ಭಾರತದ ಹೆಮ್ಮೆಯ ಡಿಬಿಟಿ ಸಿಸ್ಟಂನಲ್ಲಿ ಬಿರುಕು? ಸಾವಿರಾರು ಕೋಟಿ ರೂ ಪೋಲಾಗುತ್ತಿದೆ ಎಂದ ಸಿಎಜಿ

Fault in DBT system: ಫಲಾನುಭವಿಗಳ ಬ್ಯಾಂಕ್ ಅಕೌಂಟ್​ಗೆ ನೇರವಾಗಿ ಹಣ ವರ್ಗಾವಣೆ ಮಾಡುವ ಡಿಬಿಟಿ ಸಿಸ್ಟಂ ಭಾರತದ ಅಭಿವೃದ್ಧಿಯ ಸಂಕೇತಗಳಲ್ಲಿ ಒಂದೆನಿಸಿದೆ. ಆದರೆ, ಸಿಎಜಿ ಸಂಜಯ್ ಮೂರ್ತಿ ಅವರು ಡಿಬಿಟಿ ಸಿಸ್ಟಂನಲ್ಲಿರುವ ಗಮನಾರ್ಹ ಲೋಪವೊಂದನ್ನು ಎತ್ತಿತೋರಿಸಿದ್ದಾರೆ. ಏಕೀಕೃತ ಡಾಟಾಬೇಸ್ ರೂಪಿತವಾಗದ ಹಿನ್ನೆಲೆಯಲ್ಲಿ ಫಲಾನುಭವಿಗಳ ಡೂಪ್ಲಿಕೇಶನ್​ಗಳು ಹೆಚ್ಚಾಗಿವೆ ಎನ್ನುವ ಅಂಶವನ್ನು ಅವರು ತಿಳಿಸಿದ್ದಾರೆ.

ಭಾರತದ ಹೆಮ್ಮೆಯ ಡಿಬಿಟಿ ಸಿಸ್ಟಂನಲ್ಲಿ ಬಿರುಕು? ಸಾವಿರಾರು ಕೋಟಿ ರೂ ಪೋಲಾಗುತ್ತಿದೆ ಎಂದ ಸಿಎಜಿ
ಡಿಬಿಟಿ

Updated on: Dec 18, 2025 | 12:50 PM

ನವದೆಹಲಿ, ಡಿಸೆಂಬರ್ 18: ಭಾರತದಲ್ಲಿ ಸಾಮಾಜಿಕ ಯೋಜನೆಗಳಲ್ಲಿ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಲು ಸರ್ಕಾರ ಕ್ರಾಂತಿಕಾರಿ ಎನಿಸಿದ ಡಿಬಿಟಿ ಸ್ಕೀಮ್ ಅಥವಾ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್​ಫರ್ ಸಿಸ್ಟಂ ಅನ್ನು ಜಾರಿಗೆ ತಂದಿದೆ. ಪಿಎಂ ಕಿಸಾನ್ ಯೋಜನೆ ಇತ್ಯಾದಿಯಲ್ಲಿ ಕೋಟ್ಯಂತರ ಮಂದಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡಲಾಗುತ್ತಿದೆ. ಈ ಹಿಂದೆ ಇದ್ದ ವ್ಯವಸ್ಥೆಯಲ್ಲಿ ಫಲಾನುಭವಿಗಳಿಗೆ ಸಿಗದೇ ಹಣ ಪೋಲಾಗುತ್ತಿತ್ತೆಂದು ಹೇಳಲಾಗುತ್ತಿತ್ತು. ಡಿಬಿಟಿ ಬಂದ ಬಳಿಕ ಹಣ ವರ್ಗಾವಣೆಯಲ್ಲಿ ಪೋಲಾಗುವುದು ತಪ್ಪಿದೆ ಎಂದು ಹೇಳಲಾಗುತ್ತಿದೆ. ಆದರೆ, ಭಾರತದ ಮಹಾಲೇಖಪಾಲರಾದ (CAG) ಸಂಜಯ್ ಮೂರ್ತಿ ಅವರು ಡಿಬಿಟಿ ಸಿಸ್ಟಂ ಬಗ್ಗೆ ಅಪಸ್ವರ ಎತ್ತಿದ್ದಾರೆ.

ಫಲಾನುಭವಿಗಳ ಅಕೌಂಟ್​ಗಳನ್ನು ಸರಿಯಾಗಿ ಪರಿಶೀಲನೆ ನಡೆಸದೆಯೇ ಹಣ ಬಿಡುಗಡೆ ಮಾಡಲಾಗುತ್ತಿದ್ದು, ಇದರಿಂದ ಸಾವಿರಾರು ಕೋಟಿ ರೂ ಪೋಲಾಗುತ್ತಿದೆ ಎಂದು ಸಿಎಜಿ ಹೇಳಿದ್ದಾರೆ. ಮಹಾರಾಷ್ಟ್ರದ ನಾಗಪುರ್​ನಲ್ಲಿ ನ್ಯಾಷನಲ್ ಅಕಾಡೆಮಿ ಆಫ್ ಡೈರೆಕ್ಟ್ ಟ್ಯಾಕ್ಸಸ್ ಸಂಸ್ಥೆಯಲ್ಲಿ ಮೊದಲ ಬ್ಯಾಚ್​ನ ಐಆರ್​ಎಸ್ (ಕಂದಾಯ) ಅಧಿಕಾರಿಗಳನ್ನು ಉದ್ದೇಶಿಸಿ ಭಾಷಣ ಮಾಡುತ್ತಾ ಡಿಬಿಟಿ ಸಿಸ್ಟಂನಲ್ಲಿರುವ ದೋಷಗಳನ್ನು ಪ್ರಸ್ತಾಪಿಸಿದ್ದಾರೆ.

ಇದನ್ನೂ ಓದಿ: ಭಾರತೀಯ ಕಂಪನಿಗಳಿಗೆ ಐಫೋನ್ ಚಿಪ್ ಅಸೆಂಬ್ಲಿಂಗ್ ಗುತ್ತಿಗೆ ಕೊಡುತ್ತಾ ಆ್ಯಪಲ್?

ಡಿಬಿಟಿಯಲ್ಲಿ ಏನಿದೆ ಲೋಪದೋಷ?

ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್​ಫರ್ ಸಿಸ್ಟಂ ಅನ್ನು ಫಲಾನುಭವಿಗಳಿಗೆ ನೇರವಾಗಿ ಹಣ ತಲುಪಿಸುವ ಉದ್ದೇಶದೊಂದಿಗೆ ರೂಪಿಸಲಾಗಿದೆ. ಇದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಮರ್ಪಕ ರೀತಿಯಲ್ಲಿ ತಂತ್ರಜ್ಞಾನ ಬಳಸಬೇಕು. ಡಾಟಾಬೇಸ್ ಕರಾರುವಾಕ್ ಆಗಿರಬೇಕು, ಅಪ್​ಟುಡೇಟ್ ಆಗಿರಬೇಕು. ಸಿಎಜಿ ಸಂಜಯ್ ಮೂರ್ತಿ ಅವರು ಹೇಳುವ ಪ್ರಕಾರ, ಡಿಬಿಟಿ ಸ್ಕೀಮ್​ನಲ್ಲಿ ಸದ್ಯ ಡಾಟಾಬೇಸ್ ಕರಾರುವಾಕ್ ಆಗಿಲ್ಲ. ಸರ್ಕಾರಿ ಕಚೇರಿಗಳ ನಡುವೆ ತಾಳಮೇಳ ಇಲ್ಲ.

‘ಸರ್ಕಾರಿ ಇಲಾಖೆಗಳು ಪರಸ್ಪರ ಹೊಂದಾಣಿಕೆ ಇಲ್ಲದೇ ಪ್ರತ್ಯೇಕವೆಂಬಂತಹ ರೀತಿಯಲ್ಲಿ ಕೆಲಸ ಮಾಡುತ್ತಿವೆ. ಎಷ್ಟರ ಮಟ್ಟಿಗೆ ಎಂದರೆ ಒಂದೇ ಇಲಾಖೆಯಲ್ಲಿರುವ ವಿವಿಧ ಜಂಟಿ ಕಾರ್ಯದರ್ಶಿಗಳೂ ಒಂದೇ ಡಾಟಾಬೇಸ್ ಅನ್ನು ಬಳಸೋದಿಲ್ಲ. ಜನ್ ಧನ್ ಅಕೌಂಟ್, ಆಧಾರ್ ಮತ್ತು ಮೊಬೈಲ್ ಅನ್ನು ಲಿಂಕ್ ಮಾಡಲು ಒತ್ತು ಕೊಡಲಾಗುತ್ತಿದೆಯಾದರೂ ಡಾಟಾಬೇಸ್ ನಿಯೋಜನೆ ಸಮರ್ಪಕವಾಗಿಯೇ ಇಲ್ಲ. ಕ್ರಾಸ್ ವೆರಿಫಿಕೇಶನ್ ಆಗುತ್ತಿಲ್ಲ. ಡೂಪ್ಲಿಕೇಶನ್ ನಿವಾರಿಸುವ ಕೆಲಸ ಆಗುತ್ತಿಲ್ಲ. ಸರಿಯಾಗಿ ಪರಿಶೀಲನೆಯಾಗದೇ ಇರುವ ಕಾರಣಕ್ಕೆ ಸಾವಿರಾರು ಕೋಟಿ ರೂ ಹಣವು ಪೋಲಾಗಿ ಹೋಗುತ್ತಿದೆ’ ಎಂದು ಮಹಾಲೇಖಪಾಲರು, ಡಿಬಿಟಿ ಸಿಸ್ಟಂನಲ್ಲಿರುವ ಸಮಸ್ಯೆಯನ್ನು ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ಅಮೆರಿಕದಿಂದ ಪಾಕಿಸ್ತಾನಕ್ಕೆ ಮಿಲಿಟರಿ ಪ್ಯಾಕೇಜ್; ಪಾಕ್ ಅಂದ್ರೆ ಅಮೆರಿಕ, ಚೀನಾಗೆ ಯಾಕೆ ಪ್ರೀತಿ?

ತೆರಿಗೆ ಅಧಿಕಾರಿಗಳು ಸಮರ್ಪಕವಾಗಿ ಪರಿಶೀಲನೆ ಮಾಡಲು ಸಾಧ್ಯವಾಗುವಂತೆ ತಮ್ಮ ಇಲಾಖೆಯು ಪೂರಕ ಮಾಹಿತಿಯನ್ನು ಒದಗಿಸುತ್ತದೆ ಎಂದು ಹೇಳಿದ ಸಿಎಜಿ, ರಸ್ತೆ ಸಾರಿಗೆ ಸಚಿವಅಲಯ, ಜಿಎಸ್​ಟಿ ನೆಟ್ವರ್ಕ್ ಮತ್ತು ರಾಜ್ಯ ಹಣಕಾಸು ನಿರ್ವಹಣೆ ಸಿಸ್ಟಂಗಳು ಹೊಂದಿರುವ ಡಾಟಾಬೇಸ್​ಗಳು ಆಡಿಟರ್​ಗಳಿಗೆ ಬಹಳ ದೊಡ್ಡ ಮಾಹಿತಿಯ ಗಣಿಯಾಗಿದೆ ಎಂದೂ ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ