ಮುಂಬೈ: ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಐಸಿಐಸಿ ಬ್ಯಾಂಕ್‌ನ (ICICI Bank) ಮಾಜಿ ಮುಖ್ಯ ಕಾರ್ಯನಿರ್ವಹಣಧಿಕಾರಿ (CEO) ಮತ್ತು ವ್ಯವಸ್ಥಾಪಕ ನಿರ್ದೆಶಕಿ ಚಂದಾ ಕೊಚ್ಚರ್ (Chanda Kochhar) ಹಾಗೂ ಅವರ ಪತಿ ದೀಪಕ್ ಕೊಚ್ಚರ್ ಅವರನ್ನು ಬಿಡುಗಡೆ ಮಾಡುವಂತೆ ಬಾಂಬೆ ಹೈಕೋರ್ಟ್ (Bombay High Court) ಸೋಮವಾರ ಆದೇಶ ನೀಡಿದೆ. ಇಬ್ಬರನ್ನೂ ಸಿಬಿಐ ಅಧಿಕಾರಿಗಳು 2022ರ ಡಿಸೆಂಬರ್ 23ರಂದು ಬಂಧಿಸಿದ್ದರು. ಬಳಿಕ ಅವರನ್ನು ಸಿಬಿಐ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಳಪಡಿಸುವಂತೆ ಸೂಚಿಸಿತ್ತು. ಚಂದಾ ಕೊಚ್ಚರ್ ಮತ್ತು ದೀಪಕ್ ಕೊಚ್ಚರ್ ಅವರ ಬಂಧನ ಕಾನೂನು ಸಮ್ಮತವಾಗಿಲ್ಲ ಎಂದು ಬಾಂಬೆ ಹೈಕೋರ್ಟ್ ಇದೀಗ ಅಭಿಪ್ರಾಯಪಟ್ಟಿದೆ.
ವಿಡಿಯೊಕಾನ್ ಗ್ರೂಪ್ಗೆ ಸಾಲ ಮಂಜೂರಾತಿಯಲ್ಲಿ ಅಕ್ರಮ ಹಾಗೂ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರೂ ತನಿಖೆ ಎದುರಿಸುತ್ತಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಕೊಚ್ಚರ್ ಅವರನ್ನು ಈ ಹಿಂದೆ 2021ರಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿತ್ತು. 2018ರಲ್ಲಿ ತನಿಖೆ ಆರಂಭವಾಗಿದ್ದು, ಆ ಸಂದರ್ಭದಲ್ಲಿ ಚಂದಾ ಅವರು ತಮ್ಮ ಸ್ಥಾನದಿಂದ ಕೆಳಗಿಳಿದಿದ್ದರು. 2019ರಲ್ಲಿ ಚಂದಾ ಅವರ ಮನೆ ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಆಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದರು.
ಇದನ್ನೂ ಓದಿ: ಐಸಿಐಸಿಐ ಬ್ಯಾಂಕ್‌ನ ಮಾಜಿ ಸಿಇಒ ಚಂದಾ ಕೊಚ್ಚರ್ ದಂಪತಿಯನ್ನು ಬಂಧಿಸಿದ ಸಿಬಿಐ
ICICI bank-Videocon loan fraud case | Bombay High Court allows release of former ICICI CEO Chanda Kochhar and Deepak Kochhar from judicial custody after CBI arrest.
“Arrest not in accordance with the law,” the Court observes. pic.twitter.com/t7luYN5Fsr
— ANI (@ANI) January 9, 2023
2012 ರಲ್ಲಿ ಐಸಿಐಸಿಐ ಬ್ಯಾಂಕ್‌ನಿಂದ ವಿಡಿಯೋಕಾನ್ ಗ್ರೂಪ್ 3,250 ಕೋಟಿ ರೂಪಾಯಿ ಸಾಲ ಪಡೆದು, ಕೆಲ ತಿಂಗಳ ನಂತರ ವಿಡಿಯೋಕಾನ್ ಪ್ರವರ್ತಕ ವೇಣುಗೋಪಾಲ್ ಧೂತ್ ಅವರು ನ್ಯೂಪವರ್‌ನಲ್ಲಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಾಲಗಳನ್ನು ನಂತರ ಅನುತ್ಪಾದಕ ಆಸ್ತಿ (ಎನ್ಪಿಎ) ಎಂದು ಘೋಷಿಸಲಾಗಿತ್ತು. ಇದರಿಂದ ಬ್ಯಾಂಕ್ಗೆ ಕೋಟ್ಯಂತರ ರೂಪಾಯಿ ನಷ್ಟವಾಗಿತ್ತು. ಕ್ರಿಮಿನಲ್ ಪಿತೂರಿ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಚಂದಾ ಕೊಚ್ಚರ್, ಅವರ ಪತಿ ಮತ್ತು ವಿಡಿಯೋಕಾನ್ ಗ್ರೂಪ್‌ನ ವೇಣುಗೋಪಾಲ್ ಧೂತ್, ನ್ಯೂಪವರ್ ರಿನ್ಯೂವಬಲ್ಸ್, ಸುಪ್ರೀಂ ಎನರ್ಜಿ, ವಿಡಿಯೋಕಾನ್ ಇಂಟರ್‌ನ್ಯಾಶನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ವಿಡಿಯೋಕಾನ್ ಇಂಡಸ್ಟ್ರೀಸ್ ಲಿಮಿಟೆಡ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು.
Published On - 11:09 am, Mon, 9 January 23