ಸಮಾಜವಾದಿ ಸೋಗಿನಲ್ಲಿ 4 ವರ್ಷ ಕಾಲ ಆದಾಯ ತೆರಿಗೆಯನ್ನು ಶೇ 97.5 ಕ್ಕೆ ಏರಿಸಿದ್ದ ಪ್ರಧಾನಿ ಇಂದಿರಾ! ಏನಾಯ್ತು ಆಗ?

ಇಂದಿರಾ ಗಾಂಧಿಯ ಮಹತ್ವಾಕಾಂಕ್ಷಿ ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ಧನ ಸಹಾಯದ ಅಗತ್ಯವಿತ್ತು. ಆದರೆ ಸರ್ಕಾರದ ಖಜಾನೆಯಲ್ಲಿ ಹೆಚ್ಚಿನ ಹಣ ಇರಲಿಲ್ಲ. ಹಾಗಾಗಿ ಸಮಾಜವಾದಿ ಯೋಜನೆಗಳ ಭಾರವನ್ನು ಸಾಮಾನ್ಯ ತೆರಿಗೆದಾರರು ಹೊರಬೇಕಾಯಿತು.

ಸಮಾಜವಾದಿ ಸೋಗಿನಲ್ಲಿ 4 ವರ್ಷ ಕಾಲ ಆದಾಯ ತೆರಿಗೆಯನ್ನು ಶೇ 97.5 ಕ್ಕೆ ಏರಿಸಿದ್ದ ಪ್ರಧಾನಿ ಇಂದಿರಾ! ಏನಾಯ್ತು ಆಗ?
4 ವರ್ಷ ಕಾಲ ಆದಾಯ ತೆರಿಗೆಯನ್ನು ಶೇ 97.5 ಕ್ಕೆ ಏರಿಸಿದ್ದ ಪ್ರಧಾನಿ ಇಂದಿರಾ!
Follow us
ಸಾಧು ಶ್ರೀನಾಥ್​
|

Updated on: May 18, 2024 | 1:50 PM

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸಂಪತ್ತಿನ ಮರುಹಂಚಿಕೆ ಕುರಿತು ಬಿಸಿ ಬಿಸಿ ಚರ್ಚೆ ನಡೆದಿದೆ. ಕಾಂಗ್ರೆಸ್ಸಿನ ಕಟ್ಟಾಳು (ಈಗಿಲ್ಲ), ಇಂದಿರಾ ಗಾಂಧಿಯ (Indira Gandhi) ಅನುಯಾಯಿ ಸ್ಯಾಮ್​ ಪಿತ್ರೋಡಾ (sam pitroda) ಎಂಬ ಟೆಕ್ನಾಲಜಿ ಮೇಧಾವಿ ಈ ಚರ್ಚೆಯನ್ನು ಹುಟ್ಟುಹಾಕಿದ್ದು ಎಂಬುದು ಗಮನಾರ್ಹ. ಅಂದಿನ ಪ್ರಧಾನ ಮಂತ್ರಿ ಮತ್ತು ಕಾಂಗ್ರೆಸ್ ನಾಯಕಿ ಇಂದಿರಾ ಗಾಂಧಿ ಅವರು “ಆದಾಯ (income) ಮತ್ತು ಸಂಪತ್ತಿನ (wealth) ವಿಷಯದಲ್ಲಿ ಸಮಾನತೆಯನ್ನು ಸಾಧಿಸಲು ತೆರಿಗೆ ಎಂಬ ಅಸ್ತ್ರವನ್ನು ಝಳಪಿಸಿದ್ದರು. 1970 ರ ದಶಕದ ಆರಂಭದಲ್ಲಿ ಅವರ ಸರ್ಕಾರವು ಆದಾಯ ತೆರಿಗೆ ದರಗಳನ್ನು 97.5% ಕ್ಕೆ ಏರಿಸಿತ್ತು.

ಹಾಗೆ ನೋಡಿದರೆ ಭಾರತದ ಆರ್ಥಿಕತೆ ಅಭಿವೃದ್ಧಿ ಹೊಂದಿದ್ದು 1991 ರ ಎಲ್‌ಪಿಜಿ (ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ) ಸುಧಾರಣೆಗಳ ನಂತರ. ಆದರೆ ಅದಕ್ಕೂ ಮುನ್ನ ಸರ್ಕಾರದ ಸಮಾಜವಾದಿ ಧೋರಣೆಗಳಿಂದಾಗಿ ದೇಶದ ಆರ್ಥಿಕತೆಯು 1980 ರ ದಶಕದವರೆಗೆ ತೀವ್ರವಾಗಿ ಹದಗೆಟ್ಟಿತ್ತು ಎಂಬುದು ದಾಖಲಾರ್ಹವಾಗಿದೆ.

ಅದೊಮ್ಮೆ ಇಂದಿರಾ ಗಾಂಧಿಯವರು ‘ಆದಾಯ ಮತ್ತು ಸಂಪತ್ತಿನ ವಿಷಯದಲ್ಲಿ ಸಮಾನತೆ ಸಾಧಿಸಲು’ ತೆರಿಗೆಯನ್ನು ಪ್ರಮುಖ ಸಾಧನ ಎಂದು ಎಣಿಸಿದ್ದರು. 1970 ರಲ್ಲಿ ಇಂದಿರಾ ಗಾಂಧಿ ನೇತೃತ್ವದ ಸರ್ಕಾರವು ನೇರ ತೆರಿಗೆ ದರವನ್ನು 93.5% ಕ್ಕೆ ಹೆಚ್ಚಿಸಿತು. ಅದು 1973-74 ರ ವೇಳೆಗೆ 97.5% ಕ್ಕೆ ಏರಿತ್ತು. ಜಾಗತಿಕ ಪ್ರವೃತ್ತಿಗಳನ್ನು ಪ್ರತಿಬಿಂಬಿಸುತ್ತಿದ್ದ ಸರ್ಕಾರದ ಇಂತಹ ನಡೆ ಆಗ ತೀವ್ರ ಟೀಕೆಗೆ ಗುರಿಯಾಗಿತ್ತು.

ತೆರಿಗೆ ಜಾಲದ ವ್ಯಾಪ್ತಿಯನ್ನು ವಿಸ್ತರಿಸುವ ಬದಲು ಕಡಿಮೆ ಸಂಖ್ಯೆಯ ನಿರ್ದಿಷ್ಟ ವರ್ಗದ ಜನರ ಮೇಲೆಯೇ ಹೆಚ್ಚು ತೆರಿಗೆ ವಿಧಿಸುವ ಪ್ರಧಾನಿ ಇಂದಿರಾ ನೀತಿಯು ಕೆಲಸ ಮಾಡಲಿಲ್ಲ. ಬದಲಿಗೆ ದೊಡ್ಡ ಪ್ರಮಾಣದ ತೆರಿಗೆ ವಂಚನೆಗೆ ಅದು ದಾರಿ ಮಾಡಿಕೊಟ್ಟಿತು. ಇದರಿಂದ ಇಂದಿರಾ ಸರ್ಕಾರದ ಉದ್ದೇಶ ಈಡೇರಲಿಲ್ಲ. ಕೆಲ ವರ್ಷಗಳಲ್ಲಿಯೇ ಆ ನೀತಿಯನ್ನು ಹಿಂತೆಗೆದುಕೊಳ್ಳುವಂತಾಯಿತು.

ಭಾರತದಲ್ಲಿ ವೈಯಕ್ತಿಕ ತೆರಿಗೆ ದರಗಳ ಏರಿಕೆ/ಹೇರಿಕೆ ಹೀಗಿತ್ತು: 1949-50 ರಲ್ಲಿ, ಆಗಿನ ಹಣಕಾಸು ಸಚಿವ ಜಾನ್ ಮಥಾಯ್ ಮೊದಲ ಬಾರಿಗೆ ತೆರಿಗೆ ದರಗಳನ್ನು ಅರ್ಥೈಸತೊಡಗಿದರು. ಅವರು ಮೊದಲ ಸ್ಲ್ಯಾಬ್‌ನಲ್ಲಿ 10,000 ರೂ. ವರೆಗಿನ ಆದಾಯದ ಮೇಲಿನ ತೆರಿಗೆಯನ್ನು ಒಂದು ಆಣೆಯಿಂದ 6 ಪೈಸೆಗೆ ಇಳಿಸಿದರು. ಮತ್ತು ಎರಡನೇ ಸ್ಲ್ಯಾಬ್‌ನಲ್ಲಿ ಎರಡು ಅಣೆಗಳಿಂದ ಒಂಬತ್ತು ಪೈಸೆಗೆ ಕಡಿಮೆ ಮಾಡಿದರು.

ಇದರ ನಂತರ, ಭಾರತವು ಪ್ರಗತಿಪರ ತೆರಿಗೆ ಪದ್ಧತಿಯನ್ನು ಅಳವಡಿಸಿಕೊಂಡಿತು. 1950-80ರ ದಶಕಗಳಲ್ಲಿ ವೈಯಕ್ತಿಕ ಆದಾಯ ತೆರಿಗೆ ದರಗಳು ಅಸಾಧಾರಣ ಮಟ್ಟದಲ್ಲಿ ಹೆಚ್ಚಿದ್ದವು. 1950 ರ ದಶಕದಲ್ಲಿ ಗರಿಷ್ಠ ಆದಾಯ ತೆರಿಗೆ ದರ (ಮೇಲ್ತೆರಿಗೆ ಸೇರಿದಂತೆ) ಶೇಕಡಾ 25 ರಷ್ಟಿದ್ದರೆ, ಇದು 1960ರ ದಶಕದಲ್ಲಿ ಏಕ್ದಂ ಶೇ. 88 ಕ್ಕೆ ಏರಿಸಲಾಯಿತು.

ಪ್ರಧಾನಿ ಇಂದಿರಾ ಗಾಂಧಿಯ ಮಹತ್ವಾಕಾಂಕ್ಷಿ ಸಮಾಜವಾದಿ ಯೋಜನೆಗಳ ಭಾರವನ್ನು ಸಾಮಾನ್ಯ ತೆರಿಗೆದಾರರು ಹೊರಬೇಕಾಯಿತು: ಫೆಬ್ರವರಿ 28, 1970 ರಂದು, ಹಣಕಾಸು ಖಾತೆಯನ್ನು ಹೊಂದಿದ್ದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಸಂಸತ್ತಿನಲ್ಲಿ ತಮ್ಮ ಬಜೆಟ್ ಭಾಷಣವನ್ನು ಓದಿದರು. ಸಾಮಾಜಿಕ ಕಲ್ಯಾಣದ ವಿಷಯವು ಬಜೆಟ್‌ನ ಕೇಂದ್ರವಾಗಿತ್ತು. ಮತ್ತು ಇಂದಿರಾ ಗಾಂಧಿ ಅವರು ತಮ್ಮ ಕೂಸಾದ ಹಸಿರು ಕ್ರಾಂತಿಗೆ ಹೆಚ್ಚಿನ ಒತ್ತು ನೀಡುತ್ತಾ ಕೃಷಿ ಕ್ಷೇತ್ರಕ್ಕೆ ಮಣೆ ಹಾಕಿದರು.

ಈ ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ಧನ ಸಹಾಯ ಮಾಡಲು, ಸರ್ಕಾರಕ್ಕೆ ಖಜಾನೆಯಿಂದ ಹೆಚ್ಚಿನ ಹಣದ ಅಗತ್ಯವಿತ್ತು. ಇದೇ ವೇಳೆ ಇಂದಿರಾ ಗಾಂಧಿಯವರು ವಿದೇಶಿ ನೇರ ಹೂಡಿಕೆಯ (ಎಫ್‌ಡಿಐ) ಪ್ರಬಲ ವಿರೋಧಿಯಾಗಿದ್ದರು. ಹಾಗಾಗಿ ಇಂದಿರಾ ಗಾಂಧಿಯವರ ಸಮಾಜವಾದಿ ಮಹತ್ವಾಕಾಂಕ್ಷಿ ಯೋಜನೆಗಳ ಭಾರವನ್ನು ಸಾಮಾನ್ಯ ತೆರಿಗೆದಾರರು ಹೊರಬೇಕಾಯಿತು.

“ಆದಾಯ ಮತ್ತು ಸಂಪತ್ತಿನ ಹೆಚ್ಚಿನ ಸಮಾನತೆಯನ್ನು ಸಾಧಿಸಲು ಆಧುನಿಕ ಸಮಾಜಗಳಲ್ಲಿ ತೆರಿಗೆಯು ಪ್ರಮುಖ ಅಸ್ತ್ರ/ಸಾಧನವಾಗಿದೆ. ಆದ್ದರಿಂದ, ನೇರ ತೆರಿಗೆ ವ್ಯವಸ್ಥೆಯು ಅಧಿಕ ಮಟ್ಟದಲ್ಲಿ ಆದಾಯ ತೆರಿಗೆಯನ್ನು ಹೆಚ್ಚಿಸುವ ಆಶಯ ಮೂಡಿಸಿತು. ಜೊತೆಗೆ ಸಂಪತ್ತು ಮತ್ತು ಉಡುಗೊರೆಗಳ ಮೇಲಿನ ತೆರಿಗೆಯನ್ನು ಸಹ ಭಾರಿ ಪ್ರಮಾಣದಲ್ಲಿ ಏರಿಸಲಾಗಿದೆ”ಎಂದು ಪ್ರಧಾನಿ/ವಿತ್ತ ಸಚಿವೆ ಇಂದಿರಾ ಅವರೇ ಸ್ವತಃ ತಮ್ಮ ಭಾಷಣದಲ್ಲಿ ನೇರ ನುಡಿಗಳಲ್ಲಿ ಹೇಳಿದ್ದರು.

ಇಂದಿರಾ ಗಾಂಧಿಯವರು ತಮ್ಮ ಭಾಷಣದಲ್ಲಿ ರೂ 5,000- ರೂ 10,000 ರ ನಡುವಿನ ಆದಾಯದ ಮೇಲೆ 10 % ಆದಾಯ ತೆರಿಗೆ ದರವನ್ನು ಘೋಷಿಸಿದರು. ರೂ 2,00,000 ಕ್ಕಿಂತ ಹೆಚ್ಚಿನ ಆದಾಯದ ಮೇಲಿನ ತೆರಿಗೆ ಪ್ರಮಾಣವನ್ನು ಕ್ರಮೇಣ 85 % ಕ್ಕೆ ಏರಿಸಿದ್ದರು. ಗಮನಿಸಿ, ಮುಂದಿನ ಲೆಕ್ಕಾಚಾರದಲ್ಲಿ 10 % ರಷ್ಟು ಹೆಚ್ಚುವರಿ ತೆರಿಗೆ ಪ್ರಮಾಣ ಸೇರಿಸುವುದರೊಂದಿಗೆ ರೂ 2,00,000 ಕ್ಕಿಂತ ಹೆಚ್ಚಿನ ಆದಾಯ ಹೊಂದಿರುವವರಿಗೆ ಆಘಾತಕಾರಿ ಸರೀತಿಯಲ್ಲಿ ಶೇ. 93.5 ರಷ್ಟು ತೆರಿಗೆ ದರ ಅನ್ವಯಿಸಲಾಗಿತ್ತು. ಇದನ್ನು ಸರಳವಾಗಿ ಹೇಳುವುದಾದರೆ, 2,00,000 ರೂ.ಗಿಂತ ಹೆಚ್ಚಿನ ಆದಾಯ ಗಳಿಸಿದರೆ ಅಂತಹವರಿಗೆ ಪ್ರತಿ 100 ರೂಪಾಯಿಗೆ ದಕ್ಕುತ್ತಿದ್ದುದ್ದು ಕೇವಲ 6.50 ರೂಪಾಯಿ ಮಾತ್ರ! ಇನ್ನು ವೈಯಕ್ತಿಕ ಆದಾಯ ತೆರಿಗೆಯು 1970-71ರಲ್ಲಿ 11 ತೆರಿಗೆ ಸ್ಲ್ಯಾಬ್​​ಗಳನ್ನು ಹೊಂದಿತ್ತು.

ಈ ಮಧ್ಯೆ, ಎಂ ಗೋವಿಂದ ರಾವ್ ಮತ್ತು ಆರ್ ಕವಿತಾ ರಾವ್ ಎಂಬಿಬ್ಬರು ಆರ್ಥಿಕತಜ್ಞರು ‘ಟ್ರೆಂಡ್ಸ್ ಅಂಡ್ ಇಶ್ಯೂಸ್ ಇನ್ ಟ್ಯಾಕ್ಸ್ ಪಾಲಿಸಿ ಅಂಡ್ ರಿಫಾರ್ಮ್ ಇನ್ ಇಂಡಿಯಾ’ ಎಂಬ ವಿಷಯದ ಕುರಿತು ಮಹತ್ವದ ಅಧ್ಯಯನ ವರದಿ ಮಂಡಿಸಿದರು. “1969 ರಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ವಿಭಜನೆ ಕಾಣಿಸಿಕೊಂಡ ತಕ್ಷಣವೇ ಆದಾಯ ತೆರಿಗೆ ದರಗಳನ್ನು ಪರೋಕ್ಷವಾಗಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಮಟ್ಟಕ್ಕೆ ಹೆಚ್ಚಿಸಲಾಯಿತು. ಇದು ಕಾಂಗ್ರೆಸ್​ ಪಕ್ಷಕ್ಕೆ ತಾನು ಎಡಪಕ್ಷ ಪರವಾದ ಧೋರಣೆಯನ್ನು ಹೊಂದಿರುವುದಾಗಿ ಬಿಂಬಿಸುವ ಅಗತ್ಯವಿತ್ತು. ಅದರ ಪ್ರಯತ್ನವಾಗಿ ವಿಪರೀತವಾದ ತೆರಿಗೆಗಳನ್ನು ವಿಧಿಸಿದ್ದರು ಎಂದು ಈ ಆರ್ಥಿಕತಜ್ಞರು ತಮ್ಮ ವರದಿಯಲ್ಲಿ ವ್ಯಾಖ್ಯಾನಿಸಿದ್ದಾರೆ.

97.5% ದುಬಾರಿ ತೆರಿಗೆ ದರ ಮತ್ತು ತೆರಿಗೆ ವಂಚನೆ ಹಾದಿ ಸಮಾಜವಾದದ ಬೆಂಬಲದಲ್ಲಿ ದೇಶದ ಕ್ರಾಂತಿಕಾರಿ, ಪ್ರಗತಿಪರ ತೆರಿಗೆ ಎಂಬ ಬೃಹನ್ನಾಟಕ ಅಲ್ಲಿಗೇ ನಿಲ್ಲಲಿಲ್ಲ. 1971 ರ ಪಾಕಿಸ್ತಾನದ ವಿರುದ್ಧ ಯುದ್ಧ ನಡೆಯಿತು. ಭಾರತವು ವಿಜಯಶಾಲಿಯಾಯಿತು. ಆದರೆ ಆ ಯುದ್ಧವು ದೇಶದ ಆರ್ಥಿಕತೆಯನ್ನು ಮತ್ತಷ್ಟು ತಗ್ಗಿಸಿತು ಎಂಬುದು ಖೇದಕರ ಸಂಗತಿಯಾಯಿತು. ಆಗ ಮತ್ತದೇ ತೆರಿಗೆ ಅಸ್ತ್ರ ಝಳಪಿಸಿದರು.

ಅಧಿಕ ಸಂಬಳಗಳು ಮತ್ತು ಸಂಭಾವನೆ ನೀಡುವುದನ್ನು ನಿರುತ್ಸಾಹಗೊಳಿಸುವಂತಹ ಹಣಕಾಸು ಸಾಧನಗಳನ್ನು ನಿಯೋಜಿಸಬೇಕಾದ ಜರೂರತ್ತು ಇದೆ. ಇದನ್ನು ಹೀಗೆಯೇ ಬಿಟ್ಟರೆ ಸಮಾನತೆ ಹೆಸರಿನ ಸಮಾಜಕ್ಕೆ ಹಾನಿಯಾಗುತ್ತದೆ ಎಂದು ಕಾಂಗ್ರೆಸ್​​ ಅಧಿಕಾರದಲ್ಲಿದ್ದಾಗ ಅಂದಿನ ಹಣಕಾಸು ಸಚಿವ ವೈ.ಬಿ. ಚವಾಣ್ 1971 ರ ಮಧ್ಯಂತರ ಕೇಂದ್ರ ಬಜೆಟ್ ಭಾಷಣದಲ್ಲಿ ತಮ್ಮ ಇಂಗಿತ ಸ್ಪಷ್ಟಪಡಿಸಿದ್ದರು.

ಅದರಂತೆ 1973-74 ಅವಧಿಯಲ್ಲಿ ನಿರಂತರವಾಗಿ 4 ಆರ್ಥಿಕ ವರ್ಷಗಳ ಬಜೆಟ್‌ನಲ್ಲಿ, ವೈಬಿ ಚವಾಣ್ ಅವರು ಮೇಲ್ತೆರಿಗೆಯನ್ನು (ಸರ್ಚಾರ್ಜ್) 15 % ಗೆ ಹೆಚ್ಚಿಸಿದರು. ಅಧಿಕ ಆದಾಯ ಗಳಿಸುವ ವ್ಯಕ್ತಿಗೆ ಅನ್ವಯವಾಗುವಂತೆ ಅತ್ಯಧಿಕ ತೆರಿಗೆ ದರವನ್ನು 97.50 % ಕ್ಕೆ ಏರಿಸಿಬಿಟ್ಟರು. ಆದರೆ 1971 ರಲ್ಲಿ ನೇರ ತೆರಿಗೆಗಳ ವಿಚಾರಣಾ ಸಮಿತಿಯ ವರದಿಯು ಅತಿಯಾದ ತೆರಿಗೆ ದರಗಳ ಪರಿಣಾಮವಾಗಿ ಭಾರೀ ಪ್ರಮಾಣದಲ್ಲಿ ತೆರಿಗೆ ವಂಚನೆಯಾಗುತ್ತಿದೆ ಎಂದು ಸ್ಪಷ್ಟ ಮಾತುಗಳಲ್ಲಿ ತಿಳಿಸಿತು.

“ಹೆಚ್ಚಿನ ತೆರಿಗೆ ದರಗಳ ಸವಾರಿಯು ತೆರಿಗೆ ವಂಚನೆಗೆ ಮೊದಲ ಕಾರಣವಾಗಿದೆ. ಏಕೆಂದರೆ ಇದು ವಂಚನೆಯನ್ನು ಗಂಡಾಂತರದ ಹೊರತಾಗಿಯೂ ತುಂಬಾ ಲಾಭದಾಯಕ ಮತ್ತು ಆಕರ್ಷಕವಾಗಿಸಿದೆ. ಹಾಗಾಗಿ ಕನಿಷ್ಠ ತೆರಿಗೆ ದರವನ್ನು 75% ಕ್ಕೆ ಇಳಿಸಲು ಸಮಿತಿಯು ತನ್ನ ವರದಿಯಲ್ಲಿ ಶಿಫಾರಸು ಮಾಡಿತು. ಕೊನೆಗೆ ಈ ಬದಲಾವಣೆಯನ್ನು 1974-75 ರಲ್ಲಿ ಜಾರಿಗೆ ತರಲಾಯಿತು, 10% ಹೆಚ್ಚುವರಿ ಶುಲ್ಕ ಒಳಗೊಂಡಂತೆ ಕನಿಷ್ಠ ದರವನ್ನು 77 % ಗೆ ಇಳಿಸಲಾಯಿತು. 1976-77 ರ ವೇಳೆಗೆ ಅದನ್ನು 66 % ಪ್ರಮಾಣಕ್ಕೂ ಇಳಿಸಲಾಯಿತು.

1985-86ರಲ್ಲಿ ತೆರಿಗೆ ಪದ್ದತಿಯಲ್ಲಿ ಒಂದು ಪ್ರಮುಖ ಸರಳೀಕೃತ ಮತ್ತು ತರ್ಕಬದ್ಧ ಯೋಜನೆ ಬಂದಿತು. ತೆರಿಗೆ ಸ್ಲ್ಯಾಬ್​​​ಗಳ ಸಂಖ್ಯೆಯನ್ನು 11 ರಿಂದ 4 ಕ್ಕೆ ಇಳಿಸಲಾಯಿತು, ಹಾಗೆಯೇ ಅತ್ಯಧಿಕ ಕನಿಷ್ಠ ದರವನ್ನು 66 ರಿಂದ 50 % ಕ್ಕೆ ಇಳಿಸಲಾಯಿತು.

Also Read: Coffee Pudi Sakamma – ಇವರೇ ನೋಡಿ ಬೆಂಗಳೂರಿಗೆ ಕಾಫಿ ಪರಿಚಯಿಸಿದ್ದು

1991 ರ ತೆರಿಗೆ ಸುಧಾರಣಾ ಸಮಿತಿಯ ಶಿಫಾರಸಿನ ಅನ್ವಯ ವೈಯಕ್ತಿಕ ಆದಾಯ ತೆರಿಗೆಯಲ್ಲಿ ಕೊನೆಯ ಸುಧಾರಣೆ ತರಂಗವನ್ನು ಚಾಲ್ತಿಗೆ ತರಲಾಯಿತು. 1992-93ರಲ್ಲಿ ತೆರಿಗೆ ದರಗಳನ್ನು 20 %, 30 % ಮತ್ತು 40 % ರ ಮೂರು ತೆರಿಗೆ ಬ್ರಾಕೆಟ್‌ಗಳಿಗೆ ಸೀಮಿತಗೊಳಿಸಲಾಯಿತು. 1997-98ರ ವೇಳೆಗೆ ಅದನ್ನು ಇನ್ನೂ ಮೂರು ದರಗಳಿಗೆ 10 %, 20 % ಮತ್ತು 30% ಕ್ಕೆ ಇಳಿಸಿ, ಮತ್ತಷ್ಟು ಕಡಿತಗಳನ್ನು ಘೋಷಿಸಲಾಯಿತು.

ಪ್ರಸಕ್ತ ಲೋಕಸಭೆ ಚುನಾವಣೆ ಸಮಯದಲ್ಲಿ ಸ್ಯಾಮ್​ ಪಿತ್ರೋಡಾ ಮೂಲಕ ಕಾಂಗ್ರೆಸ್​ ಪಕ್ಷವು ಪಿತ್ರಾರ್ಜಿತ ಆಸ್ತಿ ಮೇಲಿನ ತೆರಿಗೆ ಮತ್ತು ಸಂಪತ್ತಿನ ತೆರಿಗೆಯನ್ನು ಪುನಃ ಪರಿಚಯಿಸುವ ಮತ್ತು ಸಂಪತ್ತಿನ ಪುನರ್​​ಹಂಚಿಕೆಯ ಕಲ್ಪನೆಯನ್ನು ಹರಿಯಬಿಟ್ಟಿದೆ. ಇದು ಆ ಪಕ್ಷ ಇಂದಿರಾ ಗಾಂಧಿ ಕಾಲದಲ್ಲಿ ಹೊಂದಿದ್ದ ಸಮಾಜವಾದಿ ವಾದವನ್ನು ಮರುನೆನಪಿಸುತ್ತದೆಯಷ್ಟೆ.

ಆದರೆ ಕಾಂಗ್ರೆಸ್ ಇಂತಹ ಉಚಿತ ನೀತಿಗಳಿಗೆ ಅಗತ್ಯವಿರುವ ಆರ್ಥಿಕ ನೆರವನ್ನು ಹೊಂದಿಸಲು ನೈಜ ಮಾರ್ಗಸೂಚಿಯನ್ನು ಪ್ರಕಟಿಸದೆ ಜನಸಾಮಾನ್ಯರನ್ನು ಪ್ರತಿ ವರ್ಷವೂ ಲಕ್ಷಾಧಿಪತಿಗಳನ್ನಾಗಿ ಮಾಡುವ ಭರವಸೆಗಳನ್ನು ನೀಡುತ್ತಿದೆ. 1970ರ ದಶಕದಲ್ಲಿ ಇಂದಿರಾ ಗಾಂಧಿ ಕಾಲದಲ್ಲಿ ಭಾರತವು ಎಫ್‌ಡಿಐ ನಿಂದ ವಿಮುಖವಾಗಿತ್ತು. ಆದರೆ ಈಗ ಪರಿಸ್ಥಿತಿ ಅದಕ್ಕೆ ತದ್ವಿರುದ್ಧ ಇರಬಹುದು. ಅಂದರೆ ವಿದೇಶಿ ಹೂಡಿಕೆಗಳಿಂದ ಖಜಾನೆಗೆ ಹಣದ ಹರಿವು ಹೆಚ್ಚಬಹುದು. ಆದರೆ ಪಿತ್ರಾರ್ಜಿತ ತೆರಿಗೆ ಮತ್ತು ಸಂಪತ್ತಿನ ತೆರಿಗೆಯನ್ನು ಪುನಃ ಪರಿಚಯಿಸುವ ಚರ್ಚೆ ಮತ್ತು ಸಂಪತ್ತಿನ ಪುನರ್​ವಿತರಣೆಯ ಕಲ್ಪನೆಯು ಇಂದಿರ ಆಕಾಲದ ಅಂದಿನ ಸಮಾಜವಾದಿ ಸಿದ್ದಾಂತವನ್ನು ಅಗತ್ಯವಾಗಿ ನೆನಪಿಸುತ್ತದೆ ಎಂಬುದು ಇಲ್ಲಿ ಉಲ್ಲೇಖಾರ್ಹ.

ಇನ್ನು ತೆರಿಗೆ ವಿಚಾರಕ್ಕೆ ಬಂದರೆ ಇದು ತೆರಿಗೆ ಜಾಲವನ್ನು ವಿಸ್ತರಿಸುವ ಸಮಯ. ಅದು ಬಿಟ್ಟು ತಮ್ಮ ತೆರಿಗೆಯನ್ನು ಶ್ರದ್ಧೆಯಿಂದ ಪಾವತಿಸುವ ಜನರ ಮೇಲೆ ಹೆಚ್ಚು ತೆರಿಗೆ ವಿಧಿಸುವುದಲ್ಲ. ಒಂದು ವೇಳೆ ಕಾಂಗ್ರೆಸ್​ ಪಿತ್ರೋಡಾ ಅನಿಸಿಕೆಯಂತೆ ಮುಂದುವರಿದರೆ ಇಂದಿರಾ ಗಾಂಧಿ ಕಾಲದಲ್ಲಿ ಅನುಭವಿಸಿದ ಹಿನ್ನಡೆಯನ್ನು ಮತ್ತೊಮ್ಮೆ ಕಾಣುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ