ಮೇ 10ರ ವಾರದಲ್ಲಿ ಭಾರತದ ಫಾರೆಕ್ಸ್ ನಿಧಿ ಎರಡೂವರೆ ಬಿಲಿಯನ್ ಡಾಲರ್​ನಷ್ಟು ಏರಿಕೆ

|

Updated on: May 19, 2024 | 9:53 AM

India Forex Reserves on 2024 May 10: 2024ರ ಮೇ 10ರಂದು ಅಂತ್ಯಗೊಂಡ ವಾರದಲ್ಲಿ ಭಾರತದ ಫಾರೀನ್ ಎಕ್ಸ್​ಚೇಂಜ್ ರಿಸರ್ವ್ಸ್ 644.151 ಬಿಲಿಯನ್ ಡಾಲರ್​ಗೆ ಏರಿದೆ. ಇದು ಸತತ ಎರಡನೇ ವಾರದ ಏರಿಕೆ ಆಗಿದೆ. ಅದಕ್ಕೆ ಹಿಂದಿನ ಮೂರು ವಾರದಲ್ಲಿ ಫಾರೆಕ್ಸ್ ರಿಸರ್ವ್ಸ್ ಸತತವಾಗಿ ಇಳಿದಿತ್ತು. ಮೇ 10ರಂದು ಏರಿಕೆ ಆಗಿರುವ 2.561 ಬಿಲಿಯನ್ ಡಾಲರ್ ಫಾರೆಕ್ಸ್ ಸಂಪತ್ತಿನಲ್ಲಿ ವಿದೇಶೀ ಕರೆನ್ಸಿ ಆಸ್ತಿ, ಚಿನ್ನ ಮತ್ತು ಎಸ್​ಡಿಆರ್​ಗಳಲ್ಲಿ ಹೆಚ್ಚಳವಾಗಿದೆ.

ಮೇ 10ರ ವಾರದಲ್ಲಿ ಭಾರತದ ಫಾರೆಕ್ಸ್ ನಿಧಿ ಎರಡೂವರೆ ಬಿಲಿಯನ್ ಡಾಲರ್​ನಷ್ಟು ಏರಿಕೆ
ಫಾರೆಕ್ಸ್ ನಿಧಿ
Follow us on

ನವದೆಹಲಿ, ಮೇ 19: ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ (Forex Reserves) ಮೇ 10ರಂದು ಅಂತ್ಯಗೊಂಡ ವಾರದಲ್ಲಿ 2.561 ಬಿಲಿಯನ್ ಡಾಲರ್​ನಷ್ಟು ಏರಿದೆ. ಇದರೊಂದಿಗೆ ದೇಶದ ಫಾರೆಕ್ಸ್ ಮೀಸಲು ಸಂಪತ್ತು 644.151 ಬಿಲಿಯನ್ ಡಾಲರ್ ಮುಟ್ಟಿದೆ. ಶುಕ್ರವಾರ ಆರ್​ಬಿಐ ಬಿಡುಗಡೆ ಮಾಡಿದ ದತ್ತಾಂಶದಲ್ಲಿ ಈ ವಿವರ ಇದೆ. ಹಿಂದಿನ ವಾರದಲ್ಲಿ, ಅಂದರೆ ಮೇ 3ರಂದು ಅಂತ್ಯಗೊಂಡ ವಾರದಲ್ಲಿ 3.668 ಬಿಲಿಯನ್ ಡಾಲರ್​ನಷ್ಟು ಏರಿಕೆ ಆಗಿತ್ತು. ಅದಕ್ಕೂ ಹಿಂದಿನ ಮೂರು ವಾರಗಳಲ್ಲಿ ಫಾರೆಕ್ಸ್ ಮೀಸಲು ನಿಧಿ ಸತತ ಇಳಿಕೆ ಕಂಡಿತ್ತು. ಈಗ ಎರಡು ವಾರದಿಂದ ಮತ್ತೆ ಏರುಗತಿಗೆ ಬಂದಿದೆ. ಏಪ್ರಿಲ್ 5ರವರೆಗೆ ಹಲವು ವಾರಗಳ ಏರಿಕೆಯ ಪರಿಣಾಮವಾಗಿ ಫಾರೆಕ್ಸ್ ಮೀಸಲು ನಿಧಿ ದಾಖಲೆಯ 648.562 ಬಿಲಿಯನ್ ಡಾಲರ್ ಮಟ್ಟ ಮುಟ್ಟಿತ್ತು.

ಆರ್​ಬಿಐ ಮೇ 17ರಂದು ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಮೇ 10ರ ವಾರದಲ್ಲಿ ಐಎಂಎಫ್​ನೊಂದಿಗಿನ ಮೀಸಲು ಸ್ಥಾನ ಹೊರತುಪಡಿಸಿ ಫಾರೆಕ್ಸ್ ಸಂಪತ್ತಿನ ಇನ್ನುಳಿದ ಮೂರು ಅಂಶಗಳು ಏರಿಕೆ ಆಗಿವೆ. ಫಾರೆಕ್ಸ್ ರಿಸರ್ವ್ಸ್​ನ ಪ್ರಮುಖ ಭಾಗವಾಗಿರುವ ಫಾರೀನ್ ಕರೆನ್ಸಿ ಆಸ್ತಿ 1.488 ಬಿಲಿಯನ್ ಡಾಲರ್​ನಷ್ಟು ಏರಿದೆ. ಚಿನ್ನದ ಮೀಸಲು ನಿಧಿ 1.072 ಬಿಲಿಯನ್ ಡಾಲರ್ ಹೆಚ್ಚಾಗಿದೆ.

ಇದನ್ನೂ ಓದಿ: ಈ ವರ್ಷ ಭಾರತದ ಆರ್ಥಿಕ ಬೆಳವಣಿಗೆ ಶೇ. 6.9: ನಿರೀಕ್ಷೆ ಹೆಚ್ಚಿಸಿದ ವಿಶ್ವಸಂಸ್ಥೆ

ಸ್ಪೆಷಲ್ ಡ್ರಾಯಿಂಗ್ ರೈಟ್ಸ್ ಅಥವಾ ಎಸ್​​ಡಿಆರ್ 5 ಮಿಲಿಯನ್ ಡಾಲರ್​ನಷ್ಟು ಏರಿದೆ. ಐಎಂಎಫ್​ನೊಂದಿಗಿನ ರಿಸರ್ವ್ ಪೊಸಿಶನ್ 4 ಮಿಲಿಯನ್ ಡಾಲರ್​ನಷ್ಟು ಕಡಿಮೆ ಆಗಿದೆ. ಮೇಲೆ ತಿಳಿಸಿದ ಫಾರೀನ್ ಕರೆನ್ಸಿ ಅಸೆಟ್ ಎಂದರೆ ಯೂರೋ, ಪೌಂಡ್, ಯೆನ್ ಇತ್ಯಾದಿ ಡಾಲರೇತರ ಕರೆನ್ಸಿಗಳ ಮೌಲ್ಯದ ಏರಿಳಿತವಾಗಿದೆ.

ಮೇ 10ರಂದು ಭಾರತದ ಫಾರೆಕ್ಸ್ ರಿಸರ್ವ್ಸ್

ಒಟ್ಟು ವಿದೇಶೀ ವಿನಿಮಯ ಮೀಸಲು ನಿಧಿ: 644.151 ಬಿಲಿಯನ್ ಡಾಲರ್

  • ಫಾರೀನ್ ಕರೆನ್ಸಿ ಆಸ್ತಿ: 565.648 ಬಿಲಿಯನ್ ಡಾಲರ್
  • ಗೋಲ್ಡ್ ರಿಸರ್ವ್ಸ್: 55.952 ಬಿಲಿಯನ್ ಡಾಲರ್
  • ಎಸ್​ಡಿಆರ್: 18.056 ಬಿಲಿಯನ್ ಡಾಲರ್
  • ಐಎಂಎಫ್​ನಲ್ಲಿರುವ ನಿಧಿ: 4.495 ಬಿಲಿಯನ್ ಡಾಲರ್

ಇದನ್ನೂ ಓದಿ: ಸಮಾಜವಾದಿ ಸೋಗಿನಲ್ಲಿ 4 ವರ್ಷ ಕಾಲ ಆದಾಯ ತೆರಿಗೆಯನ್ನು ಶೇ 97.5 ಕ್ಕೆ ಏರಿಸಿದ್ದ ಪ್ರಧಾನಿ ಇಂದಿರಾ! ಏನಾಯ್ತು ಆಗ?

ವಿಶ್ವದ ಇತರ ದೇಶಗಳಲ್ಲಿರುವ ಫಾರೆಕ್ಸ್ ನಿಧಿ

ಅತಿ ಹೆಚ್ಚು ಫಾರೆಕ್ಸ್ ನಿಧಿ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಚೀನಾ 3,225 ಬಿಲಿಯನ್ ಡಾಲರ್ ಫಾರೆಕ್ಸ್ ರಿಸರ್ವ್ಸ್​ನೊಂದಿಗೆ ಮೊದಲ ಸ್ಥಾನದಲ್ಲಿದೆ. ಐದನೇ ಸ್ಥಾನದಲ್ಲಿರುವ ರಷ್ಯಾ ಇತ್ತೀಚಿನ ಕೆಲ ವಾರಗಳಿಂದ ಫಾರೆಕ್ಸ್ ಸಂಪತ್ತನ್ನು ಹೆಚ್ಚಿಸಿಕೊಳ್ಳುತ್ತಿದೆ.

  1. ಚೀನಾ: 3,225 ಬಿಲಿಯನ್ ಡಾಲರ್
  2. ಜಪಾನ್: 1,290 ಬಿಲಿಯನ್ ಡಾಲರ್
  3. ಸ್ವಿಟ್ಜರ್​ಲ್ಯಾಂಡ್: 868 ಬಿಲಿಯನ್ ಡಾಲರ್
  4. ಭಾರತ: 644 ಬಿಲಿಯನ್ ಡಾಲರ್
  5. ರಷ್ಯಾ: 600 ಬಿಲಿಯನ್ ಡಾಲರ್
  6. ತೈವಾನ್: 568 ಬಿಲಿಯನ್ ಡಾಲರ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:00 am, Sun, 19 May 24