ಮೊದಲ ಕ್ವಾರ್ಟರ್ನಲ್ಲಿ ಜಿಡಿಪಿ ದರ ಶೇ. 7.8; ಟ್ಯಾರಿಫ್ ಚಿಂತೆಯ ನಡುವೆ ಅಚ್ಚರಿ ಮೂಡಿಸಿದ ಭಾರತದ ಆರ್ಥಿಕ ಬೆಳವಣಿಗೆ
India GDP in Q1 grows by 7.8%: 2025ರ ಏಪ್ರಿಲ್ನಿಂದ ಜೂನ್ವರೆಗಿನ ಕ್ವಾರ್ಟರ್ನಲ್ಲಿ ಭಾರತದ ಆರ್ಥಿಕತೆ ಶೇ. 7.8ರಷ್ಟು ಹೆಚ್ಚಿದೆ ಎಂದು ಸರ್ಕಾರದ ಅಂಕಿ ಅಂಶ ತಿಳಿಸಿದೆ. ವಿವಿಧ ಆರ್ಥಿಕ ತಜ್ಞರ ಸಮೀಕ್ಷೆಗಳಲ್ಲಿ ಮಾಡಲಾದ ಅಂದಾಜನ್ನು ಮೀರಿಸಿ ಜಿಡಿಪಿ ಬೆಳೆದಿದೆ. ಕಳೆದ ಐದು ಕ್ವಾರ್ಟರ್ಗಳಲ್ಲೇ ಇದು ಅತ್ಯಧಿಕ ಬೆಳವಣಿಗೆ ದರ ಎನಿಸಿದೆ.

ನವದೆಹಲಿ, ಆಗಸ್ಟ್ 29: ಈ ಹಣಕಾಸು ವರ್ಷದ ಮೊದಲ ಕ್ವಾರ್ಟರ್ ಆದ ಏಪ್ರಿಲ್ನಿಂದ ಜೂನ್ವರೆಗಿನ ಅವಧಿಯಲ್ಲಿ ಭಾರತದ ಜಿಡಿಪಿ (GDP) ಶೇ. 7.8ರಷ್ಟು ಬೆಳವಣಿಗೆ ದಾಖಲಿಸಿದೆ. ಬಹುತೇಕ ಎಲ್ಲಾ ಆರ್ಥಿಕ ತಜ್ಞರ ಅಂದಾಜುಗಳನ್ನು ಮೀರಿಸಿ ಭಾರತದ ಆರ್ಥಿಕತೆ ಬೆಳೆದಿದದೆ. ಎಕನಾಮಿಕ್ ಟೈಮ್ಸ್, ರಾಯ್ಟರ್ಸ್ ಇತ್ಯಾದಿ ಏಜೆನ್ಸಿಗಳ ಮೂಲಕ ನಡೆಸಲಾದ ಪೋಲ್ನಲ್ಲಿ ಮೊದಲ ಕ್ವಾರ್ಟರ್ನಲ್ಲಿ ಶೇ. 6.5ರ ಆಸುಪಾಸಿನಲ್ಲಿ ಜಿಡಿಪಿ ಬೆಳೆಯುವ ನಿರೀಕ್ಷೆ ವ್ಯಕ್ತವಾಗಿತ್ತು. ಆದರೆ, ಎಲ್ಲರ ಲೆಕ್ಕಾಚಾರ ತಲೆಕೆಳಗಾಗುವಂತೆ ಶೇ. 7.8ರಷ್ಟು ಏರಿರುವುದು ಗಮನಾರ್ಹ. ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್ಎಸ್ಒ) ಶುಕ್ರವಾರ ಬಿಡುಗಡೆ ಮಾಡಿದ ದತ್ತಾಂಶದಲ್ಲಿ ಈ ಮಾಹಿತಿ ಹಂಚಿಕೊಳ್ಳಲಾಗಿದೆ.
ಹಿಂದಿನ ವರ್ಷದ ಇದೇ ಕ್ವಾರ್ಟರ್ನಲ್ಲಿ (2024ರ ಏಪ್ರಿಲ್ನಿಂದ ಜೂನ್) ಜಿಡಿಪಿ ಶೇ. 6.5ರಷ್ಟು ಹೆಚ್ಚಿತ್ತು. ಈ ಬಾರಿ ಅದು ಶೇ. 7.8ರಷ್ಟು ಬೆಳೆದಿರುವುದು ಕಂಡುಬಂದಿದೆ. ನಾಮಿನಲ್ ಜಿಡಿಪಿ ಶೇ. 8.8ರಷ್ಟು ಹೆಚ್ಚಿದೆ ಎಂದು ಎನ್ಎಸ್ಒ ದತ್ತಾಂಶದಿಂದ ತಿಳಿದುಬಂದಿದೆ. ಭಾರತ ದಾಖಲಿಸಿರುವ ಜಿಡಿಪಿ ದರವು ಕಳೆದ ಐದು ಕ್ವಾರ್ಟರ್ಗಳಲ್ಲೇ ಅತ್ಯಧಿಕ ಎನಿಸಿದೆ.
ಇದನ್ನೂ ಓದಿ: ಟ್ರಂಪ್ ಟ್ಯಾರಿಫ್ನಿಂದ ಕಳೆದುಕೊಳ್ಳೋದು 0.5, ಗಳಿಸೋದು 2-3 ಪರ್ಸೆಂಟ್: ಪ್ರೊ| ಮಾಧವ್ ನಲಪತ್
ಭಾರತದ ಮೇಲೆ ಅಮೆರಿಕ ಟ್ಯಾರಿಫ್ ಹೇರುವ ಮುಂಚಿನ ಅವಧಿಯಲ್ಲಿ ದಾಖಲಾದ ಆರ್ಥಿಕ ಬೆಳವಣಿಗೆ ಇದು. ಆಗಸ್ಟ್ ಮೊದಲ ವಾರದಲ್ಲಿ ಶೇ. 25ರಷ್ಟು ಟ್ಯಾರಿಫ್ ಜಾರಿಗೆ ಬಂದಿದೆ. ಆಗಸ್ಟ್ 27ರಿಂದ ಒಟ್ಟು ಶೇ. 50ರಷ್ಟು ಟ್ಯಾರಿಫ್ ಜಾರಿಯಲ್ಲಿದೆ. ಈ ಟ್ಯಾರಿಫ್ ಪರಿಣಾಮ ಏನು ಎಂಬುದರ ಮುನ್ಸೂಚನೆಯು ಎರಡನೇ ಕ್ವಾರ್ಟರ್ನಲ್ಲಿ ಸಿಗಬಹುದು.
ಮೊದಲ ಕ್ವಾರ್ಟರ್ನಲ್ಲಿ ಯಾವ್ಯಾವ ಸೆಕ್ಟರ್ಗಳ ಬೆಳವಣಿಗೆ ಹೇಗೆ?
ಪ್ರೈಮರಿ ಸೆಕ್ಟರ್ಗಳಲ್ಲಿರುವ ಕೃಷಿ ಹಾಗೂ ಮೈನಿಂಗ್ ಭಿನ್ನ ಬೆಳವಣಿಗೆ ದಾಖಲಿಸಿವೆ. ಕೃಷಿ ಸಂಬಂಧಿತ ಕ್ಷೇತ್ರವು ಶೇ. 3.7ರಷ್ಟು ಬೆಳವಣಿಗೆ ಕಂಡಿದೆ. ಹಿಂದಿನ ವರ್ಷದಲ್ಲಿ ಈ ಸೆಕ್ಟರ್ ಶೇ. 1.5 ಮಾತ್ರವೇ ಹಿಗ್ಗಿತ್ತು.
ಇನ್ನು, ಪ್ರೈಮರಿ ಸೆಕ್ಟರ್ಗೆ ಸೇರಿದ ಮೈನಿಂಗ್ ವಲಯ ಹಿನ್ನಡೆ ಕಂಡಿದೆ. 2024-25ರ ಮೊದಲ ಕ್ವಾರ್ಟರ್ನಲ್ಲಿ ಶೇ. 6.6ರಷ್ಟು ಬೆಳೆದಿದ್ದ ಮೈನಿಂಗ್ ಸೆಕ್ಟರ್ ಈ ಬಾರಿ ಮೈನಸ್ 3.1ರಷ್ಟು ಕುಸಿತ ಕಂಡಿದೆ.
ಇದನ್ನೂ ಓದಿ: 2038ಕ್ಕೆ ಆರ್ಥಿಕ ಶಕ್ತಿಯಲ್ಲಿ ಅಮೆರಿಕವನ್ನೇ ಮೀರಲಿಸದೆ ಭಾರತ: ಐಎಂಎಫ್ ಅಂದಾಜು
ವಿದ್ಯುತ್, ಗ್ಯಾಸ್, ನೀರು ಸರಬರಾಜು ಮತ್ತಿತರ ಯುಟಿಲಿಟಿ ಸರ್ವಿಸ್ ಕ್ಷೇತ್ರದ ಬೆಳವಣಿಗೆ ಕೂಡ ಶೇ. 10.2ರಿಂದ ಶೇ. 0.5ಕ್ಕೆ ಕುಸಿದಿದೆ. ಕಟ್ಟಡ ನಿರ್ಮಾಣ ಕ್ಷೇತ್ರ ಕೂಡ ಹಿನ್ನಡೆ ಕಂಡಿದೆ. ಆದರೆ, ಮ್ಯಾನುಫ್ಯಾಕ್ಚರಿಂಗ್, ಹೋಟೆಲ್, ಸಾರಿಗೆ, ಸಂವಹನ ಇತ್ಯಾದಿ ಸಂಬಂಧಿತ ಕ್ಷೇತ್ರ, ಹಣಕಾಸು, ರಿಯಲ್ ಎಸ್ಟೇಟ್, ಡಿಫೆನ್ಸ್ ಮತ್ತಿತರ ಸೆಕ್ಟರ್ಗಳು ಪಾಸಿಟಿವ್ ಬೆಳವಣಿಗೆ ದಾಖಲಿಸಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




