ಸಾಂದರ್ಭಿಕ ಚಿತ್ರ
ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ವಿತರಣೆ ಹಾಗೂ ಕಾರ್ಯ ಚಟುವಟಿಕೆಗೆ ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ (Reserve Bank Of India) ಗುರುವಾರ ಮಹತ್ತರವಾದ ನಿರ್ದೇಶನವನ್ನು ನೀಡಲಾಗಿದೆ. ಈ ನಿರ್ದೇಶನವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್- ವಿತರಣೆ ಹಾಗೂ ಆಯೋಜನೆ) ನಿರ್ದೇಶನಗಳು, 2022 ಎಂದು ಕರೆಯಲಾಗಿದೆ. ಇದು 2022ರ ಜುಲೈ 1ನೇ ತಾರೀಕಿನಿಂದ ಲಾಗೂ ಆಗುತ್ತದೆ. ಕ್ರೆಡಿಟ್ ಕಾರ್ಡ್ಗಳಿಗೆ ಸಂಬಂಧಿಸಿದಂತೆ ಈ ನಿರ್ದೇಶನದಲ್ಲಿ ಇರುವ ನಿಯಮಾವಳಿಗಳು ಭಾರತದ ಎಲ್ಲ ಶೆಡ್ಯೂಲ್ಡ್ ಬ್ಯಾಂಕ್ (ಪೇಮೆಂಟ್ಸ್ ಬ್ಯಾಂಕ್ಸ್, ರಾಜ್ಯ ಕೋ-ಆಪರೇಟಿವ್ ಬ್ಯಾಂಕ್ಸ್ ಮತ್ತು ಜಿಲ್ಲಾ ಕೇಂದ್ರ ಕೋ ಆಪರೇಟಿವ್ ಬ್ಯಾಂಕ್ಗಳನ್ನು ಹೊರತುಪಡಿಸಿ) ಮತ್ತು ಬ್ಯಾಂಕಿಂಗೇತರ ಫೈನಾನ್ಷಿಯಲ್ ಕಂಪೆನಿಗಳಿಗೆ ಅನ್ವಯ ಆಗುತ್ತದೆ. ಒಂದು ವೇಳೆ ಕ್ರೆಡಿಟ್ ಕಾರ್ಡ್ ಖಾತೆಯನ್ನು ಕ್ಲೋಸ್ ಮಾಡುವುದು ತಡ ಮಾಡಿದಲ್ಲಿ ಕಾರ್ಡ್ ವಿತರಿಸಿದ್ದ ಕಂಪೆನಿಯೇ ಕಾರ್ಡ್ದಾರರಿಗೆ ದಂಡ ಕಟ್ಟಿಕೊಡುತ್ತದೆ.
ಕ್ರೆಡಿಟ್ ಕಾರ್ಡ್ ಕ್ಲೋಷರ್ಗೆ ಸಂಬಂಧಿಸಿದಂತೆ ಆರ್ಬಿಐ ನಿಯಮಾವಳಿಗಳು ಹೀಗಿವೆ:
- ಕ್ರೆಡಿಟ್ ಕಾರ್ಡ್ದಾರರು ಕ್ಲೋಷರ್ಗೆ ಮನವಿ ಮಾಡಿದ ಏಳು ದಿನದೊಳಗಾಗಿ (ವರ್ಕಿಂಗ್ ಡೇಸ್) ಕ್ರೆಡಿಟ್ ಕಾರ್ಡ್ ವಿತರಕರು ಅದನ್ನು ಮಾನ್ಯ ಮಾಡಬೇಕು. ಆದರೆ ಅದಕ್ಕೆ ಮುನ್ನ ಕಾರ್ಡ್ಗೆ ಸಂಬಂಧಿಸಿದ ಎಲ್ಲ ಬಾಕಿ ಚುಕ್ತಾ ಆಗಿರಬೇಕು ಎಂದು ಆರ್ಬಿಐ ನಿರ್ದೇಶನದಲ್ಲಿ ತಿಳಿಸಲಾಗಿದೆ.
- ಕ್ರೆಡಿಟ್ ಕಾರ್ಡ್ ಕ್ಲೋಷರ್ ಬಗ್ಗೆ ಕಾರ್ಡ್ದಾರರಿಗೆ ತಕ್ಷಣವೇ ಇಮೇಲ್, ಎಸ್ಸೆಮ್ಮೆಸ್ ಮುಂತಾದವುಗಳ ಮೂಲಕ ಮಾಹಿತಿ ನೀಡಬೇಕು.
- ಕ್ರೆಡಿಟ್ ಕಾರ್ಡ್ ಖಾತೆ ಕ್ಲೋಷರ್ಗಾಗಿ ಮನವಿ ಸಲ್ಲಿಸುವುದಕ್ಕೆ ಕಾರ್ಡ್ದಾರರಿಗೆ ಹಲವು ಮಾರ್ಗಗಳನ್ನು ಒದಗಿಸಬೇಕು.
- ಹೆಲ್ಪ್ಲೈನ್, ಡೆಡಿಕೇಟೆಡ್ ಇ-ಮೇಲ್ ಐಡಿ, ಇಂಟರ್ಆಕ್ಟಿವ್ ವಾಯ್ಸ್ ರೆಸ್ಪಾನ್ಸ್ (ಐವಿಆರ್), ವೆಬ್ಸೈಟ್ನಲ್ಲಿ ಸ್ಪಷ್ಟವಾಗಿ ಕಾಣುವಂಥ ಲಿಂಕ್, ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಆ್ಯಪ್ ಅಥವಾ ಯಾವುದೇ ಬಗೆಯಲ್ಲಿ ಮನವಿ ಸಲ್ಲಿಸುವ ಅವಕಾಶ ಇರಬೇಕು.
- ಕಾರ್ಡ್ ವಿತರಕರು ಪೋಸ್ಟ್ ಅಥವಾ ಇತರ ಯಾವುದೇ ವಿಧಾನಗಳ ಮೂಲಕ ಕ್ಲೋಷರ್ ವಿನಂತಿಯನ್ನು ಕಳುಹಿಸಲು ಒತ್ತಾಯಿಸಬಾರದು. ಏಕೆಂದರೆ ಅದು ವಿನಂತಿಯ ಸ್ವೀಕೃತಿ ವಿಳಂಬಕ್ಕೆ ಕಾರಣವಾಗಬಹುದು.
- ಒಂದು ವೇಳೆ ಮನವಿಯನ್ನು ಏಳು ವರ್ಕಿಂಗ್ ಡೇಸ್ನೊಳಗಾಗಿ ಪ್ರೊಸೆಸ್ ಮಾಡಲು ಕಾರ್ಡ್ ವಿತರಕರು ವಿಫಲರಾದಲ್ಲಿ ದಿನಕ್ಕೆ 500 ರೂಪಾಯಿಯಂತೆ ವಿಳಂಬ ಆದ ಅವಧಿಗೆ ಖಾತೆ ಕ್ಲೋಷರ್ ಆಗುವ ತನಕ ಕಾರ್ಡ್ದಾರರಿಗೆ ಪಾವತಿ ಮಾಡಬೇಕು.
- ಒಂದು ವೇಳೆ ಕ್ರೆಡಿಟ್ ಕಾರ್ಡ್ ಅನ್ನು ಒಂದು ವರ್ಷಕ್ಕಿಂತ ಹೆಚ್ಚು ಅವಧಿಗೆ ಬಳಕೆ ಮಾಡದಿದ್ದಲ್ಲಿ ಕಾರ್ಡ್ ವಿತರಕರು ತಾವಾಗಿಯೇ ಕ್ರೆಡಿಟ್ ಕಾರ್ಡ್ ಖಾತೆ ಕ್ಲೋಷರ್ ಪ್ರಕ್ರಿಯೆ ಆರಂಭಿಸಬಹುದು. ಆದರೆ ಅದಕ್ಕೂ ಮುಂಚೆ ಕಾರ್ಡ್ದಾರರಿಗೆ ಮಾಹಿತಿ ನೀಡಬೇಕು.
- ಕಾರ್ಡ್ದಾರರಿಂದ 30 ದಿನದೊಳಗಾಗಿ ಪ್ರತಿಕ್ರಿಯೆ ಬಾರದಿದ್ದಲ್ಲಿ ಕಾರ್ಡ್ ವಿತರಕರು ಕ್ರೆಡಿಟ್ ಕಾರ್ಡ್ ಖಾತೆಯನ್ನು ಕ್ಲೋಸ್ ಮಾಡಬಹುದು. ಅದಕ್ಕೂ ಮುನ್ನ ಎಲ್ಲ ಬಾಕಿಯನ್ನು ಪಾವತಿಯಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು.
- ಕ್ರೆಡಿಟ್ ಕಾರ್ಡ್ ವಿತರಕರು ಕಾರ್ಡ್ ಕ್ಲೋಷರ್ ಬಗ್ಗೆ ಕ್ರೆಡಿಟ್ ಇನ್ಫರ್ಮೇಷನ್ ಕಂಪೆನಿಯ ಬಳಿ 30 ದಿನದೊಳಗಾಗಿ ಮಾಹಿತಿ ನೀಡಬೇಕಾಗುತ್ತದೆ.
- ಕ್ರೆಡಿಟ್ ಕಾರ್ಡ್ ಖಾತೆ ಕ್ಲೋಸ್ ಆದ ನಂತರದಲ್ಲಿ ಕಾರ್ಡ್ದಾರರಿಗೆ ಹಿಂತಿರುಗಿಸಬೇಕಾದ ಬಾಕಿ ಏನಾದರೂ ಉಳಿದುಕೊಂಡಿದ್ದಲ್ಲಿ ಕಾರ್ಡ್ದಾರರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಬೇಕು.
ಇದನ್ನೂ ಓದಿ: Retail Direct Guild: ಆರ್ಬಿಐನಲ್ಲಿ ನಾವು ಕೂಡ ಖಾತೆ ತೆರೆಯಬಹುದು ಗೊತ್ತಾ..! ಇಲ್ಲಿದೆ ಮಾಹಿತಿ