾ ಗೇಟ್ಸ್ ಫೌಂಡೇಷನ್​ಗೆ ಬಿಲ್​ ಗೇಟ್ಸ್​ರಿಂದ ಈ ತಿಂಗಳು 1,59,811 ಕೋಟಿ ರೂಪಾಯಿ ದಾನ
ಬಿಲ್​ ಗೇಟ್ಸ್​ (ಸಂಗ್ರಹ ಚಿತ್ರ)
TV9 Web
| Edited By: |

Updated on:Jul 16, 2022 | 3:19 PM

Share

ಫೋರ್ಬ್ಸ್​ನಿಂದ ಸಿದ್ಧಪಡಿಸುವ ವಿಶ್ವದ ಶತಕೋಟ್ಯಧಿಪತಿಗಳ ಪಟ್ಟಿಯಲ್ಲಿ ಬಿಲ್​ಗೇಟ್ಸ್​ ಈಗ ಐದನೇ ಸ್ಥಾನದಲ್ಲಿದ್ದಾರೆ. ಅವರು ಮಾಡಿರುವ ಘೋಷಣೆಯೊಂದು ಈಗ ಹುಬ್ಬೇರಿಸುವಂತೆ ಮಾಡಿದೆ. ಅಂಥದ್ದೇನು ಹೇಳಿದ್ದಾರೆ ಅಂತೀರಾ? ಬಿಲ್ ಗೇಟ್ಸ್ (Bill Gates) ಮತ್ತು ಅವರ ಮಾಜಿ ಪತ್ನಿ ಮೆಲಿಂಡಾ ಸೇರಿ ಎನ್​ಜಿಒ ಒಂದನ್ನು ಎರಡು ದಶಕದ ಹಿಂದೆ ಆರಂಭಿಸಿದ್ದರು. ಆ ಫೌಂಡೇಷನ್​ಗೆ ತಮ್ಮ ಎಲ್ಲ ಆಸ್ತಿಯನ್ನು ಭವಿಷ್ಯದಲ್ಲಿ ದಾನ ಮಾಡುವುದಕ್ಕೆ ಬಿಲ್ ಗೇಟ್ಸ್ ನಿರ್ಧರಿದ್ದಾರೆ. ಆದರೆ ಅದು ಸದ್ಯಕ್ಕಲ್ಲ. ತಮಗಾಗಿ ಹಾಗೂ ತಮ್ಮ ಕುಟುಂಬಕ್ಕಾಗಿ ಖರ್ಚು ಮಾಡಿದ್ದನ್ನು ಹೊರತುಪಡಿಸಿದಂತೆ ಉಳಿದ ಎಲ್ಲ ಆಸ್ತಿಯನ್ನು ಫೌಂಡೇಷನ್​ಗೆ ದಾನ ಮಾಡಲಿದ್ದಾರೆ.

ನಾನು ನೀಡುತ್ತಿರುವ ಈ ಹಣ ಖಂಡಿತವಾಗಿಯೂ ತ್ಯಾಗ ಅಲ್ಲ. ಈ ಮಹಾನ್ ಸವಾಲುಗಳನ್ನು ಎದುರಿಸುವಲ್ಲಿ ಪಾಲ್ಗೊಳ್ಳುವುದಕ್ಕೆ ಸಿಕ್ಕ ಅಮೋಘ ಅವಕಾಶ. ನಾನು ಕೆಲಸವನ್ನು ಖುಷಿ ಪಟ್ಟಿದ್ದೇನೆ. ಜನರ ಜೀವನ ಸುಧಾರಿಸುವುದಕ್ಕೆ ಅತಿ ದೊಡ್ಡ ಪ್ರಭಾವ ಬೀರುವಂಥ ಕೆಲಸಗಳಿಗಾಗಿ ನನ್ನ ಸಂಪನ್ಮೂಲವನ್ನು ಹಿಂತಿರುಗಿಸುವುದು ಜವಾಬ್ದಾರಿ ಎಂದು ಭಾವಿಸುತ್ತೇನೆ. ಅಪಾರ ಪ್ರಮಾಣದಲ್ಲಿ ಸಂಪತ್ತಿರುವವರು ಹಾಗೂ ಈ ರೀತಿ ಮಾಡುವುದಕ್ಕೆ ಸಾಧ್ಯವಿರುವವರು ಸಹ ಇಂಥ ಕೆಲಸಕ್ಕೆ ಮುಂದಾಗುತ್ತಾರೆ ಎಂಬ ಭರವಸೆ ಇದೆ ಎಂದು ಬಿಲ್​ ಗೇಟ್ಸ್​ ಬ್ಲಾಗ್​ನಲ್ಲಿ ಹೇಳಿದ್ದಾರೆ.

2026ಕ್ಕೆ ಗುರಿ ನಿಗದಿಪಡಿಸಿಕೊಂಡಿರುವ ಬಿಲ್ ಗೇಟ್ಸ್ ಅವರು ಈ ತಿಂಗಳು 2000 ಕೋಟಿ ಅಮೆರಿಕನ್ ಡಾಲರ್ ಅನ್ನು ಫೌಂಡೇಷನ್​ಗೆ ವರ್ಗಾಯಿಸಲಿದ್ದಾರೆ. ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳಬೇಕು ಅಂದರೆ 1,59,811 ಕೋಟಿ ಆಗುತ್ತದೆ. ಬಿಲ್​ ಗೇಟ್ಸ್​ ಅವರು ವೆಬ್​ಸೈಟ್- www.gatesnotes.comನಲ್ಲಿ ಭವಿಷ್ಯದ ಯೋಜನೆಯನ್ನು ಬಹಿರಂಗಪಡಿಸಿದ್ದಾರೆ.

“ನಮ್ಮ ಮಂಡಳಿ ಬೆಂಬಲ ಮತ್ತು ಮಾರ್ಗದರ್ಶನದೊಂದಿಗೆ ಗೇಟ್ಸ್ ಫೌಂಡೇಷನ್ ಕೊವಿಡ್‌ಗೆ ಮೊದಲು ವರ್ಷಕ್ಕೆ ಸುಮಾರು ಯುಎಸ್​ಡಿ 6 ಶತಕೋಟಿಯಿಂದ 2026ರ ವೇಳೆಗೆ ಪ್ರತಿ ವರ್ಷಕ್ಕೆ ಯುಎಸ್​ಡಿ 9 ಶತಕೋಟಿ ವೆಚ್ಚವನ್ನು ಹೆಚ್ಚಿಸಲು ಉದ್ದೇಶಿಸಿದೆ. ನಮ್ಮ ಗಮನವು ಒಂದೇ ಆಗಿರುತ್ತದೆ- ಆದರೆ ಈ ಮಹಾನ್ ಅಗತ್ಯ ಮತ್ತು ಅವಕಾಶದ ಕ್ಷಣದಲ್ಲಿ ಈ ಖರ್ಚು ನಾವು ಈಗಾಗಲೇ ಕೆಲಸ ಮಾಡುತ್ತಿರುವ ಪ್ರದೇಶಗಳಲ್ಲಿ ಹೆಚ್ಚು ಹೂಡಿಕೆ ಮಾಡುವ ಮೂಲಕ ಪ್ರಗತಿ ವೇಗಗೊಳಿಸಲು ಅನುಮತಿಸುತ್ತದೆ. ಈ ವೆಚ್ಚದ ಹೆಚ್ಚಳವನ್ನು ಸಾಧ್ಯವಾಗಿಸುವುದಕ್ಕೆ ಸಹಾಯ ಮಾಡಲು, ನಾನು ಈ ತಿಂಗಳು ಯುಎಸ್​ಡಿ 20 ಶತಕೋಟಿಯನ್ನು ಪ್ರತಿಷ್ಠಾನದ ದತ್ತಿಗೆ ವರ್ಗಾಯಿಸುತ್ತಿದ್ದೇನೆ,” ಎಂದು 66 ವರ್ಷದ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್​ ಗೇಟ್ಸ್​ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಉಕ್ರೇನ್ ಯುದ್ಧ ಮತ್ತು ಕೊವಿಡ್ ಅನ್ನು ವಿಶ್ವದ ಪ್ರಮುಖ ಸವಾಲುಗಳು ಎಂದು ಅವರು ಕರೆದಿದ್ದಾರೆ.

ಫೋರ್ಬ್ಸ್ ಮಾಹಿತಿಯ ಪ್ರಕಾರ, ಬಿಲ್​ ಗೇಟ್ಸ್ ಸದ್ಯಕ್ಕೆ 103 ಬಿಲಿಯನ್ ಯುಎಸ್​ಡಿ (8,23,028.20 ಕೋಟಿ- 8.23 ಲಕ್ಷ ಕೋಟಿ ರೂಪಾಯಿ) ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಅಂದಹಾಗೆ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಷನ್‌ನ ಬೆಳವಣಿಗೆಯಲ್ಲಿ ಅಮೇರಿಕನ್ ಉದ್ಯಮಿ ವಾರೆನ್ ಬಫೆಟ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಅವರು ಗಮನ ಸೆಳೆದಿದ್ದಾರೆ. “ಫೌಂಡೇಷನ್ ಏಕೆ ಮಹತ್ವಾಕಾಂಕ್ಷೆಯಿಂದ ಕೂಡಿದೆ ಎಂಬುದಕ್ಕೆ ಹೆಚ್ಚು ತಿಳಿದಿಲ್ಲದ ಆದರೆ ನಂಬಲಾಗದಷ್ಟು ಮುಖ್ಯವಾದ ಕಾರಣವಿದೆ. ಇದನ್ನು ಬಿಲ್ ಅಂಡ್ ಮೆಲಿಂಡಾ ಗೇಟ್ಸ್ ಫೌಂಡೇಷನ್ ಎಂದು ಹೆಸರಿಸಲಾಗಿದ್ದರೂ ಮೂಲಭೂತವಾಗಿ ಇಲ್ಲಿಯವರೆಗಿನ ನಮ್ಮ ಅರ್ಧದಷ್ಟು ಸಂಪನ್ಮೂಲಗಳು ವಾರೆನ್ ಬಫೆಟ್ ಅವರ ಉಡುಗೊರೆಗಳಿಂದ ಬಂದಿವೆ,” ಎಂದು ಗೇಟ್ಸ್ ಹಂಚಿಕೊಂಡಿದ್ದಾರೆ.

2006ರಿಂದ ವಾರೆನ್ ಅವರು ಪ್ರತಿಷ್ಠಾನಕ್ಕೆ 35.7 ಶತಕೋಟಿ ಯುಎಸ್​ಡಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಅದರಲ್ಲಿ ಜೂನ್‌ನಲ್ಲಿ ಅವರ ಇತ್ತೀಚಿನ 3.1 ಶತಕೋಟಿ ಯುಎಸ್​ಡಿ ಉಡುಗೊರೆಯೂ ಸೇರಿದೆ. “ಬರ್ಕ್‌ಷೈರ್ ಹಾಥ್‌ವೇ ಸ್ಟಾಕ್ ಅನ್ನು ನೀಡಿದ ನಂತರ ಅದರ ಏರಿಕೆಯನ್ನು ಸೇರಿಸಿದರೆ ಈ ಉಡುಗೊರೆಗಳ ನಿಜವಾದ ಮೌಲ್ಯವು ಸುಮಾರು 45 ಶತಕೋಟಿ ಯುಎಸ್​ಡಿ ಆಗಿದೆ,” ಎಂದು ಪೋಸ್ಟ್​ನಲ್ಲಿ ಸೇರಿಸಲಾಗಿದೆ. ಬಿಲ್ ಅಂಡ್ ಮೆಲಿಂಡಾ ಗೇಟ್ಸ್ ಫೌಂಡೇಷನ್ ತನ್ನನ್ನು “ಜಗತ್ತಿನಾದ್ಯಂತ ಬಡತನ, ರೋಗ ಮತ್ತು ಅಸಮಾನತೆಯ ವಿರುದ್ಧ ಹೋರಾಡುವ” ಲಾಭರಹಿತ ಸಂಸ್ಥೆ ಎಂದು ವ್ಯಾಖ್ಯಾನಿಸುತ್ತದೆ. 2020ರಿಂದ ಜಾಗತಿಕ ಹೋರಾಟದಲ್ಲಿ ಯುಎಸ್​ಡಿ 2 ಬಿಲಿಯನ್​ಗೆ ಬದ್ಧವಾಗಿದೆ ಎಂದು ಅದು ಹೇಳಿಕೊಂಡಿದೆ.

Published On - 2:20 pm, Fri, 15 July 22