
ಬೆಂಗಳೂರು, ಆಗಸ್ಟ್ 29: ಜಪಾನ್ ದೇಶಕ್ಕೆ ಎರಡು ದಿನದ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿಯನ ಉದ್ದಿಮೆಗಳಿಗೆ ಭಾರತದಲ್ಲಿ ಹೂಡಿಕೆ (Japanese investments) ಮಾಡುವಂತೆ ಕರೆ ನೀಡಿದ್ದಾರೆ. ಇದರ ಹೊರತಾಗಿಯೂ ಭಾರತ ಮತ್ತು ಜಪಾನ್ ದೇಶಗಳ ನಡುವಿನ ವ್ಯಾಪಾರ ಸಂಬಂಧ ಇತ್ತೀಚಿನ ವರ್ಷಗಳಲ್ಲಿ ಹೆಚ್ಚೆಚ್ಚು ಗಾಢವಾಗುತ್ತಾ ಹೋಗುತ್ತಿದೆ. ಕಳೆದ ಎರಡು ವರ್ಷದಲ್ಲಿ ಭಾರತದಲ್ಲಿ ಹೂಡಿಕೆ ಮಾಡಲು ಜಪಾನ್ನ ವಿವಿಧ ಸಂಸ್ಥೆಗಳು 170ಕ್ಕೂ ಅಧಿಕ ತಿಳಿವಳಿಕೆ ಒಪ್ಪಂದಗಳಿಗೆ (ಎಂಒಯು) ಸಹಿ ಹಾಕಿವೆ. ಒಂದು ಲಕ್ಷ ಕೋಟಿ ರೂಗಿಂತ ಅಧಿಕ ಬಂಡವಾಳವನ್ನು ಭಾರತದಲ್ಲಿ ಹರಿಸಲು ಜಪಾನ್ ಉದ್ಯಮಿಗಳು ಸಿದ್ಧರಾಗಿದ್ದಾರೆ.
ಜಪಾನ್ ತಂತ್ರಜ್ಞಾನ ಮತ್ತು ಭಾರತದ ಪ್ರತಿಭಾ ಸಮೂಹ ಸಂಯೋಜನೆ ಸೇರಿ ಹೊಸ ಆವಿಷ್ಕಾರಗಳನ್ನು ತೃತೀಯ ಜಗತ್ತಿನ ದೇಶಗಳಿಗೆ ಕೊಂಡೊಯ್ಯುವ ಪ್ರಯತ್ನ ನಡೆದಿದೆ. ಇತ್ತೀಚೆಗೆ ಟೋಕಿಯೋದಲ್ಲಿ 9ನೇ TICAD ಸಮಿಟ್ ಹಾಗೂ ಜಪಾನ್ ಭಾರತ ಆಫ್ರಿಕಾ ಫೋರಂ ನಡೆದಿತ್ತು. ಎರಡೂ ದೇಶಗಳು ಜೊತೆಯಾಗಿ ಸೇರಿ ಸರಬರಾಜು ಸರಪಳಿಯನ್ನು ವಿಸ್ತರಿಸಲು ಮತ್ತು ಗಟ್ಟಿಗೊಳಿಸಲು ಪ್ರಯತ್ನಿಸುತ್ತಿವೆ.
ಇದನ್ನೂ ಓದಿ: ಜಪಾನೀ ಉದ್ದಿಮೆಗಳಿಗೆ ಗ್ಲೋಬಲ್ ಸೌತ್ ತಲುಪಲು ಭಾರತ ಸ್ಪ್ರಿಂಗ್ಬೋರ್ಡ್ ಇದ್ದಂತೆ: ನರೇಂದ್ರ ಮೋದಿ
ಜಪಾನ್ ದೇಶದ ನಿಪ್ಪಾನ್ ಸ್ಟೀಲ್, ಸುಜುಕಿ ಮೋಟಾರ್, ಟೊಯೊಟಾ ಕಿರ್ಲೋಸ್ಕರ್, ಸುಮಿಟೊಮೊ ರಿಯಾಲ್ಟಿ, ಜೆಎಫ್ಇ ಸ್ಟೀಲ್, ಒಸಾಕ ಗ್ಯಾಸ್, ಆಸ್ಟ್ರೋಸ್ಕೇಲ್, ಟೋಕಿಯೋ ಎಲೆಕ್ಟ್ರಾನ್, ಫೂಜಿಫಿಲಂ, ಸೋಜಿಟ್ಜ್ ಕಾರ್ಪೊರೇಶನ್, ನಿಡೆಕ್, ಮುಸಾಶಿ ಸೇಮಿಟ್ಸು, ಡಿಯಾಚಿ ಲೈಫ್ ಟೆಕ್ನೋ ಕ್ರಾಸ್ ಮೊದಲಾದ ಕಂಪನಿಗಳಿ ಭಾರತದಲ್ಲಿ ಹೂಡಿಕೆ ಮಾಡುತ್ತಿವೆ. ಭಾರತದಲ್ಲಿ ಕೃಷಿ ಕ್ಷೇತ್ರದಿಂದ ಹಿಡಿದು ಶಿಕ್ಷಣ, ರಿಯಲ್ ಎಸ್ಟೇಟ್, ಎಲೆಕ್ಟ್ರಾನಿಕ್ಸ್ವರೆಗೆ ವಿವಿಧ ಸೆಕ್ಟರ್ಗಳಲ್ಲಿ ಜಪಾನೀ ಕಂಪನಿಗಳು ತೊಡಗಿಸಿಕೊಂಡಿವೆ.
ಬೆಂಗಳೂರಿನ ಬಿಡದಿ ಬಳಿ ಟೊಯೊಟೋ ಕಿರ್ಲೋಸ್ಕರ್ ಘಟಕ ವಿಸ್ತರಣೆಗೆ 3,300 ಕೋಟಿ ರೂ ವ್ಯಯಿಸುತ್ತಿದೆ. ಬೆಂಗಳೂರಿನ ಐಐಎಸ್ಸಿ ಸೇರಿದಂತೆ ಎಂಟು ಯೂನಿವರ್ಸಿಟಿಗಳೊಂದಿಗೆ ಜಪಾನ್ ಹೊಂದಾಣಿಕೆ ಮಾಡಿಕೊಂಡಿದೆ. ಜಪಾನ್ನ ನಿಡೆಕ್ ಸಂಸ್ಥೆ ಬೆಂಗಳೂರಿನಲ್ಲಿ ಗ್ಲೋಬಲ್ ಸಾಫ್ಟ್ವೇರ್ ಡೆವಲಪ್ಮೆಂಟ್ ಸೆಂಟರ್ ನಿರ್ಮಿಸುತ್ತಿದೆ.
ಇದನ್ನೂ ಓದಿ: ಭಾರತ ಮತ್ತು ಜಪಾನ್ ಜಾಗತಿಕ ಪಾಲುದಾರಿಕೆಯಲ್ಲಿ ಹೊಸ ಅಧ್ಯಾಯ ತೆರೆಯುತ್ತವೆ; ಪ್ರಧಾನಿ ಮೋದಿ
ತಂತ್ರಜ್ಞಾನ ಶಕ್ತ ಜಪಾನ್ ಭಾರತದ ಕೃಷಿ ಕ್ಷೇತ್ರಕ್ಕೂ ನೆರವು ನೀಡುತ್ತಿದೆ. ಸೋಜಿಟ್ಜ್ ಕಾರ್ಪೊರೇಶನ್ ಸಂಸ್ಥೆ ಇಂಡಿಯನ್ ಆಯಿಲ್ ಜೊತೆಗಾರಿಕೆಯಲ್ಲಿ ಭಾರತದಲ್ಲಿ 30 ಬಯೋಗ್ಯಾಸ್ ಘಟಕಗಳನ್ನು ಸ್ಥಾಪಿಸಲಿದೆ. ಇದರಿಂದ 1.6 ದಶಲಕ್ಷ ಟನ್ ಅನಿಲ ಉತ್ಪಾದನೆಯಾಗಲಿದೆ. ಕೃಷಿಕರು ತಮ್ಮ ಬೆಳೆ ತ್ಯಾಜ್ಯಗಳನ್ನು ಮಾರಿ ಹೆಚ್ಚುವರಿ ಆದಾಯ ಪಡೆಯುವ ಅವಕಾಶ ಇದೆ.
ಜಪಾನ್ನ ಉದ್ದಿಮೆಗಳು ತಮ್ಮ ಜಾಗತಿಕ ಸರಬರಾಜು ಸರಪಳಿ ವ್ಯವಸ್ಥೆಗೆ ಭಾರತದ ಸಣ್ಣ ಉದ್ದಿಮೆಗಳನ್ನು ಬಳಸಿಕೊಳ್ಳುತ್ತಿದೆ. ಇದು ಸಣ್ಣ ಉದ್ದಿಮೆಗಳ ಮೌಲ್ಯ ಮತ್ತು ತಂತ್ರಜ್ಞಾನ ವೃದ್ಧಿಗೆ ಸಹಕಾರಿಯಾಗಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ