ಸೆ.15ರ ಒಳಗೆ ತೆರಿಗೆ ಪೋರ್ಟಲ್ ಸರಿಪಡಿಸಿ: ಇನ್​ಫೊಸಿಸ್​ಗೆ ಕೇಂದ್ರ ಸರ್ಕಾರ ತಾಕೀತು

ತೆರಿಗೆ ಪಾವತಿದಾರರಿಗೆ ಆಗುತ್ತಿರುವ ತೊಂದರೆಗಳನ್ನು ಪ್ರಸ್ತಾಪಿಸಿ ನಿರ್ಮಲಾ ಸೀತಾರಾಮನ್ ಅಸಮಾಧಾನ ಹೊರಹಾಕಿದರು.

ಸೆ.15ರ ಒಳಗೆ ತೆರಿಗೆ ಪೋರ್ಟಲ್ ಸರಿಪಡಿಸಿ: ಇನ್​ಫೊಸಿಸ್​ಗೆ ಕೇಂದ್ರ ಸರ್ಕಾರ ತಾಕೀತು
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಇನ್​ಫೊಸಿಸ್ ಸಿಇಒ ಸಲಿಲ್ ಪಾರೇಖ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 23, 2021 | 9:05 PM

ದೆಹಲಿ: ತೆರಿಗೆ ಪಾವತಿ ಪೋರ್ಟಲ್​ನಲ್ಲಿ ಉಂಟಾಗಿರುವ ಲೋಪಗಳನ್ನು ಸೆ.15ರ ಒಳಗೆ ಸರಿಪಡಿಸಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇನ್​ಫೊಸಿಸ್ ಸಿಇಒ ಸಲಿಲ್ ಪಾರೇಖ್​ ಅವರಿಗೆ ಸೋಮವಾರ ತಾಕೀತು ಮಾಡಿದರು. ತೆರಿಗೆ ಪಾವತಿದಾರರಿಗೆ ಆಗುತ್ತಿರುವ ತೊಂದರೆಗಳನ್ನು ಪ್ರಸ್ತಾಪಿಸಿ ಅಸಮಾಧಾನ ಹೊರಹಾಕಿದರು.

ಆದಾಯ ತೆರಿಗೆ ಪೋರ್ಟಲ್​ನ ಸಮಸ್ಯೆಗಳ ಕುರಿತು ಇನ್​ಫೋಸಿಸ್ ಸಿಇಒ ಸಲಿಲ್ ಪಾರೆಖ್ ಅವರೊಂದಿಗೆ ಚರ್ಚಿಸಿದ ಹಣಕಾಸು ಸಚಿವರು ಮತ್ತು ಸಚಿವಾಲಾಯದ ಅಧಿಕಾರಿಗಳು ಒಂದು ತಾಸಿಗೂ ಹೆಚ್ಚು ಅವಧಿ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪ್ರಸ್ತಾಪಿಸಿ, ಶೀಘ್ರ ಸರಿಪಡಿಸಿ ಎಂದು ಸೂಚಿಸಿದರು.

ಪೋರ್ಟಲ್ ಸತತ ಎರಡು ದಿನಗಳು ಕೆಲಸ ಮಾಡದಿರುವುದನ್ನು ಗಮನಿಸಿದ ಸಚಿವರು ಸಲಿಲ್ ಪಾರೇಖ್​ಗೆ ಬುಲಾವ್ ಕಳಿಸಿದ್ದರು. ಸರ್ಕಾರ ಮತ್ತು ತೆರಿಗೆ ಪಾವತಿದಾರರು ಏನು ನಿರೀಕ್ಷಿಸುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಿದರು. ಪೋರ್ಟಲ್ ಆರಂಭಿಸಿ ಎರಡೂವರೆ ತಿಂಗಳು ಕಳೆದರೂ ಹಲವು ಸಮಸ್ಯೆಗಳು ಇನ್ನೂ ಪರಿಹಾರವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪದೇಪದೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವುದಕ್ಕೆ ವಿವರಣೆ ಕೊಡಿ ಎಂದು ಕೇಳಿದರು.

ಇನ್​ಫೊಸಿಸ್ ಮತ್ತಷ್ಟು ಸಂಪನ್ಮೂಲಗಳನ್ನು ಈ ನಿಟ್ಟಿನಲ್ಲಿ ವಿನಿಯೋಗಿಸಬೇಕು. ಒಪ್ಪಿಕೊಂಡಿರುವ ಎಲ್ಲ ಸೇವೆಗಳನ್ನು ಶೀಘ್ರ ಪೂರ್ಣಪ್ರಮಾಣದಲ್ಲಿ ಕೊಡಬೇಕು ಎಂದು ಸರ್ಕಾರ ಸೂಚಿಸಿತು. ಆದಾಯ ತೆರಿಗೆ ಪೋರ್ಟಲ್​ಗಾಗಿ ಇನ್​ಫೊಸಿಸ್​ನ 750 ಮಂದಿಗಳ ತಂಡ ಕೆಲಸ ಮಾಡುತ್ತಿದೆ. ಸಂಸ್ಥೆಯ ಸಿಒಒ ಪ್ರವೀಣ್​ ರಾವ್ ವೈಯಕ್ತಿಕವಾಗಿ ಅದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ ಎಂದು ಇನ್​ಫೊಸಿಸ್​ನ ಸಿಇಒ ಸಲಿಲ್ ಪಾರೆಖ್ ಹೇಳಿದರು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಎರಡು ಬಾರಿ ವಿವರಣೆ ಕೇಳಿದ ಸಚಿವೆ ಕೇಂದ್ರ ಹಣಕಾಸು ಇಲಾಖೆಯು ಸಾಕಷ್ಟು ನಿರೀಕ್ಷೆಗಳೊಂದಿಗೆ ಇನ್​ಫೊಸಿಸ್​ಗೆ ಆದಾಯ ತೆರಿಗೆ ರಿಟರ್ನ್ಸ್​ ಪೋರ್ಟಲ್ ರೂಪಿಸುವ ಹೊಣೆ ನೀಡಿತ್ತು. ಪೋರ್ಟಲ್ ಚಾಲು ಆದ ನಂತರ ಹಲವು ಬಾರಿ ತೆರಿಗೆ ಪಾವತಿದಾರರು ಲೋಪಗಳನ್ನು ವರದಿ ಮಾಡಿದ್ದರು. ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ದೂರಿದ್ದರು. ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಹಣಕಾಸು ಸಚಿವರು ಕಳೆದ ಎರಡು ತಿಂಗಳಲ್ಲಿ ಎರಡು ಬಾರಿ ಇನ್​ಫೋಸಿಸ್​ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಲಿಲ್ ಪಾರೆಖ್ ಅವರನ್ನು ಸಚಿವಾಲಯಕ್ಕೆ ಕರೆಸಿಕೊಂಡು ವಿವರಣೆ ಕೇಳಿದರು. ಕಳೆದ ಜೂನ್ ತಿಂಗಳಲ್ಲಿ ಮೊದಲ ಸಭೆ ನಡೆದಿತ್ತು. ಇಂದು (ಆಗಸ್ಟ್ 23) ಇಂಥ ಮತ್ತೊಂದು ಸಭೆ ನಡೆದಿದೆ.

ಪೋರ್ಟಲ್ ಚಾಲು ಆದ ನಂತರ ಹಲವು ಬಾರಿ ಬಳಕೆದಾರರು ಲೋಪಗಳ ಬಗ್ಗೆ ದೂರಿದ್ದರು. ಕಳೆದ ಎರಡು ದಿನಗಳಿಂದ ಪೋರ್ಟಲ್ ಓಪನ್ ಆಗುತ್ತಿಲ್ಲ ಎಂದು ಹಲವು ತೆರಿಗೆ ಪಾವತಿದಾರರು ಹೇಳಿದ್ದರು. ಇನ್​ಫೋಸಿಸ್​ನ ಎಂಡಿ ಮತ್ತು ಸಿಇಒ ಸಲಿಲ್ ಪಾರೆಖ್​ರನ್ನು ಸೋಮವಾರ ಸಚಿವಾಲಯಕ್ಕೆ ಕರೆಸಿಕೊಂಡಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ದೋಷಗಳು ಮುಂದುವರಿದಿರುವ ಬಗ್ಗೆ ಮಾಹಿತಿ ಕೋರಿದ್ದರು.

(Income Tax Portal Problems Nirmala Sitharaman Ask Infosys to Fix Tax Website Glitches By September 15)

ಇದನ್ನೂ ಓದಿ: ಆದಾಯ ತೆರಿಗೆ ಪೋರ್ಟಲ್​ ಸಮಸ್ಯೆಗಳಿವು; ಇನ್​ಫೋಸಿಸ್ ಸಿಇಒಗೆ ಹಣಕಾಸು ಸಚಿವರು ಬುಲಾವ್ ಕಳಿಸಿದ್ದು ಈ ಕಾರಣಕ್ಕೆ

ಇದನ್ನೂ ಓದಿ: Income Tax: ತೆರಿಗೆ ಪಾವತಿದಾರರು ಫಾರ್ಮ್​ 26AS ಡೌನ್​ಲೋಡ್​ ಮಾಡಿಕೊಳ್ಳುವ ಹಂತಹಂತವಾದ ವಿವರ ಇಲ್ಲಿದೆ