ದೇಶದ ಎರಡನೇ ಅತಿ ದೊಡ್ಡ ಖಾಸಗಿ ಬ್ಯಾಂಕ್ ಆದ ಐಸಿಐಸಿಐ ಬ್ಯಾಂಕ್ ಅಕ್ಟೋಬರ್ 23ನೇ ತಾರೀಕಿನ ಶನಿವಾರ ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕದ ಫಲಿತಾಂಶ ಪ್ರಕಟಿಸಿದ್ದು, ರೂ. 5511 ಕೋಟಿ ರೂಪಾಯಿ ತೆರಿಗೆ ನಂತರದ ಲಾಭ ಗಳಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 30ರಷ್ಟು ಹೆಚ್ಚು ಲಾಭ ಗಳಿಸಿದೆ. ಬ್ಯಾಡ್ ಲೋನ್ ಮೇಲಿನ ಪ್ರಾವಿಷನ್ ಕಡಿಮೆ ಮಾಡಿದ್ದು, ಇದರ ಜತೆಗೆ ಆಸ್ತಿ ಗುಣಮಟ್ಟ ಪ್ರದರ್ಶನ ಉತ್ತಮಗೊಂಡಿರುವುದು ಸಹಾಯ ಮಾಡಿದೆ. ನಿವ್ವಳ ಬಡ್ಡಿ ಆದಾಯ, ಆಪರೇಟಿಂಗ್ ಲಾಭ ಮತ್ತು ಇತರ ಆದಾಯವು ಎರಡಂಕಿಯ ಬೆಳವಣಿಗೆ ಕಂಡಿರುವುದರಿಂದ ಈ ತ್ರೈಮಾಸಿಕದಲ್ಲಿ ಉತ್ತಮ ಗಳಿಕೆ ಆಗಿದೆ. ಬಡ್ಡಿ ಮೂಲಕ ಗಳಿಸಿದ ಆದಾಯದಲ್ಲಿ ಬಡ್ಡಿ ಪಾವತಿಯನ್ನು ಕಳೆದರೆ ಉಳಿಯುವುದು ನಿವ್ವಳ ಬಡ್ಡಿ ಆದಾಯ. ಇದು ಶೇ 25ರಷ್ಟು ಹೆಚ್ಚಳವಾಗಿ, Q2FY22ರಲ್ಲಿ 11,690 ಕೋಟಿ ರೂಪಾಯಿ ಬಂದಿದೆ. ವರ್ಷದಿಂದ ವರ್ಷಕ್ಕೆ 43 ಬಿಪಿಎಸ್ ಮತ್ತು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ 11 ಬಿಪಿಎಸ್ ಚೇತರಿಕೆ ಕಂಡಿದೆ. ನಿವ್ವಳ ಲಾಭದ ಮಾರ್ಜಿನ್ ಶೇ 4ರಷ್ಟಿದೆ ಎಂದು ಬಿಎಸ್ಇ ಫೈಲಿಂಗ್ನಲ್ಲಿ ಬ್ಯಾಂಕ್ ತಿಳಿಸಿದೆ. ಒಂದು ಪರ್ಸೆಂಟ್ ಅಂದರೆ 100 ಬೇಸಿಸ್ ಪಾಯಿಂಟ್.
ಮುಂದುವರಿದು ಇನ್ನಷ್ಟು ಮಾಹಿತಿ ನೀಡಿರುವ ಬ್ಯಾಂಕ್, ವರ್ಷದಿಂದ ವರ್ಷಕ್ಕೆ ಒಟ್ಟಾರೆ ಮುಂಗಡ ಶೇ 17ರಷ್ಟು ಬೆಳವಣಿಗೆ ಆಗಿ, Q2FY22ರಲ್ಲಿ 7.64 ಲಕ್ಷ ಕೋಟಿ ರೂಪಾಯಿ ತಲುಪಿದೆ. ರೀಟೇಲ್ ಸಾಲದ ಪುಸ್ತಕ (ಇದು ಒಟ್ಟಾರೆ ಪೋರ್ಟ್ಫೋಲಿಯೋ ಶೇ 62.1ರಷ್ಟಾಗುತ್ತದೆ) ಬೆಳವಣಿಗೆ ಶೇ 20ರಷ್ಟಾಗಿದೆ. ಮತ್ತು ಶೇ 19ರಷ್ಟು ದೇಶೀಯ ಸಾಲದಲ್ಲಿ ಬೆಳವಣಿಗೆ ಆಗಿದೆ. “ಉದ್ಯಮ ಬ್ಯಾಂಕಿಂಗ್ ಪೋರ್ಟ್ಫೋಲಿಯೋ ವರ್ಷದಿಂದ ವರ್ಷಕ್ಕೆ ಶೇ 43ರಷ್ಟು ಬೆಳವಣಿಗೆ ಆಗಿದೆ. ಎಸ್ಎಂಇ (ಸಣ್ಣ, ಮಧ್ಯಮ ಸಂಸ್ಥೆಗಳು) ಅದರಲ್ಲಿ ಸಾಕಗಾರರ ಒಟ್ಟು ವಹಿವಾಟು 250 ಕೋಟಿ ರೂಪಾಯಿಗಿಂತ ಕಡಿಮೆಯಿದೆ. ವರ್ಷದಿಂದ ವರ್ಷಕ್ಕೆ 2021ರ ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಶೇ 42ರಷ್ಟು ಬೆಳವಣಿಗೆ ಸಾಧಿಸಿದೆ,” ಎಂದು ಹೇಳಲಾಗಿದೆ.
2021ರ ಸೆಪ್ಟೆಂಬರ್ಗೆ ಐಸಿಐಸಿಐ ಬ್ಯಾಂಕ್ಗೆ 5277 ಶಾಖೆಗಳಿದ್ದು, 14045 ಎಟಿಎಂಗಳಿವೆ. ಒಟ್ಟಾರೆ ಠೇವಣಿ ವರ್ಷದಿಂದ ವರ್ಷಕ್ಕೆ ಶೇ 17ರಷ್ಟು ಹೆಚ್ಚಳವಾಗಿದ್ದು, ಸೆಪ್ಟೆಂಬರ್ಗೆ ಕೊನೆಯಾದ ತ್ರೈಮಾಸಿಕಕ್ಕೆ 9.77 ಲಕ್ಷ ಕೋಟಿ ರೂಪಾಯಿ ಇದೆ. ನಿವ್ವಳ ಎನ್ಪಿಎ ಶೇ 12ರಷ್ಟು ಇಳಿಕೆ ಆಗಿದ್ದು, 2021ರ ಜೂನ್ನಲ್ಲಿ 9306 ಕೋಟಿ ರೂಪಾಯಿ ಇದ್ದದ್ದು 2021ರ ಸೆಪ್ಟೆಂಬರ್ನಲ್ಲಿ 8161 ಕೋಟಿ ರೂಪಾಯಿ ಆಗಿದೆ. ಇನ್ನೂ ಮುಂದುವರಿದು ಹೇಳಿದ ಬ್ಯಾಂಕ್, ಸಗಟು ಎನ್ಪಿಎ 96 ಕೋಟಿ ರೂಪಾಯಿಗೆ ಇಳಿಕೆ ಆಗಿದೆ. Q1FY22ರಲ್ಲಿ 3604 ಕೋಟಿ ರೂಪಾಯಿ ಇತ್ತು. ಕಳೆದ ವರ್ಷದ ಇದೇ ಅವಧಿಯಲ್ಲಿ ಎನ್ಪಿಎ ಸೇರ್ಪಡೆ 7231 ಕೋಟಿ ರೂಪಾಯಿಯಿಂದ 5578 ಕೋಟಿ ರೂ.ಗೆ ಇಳಿದಿದೆ.
ಇದನ್ನೂ ಓದಿ:ICICI Bank Home Utsav: ಐಸಿಐಸಿಐ ಬ್ಯಾಂಕ್ ಹೋಮ್ ಲೋನ್ ಉತ್ಸವ ಅ.12ರಿಂದ; ಏನಿದರ ಪ್ರಯೋಜನಗಳು?