ನವದೆಹಲಿ, ಜನವರಿ 31: ಈ ವರ್ಷ ಹಾಗೂ ಮುಂದಿನ ವರ್ಷ (2025) ಭಾರತದ ಆರ್ಥಿಕ ಬೆಳವಣಿಗೆ ಶೇ. 6.5ರಷ್ಟು ಇರಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF- International Monetary fund) ಅಭಿಪ್ರಾಯಪಟ್ಟಿದೆ. ಅತ್ತ, 2024ರಲ್ಲಿ ಜಾಗತಿಕ ಬೆಳವಣಿಗೆ ಶೇ. 3.1ರಷ್ಟು ಇದ್ದರೆ, 2025ರಲ್ಲಿ ಶೇ. 3.2ರಷ್ಟು ಇರಬಹುದು ಎಂದು ಹೇಳಿದೆ. ಐಎಂಎಫ್ ಜನವರಿ 30ರಂದು ಬಿಡುಗಡೆ ಮಾಡಿದ ವರ್ಲ್ಡ್ ಎಕನಾಮಿಕ್ ಔಟ್ಲುಕ್ನ (World Economic Outlook) ಪರಿಷ್ಕೃತ ವರದಿಯಲ್ಲಿ ವಿಶ್ವಾದ್ಯಂತ ಆರ್ಥಿಕ ಬೆಳವಣಿಗೆಯ ಬಗ್ಗೆ ಹೊಸ ಅಂದಾಜು ಮಾಡಿದೆ.
ಈ ಹಿಂದಿನ ವರದಿಯಲ್ಲಿ ಐಎಂಎಫ್ 2024 ಮತ್ತು 2025ರಲ್ಲಿ ಭಾರತ ಶೇ. 6.3ರಷ್ಟು ಜಿಡಿಪಿ ವೃದ್ಧಿ ಕಾಣಬಹುದು ಎಂದು ಅಂದಾಜು ಮಾಡಿತ್ತು. ಈಗ ಬದಲಾದ ಪರಿಸ್ಥಿತಿಯಲ್ಲಿ ತನ್ನ ನಿರೀಕ್ಷೆಯನ್ನು ಹೆಚ್ಚಿಸಿದೆ. ಭಾರತ ಮಾತ್ರವಲ್ಲ, ವಿಶ್ವದ ಎಲ್ಲಾ ದೇಶಗಳ ಬೆಳವಣಿಗೆ ಬಗ್ಗೆಯೂ ಐಎಂಎಫ್ ನಿರೀಕ್ಷೆ ಹೆಚ್ಚಿದೆ.
ಐಎಂಎಫ್ ವರದಿ ಪ್ರಕಾರ ಚೀನಾ 2024ರಲ್ಲಿ ಶೇ. 4.6ರಷ್ಟು ಬೆಳೆಯಬಹುದು ಎಂದಿದೆ. 2025ರಲ್ಲಿ ಜಿಡಿಪಿ ವೃದ್ಧಿ ಶೇ. 4.1 ಇರಬಹುದು ಎನ್ನಲಾಗಿದೆ.
ಇದನ್ನೂ ಓದಿ: Economic Survey 2024: ಈ ಬಾರಿ ಬಜೆಟ್ ಮುಂಚಿನ ಆರ್ಥಿಕ ಸಮೀಕ್ಷೆ ಯಾಕಿಲ್ಲ? ಅದರ ಬದಲು ಬಿಡುಗಡೆ ಆದ ಬೇರೆ ವರದಿಯಲ್ಲಿ ಏನಿದೆ?
ಇನ್ನು, ಅಮೆರಿಕದ ವಿಷಯಕ್ಕೆ ಬಂದರೆ ಐಎಂಎಫ್ ನಿರೀಕ್ಷೆ ಕಡಿಮೆ ಆಗಿದೆ. ಅಂದರೆ, 2023ರಲ್ಲಿ ಶೇ. 2.5ರಷ್ಟು ಇದ್ದ ಆರ್ಥಿಕ ವೃದ್ಧಿ 2024ರಲ್ಲಿ ಶೇ. 2.1ಕ್ಕೆ ಇಳಿಯಬಹುದು. 2025ರಲ್ಲಿ ಅದು ಶೇ. 1.7ರಷ್ಟು ಇರಬಹುದು ಎಂದು ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ಅಂದಾಜು ಮಾಡಿದೆ.
ಹಣದುಬ್ಬರ ನಿರಂತರವಾಗಿ ಇಳಿಮುಖವಾಗುತ್ತಿದ್ದು, ಬೆಳವಣಿಗೆ ಹೆಚ್ಚುತ್ತಾ ಹೋಗುತ್ತಿದೆ. ಮೋಡಗಳು ಚದುರತೊಡಗಿವೆ. ಜಾಗತಿಕ ಆರ್ಥಿಕತೆ ಸರಾಗವಾಗಿ ಸಾಗತೊಡಗಿದೆ ಎಂದು ಐಎಂಎಫ್ನ ಚೀಫ್ ಎಕನಾಮಿಸ್ಟ್ ಒಲಿವಿಯರ್ ಗೌರಿಂಚಸ್ ಹೇಳಿದ್ದಾರೆ. ಆದರೆ, ಬೆಳವಣಿಗೆ ವೇಗ ಮಾತ್ರ ಇನ್ನೂ ಮಂದವಾಗಿದ್ದು, ಹೊಯ್ದಾಟಗಳನ್ನು ಮುಂದಿನ ದಿನಗಳಲ್ಲಿ ನಿರೀಕ್ಷಿಸಬಹುದು ಎಂದೂ ಅವರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: 2019 Budget: 2019ರ ಮಧ್ಯಂತರ ಬಜೆಟ್ನ ಎರಡು ಹಿಟ್ ಸ್ಕೀಮ್ಸ್; ಈ ಬಾರಿಯೂ ಬರುತ್ತಾ ಹೊಸ ಗೇಮ್ ಚೇಂಜರ್?
ಅಮೆರಿಕದಲ್ಲಿ ಹಣಕಾಸು ನೀತಿ ಇನ್ನೂ ಬಿಗಿಯಾಗಿರುವುದರಿಂದ ಅಲ್ಲಿ ಆರ್ಥಿಕ ಪ್ರಗತಿ ನಿಧಾನವಾಗಿಯೇ ಇರುತ್ತದೆ. ಚೀನಾದಲ್ಲಿ ಅನುಭೋಗ ಪ್ರಮಾಣ ಕಡಿಮೆ ಆಗಿರುವುದರಿಂದಲೂ ಬೆಳವಣಿಗೆ ನಿರೀಕ್ಷಿತ ವೇಗ ಪಡೆದುಕೊಂಡಿಲ್ಲ ಎಂದೂ ಐಎಂಫ್ ತನ್ನ ವರ್ಲ್ಡ್ ಎಕನಾಮಿಕ್ ಔಟ್ಲುಕ್ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ