ಚೀನಾ ನೇತೃತ್ವದ ಆರ್​ಸಿಇಪಿಗೆ ಸೇರಲು ಭಾರತ ಯೋಜನೆ; ಆರು ವರ್ಷದ ಹಿಂದೆ ತೊರೆದಿದ್ದ ಗುಂಪಿಗೆ ಮತ್ತೆ ಸೇರ ಹೊರಟಿರುವುದು ಯಾಕೆ?

India may rejoin RCEP: ಅಮೆರಿಕದಿಂದ ಅವಮಾನಿತವಾಗುತ್ತಿರುವ ಭಾರತವು ಈಗ ವಿಶ್ವದ ಅತಿದೊಡ್ಡ ಟ್ರೇಡಿಂಗ್ ಬ್ಲಾಕ್​ಗೆ ಸೇರ್ಪಡೆಯಾಗಲು ಯೋಜಿಸುತ್ತಿದೆ. ಮಿಂಟ್ ಪತ್ರಿಕೆ ವರದಿ ಪ್ರಕಾರ 15 ರಾಷ್​ಟ್ರಗಳಿರುವ ಆರ್​ಸಿಇಪಿ ಗುಂಪಿಗೆ ಭಾರತವು ಸೇರಲು ಹೊರಟಿದೆ. 2019ರಲ್ಲಿ ಭಾರತ ವಿವಿಧ ಕಾರಣಗಳಿಗೆ ಇದೇ ಗುಂಪಿನಿಂದ ನಿರ್ಗಮಿಸಿತ್ತು. ಈಗ ಮತ್ತೆ ಸೇರಲು ಯೋಜಿಸಿರುವುದು ಗಮನಾರ್ಹ.

ಚೀನಾ ನೇತೃತ್ವದ ಆರ್​ಸಿಇಪಿಗೆ ಸೇರಲು ಭಾರತ ಯೋಜನೆ; ಆರು ವರ್ಷದ ಹಿಂದೆ ತೊರೆದಿದ್ದ ಗುಂಪಿಗೆ ಮತ್ತೆ ಸೇರ ಹೊರಟಿರುವುದು ಯಾಕೆ?
ವ್ಯಾಪಾರ

Updated on: Aug 21, 2025 | 9:19 PM

ನವದೆಹಲಿ, ಆಗಸ್ಟ್ 21: ಐದಾರು ವರ್ಷದ ಹಿಂದೆ ತಾನು ತೊರೆದು ಬಂದಿದ್ದ ಆರ್​ಸಿಇಪಿ ಟ್ರೇಡಿಂಗ್ ಗುಂಪಿಗೆ (RCEP- Regional Comprehensive Economic Partnership) ಮತ್ತೆ ಸೇರಲು ಭಾರತ ಯೋಜಿಸುತ್ತಿರುವ ಸುದ್ದಿ ಕೇಳಿಬಂದಿದೆ. ಚೀನಾ ಸೇರಿ 15 ದೇಶಗಳಿರುವ ಈ ಟ್ರೇಡಿಂಗ್ ಕೂಟಕ್ಕೆ ಸೇರಿದರೆ ಅನುಕೂಲ ಮತ್ತು ಅನನುಕೂಲಗಳೇನಿರಬಹುದು ಎಂದು ಭಾರತ ವಿಮರ್ಶಿಸುತ್ತಿದೆ. ಮಿಂಟ್ ಪತ್ರಿಕೆಯಲ್ಲಿ ಎರಡು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಈ ಬಗ್ಗೆ ವರದಿ ಪ್ರಕಟಿಸಿದೆ. 2019ರಲ್ಲಿ ಭಾರತವು ಆರ್​ಸಿಇಪಿ ಗುಂಪಿನಿಂದ ನಿರ್ಗಮಿಸಿ ಬಂದಿತ್ತು.

ಹಿಂದೆ ಆರ್​ಸಿಇಪಿಯಿಂದ ಭಾರತ ನಿರ್ಗಮಿಸಿದ್ದು ಯಾಕೆ?

ಆರ್​ಸಿಇಪಿ ಎಂದರೆ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ. ಇದು ವಿಶ್ವದ ಅತಿದೊಡ್ಡ ಟ್ರೇಡ್ ಬ್ಲಾಕ್​ಗಳಲ್ಲಿ ಒಂದು. ವಿಶ್ವದ ಶೇ. 30ಕ್ಕೂ ಹೆಚ್ಚಿನ ಜಿಡಿಪಿ ಹೊಂದಿರುವ ರಾಷ್ಟ್ರಗಳ ಗುಂಪಿದು. ಪೂರ್ವ ಏಷ್ಯನ್ ಭಾಗದ ದೇಶಗಳೇ ಈ ಗುಂಪಿನಲ್ಲಿರುವುದು. ಬ್ರಿಕ್ಸ್ ಗುಂಪಿಗಿಂತಲೂ ದೊಡ್ಡದು.

ಆಸಿಯನ್ ಗುಂಪಿನ ಸದಸ್ಯ ದೇಶಗಳಾದ ಬ್ರೂನೇ, ಕಾಂಬೋಡಿಯಾ, ಇಂಡೋನೇಷ್ಯಾ, ಲಾವೋಸ್, ಮಲೇಷ್ಯಾ, ಮಯನ್ಮಾರ್, ಫಿಲಿಪ್ಪೈನ್ಸ್, ಸಿಂಗಾಪುರ್, ಥಾಯ್ಲೆಂಡ್, ವಿಯೆಟ್ನಾಂ ಆರ್​ಸಿಇಪಿಯಲ್ಲಿವೆ. ಇವುಗಳ ಜೊತೆಗೆ ಚೀನಾ, ಜಪಾನ್, ಸೌತ್ ಕೊರಿಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ದೇಶಗಳೂ ಈ ಗುಂಪಿನಲ್ಲಿವೆ.

ಇದನ್ನೂ ಓದಿ: ಆನ್​ಲೈನ್ ಗೇಮಿಂಗ್ ಬಿಲ್ 2025; ಡ್ರೀಮ್11ನಂತಹ ಆ್ಯಪ್​ಗಳ ಕತೆ ಏನು? ಇಲ್ಲಿದೆ ಈ ಮಸೂದೆಯ ಮುಖ್ಯಾಂಶಗಳು

ಆರ್​ಸಿಇಪಿಯಲ್ಲಿ ಈ ಎಲ್ಲಾ 15 ದೇಶಗಳ ನಡುವೆ ಮುಕ್ತ ವ್ಯಾಪಾರ ಒಪ್ಪಂದದ ನಿಯಮಗಳು ಇರುತ್ತವೆ. ಚೀನಾ ಜೊತೆ ಸಾಕಷ್ಟು ಟ್ರೇಡ್ ಡೆಫಿಸಿಟ್ ಹೊಂದಿರುವ ಭಾರತವು ಈ ಆರ್​ಸಿಇಪಿ ಸೇರಿದರೆ ಚೀನಾದಿಂದ ಮತ್ತಷ್ಟು ಸರಕುಗಳು ಯಥೇಚ್ಛವಾಗಿ ಹರಿದುಬರಬಹುದು ಎನ್ನುವ ಭೀತಿ ಇದೆ. ಇದೇ ಕಾರಣಕ್ಕೆ ಅದು ಆರ್​ಸಿಇಪಿಯಲ್ಲಿ ಮುಂದುವರಿಸಲು ಇಚ್ಛಿಸದೆ 2019ರಲ್ಲಿ ನಿರ್ಗಮಿಸಿತು.

ನ್ಯೂಜಿಲೆಂಡ್ ದೇಶ ಕೂಡ ಸಾಕಷ್ಟು ಡೈರಿ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ರಫ್ತು ಮಾಡಲು ಸಿದ್ಧವಿದೆ. ಹೀಗಾದಲ್ಲಿ ಭಾರತದ ಕೃಷಿ ಮತ್ತು ಡೈರಿ ಮಾರುಕಟ್ಟೆಗೆ ಹೊಡೆತ ಬೀಳುತ್ತದೆ. ಆರ್​ಸಿಇಪಿಯಿಂದ ಭಾರತ ನಿರ್ಗಮಿಸಲು ಇದೂ ಒಂದು ಕಾರಣ. ಈಗ ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ತಡೆಯಾಗಿರುವುದು ಕೂಡ ಇವೇ ಕೃಷಿ ಮತ್ತು ಡೈರಿ ಸೆಕ್ಟರ್​ಗಳೇ. ಇವುಗಳನ್ನು ರಕ್ಷಿಸುವ ಬದ್ಧತೆಯನ್ನು ಕೈಬಿಡಲು ಭಾರತ ಸಿದ್ಧ ಇಲ್ಲ.

ಇದನ್ನೂ ಓದಿ: ವಿಶ್ವದ ಅತ್ಯಂತ ಶಕ್ತಿಶಾಲಿ ಕ್ಷಿಪಣಿಗಳಲ್ಲಿ ಅಗ್ನಿ-5; ಅಮೆರಿಕವನ್ನೂ ತಲುಪಬಲ್ಲುದು ಈ ಮಿಸೈಲ್

ಈಗ ಆರ್​ಸಿಇಪಿಗೆ ಮರುಸೇರ್ಪಡೆಯಾಗಲು ಭಾರತ ಯೋಜಿಸಿರುವುದು ಯಾಕೆ?

ಡೊನಾಲ್ಡ್ ಟ್ರಂಪ್ ಈಗ ಭಾರತದ ಮೇಲೆ ಶೇ. 50ರಷ್ಟು ಟ್ಯಾರಿಫ್ ವಿಧಿಸಿದ್ದಾರೆ. ಭಾರತದ ರಫ್ತಿಗೆ ಅತಿದೊಡ್ಡ ಮಾರುಕಟ್ಟೆಯಾಗಿದ್ದುದು ಅಮೆರಿಕವೇ. ಹಲವು ಬಿಲಿಯನ್ ಡಾಲರ್ ಮೊತ್ತದ ರಫ್ತಿಗೆ ಈಗ ಸಂಚಕಾರ ಏರ್ಪಟ್ಟಿದೆ. ಇದನ್ನು ಸರಿದೂಗಿಸಲು ಭಾರತ ಪರ್ಯಾಯ ಮಾರುಕಟ್ಟೆಗಳನ್ನು ಅವಲೋಕಿಸುತ್ತಿದೆ. ವಿವಿಧ ದೇಶಗಳ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಶುರು ಹಚ್ಚಿದೆ. ಈ ಕಾರಣಕ್ಕೆ ಆರ್​ಸಿಇಪಿಗೆ ಮತ್ತೆ ಸೇರುವ ಬಗ್ಗೆ ಚಿಂತನೆ ನಡೆಸುತ್ತಿರಬಹುದು ಎಂದು ತಜ್ಞರು ಹೇಳುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ