Apple: ಭಾರತೀಯ ಕಂಪನಿಗಳಿಗೆ ಐಫೋನ್ ಚಿಪ್ ಅಸೆಂಬ್ಲಿಂಗ್ ಗುತ್ತಿಗೆ ಕೊಡುತ್ತಾ ಆ್ಯಪಲ್?
Apple in talks with Indian companies for iPhone components assembly: ಆ್ಯಪಲ್ ಕಂಪನಿ ತನ್ನ ಸರಬರಾಜು ಸರಪಳಿಯನ್ನು ಭಾರತಕ್ಕೆ ಹೆಚ್ಚೆಚ್ಚು ವಿಸ್ತರಿಸಲು ಹೊರಟಿದೆ. ಐಫೋನ್ ಅಸೆಂಬ್ಲಿಂಗ್ ಕೆಲಸ ಯಶಸ್ವಿಯಾಗಿ ನಡೆಯುತ್ತಿರುವಂತೆಯೇ ಇದೀಗ ಬಿಡಿಭಾಗಗಳ ಚಿಪ್ ಅಸೆಂಬ್ಲಿಂಗ್ ಕೆಲಸವನ್ನೂ ಭಾರತದಲ್ಲೇ ನಡೆಸಲು ಉದ್ದೇಶಿಸಿದೆ. ಮುರುಗಪ್ಪ ಗ್ರೂಪ್ನ ಸಿಜಿ ಸೆಮಿ ಸೇರಿದಂತೆ ಕೆಲ ಭಾರತೀಯ ಸೆಮಿಕಂಡಕ್ಟರ್ ಕಂಪನಿಗಳೊಂದಿಗೆ ಆ್ಯಪಲ್ ಮಾತನಾಡುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ನವದೆಹಲಿ, ಡಿಸೆಂಬರ್ 17: ಆ್ಯಪಲ್ ಕಂಪನಿ (Apple) ಭಾರತದೊಂದಿಗೆ ಹೆಚ್ಚೆಚ್ಚು ಬೆಸೆದುಕೊಳ್ಳುತ್ತಿದೆ. ಐಫೋನ್ಗಳ ಬಿಡಿಭಾಗಗಳಿಗೆ ಬಳಕೆಯಾಗುವ ಚಿಪ್ ಅಸೆಂಬ್ಲಿಂಗ್ ಅನ್ನೂ ಭಾರತದಲ್ಲಿ ನಿರ್ಮಿಸಲು ಆಲೋಚನೆಯಲ್ಲಿದೆ ಆ್ಯಪಲ್. ಈ ಯೋಜನೆ ಸಾಕಾರಗೊಂಡರೆ ಭಾರತದ ಸೆಮಿಕಂಡಕ್ಟರ್ ಮಿಷನ್ಗೆ ಒಂದು ದೊಡ್ಡ ಶಕ್ತಿ ಮತ್ತು ಯಶಸ್ಸು ಸಿಕ್ಕಂತಾಗಬಹುದು. ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ ಐಫೋನ್ ಕಾಂಪೊನೆಂಟ್ಗಳ ಅಸೆಂಬ್ಲಿ ಮತ್ತು ಪ್ಯಾಕೇಜಿಂಗ್ ಕಾರ್ಯಕ್ಕಾಗಿ ಆ್ಯಪಲ್ ಕಂಪನಿಯು ಭಾರತದ ಕೆಲ ಸೆಮಿಕಂಡಕ್ಟರ್ ಕಂಪನಿಗಳೊಂದಿಗೆ ಮಾತುಕತೆ ಶುರುವಿಟ್ಟಿದೆಯಂತೆ.
ಐಫೋನ್ಗಳಲ್ಲಿ ಬಹಳ ಮುಖ್ಯ ಭಾಗವೆನಿಸುವುದು ಅದರ ಚಿಪ್ಗಳು. ಹೀಗಾಗಿ, ಇವುಗಳ ಅಸೆಂಬ್ಲಿಂಗ್ ಮತ್ತು ಟೆಸ್ಟಿಂಗ್ ಕಾರ್ಯವು ಭಾರತದಲ್ಲಿ ನಡೆದರೆ ಅದು ಒಂದು ಭಾರತದ ಪಾಲಿಗೆ ಒಂದು ಮಹತ್ವದ ಬೆಳವಣಿಗೆಯೇ ಆಗುತ್ತದೆ. ಜಾಗತಿಕ ಎಲೆಕ್ಟ್ರಾನಿಕ್ಸ್ ಸರಬರಾಜು ಸರಪಳಿಯಲ್ಲಿ ಭಾರತವು ಹೆಚ್ಚಿನ ಮೌಲ್ಯ ಗಳಿಸಬಹುದು.
ಇದನ್ನೂ ಓದಿ: ಅಮೆರಿಕದಿಂದ ಪಾಕಿಸ್ತಾನಕ್ಕೆ ಮಿಲಿಟರಿ ಪ್ಯಾಕೇಜ್; ಪಾಕ್ ಅಂದ್ರೆ ಅಮೆರಿಕ, ಚೀನಾಗೆ ಯಾಕೆ ಪ್ರೀತಿ?
ಮುರುಗಪ್ಪ ಗ್ರೂಪ್ನ ಸಿಜಿ ಸೆಮಿ ಜೊತೆ ಆ್ಯಪಲ್ ಮಾತುಕತೆ?
ವರದಿ ಪ್ರಕಾರ ಚಿಪ್ ಅಸೆಂಬ್ಲಿಂಗ್ಗಾಗಿ ಆ್ಯಪಲ್ ಕಂಪನಿಯು ಕೆಲ ಭಾರತೀಯ ಸೆಮಿಕಂಡಕ್ಟರ್ ಕಂಪನಿಳ ಜೊತೆ ಮಾತನಾಡುತ್ತಿದೆ. ಇವುಗಳಲ್ಲಿ ಮುರುಗಪ್ಪ ಗ್ರೂಪ್ನ ಸಿಜಿ ಸೆಮಿ (CG Semi of Murugappa Group) ಕಂಪನಿಯೂ ಒಂದು. ಈ ಸಂಸ್ಥೆ ಗುಜರಾತ್ನ ಸಾನಂದ್ನಲ್ಲಿ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟ್ (ಒಸಾಟ್) ಘಟಕ ಸ್ಥಾಪಿಸಿದೆ. ಇಲ್ಲಿ ಡಿಸ್ಪ್ಲೇ ಸಂಬಂಧಿತ ಚಿಪ್ಗಳ ಅಸೆಂಬ್ಲಿಂಗ್ ಮತ್ತು ಪರೀಕ್ಷೆ ನಡೆಯುವ ಉದ್ದೇಶ ಇದೆ.
ಆದರೆ, ಮಾತುಕತೆಗಳು ಇನ್ನೂ ಆರಂಭಿಕ ಹಂತದಲ್ಲಿವೆ. ಆ್ಯಪಲ್ ಕಂಪನಿ ಅಳೆದು ತೂಗಿ ಗುತ್ತಿಗೆಗಳನ್ನು ನೀಡುತ್ತದೆ. ತನಗೆ ಸಮಾಧಾನವಾಗುವಂತಹ ಗುಣಮಟ್ಟದಲ್ಲಿ ಕೆಲಸ ಮಾಡಬಲ್ಲ ಕಂಪನಿಗಳಿಗೆ ಅದು ಕಾಂಟ್ರಾಕ್ಟ್ ನೀಡುತ್ತದೆ. ಒಂದು ವೇಳೆ, ಸಿಜಿ ಸೆಮಿಗೆ ಈ ಆ್ಯಪಲ್ ಕಾಂಟ್ರಾಕ್ಟ್ ಸಿಕ್ಕರೆ ಮಹತ್ವದ ಮೈಲಿಗಲ್ಲೆನಿಸಬಹುದು.
ಇದನ್ನೂ ಓದಿ: ಸತ್ತ ಆರ್ಥಿಕತೆ ಎಂದಿದ್ದ ಟ್ರಂಪ್ಗೆ ತಕ್ಕ ಉತ್ತರ; ನವೆಂಬರ್ನಲ್ಲಿ ಅಮೆರಿಕಕ್ಕೆ ಭಾರತದ ರಫ್ತು ಭರ್ಜರಿ ಏರಿಕೆ
ಸದ್ಯ ಆ್ಯಪಲ್ ಕಂಪನಿ ತನ್ನ ಐಫೋನ್ ಡಿಸ್ಪ್ಲೇ ಪ್ಯಾನಲ್ಗಳನ್ನು ಸ್ಯಾಮ್ಸುಂಗ್ ಡಿಸ್ಪ್ಲೇ, ಎಲ್ಜಿ ಡಿಸ್ಪ್ಲೇ ಮತ್ತು ಬಿಒಇ ಕಂಪನಿಗಳಿಂದ ತರಿಸಿಕೊಳ್ಳುತ್ತದೆ. ಈ ಡಿಸ್ಪ್ಲೇ ಪ್ಯಾನಲ್ಗಳಿಗೆ ಬೇಕಾದ ಡಿಸ್ಪ್ಲೇ ಡ್ರೈವರ್ ಐಸಿಗಳನ್ನು ಸ್ಯಾಮ್ಸುಂಗ್, ನೊವಾಟೆಕ್, ಹಿಮಾಕ್ಸ್, ಎಲ್ಎಕ್ಸ್ ಸೆಮಿಕಾನ್ ಕಂಪನಿಗಳು ಸರಬರಾಜು ಮಾಡುತ್ತವೆ. ಇವೆಲ್ಲ ಘಟಕಗಳು ಸೌತ್ ಕೊರಿಯಾ, ತೈವಾನ್ ಮತ್ತು ಚೀನಾದಲ್ಲೇ ಇರುವುದು.
ಅಲ್ಲಿ ಒತ್ತೊತ್ತಾಗಿರುವ ಸರಬರಾಜು ಸರಪಳಿಯನ್ನು ವಿಸ್ತರಿಸಬೇಕೆಂದಿರುವ ಆ್ಯಪಲ್ ಕಂಪನಿ ಈಗ ಭಾರತದಲ್ಲಿ ಅಂಥ ಕಂಪನಿಗಳನ್ನು ನೆಲೆಗೊಳಿಸಲು ಯೋಜಿಸುತ್ತಿದೆ. ಐಫೋನ್ ಅಸೆಂಬ್ಲಿಂಗ್ಗಾಗಿ ಫಾಕ್ಸ್ಕಾನ್, ಟಾಟಾ ಎಲೆಕ್ಟ್ರಾನಿಕ್ಸ್, ಪೆಗಾಟ್ರಾನ್ ಕಂಪನಿಗಳಿಗೆ ಗುತ್ತಿಗೆ ಕೊಟ್ಟಂತೆ, ಚಿಪ್ ಅಸೆಂಬ್ಲಿಂಗ್ ಮತ್ತು ಟೆಸ್ಟಿಂಗ್ ಕೂಡ ಭಾರತದಲ್ಲೇ ಆಗಬೇಕೆಂಬುದು ಆ್ಯಪಲ್ನ ಪ್ಲಾನ್.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




