ನವದೆಹಲಿ, ಡಿಸೆಂಬರ್ 1: ಈ ಹಣಕಾಸು ವರ್ಷದ ಮೊದಲ ಏಳು ತಿಂಗಳಲ್ಲಿ ಅಸಿಯನ್ ರಾಷ್ಟ್ರಗಳೊಂದಿಗೆ (ಆಗ್ನೇಯ ಏಷ್ಯನ್- South East Asia) ಭಾರತ 73 ಬಿಲಿಯನ್ ಡಾಲರ್ ಮೊತ್ತದಷ್ಟು ವ್ಯಾಪಾರ ವಹಿವಾಟು ನಡೆಸಿದೆ. ಅಂದರೆ, ಏಪ್ರಿಲ್ನಿಂದ ಅಕ್ಟೋಬರ್ವರೆಗಿನ ಅವಧಿಯಲ್ಲಿ 6.2 ಲಕ್ಷ ಕೋಟಿ ರೂನಷ್ಟು ಟ್ರೇಡಿಂಗ್ ನಡೆದಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಆಗಿದ್ದಕ್ಕಿಂತ ಶೇ. 5.2ರಷ್ಟು ಹೆಚ್ಚು ವ್ಯಾಪಾರವಾಗಿದೆ.
ಭಾರತದ ಪ್ರಮುಖ ಟ್ರೇಡ್ ಪಾರ್ಟ್ನರ್ಗಳಲ್ಲಿ ಆಸಿಯನ್ ಒಂದು. ಭಾರತದ ಒಟ್ಟಾರೆ ಜಾಗತಿಕ ವ್ಯಾಪಾರದಲ್ಲಿ ಈ ಆಗ್ನೇಯ ಏಷ್ಯನ್ ರಾಷ್ಟ್ರಗಳ ಪಾಲು ಶೇ. 11ರಷ್ಟಿದೆ. 2023-24ರ ಹಣಕಾಸು ವರ್ಷದಲ್ಲಿ ಭಾರತ ಹಾಗೂ ಈ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ಬರೋಬ್ಬರಿ 121 ಬಿಲಿಯನ್ ಡಾಲರ್ನಷ್ಟಿತ್ತು. ಈ ವರ್ಷ ಆ ದಾಖಲೆಯನ್ನು ದಾಟುವ ಸಾಧ್ಯತೆ ಇದೆ.
ಇದನ್ನೂ ಓದಿ: ಪೇಟೆಂಟ್, ಟ್ರೇಡ್ಮಾರ್ಕ್, ಇಂಡಸ್ಟ್ರಿಯಲ್ ಡಿಸೈನ್ನಲ್ಲಿ ಗಮನಾರ್ಹ ಬೆಳವಣಿಗೆ ಸಾಧಿಸಿರುವ ಭಾರತ
ಆಸಿಯನ್ ಸಂಘಟನೆಯಲ್ಲಿ 10 ಸದಸ್ಯ ದೇಶಗಳಿವೆ. ಬ್ರೂನೇ, ಕಾಂಬೋಡಿಯಾ, ಇಂಡೋನೇಷ್ಯಾ, ಲಾವೋಸ್, ಮಲೇಷ್ಯಾ, ಮಯನ್ಮಾರ್, ಫಿಲಿಪ್ಪೈನ್ಸ್, ಸಿಂಗಾಪುರ್, ಥಾಯ್ಲೆಂಡ್ ಮತ್ತು ವಿಯೆಟ್ನಾಂಗಳು ಆಗ್ನೇಯ ಏಷ್ಯನ್ ದೇಶಗಳೆನಿಸಿವೆ. ನವೆಂಬರ್ 14ರಿಂದ 22ರವರೆಗೆ ದೆಹಲಿಯಲ್ಲಿ ಭಾರತ ಹಾಗೂ ಆಸಿಯನ್ ಸರಕು ವ್ಯಾಪಾರ ಒಪ್ಪಂದದ ಆರನೇ ಜಂಟಿ ಸಮಿತಿ ಸಭೆ (ಎಐಟಿಐಜಿಎ) ನಡೆದಿತ್ತು. ಎಲ್ಲಾ 10 ಆಸಿಯನ್ ರಾಷ್ಟ್ರಗಳ ನಾಯಕರು ಮತ್ತು ನಿಯೋಗಗಳು ಪಾಲ್ಗೊಂಡಿದ್ದರು.
ಈ ಸಂಘಟನೆಯ ಬೇರೆ ಬೇರೆ ದೇಶಗಳ ಪ್ರತಿನಿಧಿಗಳ ಜೊತೆ ಭಾರತ ಪ್ರತ್ಯೇಕ ಸಭೆಗಳನ್ನೂ ನಡೆಸಿ ವ್ಯಾಪಾರ ವಹಿವಾಟು ಹೆಚ್ಚಿಸುವ ಸಂಬಂಧ ಮಾತುಕತೆ ನಡೆಸಿತೆನ್ನಲಾಗಿದೆ.
ಇದನ್ನೂ ಓದಿ: Parliament winter session: ಉದ್ಯೋಗ ಸೃಷ್ಟಿಗೆ ಹಲವು ಮಸೂದೆಗಳನ್ನು ಮಂಡಿಸಿದ ಕೇಂದ್ರ ಸರ್ಕಾರ
ಆಸಿಯನ್ ಭಾರತ ಸರಕು ವ್ಯಾಪಾರ ಒಪ್ಪಂದದ ಪರಾಮರ್ಶೆ ಕಾರ್ಯದಿಂದ ಆಗ್ನೇಯ ಏಷ್ಯನ್ ಪ್ರದೇಶದೊಂದಿಗೆ ಸುಸ್ಥಿರ ರೀತಿಯಲ್ಲಿ ವ್ಯಾಪಾರ ಹೆಚ್ಚಿಸಲು ಉಪಯೋಗವಾಗುತ್ತದೆ. ಇಂಡೋನೇಷ್ಯಾದ ಜಕಾರ್ತದಲ್ಲಿ 2025ರ ಫೆಬ್ರುವರಿಯಲ್ಲಿ ಎಐಟಿಐಜಿಎ ಜಂಟಿ ಸಮಿತಿಯ ಮುಂದಿನ ಸಭೆ ನಡೆಯಲಿದೆ ಎನ್ನುವ ಮಾಹಿತಿಯನ್ನು ಭಾರತದ ವಾಣಿಜ್ಯ ಮತ್ತು ಉದ್ಯಮ ಸಚಿವಾಲಯ ತಿಳಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ