ನ್ಯೂಜಿಲೆಂಡ್ ಜೊತೆಗೂ ಟ್ರೇಡ್ ಡೀಲ್ ಮುಗಿಸಿದ ಭಾರತ; ಈ ವರ್ಷದಲ್ಲೇ ಭಾರತಕ್ಕಿದು 3ನೇ ಎಫ್​ಟಿಎ

India and New Zealand finalize the FTA: ವಿವಿಧ ದೇಶಗಳೊಂದಿಗೆ ಭಾರತ ತ್ವರಿತಗತಿಯಲ್ಲಿ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಕುದುರಿಸುತ್ತಿದೆ. ಬ್ರಿಟನ್ ಮತ್ತು ಓಮನ್ ಜೊತೆ ಇತ್ತೀಚೆಗಷ್ಟೇ ಎಫ್​ಟಿಎ ಮಾಡಿಕೊಂಡಿದ್ದ ಭಾರತ ಈಗ ನ್ಯೂಜಿಲೆಂಡ್ ಜೊತೆ ಡೀಲ್ ಅಂತಿಮಗೊಳಿಸಿದೆ. 9 ತಿಂಗಳ ಹಿಂದಷ್ಟೇ ಶುರುವಾದ ಮಾತುಕತೆಗಳು ಕ್ಷಿಪ್ರಗತಿಯಲ್ಲಿ ಅಂತಿಮಗೊಂಡಿವೆ.

ನ್ಯೂಜಿಲೆಂಡ್ ಜೊತೆಗೂ ಟ್ರೇಡ್ ಡೀಲ್ ಮುಗಿಸಿದ ಭಾರತ; ಈ ವರ್ಷದಲ್ಲೇ ಭಾರತಕ್ಕಿದು 3ನೇ ಎಫ್​ಟಿಎ
2025ರ ಮಾರ್ಚ್​ನಲ್ಲಿ ನ್ಯೂಜಿಲೆಂಡ್ ಪ್ರಧಾನಿಯ ಭಾರತ ಭೇಟಿ ಸಂದರ್ಭದ ಫೋಟೋ

Updated on: Dec 22, 2025 | 12:40 PM

ನವದೆಹಲಿ, ಡಿಸೆಂಬರ್ 22: ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವೆ ಮುಕ್ತ ವ್ಯಾಪಾರ ಒಪ್ಪಂದ (India New Zealand Trade Deal) ಅಂತಿಮಗೊಂಡಿದೆ. ಇದೇ ಮಾರ್ಚ್ ತಿಂಗಳಿಂದ ಎರಡೂ ಕಡೆಗಳಿಂದ ನಡೆದ ಮಾತುಕತೆಗಳು ಫಲಪ್ರದ ಎನಿಸಿವೆ. ಎರಡೂ ದೇಶಗಳ ಮಧ್ಯೆ ಮುಂದಿನ ದಿನಗಳಲ್ಲಿ ವ್ಯಾಪಾರ ವಹಿವಾಟು ಬಹುತೇಕ ಮುಕ್ತವಾಗಿರಲಿವೆ. ಭಾರತ ಸರ್ಕಾರ ವಿವಿಧ ದೇಶಗಳೊಂದಿಗೆ ವ್ಯಾಪಾರ ಒಪ್ಪಂದ ಕುದುರಿಸಲು ಕ್ಷಿಪ್ರವಾಗಿ ಹೆಜ್ಜೆಗಳನ್ನು ಇಡುತ್ತಿದೆ. ಈ ವರ್ಷದಲ್ಲೇ ನ್ಯೂಜಿಲೆಂಡ್​ನದ್ದೂ ಸೇರಿ ಮೂರು ಟ್ರೇಡ್ ಡೀಲ್​ಗಳು ಅಂತಿಮಗೊಂಡಿವೆ. ಬ್ರಿಟನ್ ಮತ್ತು ಓಮನ್ ದೇಶಗಳೊಂದಿಗೂ ಭಾರತ ಈ ವರ್ಷ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ.

ಇತ್ತೀಚಿನ ವರ್ಷಗಳಲ್ಲಿ ಭಾರತ ಮಾಡಿಕೊಂಡ ಏಳನೇ ಎಫ್​ಟಿಎ ಕೂಡ ಇದಾಗಿದೆ. ಆಸ್ಟ್ರೇಲಿಯಾ, ಯುಎಇ, ಮಾರಿಷಸ್, ಇಎಫ್​ಟಿಎ ಜೊತೆಗೂ ಭಾರತವು ವ್ಯಾಪಾರ ಒಪ್ಪಂದಗಳನ್ನು ಕುದುರಿಸಿದೆ. ಅಮೆರಿಕ, ಯೂರೋಪ್ ಜೊತೆಗೂ ಟ್ರೇಡ್ ಡೀಲ್ ಮಾಡಿಕೊಳ್ಳಲು ಭಾರತ ಸತತವಾಗಿ ಮಾತುಕತೆಗಳನ್ನು ನಡೆಸುತ್ತಿದೆ.

ಇದನ್ನೂ ಓದಿ: ಬೆಂಗಳೂರಿನ ಐಫೋನ್ ಫ್ಯಾಕ್ಟರಿಯಲ್ಲಿ ಕ್ಷಿಪ್ರವೇಗದಲ್ಲಿ 30,000 ಉದ್ಯೋಗಿಗಳ ನೇಮಕ; ಭಾರತದಲ್ಲಿ ಸಿಕ್ಕಾಪಟ್ಟೆ ಆಗುತ್ತಿದೆ ಐಟಿ ಹೈರಿಂಗ್

ನ್ಯೂಜಿಲ್ಯಾಂಡ್​ಗೆ ಸಖತ್ ಡೀಲ್; ಭಾರತಕ್ಕೇನು ಲಾಭ?

ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲುಕ್ಸನ್ ಅವರು ಜಂಟಿಯಾಗಿ ಈ ಟ್ರೇಡ್ ಡೀಲ್ ಅಂತಿಮಗೊಂಡಿರುವುದನ್ನು ಘೋಷಿಸಿದ್ದಾರೆ. ಇದಕ್ಕೂ ಮುನ್ನ ಇಬ್ಬರೂ ಕೂಡ ದೂರವಾಣಿ ಮೂಲಕ ಮಾತನಾಡಿದ್ದರು. ಲುಕ್ಸನ್ ಅವರು 2025ರ ಮಾರ್ಚ್​ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದಾಗ ಟ್ರೇಡ್ ಡೀಲ್ ಸಂಬಂಧ ಮಾತುಕತೆಗೆ ಚಾಲನೆ ಸಿಕ್ಕಿತ್ತು. ಕೆಲವೇ ತಿಂಗಳಲ್ಲಿ ಒಪ್ಪಂದ ಸಾಕಾರಗೊಂಡಿರುವುದು ಗಮನಾರ್ಹ ಸಂಗತಿ.

ನ್ಯೂಜಿಲ್ಯಾಂಡ್ ಪ್ರಧಾನಿ ಲುಕ್ಸನ್ ಅವರು ಎಕ್ಸ್​ನಲ್ಲಿ ಈ ಟ್ರೇಡ್ ಡೀಲ್ ಅಂತಿಮಗೊಂಡಿರುವ ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಭಾರತಕ್ಕೆ ನ್ಯೂಜಿಲ್ಯಾಂಡ್​ನ ರಫ್ತು ವರ್ಷಕ್ಕೆ 1.1-1.3 ಬಿಲಿಯನ್ ಡಾಲರ್ ದಾಟುವ ನಿರೀಕ್ಷೆ ಇದೆ ಎಂದಿದ್ದಾರೆ.

ನ್ಯೂಜಿಲೆಂಡ್ ಪ್ರಧಾನಿಗಳ ಎಕ್ಸ್ ಪೋಸ್ಟ್

ಒಪ್ಪಂದ ಸ್ವಾಗತಿಸಿದ ಪೀಯೂಶ್ ಗೋಯಲ್

ವಾಣಿಜ್ಯ ಸಚಿವ ಪೀಯೂಶ್ ಗೋಯಲ್ ಈ ಡೀಲ್​ನಿಂದ ಭಾರತಕ್ಕೆ ಸಾಕಷ್ಟು ಲಾಭಗಳಾಗುತ್ತವೆ ಎಂದಿದ್ದಾರೆ. ನ್ಯೂಜಿಲೆಂಡ್ ಜೊತೆಗಿನ ಈ ವ್ಯಾಪಾರ ಒಪ್ಪಂದದಿಂದ ಭಾರತ ಆ ದೇಶಕ್ಕೆ ಕಳುಹಿಸುವ ಎಲ್ಲಾ ರಫ್ತಿಗೂ ನೂರಕ್ಕೆ ನೂರು ಸುಂಕ ವಿನಾಯಿತಿ ಇರುತ್ತದೆ. ಹಾಗೆಯೇ, ಭಾರತದ ಸೂಕ್ಷ್ಮ ಕ್ಷೇತ್ರಗಳೆನಿಸಿದ ಕೃಷಿ, ಡೈರಿ ಇತ್ಯಾದಿಯನ್ನು ಭಾರತ ರಕ್ಷಿಸುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: ಡಾವೋಸ್ ಸಭೆಗೆ ಭಾರತದಿಂದ ಪ್ರಬಲ ತಂಡ; 100ಕ್ಕೂ ಹೆಚ್ಚು ಉದ್ಯಮಿಗಳು, ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ನಿಯೋಗದಲ್ಲಿ

ಒಪ್ಪಂದದ ಪ್ರಕಾರ, ನ್ಯೂಜಿಲ್ಯಾಂಡ್​ನ ಶೇ. 95ರಷ್ಟು ಉತ್ಪನ್ನಗಳಿಗೆ ಭಾರತದ ಟ್ಯಾರಿಫ್ ನಿರ್ಮೂಲನೆ ಆಗಲಿದೆ ಅಥವಾ ತಗ್ಗಲಿದೆ ಎಂದು ಹೇಳಲಾಗಿದೆ. ಭಾರತದ ಬಹಳ ಡೊಡ್ಡ ಮಾರುಕಟ್ಟೆಯ ಪ್ರವೇಶವು ನ್ಯೂಜಿಲ್ಯಾಂಡ್​ಗೆ ಮುಕ್ತವಾಗಿ ಸಿಗುತ್ತದೆ. ಅಲ್ಲಿಯ ಹಣ್ಣು, ಕಬ್ಬಿಣ, ಉಕ್ಕು, ಮರ, ಕಲ್ಲಿದ್ದಲು, ಉಣ್ಣೆ, ಡೈರಿ ಉತ್ಪನ್ನಗಳು ಭಾರತಕ್ಕೆ ಹೆಚ್ಚಾಗಿ ರಫ್ತಾಗುವುದು.

ಭಾರತದಿಂದ ನ್ಯೂಜಿಲ್ಯಾಂಡ್​ಗೆ ಔಷಧೋತ್ಪನ್ನಗಳು, ಪೆಟ್ರೋಲಿಯಂ, ಕಾಟನ್ ಬಟ್ಟೆ, ಮೋಟಾರು ವಾಹನ, ರೆಡಿಮೇಡ್ ಬಟ್ಟೆ ಇತ್ಯಾದಿಗಳು ರಫ್ತಾಗುತ್ತವೆ. ನ್ಯೂಜಿಲ್ಯಾಂಡ್​ನಿಂದ ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿ 20 ಬಿಲಿಯನ್ ಡಾಲರ್ ಹೂಡಿಕೆಯಾಗುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:33 pm, Mon, 22 December 25