ಆದಾಯ ತೆರಿಗೆ ಪೋರ್ಟಲ್ ಸಮಸ್ಯೆಗಳಿವು; ಇನ್ಫೋಸಿಸ್ ಸಿಇಒಗೆ ಹಣಕಾಸು ಸಚಿವರು ಬುಲಾವ್ ಕಳಿಸಿದ್ದು ಈ ಕಾರಣಕ್ಕೆ
ಪೋರ್ಟಲ್ ಚಾಲು ಆದ ನಂತರ ಹಲವು ಬಾರಿ ಬಳಕೆದಾರರು ಲೋಪಗಳ ಬಗ್ಗೆ ದೂರಿದ್ದರು. ಕಳೆದ ಎರಡು ದಿನಗಳಿಂದ ಪೋರ್ಟಲ್ ಓಪನ್ ಆಗುತ್ತಿಲ್ಲ ಎಂದು ಹಲವು ತೆರಿಗೆ ಪಾವತಿದಾರರು ಹೇಳಿದ್ದರು.
ಕೇಂದ್ರ ಹಣಕಾಸು ಇಲಾಖೆಯು ಸಾಕಷ್ಟು ನಿರೀಕ್ಷೆಗಳೊಂದಿಗೆ ಇನ್ಫೊಸಿಸ್ಗೆ ಆದಾಯ ತೆರಿಗೆ ರಿಟರ್ನ್ಸ್ ಪೋರ್ಟಲ್ ರೂಪಿಸುವ ಹೊಣೆ ನೀಡಿತ್ತು. ಪೋರ್ಟಲ್ ಚಾಲು ಆದ ನಂತರ ಹಲವು ಬಾರಿ ತೆರಿಗೆ ಪಾವತಿದಾರರು ಲೋಪಗಳನ್ನು ವರದಿ ಮಾಡಿದ್ದರು. ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ದೂರಿದ್ದರು. ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಹಣಕಾಸು ಸಚಿವರು ಕಳೆದ ಎರಡು ತಿಂಗಳಲ್ಲಿ ಎರಡು ಬಾರಿ ಇನ್ಫೋಸಿಸ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಲಿಲ್ ಪಾರೆಖ್ ಅವರನ್ನು ಸಚಿವಾಲಯಕ್ಕೆ ಕರೆಸಿಕೊಂಡು ವಿವರಣೆ ಕೇಳಿದರು. ಕಳೆದ ಜೂನ್ ತಿಂಗಳಲ್ಲಿ ಮೊದಲ ಸಭೆ ನಡೆದಿತ್ತು. ಇಂದು (ಆಗಸ್ಟ್ 23) ಇಂಥ ಮತ್ತೊಂದು ಸಭೆ ನಡೆದಿದೆ.
ಪೋರ್ಟಲ್ ಚಾಲು ಆದ ನಂತರ ಹಲವು ಬಾರಿ ಬಳಕೆದಾರರು ಲೋಪಗಳ ಬಗ್ಗೆ ದೂರಿದ್ದರು. ಕಳೆದ ಎರಡು ದಿನಗಳಿಂದ ಪೋರ್ಟಲ್ ಓಪನ್ ಆಗುತ್ತಿಲ್ಲ ಎಂದು ಹಲವು ತೆರಿಗೆ ಪಾವತಿದಾರರು ಹೇಳಿದ್ದರು. ಇನ್ಫೋಸಿಸ್ನ ಎಂಡಿ ಮತ್ತು ಸಿಇಒ ಸಲಿಲ್ ಪಾರೆಖ್ರನ್ನು ಸೋಮವಾರ ಸಚಿವಾಲಯಕ್ಕೆ ಕರೆಸಿಕೊಂಡಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ದೋಷಗಳು ಮುಂದುವರಿದಿರುವ ಬಗ್ಗೆ ಮಾಹಿತಿ ಕೋರಿದ್ದರು.
ಏನಿದು ಹೊಸ ಆದಾಯ ತೆರಿಗೆ ಪೋರ್ಟಲ್? ಆದಾಯ ತೆರಿಗೆ ಇಲಾಖೆಯು ಜೂನ್ 7ರಂದು ಹೊಸ ಇ-ಫೈಲಿಂಗ್ ಪೋರ್ಟಲ್ ಆರಂಭವಾಗಲಿದೆ ಎಂದು ಕಳೆದ ಮೇ ತಿಂಗಳಲ್ಲಿ ಘೋಷಿಸಿತ್ತು.
ತೆರಿಗೆದಾರರಿಗೆ ಅನುಕೂಲ ಕಲ್ಪಿಸಿಕೊಡುವ ಹೊಸ ರೀತಿಯ ಪೋರ್ಟಲ್ ಒಂದನ್ನು ರೂಪಿಸಲಾಗುತ್ತಿವೆ. ಇದು ಆದಾಯ ತೆರಿಗೆ ರಿಟರ್ನ್ಸ್ (Income Tax Returns – ITR) ಮರುಪಾವತಿಯನ್ನು (ರಿಫಂಡ್) ವೇಗವಾಗಿ ನಿರ್ವಹಿಸಲು ಅನುಕೂಲ ಕಲ್ಪಿಸುತ್ತದೆ. ಬಾಕಿಯಿರುವ ಕೆಲಸಗಳನ್ನು ಮತ್ತು ಅಪ್ಲೋಡ್ಗಳನ್ನು ಒಂದೇ ಡ್ಯಾಶ್ಬೋರ್ಡ್ನಲ್ಲಿ ನಿರ್ವಹಿಸಲು ಅನುಕೂಲ ಕಲ್ಪಿಸುತ್ತದೆ. ಇದರ ಜೊತೆಗೆ ಉಚಿತ ಐಟಿ ರಿಟರ್ನ್ಸ್ಗಾಗಿ ಸಾಫ್ಟ್ವೇರ್ ಒಂದನ್ನು ರೂಪಿಸಲಾಗುವುದು. ಇದರಲ್ಲಿ ಕೇಳುವ ಪ್ರಶ್ನೆಗಳಿಗೆ ಬಳಕೆದಾರರು ಮಾಹಿತಿ ನೀಡಿದರೆ ರಿಟರ್ನ್ಸ್ ಫೈಲ್ ಮಾಡಲು ಅನುಕೂಲ ಕಲ್ಪಿಸುತ್ತದೆ. ಇದರ ಜೊತೆಗೆ ತೆರಿಗೆ ಪಾವತಿದಾರರ ಅನುಕೂಲಕ್ಕಾಗಿ ಹೊಸ ಸಹಾಯವಾಣಿಯೊಂದನ್ನು ಆರಂಭಿಸುವುದಾಗಿಯೂ ಹೇಳಿತ್ತು.
ಹೊಸ ಪೋರ್ಟಲ್ ರೂಪಿಸುವ ಜವಾಬ್ದಾರಿಯನ್ನು 2019ರಲ್ಲಿ ಇನ್ಫೋಸಿಸ್ಗೆ ವಹಿಸಲಾಗಿತ್ತು. ಐಟಿ ರಿಟರ್ನ್ಸ್ ಅರ್ಜಿಗಳ ಸಂಸ್ಕರಣಾ ಅವಧಿಯನ್ನು 63 ದಿನಗಳಿಂದ ಒಂದು ದಿನಕ್ಕೆ ಇಳಿಸುವ ಮತ್ತು ವೇಗವಾಗಿ ರಿಫಂಡ್ ಮಾಡುವ ವ್ಯವಸ್ಥೆ ರೂಪಿಸುವ ಉದ್ದೇಶವನ್ನೂ ಹಣಕಾಸು ಇಲಾಖೆ ಹೊಂದಿತ್ತು.
Ministry of Finance has summoned Sh Salil Parekh,MD&CEO @Infosys on 23/08/2021 to explain to hon’ble FM as to why even after 2.5 months since launch of new e-filing portal, glitches in the portal have not been resolved. In fact,since 21/08/2021 the portal itself is not available.
— Income Tax India (@IncomeTaxIndia) August 22, 2021
ಪೋರ್ಟಲ್ನಲ್ಲಿದ್ದ ಸಮಸ್ಯೆಗಳೇನು? ಕಳೆದ ಭಾನುವಾರವು ತೆರಿಗೆ ಪಾವತಿದಾರರು ಪೋರ್ಟಲ್ನಲ್ಲಿರುವ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಲು ಶುರು ಮಾಡಿದರು. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಆದಾಯ ತೆರಿಗೆ ಇಲಾಖೆಯು ಒಂದು ಟ್ವೀಟ್ ಮಾಡಿತ್ತು. ‘ಎರಡೂವರೆ ತಿಂಗಳುಗಳಿಂದ ಹೊಸ ಇ-ಫೈಲಿಂಗ್ ಪೋರ್ಟಲ್ನಲ್ಲಿ ದೋಷಗಳು ಉಳಿದಿರುವ ಬಗ್ಗೆ ವಿವರಣೆ ಕೇಳಲು ಇನ್ಫೋಸಿಸ್ನ ವ್ಯವಸ್ಥಾಪಕ ನಿರ್ದೇಶಕರನ್ನು ಹಣಕಾಸು ಸಚಿವರು ಬರಹೇಳಿದ್ದಾರೆ’ ಎಂದು ಟ್ವೀಟ್ನಲ್ಲಿ ಹೇಳಲಾಗಿತ್ತು.
ಈ ಟ್ವೀಟ್ ಪೋಸ್ಟ್ ಆದ 7 ತಾಸುಗಳ ನಂತರ ಸಮಸ್ಯೆಗಳು ಪರಿಹಾರವಾಗಿವೆ, ಹೊಸ ಪೋರ್ಟಲ್ ಲೈವ್ ಆಗಿದೆ ಎಂದು ಇನ್ಫೋಸಿಸ್ ಹೇಳಿತ್ತು. ಹೊಸ ಪೋರ್ಟಲ್ನ ತುರ್ತು ನಿರ್ವಹಣಾ ಕಾರ್ಯ ಮುಗಿದಿದೆ. ಪೋರ್ಟಲ್ ಈಗ ಲೈವ್ ಆಗಿದೆ. ತೆರಿಗೆ ಪಾವತಿದಾರರಿಗೆ ಆಗಿರುವ ತೊಂದರೆಗಾಗಿ ವಿಷಾದಿಸುತ್ತೇವೆ ಎಂದು ಇನ್ಫೋಸಿಸ್ ಹೇಳಿತ್ತು. ಇದಕ್ಕೂ ಮೊದಲು, ಅಂದರೆ ಆಗಸ್ಟ್ 21ರಂದು ಇನ್ಫೋಸಿಸ್ ಟ್ವೀಟ್ ಮಾಡಿ ಐಟಿ ಪೋರ್ಟಲ್ನ ತುರ್ತು ನಿರ್ವಹಣೆ ಮುಂದುವರಿಯಲಿದೆ. ಲೋಪಗಳನ್ನು ಸರಿಪಡಿಸಿದ ನಂತರ ಮಾಹಿತಿ ನೀಡಲಾಗುವುದು ಎಂದು ಹೇಳಿತ್ತು. ಜೂನ್ 7ರಂದು ಹೊಸ ಐಟಿ ಪೋರ್ಟಲ್ ಆರಂಭವಾದ ಕೆಲವೇ ಗಂಟೆಗಳ ನಂತರ ಪೋರ್ಟಲ್ನಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿತ್ತು. ಆಧಾರ್ ವ್ಯಾಲಿಡೇಶನ್, ಪಾಸ್ವರ್ಡ್ ಜನರೇಶನ್, ಒಟಿಪಿ, ಹಳೆಯ ದತ್ತಾಂಶಗಳ ಜೋಡಣೆ ಸೇರಿದಂತೆ ಹಲವು ಅಂಶಗಳಲ್ಲಿ ತೊಂದರೆ ಕಾಣಿಸಿಕೊಂಡಿದೆ ಎಂದು ತೆರಿಗೆ ಪಾವತಿದಾರರು ದೂರಿದ್ದರು.
ಮಾರನೇ ದಿನ ನಿರ್ಮಲಾ ಸೀತಾರಾಮನ್ ಸಹ ಸಮಸ್ಯೆಗಳ ಬಗ್ಗೆ ಟ್ವೀಟ್ ಮಾಡಿದ್ದರು. ಇ-ಫೈಲಿಂಗ್ ಪೋರ್ಟಲ್ ಆರಂಭವಾದ ಕೆಲವೇ ಗಂಟೆಗಳಲ್ಲಿ ಹಲವು ಲೋಪಗಳು ಪತ್ತೆಯಾಗಿವೆ. ಇನ್ಫೋಸಿಸ್ ಮತ್ತು ನಂದನ್ ನಿಲೇಕಣಿ ತೆರಿಗೆ ಪಾವತಿದಾರರನ್ನು ಭ್ರಮನಿರಸನಗೊಳಿಸುವುದಿಲ್ಲ ಎಂದು ಅವರು ಹೇಳಿದ್ದರು. ತೆರಿಗೆ ಪಾವತಿದಾರರಿಗೆ ಅನುಕೂಲ ಕಲ್ಪಿಸುವುದು ನಮ್ಮ ಆದ್ಯತೆಯಾಗಬೇಕು ಎಂದು ಅವರು ಹೇಳಿದ್ದರು.
ಈ ಟ್ವೀಟ್ಗೆ ಪ್ರತಿಕ್ರಿಯಿಸಿದ್ದ ನಂದನ್ ನಿಲೇಕಣಿ ಈ ಸಮಸ್ಯೆ ಪರಿಹರಿಸಲು ಇನ್ಫೋಸಿಸ್ ಕೆಲಸ ಮಾಡಲಿದೆ ಎಂದು ಭರವಸೆ ನೀಡಿದ್ದರು. ತಾಂತ್ರಿಕ ಸಮಸ್ಯೆಗಳನ್ನು ನಾವು ಗುರುತಿಸಿದ್ದೇವೆ. ಅವನ್ನು ಪರಿಹರಿಸಿ, ಒಂದು ವಾರದಲ್ಲಿ ವ್ಯವಸ್ಥೆಯನ್ನು ಮತ್ತೆ ಹಳಿಗೆ ತರಲು ಇನ್ಫೋಸಿಸ್ ತಂಡ ಕೆಲಸ ಮಾಡುತ್ತಿದೆ ಎಂದು ಟ್ವೀಟ್ ಮಾಡಿದ್ದರು.
ಆದಾಯ ತೆರಿಗೆ ಪೋರ್ಟಲ್ನಲ್ಲಿ ಸಮಸ್ಯೆಗಳು ಕಾಣಿಸಿಕೊಂಡ ಕಾರಣ ಆದಾಯ ತೆರಿಗೆ ಇಲಾಖೆಯು ಮ್ಯಾನುವಲ್ ಫೈಲಿಂಗ್ಗೆ ಅವಕಾಶ ನೀಡಬೇಕಾಯಿತು. ಇದರ ಜೊತೆಗೆ ಪಿಂಚಣಿ ನಿಧಿ ಮತ್ತು ಸವರನ್ ವೆಲ್ತ್ ಫಂಡ್ಗಳ ಎಲೆಕ್ಟ್ರಾನಿಕ್ ಫೈಲಿಂಗ್ ಆಯ್ಕೆಯನ್ನೂ ಮುಕ್ತವಾಗಿ ಇರಿಸಬೇಕಾಯಿತು.
The emergency maintenance of the @IncomeTaxIndia portal has concluded and the portal is live. We regret any inconvenience caused to taxpayers.
— Infosys India Business (@InfosysIndiaBiz) August 22, 2021
ಪೋರ್ಟಲ್ ಸರಿಪಡಿಸಲು ಹಣಕಾಸು ಇಲಾಖೆ ಈ ಹಿಂದೆ ಏನೆಲ್ಲಾ ಮಾಡಿತ್ತು? ಕಳೆದ ಜೂನ್ 22ರಂದು ನಿರ್ಮಲಾ ಸೀತಾರಾಮನ್ ಇನ್ಫೋಸಿಸ್ನ ಮುಖ್ಯ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿದ್ದರು. ಹೆಚ್ಚು ಸಮಯ ವ್ಯಯಿಸದೇ ಎಲ್ಲ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ತಾಕೀತು ಮಾಡಿದ್ದರು. ತೆರಿಗೆ ಪಾವತಿದಾರರ ಅನಾನುಕೂಲಕ್ಕೆ ಕಾರಣವಾಗುವ ದೋಷಗಳನ್ನು ಶೀಘ್ರ ಪರಿಹರಿಸಬೇಕು ಎಂದು ಹೇಳಿದ್ದರು.
ಇನ್ಫೋಸಿಸ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಲಿಲ್ ಪಾರೆಖ್, ಚೀಫ್ ಆಪರೇಟಿಂಗ್ ಆಫೀಸರ್ ಪ್ರವೀಣ್ ರಾವ್ ಮತ್ತು ಇತರ ಅಧಿಕಾರಿಗಳು ಆದ್ಯತೆಯ ಪಟ್ಟಿ ಬರೆದುಕೊಂಡಿದ್ದರು. ಇ-ಪ್ರೊಸೀಡಿಂಗ್ಸ್, ಫಾರ್ಮ್ 15ಸಿಎ/15ಸಿಬಿ, ಟಿಡಿಎಸ್ ಸ್ಟೇಟ್ಮೆಂಟ್ಸ್, ಡಿಎಸ್ಸಿ ಮತ್ತು ಹಳೆಯ ತೆರಿಗೆ ರಿಟರ್ನ್ಸ್ ಜೋಡಣೆಯ ಸಮಸ್ಯೆಗಳನ್ನು ಒಂದು ವಾರದಲ್ಲಿ ಸರಿಪಡಿಸುವಾಗಿ ಭರವಸೆ ನೀಡಿದ್ದರು.
ಆದರೂ ಸಮಸ್ಯೆಗಳು ಮುಂದುವರಿದಿವೆ ಎಂದು ಹಲವು ಬಳಕೆದಾರರು ದೂರಿದ್ದರು. ಸಮಸ್ಯೆಗಳ ಬಗ್ಗೆ ಇನ್ಫೋಸಿಸ್ ಅಧಿಕಾರಿಗಳೊಂದಿಗೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ. ಸಮಸ್ಯೆಗಳನ್ನು ಪರಿಹರಿಸುವ ಜವಾಬ್ದಾರಿಯನ್ನು ನಂದನ್ ನಿಲೇಕಣಿ ಹೊತ್ತುಕೊಂಡಿದ್ದಾರೆ. ಇನ್ನೊಂದು ವಾರದಲ್ಲಿ ಇ-ಪೋರ್ಟಲ್ನ ಎಲ್ಲ ಸಮಸ್ಯೆಗಳೂ ಪರಿಹಾರವಾಗಲಿವೆ ಎಂದು ಹಣಕಾಸು ಸಚಿವರು ಹೇಳಿದ್ದರು.
(Income Tax Portal Facing Glitches over which Infosys CEO summoned by Nirmala Sitharaman)
ಇದನ್ನೂ ಓದಿ: ಆದಾಯ ತೆರಿಗೆ ಇ-ಫೈಲಿಂಗ್ಗೆ ಹತ್ತಾರು ವಿಘ್ನ: ಹಣಕಾಸು ಇಲಾಖೆಯಿಂದ ಇನ್ಫೋಸಿಸ್ ಸಿಇಒ ಸಲಿಲ್ ಪಾರೇಖ್ಗೆ ಬುಲಾವ್
ಇದನ್ನೂ ಓದಿ: Income Tax: ತೆರಿಗೆ ಪಾವತಿದಾರರು ಫಾರ್ಮ್ 26AS ಡೌನ್ಲೋಡ್ ಮಾಡಿಕೊಳ್ಳುವ ಹಂತಹಂತವಾದ ವಿವರ ಇಲ್ಲಿದೆ