ಎಟಿಎಂಗಳಲ್ಲಿ 500 ರೂ ನೋಟು ವಿತರಿಸದಂತೆ ಆರ್ಬಿಐ ಸೂಚಿಸಿದೆಯಾ? ವೈರಲ್ ಸುದ್ದಿ ಬಗ್ಗೆ ಸರ್ಕಾರದ ಸ್ಪಷ್ಟನೆ ಇದು
Fact check on Rs 500 banknotes: 500 ರೂ ನೋಟುಗಳನ್ನು ವಿತರಿಸದಂತೆ ಬ್ಯಾಂಕುಗಳಿಗೆ ಆರ್ಬಿಐ ನಿರ್ದೇಶನ ನೀಡಿದೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿದೆ. ಆದರೆ, ಸರ್ಕಾರದ ಪಿಐಬಿ ಫ್ಯಾಕ್ಟ್ ಚೆಕ್ ತಂಡವು ಇದನ್ನು ಸುಳ್ಳು ಸುದ್ದಿ ಎಂದಿದೆ. 500 ರೂ ನೋಟುಗಳು ಚಲಾವಣೆಯಲ್ಲಿ ಮುಂದುವರಿಯುತ್ತವೆ ಎಂದು ಸ್ಪಷ್ಟಪಡಿಸಿದೆ.

ನವದೆಹಲಿ, ಜುಲೈ 13: ಐನ್ನೂರು ರೂ ಮುಖಬೆಲೆಯ ನೋಟುಗಳನ್ನು ಸರ್ಕಾರ ನಿಷೇಧಿಸುತ್ತದೆ ಎನ್ನುವಂತಹ ಸುದ್ದಿ ಕೆಲ ತಿಂಗಳ ಹಿಂದೆ ಚಾಲನೆಯಲ್ಲಿತ್ತು. ಈಗ ಅಂಥದ್ದೇ ರೀತಿಯ ಸುದ್ದಿಯೊಂದು ಹರಿದಾಡುತ್ತಿದೆ. ಎಟಿಎಂಗಳಲ್ಲಿ 500 ರೂ ನೋಟುಗಳನ್ನು (Rs 500 notes) ವಿತರಿಸದಂತೆ ಬ್ಯಾಂಕುಗಳಿಗೆ ಆರ್ಬಿಐ (RBI) ಸೂಚನೆ ನೀಡಿದೆ ಎನ್ನುವಂತಹ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ಹರಡುತ್ತಿದೆ. ಆದರೆ, ಸರ್ಕಾರದ ಫ್ಯಾಕ್ಟ್ ಚೆಕ್ ವಿಭಾಗವು ಈ ಸುದ್ದಿಯನ್ನು ತಳ್ಳಿಹಾಕಿದೆ.
500 ರೂ ನೋಟು ವಿಚಾರದಲ್ಲಿ ಏನಿದು ಸುಳ್ಳು ಸುದ್ದಿ?
2025ರ ಸೆಪ್ಟೆಂಬರ್ 30ರ ನಂತರ ಎಟಿಎಂಗಳಲ್ಲಿ 500 ರೂ ಬ್ಯಾಂಕ್ ನೋಟುಗಳನ್ನು ವಿತರಿಸದಂತೆ ಬ್ಯಾಂಕುಗಳಿಗೆ ಆರ್ಬಿಐ ಆದೇಶಿಸಿದೆ. ಎಟಿಎಂಗಳಲ್ಲಿ ಕೇವಲ 200 ರೂ ಮತ್ತು 100 ರೂ ನೋಟುಗಳನ್ನು ಮಾತ್ರವೇ ವಿತರಿಸಲಾಗುವುದು ಎಂದು ತಿಳಿಸುವ ಪೋಸ್ಟ್ಗಳು ವಾಟ್ಸಾಪ್, ಫೇಸ್ಬುಕ್ನಲ್ಲಿ ಹರಿದಾಡುತ್ತಿವೆ. ಇದು ನಕಲಿ ಸುದ್ದಿ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಆರ್ಬಿಐನ ಗೋಲ್ಡ್ ಸ್ಕೀಮ್; ಐದು ವರ್ಷದಲ್ಲಿ ಹಣ ಡಬಲ್; 2020ರ ಸರಣಿಯಲ್ಲಿ ಹೂಡಿಕೆ ಮಾಡಿದವರಿಗೆ ಅರ್ಲಿ ರಿಡೆಂಪ್ಷನ್ ಅವಕಾಶ
ಪಿಐಬಿ ಫ್ಯಾಕ್ಟ್ ಚೆಕ್ ತಂಡದ ಎಕ್ಸ್ ಅಕೌಂಟ್ನಲ್ಲಿ ಈ ಬಗ್ಗೆ ಸ್ಪಷ್ಟನೆ ಕೊಡಲಾಗಿದೆ. ವಾಟ್ಸಾಪ್ನಲ್ಲಿ ಹರಿದಾಡುತ್ತಿರುವ ಸುದ್ದಿಯ ಸ್ಕ್ರೀನ್ಶಾಟ್ ಅನ್ನು ಲಗತ್ತಿಸಿರುವ ಒಂದು ಪೋಸ್ಟ್ನಲ್ಲಿ, 500 ರೂ ನೋಟು ವಿತರಿಸದಂತೆ ಬ್ಯಾಂಕುಗಳಿಗೆ ಆರ್ಬಿಐ ಸೂಚನೆ ನೀಡಿರುವ ಸುದ್ದಿ ಸುಳ್ಳು ಎಂದಿದೆ. ಈ 500 ರೂ ನೋಟುಗಳು ಸಿಂಧುವಾಗಿವೆ ಎಂದು ತಿಳಿಸಿದೆ.
‘ಜನರು ಇಂಥ ಸುಳ್ಳು ಸುದ್ದಿಗಳನ್ನು ನಂಬಲು ಹೋಗದಿರಿ. ಅಧಿಕೃತ ಮೂಲಗಳಿಂದ ಸುದ್ದಿ ಬಂದಿದೆಯೇ ಎಂದು ಪರಿಶೀಲಿಸಿ. ಆ ಬಳಿಕ ಮಾತ್ರ ಅಂಥ ಮಾಹಿತಿಯನ್ನು ಶೇರ್ ಮಾಡಿಕೊಳ್ಳಿ’ ಎಂದು ಆ ಪೋಸ್ಟ್ನಲ್ಲಿ ತಿಳಿಹೇಳಲಾಗಿದೆ.
ಇದನ್ನೂ ಓದಿ: 2,000 ರೂ ನೋಟುಗಳು ಈಗಲೂ ಸಿಂಧುವಾ? ಆರ್ಬಿಐ ಗವರ್ನರ್ ಸ್ಪಷ್ಟನೆ ಇದು
ಹೊಸ 20 ರೂ ನೋಟುಗಳ ಮುದ್ರಣ
ಆರ್ಬಿಐ ಇದೇ ವೇಳೆ 20 ರೂ ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಬ್ಯಾಂಕ್ ನೋಟುಗಳಲ್ಲಿ ನೂತನ ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ಹಸ್ತಾಕ್ಷರ ಇರಲಿದೆ. ಈಗಾಗಲೇ ಇರುವ 20 ರೂ ನೋಟುಗಳು ಅಮಾನ್ಯವಾಗದೆ ಸಿಂಧುವಾಗಿ ಮುಂದುವರಿಯಲಿವೆ ಎಂದು ಹೇಳಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ