Income Tax Returns: ಆದಾಯ ತೆರಿಗೆ ರಿಟರ್ನ್ಸ್ ಕೊನೆ ದಿನಾಂಕ ಸೆಪ್ಟೆಂಬರ್ 30ರ ತನಕ ವಿಸ್ತರಣೆ

| Updated By: Srinivas Mata

Updated on: Aug 30, 2021 | 12:19 PM

Vivad se Vishwas Act: ವಿವಾದ್ ಸೇ ವಿಶ್ವಾಸ್ ಕಾಯ್ದೆಯೂ ಸೇರಿದಂತೆ ವಿವಿಧ ಐಟಿಆರ್ ಫೈಲಿಂಗ್ ದಿನಾಂಕವನ್ನು ಸೆಪ್ಟೆಂಬರ್ 30, 2021ರ ತನಕ ವಿಸ್ತರಿಸಲಾಗಿದೆ.

Income Tax Returns: ಆದಾಯ ತೆರಿಗೆ ರಿಟರ್ನ್ಸ್ ಕೊನೆ ದಿನಾಂಕ ಸೆಪ್ಟೆಂಬರ್ 30ರ ತನಕ ವಿಸ್ತರಣೆ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ತೆರಿಗೆದಾರರಿಗೆ ಸಮಾಧಾನ ನೀಡುವಂಥ ಸುದ್ದಿ ಇಲ್ಲಿದೆ. ಆದಾಯ ತೆರಿಗೆ ರಿಟರ್ನ್ಸ್ ಹಲವು ಫಾರ್ಮ್ಸ್​ಗಳನ್ನು (ನಮೂನೆ) ಸಲ್ಲಿಸಲು ಕೊನೆಯ ದಿನಾಂಕವನ್ನು ಈ ಹಿಂದಿನ ಆಗಸ್ಟ್ 31, 2021ರ ಗಡುವಿನಿಂದ ಸೆಪ್ಟೆಂಬರ್ 30, 2021ರ ವರೆಗೆ ವಿಸ್ತರಣೆ ಮಾಡಲಾಗಿದೆ. ಆದಾಯ ತೆರಿಗೆ ಇಲಾಖೆಯ ಅಧಿಕೃತ ಪ್ರಕಟಣೆ ಪ್ರಕಾರ, “ವಿವಾದ್ ಸೇ ವಿಶ್ವಾಸ್ ಕಾಯ್ದೆ ಅಡಿಯಲ್ಲಿ ಘೋಷಣೆದಾರರು ಪಾವತಿ ಮಾಡಲು ಫಾರ್ಮ್ 3ರ ವಿತರಣೆಯಲ್ಲಿ ಮತ್ತು ತಿದ್ದುಪಡಿಯಲ್ಲಿ ಎದುರಿಸುತ್ತಿರುವ ತೊಂದರೆಗಳನ್ನು ಪರಿಗಣಿಸಿ, ಕೊನೆಯ ದಿನಾಂಕವನ್ನು ಈ ಹಿಂದಿನ ಆಗಸ್ಟ್ 31, 2021ರಿಂದ ಸೆಪ್ಟೆಂಬರ್ 30, 2021ಕ್ಕೆ (ಯಾವುದೇ ಹೆಚ್ಚುವರಿ ಮೊತ್ತವಿಲ್ಲದೆ) ವಿಸ್ತರಿಸಲು ನಿರ್ಧರಿಸಲಾಗಿದೆ.”

ಆದಾಯ ತೆರಿಗೆ ಇಲಾಖೆ ತಿಳಿಸಿರುವಂತೆ, ನೇರ ತೆರಿಗೆ ವಿವಾದ್ ಸೇ ವಿಶ್ವಾಸ್ ಕಾಯ್ದೆ 2020 ಸೆಕ್ಷನ್ 3ರಲ್ಲಿ ಆಗಿರುವ ಬದಲಾವಣೆಯನ್ನು ತಿಳಿಸಿದೆ. ಐಟಿಆರ್ ಸಲ್ಲಿಸುವಲ್ಲಿನ ಸಮಸ್ಯೆಯ ಬಗ್ಗೆ ಹಲವಾರು ತೆರಿಗೆದಾರರು ಹೊಸ ಆದಾಯ ತೆರಿಗೆ ಪೋರ್ಟಲ್‌ನಲ್ಲಿನ ದೋಷಗಳ ಕುರಿತು ದೂರು ನೀಡಿದ ನಂತರ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸಲು ಕೊನೆಯ ದಿನಾಂಕದ ವಿಸ್ತರಣೆ ಮಾಹಿತಿ ಹೊರಬಂದಿದೆ.

ಹೊಸ ಆದಾಯ ತೆರಿಗೆ ಪೋರ್ಟಲ್‌ನಲ್ಲಿನ ದೋಷಗಳನ್ನು ಗಮನಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಅವರನ್ನು ಕರೆಸಿ, ಮಾತುಕತೆ ನಡೆಸಿದ್ದರು. ಗಮನಿಸಬೇಕಾದ ಅಂಶ ಏನೆಂದರೆ, ಆದಾಯ ತೆರಿಗೆ ಪೋರ್ಟಲ್ ಅನ್ನು ಅಭಿವೃದ್ಧಿ ಪಡಿಸುವ ಒಪ್ಪಂದವನ್ನು ಸರ್ಕಾರವು ಇನ್ಫೋಸಿಸ್‌ಗೆ ನೀಡಿತ್ತು.

ಆದಾಯ ತೆರಿಗೆ ಪೋರ್ಟಲ್‌ನಲ್ಲಿನ ಎಲ್ಲ ನ್ಯೂನತೆಗಳನ್ನು ಸರಿಪಡಿಸಲು ಸೆಪ್ಟೆಂಬರ್ 15ರ ವರೆಗೆ ಇನ್ಫೋಸಿಸ್‌ಗೆ ಸಮಯ ನೀಡಿದ್ದಾರೆ ಹಣಕಾಸು ಸಚಿವೆ nಇರ್ಮಲಾ ಸೀತಾರಾಮನ್. ತೆರಿಗೆ ಪಾವತಿದಾರರು ಮತ್ತು ವೃತ್ತಿಪರರು ಪೋರ್ಟಲ್‌ನಲ್ಲಿ ಆರಾಮವಾಗಿ ಕೆಲಸ ಮಾಡುವಂತೆ, ಹೊಸ ಆದಾಯ ತೆರಿಗೆ ಪೋರ್ಟಲ್‌ನ ಪ್ರಸ್ತುತ ಕಾರ್ಯವೈಖರಿಯೊಂದಿಗೆ ತೆರಿಗೆದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಇನ್ಫೋಸಿಸ್ ತಂಡವು 2021ರ ಸೆಪ್ಟೆಂಬರ್ 15 ರೊಳಗೆ ಪರಿಹರಿಸಬೇಕೆಂದು ನಿರ್ಮಲಾ ಸೀತಾರಾಮನ್ ಗಡುವು ನೀಡಿದ್ದಾರೆ.

ಇದನ್ನೂ ಓದಿ: ಆದಾಯ ತೆರಿಗೆ ಪೋರ್ಟಲ್​ ಸಮಸ್ಯೆಗಳಿವು; ಇನ್​ಫೋಸಿಸ್ ಸಿಇಒಗೆ ಹಣಕಾಸು ಸಚಿವರು ಬುಲಾವ್ ಕಳಿಸಿದ್ದು ಈ ಕಾರಣಕ್ಕೆ

(Income Tax Department Extended Last Date For Filing Various Returns Till September 30 2021)