ನವದೆಹಲಿ, ಡಿಸೆಂಬರ್ 1: ನಾವೀನ್ಯತೆ ಮತ್ತು ಬೌದ್ಧಿಕ ಸಂಪತ್ತಿನ ವಿಚಾರದಲ್ಲಿ ಭಾರತ ಗಮನಾರ್ಹ ಬೆಳವಣಿಗೆ ಹೊಂದುತ್ತಿದೆ. ಈ ವರ್ಷದ (2024) ವಿಶ್ವ ಬೌದ್ಧಿಕ ಆಸ್ತಿ ಸೂಚಕಗಳೂ (WIPI- World Intellectual Property Index) ಕೂಡ ಇದನ್ನು ಎತ್ತಿ ತೋರಿಸುತ್ತಿವೆ. ವಿಶ್ವ ಬೌದ್ಧಿಕ ಆಸ್ತಿ ಸಂಘಟನೆಯ (World Intellectual Propert Organization) ಈ ವರದಿಯಲ್ಲಿ ಜಾಗತಿಕ ನಾವೀನ್ಯತೆ ಮತ್ತು ಬೌದ್ಧಿಕ ಆಸ್ತಿ ಚೌಕಟ್ಟಿನಲ್ಲಿ (Global Innovation and Intellectual Property landscape) ಭಾರತದ ಪಾತ್ರ ಹೆಚ್ಚುತ್ತಿರುವ ಸಂಗತಿಯನ್ನು ತೋರಿಸಲಾಗಿದೆ. ಪೇಟೆಂಟ್, ಟ್ರೇಡ್ಮಾರ್ಕ್, ಇಂಡಸ್ಟ್ರಿಯಲ್ ಡಿಸೈನ್ ಇತ್ಯಾದಿ ಬೌದ್ಧಿಕ ಆಸ್ತಿ ವಿಭಾಗಗಳಲ್ಲಿ ಭಾರತದ ಶ್ರೇಯಾಂಕ ಹೆಚ್ಚಿರುವುದನ್ನು ಈ ವರದಿ ಗುರುತಿಸಿದೆ.
2023ರಲ್ಲಿ ಭಾರತದಿಂದ 64,480 ಪೇಟೆಂಟ್ಗಳು ಸಲ್ಲಿಕೆ ಆಗಿವೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 15.7ರಷ್ಟು ಹೆಚ್ಚು ಪೇಟೆಂಟ್ ಸಲ್ಲಿಕೆ ಆಗಿದೆ. ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಪೇಟೆಂಟ್ ಅರ್ಜಿ ಸಲ್ಲಿಸಿದ ರಾಷ್ಟ್ರಗಳ ಸಾಲಿನಲ್ಲಿ ಭಾರತ ಆರನೇ ಸ್ಥಾನದಲ್ಲಿದೆ. ಚೀನಾ, ಅಮೆರಿಕ, ಜಪಾನ್, ಸೌತ್ ಕೊರಿಯಾ ಮೊದಲಾದ ಪ್ರಬಲ ದೇಶಗಳ ಸಾಲಿಗೆ ಭಾರತ ಸೇರಿದೆ.
ಇದನ್ನೂ ಓದಿ: ಉದ್ಯೋಗ ಸೃಷ್ಟಿಗೆ ಹಲವು ಮಸೂದೆಗಳನ್ನು ಮಂಡಿಸಿದ ಕೇಂದ್ರ ಸರ್ಕಾರ
ಭಾರತದಿಂದ ಇಂಡಸ್ಟ್ರಿಯಲ್ ಡಿಸೈನ್ ಅಥವಾ ಔದ್ಯಮಿಕ ವಿನ್ಯಾಸಗಳ ಸಂಖ್ಯೆಯೂ ಶೇ. 36.4ರಷ್ಟು ಹೆಚ್ಚಿದೆ ಎಂಬುದನ್ನು ಡಬ್ಲ್ಯುಐಪಿಐ 2024 ವರದಿಯಲ್ಲಿ ಎತ್ತಿತೋರಿಸಲಾಗಿದೆ. ಆರೋಗ್ಯ, ಕೃಷಿ, ಜವಳಿ ಮೊದಲಾದ ಪ್ರಮುಖ ಸೆಕ್ಟರ್ಗಳಲ್ಲಿ ಭಾರತೀಯ ನಿವಾಸಿಗಳೇ ಇದರಲ್ಲಿ ಹೆಚ್ಚು ಪೇಟೆಂಟ್ ಸಲ್ಲಿಸಿರುವುದು ಗೊತ್ತಾಗಿದೆ. ಪ್ರಾಡಕ್ಟ್ ಡಿಸೈನಿಂಗ್ ಮತ್ತು ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದ ಬೆಳವಣಿಗೆ ಹೆಚ್ಚುತ್ತಿರುವುದರ ಸಂಕೇತ ಇದಾಗಿದೆ. ಭಾರತದ ಟ್ರೇಡ್ಮಾರ್ಕ್ ಕಛೇರಿಯು 32 ಲಕ್ಷ ಟ್ರೇಡ್ಮಾರ್ಕ್ಗಳನ್ನು ಹೊಂದಿದೆ. ಇಂಡಸ್ಟ್ರಿಯನ್ ಡಿಸೈನಿಂಗ್ನಲ್ಲಿ ಜಾಗತಿಕವಾಗಿ ಎರಡನೇ ಅತಿಹೆಚ್ಚು ಟ್ರೇಡ್ಮಾರ್ಕ್ಗಳನ್ನು ಹೊಂದಿರುವ ದಾಖಲೆ ಭಾರತದ ಈ ಟ್ರೇಡ್ಮಾರ್ಕ್ ಆಫೀಸ್ನದ್ದಾಗಿದೆ.
2018ರಿಂದ 2023ರವರೆಗೂ ಭಾರತದ ಪೇಟೆಂಟ್, ಟ್ರೇಡ್ಮಾರ್ಕ್ ಮತ್ತು ಇಂಡಸ್ಟ್ರಿಯಲ್ ಡಿಸೈನ್ ಅಪ್ಲಿಕೇಶನ್ಗಳು ಸಾಕಷ್ಟು ಏರಿಕೆ ಆಗಿವೆ. ಈ ಐದಾರು ವರ್ಷದ ಅವಧಿಯಲ್ಲಿ ಪೇಟೆಂಟ್ ಫೈಲಿಂಗ್ಸ್ ಎರಡಕ್ಕೂ ಹೆಚ್ಚು ಪಟ್ಟು ಹೆಚ್ಚಳವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ