ಶೇ 4.4ರ ವಿತ್ತೀಯ ಕೊರತೆ ಗುರಿ ಮುಟ್ಟುವುದು ಸರ್ಕಾರಕ್ಕೆ ಸಲೀಸು: ಏಜೆನ್ಸಿ ವರದಿ
India can achieve 4.4pc fiscal deficit target for this fy, says PwC: ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ. 4.4ರಷ್ಟು ವಿತ್ತೀಯ ಕೊರತೆಯ ಗುರಿಯನ್ನು ಸರ್ಕಾರ ಮುಟ್ಟುವ ಸಾಧ್ಯತೆ ಬಹಳ ಹೆಚ್ಚು ಎಂದು ಪಿಡಬ್ಲ್ಯುಸಿ ಪಾರ್ಟ್ನರ್ ಮತ್ತು ಎಕನಾಮಿಕ್ ಅಡ್ವೈಸರಿ ಸರ್ವಿಸಸ್ ಮುಖಂಡ ರಾನೆನ್ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.

ನವದೆಹಲಿ, ಜನವರಿ 11: ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ. 4.4ರಷ್ಟು ವಿತ್ತೀಯ ಕೊರತೆಯ (Fiscal Deficit) ಗುರಿಯನ್ನು ಸರ್ಕಾರ ಮುಟ್ಟುವ ಸಾಧ್ಯತೆ ಬಹಳ ಹೆಚ್ಚು ಎಂದು ಪಿಡಬ್ಲ್ಯುಸಿ ಪಾರ್ಟ್ನರ್ ಮತ್ತು ಎಕನಾಮಿಕ್ ಅಡ್ವೈಸರಿ ಸರ್ವಿಸಸ್ ಮುಖಂಡ ರಾನೆನ್ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ. ಇವರ ಪ್ರಕಾರ ಶೇ. 4.4 ಅಲ್ಲ, ಅದಕ್ಕಿಂತಲೂ ಕಡಿಮೆ ವಿತ್ತೀಯ ಕೊರತೆಯ ಸ್ಥಿತಿಯನ್ನು ಭಾರತ ತಲುಪಬಲ್ಲುದು. ಕಳೆದ ಬಾರಿಯ ಬಜೆಟ್ನಲ್ಲಿ ಸರ್ಕಾರವು 2025-26ರ ವರ್ಷಕ್ಕೆ ವಿತ್ತೀಯ ಕೊರತೆ ಗುರಿಯನ್ನು ಶೇ. 4.4 ಎಂದು ನಿಗದಿ ಮಾಡಿತ್ತು.
ಈ ಬಾರಿ ಭಾರತದ ನಾಮಿನಲ್ ಜಿಡಿಪಿ ನಿರೀಕ್ಷೆಗಿಂತಲೂ ಕಡಿಮೆ ಇರಬಹುದು ಎಂದು ಸರ್ಕಾರವೇ ಅಂದಾಜು ಮಾಡಿದ್ದು ವಿತ್ತೀಯ ಕೊರತೆ ಹಿಗ್ಗುವ ಭಯ ಇತ್ತು. ಆದರೆ, ಆರ್ಥಿಕತೆಯ ಹಣದ ಮೌಲ್ಯವು ಸರಿಯಾದ ಪ್ರಮಾಣದಲ್ಲಿದೆ. ಹೀಗಾಗಿ, ಬಜೆಟ್ನಲ್ಲಿ ಮಾಡಿದ್ದ ಅಂದಾಜಿನ ಪ್ರಕಾರ ವಿತ್ತೀಯ ಕೊರತೆ ಇರುವುದರಲ್ಲಿ ಯಾವ ಸಮಸ್ಯೆ ಇಲ್ಲ ಎಂದು ಪಿಡಬ್ಲ್ಯುಸಿ ಹೇಳಿದೆ.
ಇದನ್ನೂ ಓದಿ: ಅಮೆರಿಕದೊಂದಿಗೆ ಟ್ರೇಡ್ ಡೀಲ್, ಮುಗಿಯದ ತೊಡಕು; ದಕ್ಷಿಣ ಅಮೆರಿಕ ಸೇರಿದಂತೆ ಬೇರೆ ಬೇರೆ ಮಾರುಕಟ್ಟೆಗಳ ಮೇಲೆ ಭಾರತದ ಕಣ್ಣು
2024-25ರ ವರ್ಷಕ್ಕೆ ಫಿಸ್ಕಲ್ ಡೆಫಿಸಿಟ್ ಅಥವಾ ವಿತ್ತೀಯ ಕೊರತೆ ಗುರಿಯನ್ನು ಶೇ. 4.9 ಎಂದು ನಿಗದಿ ಮಾಡಲಾಗಿತ್ತು. ಸರ್ಕಾರವು ಶೇ 4.8 ವಿತ್ತೀಯ ಕೊರತೆ ಸ್ಥಿತಿ ಸಾಧಿಸಿತ್ತು. 2025-26ರ ವರ್ಷಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 15.69 ಲಕ್ಷ ಕೋಟಿ ರೂ ವಿತ್ತೀಯ ಕೊರತೆ ಬರಬಹುದು ಎಂದು ಅಂದಾಜಿಸಿದ್ದರು. ಅಂದರೆ, ಅದು ಜಿಡಿಪಿಯ ಶೇ. 4.4ರಷ್ಟು. ಪಿಡಬ್ಲ್ಯುಸಿ ಪ್ರಕಾರ ವಿತ್ತೀಯ ಕೊರತೆ ಶೇ. 4.3ಕ್ಕೆ ಹೋಗಿ ಇಳಿಯಬಹುದು.
ವಿತ್ತೀಯ ಕೊರತೆ ಎಂದರೇನು?
ಸರ್ಕಾರದ ಆದಾಯ ಹಾಗೂ ಅದು ಮಾಡುವ ವ್ಯಯದ ನಡುವಿರುವ ವ್ಯತ್ಯಾಸವೇ ವಿತ್ತೀಯ ಕೊರತೆ. ಈ ವ್ಯತ್ಯಾಸದ ಹಣವು ದೇಶದ ಜಿಡಿಪಿಗೆ ಹೋಲಿಸಿದರೆ ಎಷ್ಟು ಎಂದು ವಿತ್ತೀಯ ಕೊರತೆಯನ್ನು ಅಳೆಯಲಾಗುತ್ತದೆ. ಇಷ್ಟು ಕೊರತೆಯ ಹಣವನ್ನು ಸರ್ಕಾರ ಸಾಲದ ಮೂಲಕ ಭರಿಸುತ್ತದೆ.
ಇದನ್ನೂ ಓದಿ: ಪ್ರಧಾನಿ ಮೋದಿಯ ದೃಷ್ಟಿ ಮತ್ತು ನಿಲುವು ಕಂಡು ಅಚ್ಚರಿಗೊಂಡ ಎಐ ಸ್ಟಾರ್ಟಪ್ಗಳ ಮುಖ್ಯಸ್ಥರು
ಸರ್ಕಾರ ತನ್ನ ಶಕ್ತ್ಯಾನುಸಾರ ಎಷ್ಟು ವಿತ್ತೀಯ ಕೊರತೆ ಇರಬಹುದು ಎಂದು ಅಂದಾಜಿಸಿ ಟಾರ್ಗೆಟ್ ಫಿಕ್ಸ್ ಮಾಡಿಕೊಳ್ಳುತ್ತದೆ. ಅದರ ವೆಚ್ಚವನ್ನು ಅದಕ್ಕೆ ಅನುಗುಣವಾಗಿ ಕಡಿಮೆ ಅಥವಾ ಹೆಚ್ಚು ಮಾಡುತ್ತದೆ. ಸರ್ಕಾರವು ವಿತ್ತೀಯ ಕೊರತೆ ವಿಚಾರದಲ್ಲಿ ಶಿಸ್ತು ಕಾಯ್ದುಕೊಂಡಾಗ ಹೂಡಿಕೆದಾರರಿಗೆ ವಿಶ್ವಾಸ ಹೆಚ್ಚಾಗಿ, ಹೂಡಿಕೆಗಳು ಹೆಚ್ಚೆಚ್ಚು ಬರಲು ಸಾಧ್ಯವಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




