ಸತತ ಮೂರು ವಾರ ಕುಸಿತ ಕಂಡಿದ್ದ ಫಾರೆಕ್ಸ್ ಮೀಸಲು ನಿಧಿ 641.59 ಬಿಲಿಯನ್ ಡಾಲರ್ಗೆ ಹೆಚ್ಚಳ
India Forex Reserves 641.59 Billion Dollar on May 3, 2024: ಭಾರತದ ಫಾರೆಕ್ಸ್ ರಿಸರ್ವ್ಸ್ ಮೇ 3ರಂದು 641.59 ಬಿಲಿಯನ್ ಡಾಲರ್ಗೆ ಏರಿಕೆ ಆಗಿದೆ. ಏಪ್ರಿಲ್ 5ರಂದು 648 ಬಿಲಿಯನ್ ಡಾಲರ್ ಇದ್ದ ಫಾರೆಕ್ಸ್ ಮೀಸಲು ನಿಧಿ, ಅದಾದ ಬಳಿಕ ಸತತ ಮೂರು ವಾರ ಕಾಲ ಕುಸಿತ ಕಂಡಿತ್ತು. ಈಗ ಮತ್ತೊಮ್ಮೆ ಏರಿಕೆ ಆಗಿದೆ. 648 ಬಿಲಿಯನ್ ಡಾಲರ್ ಭಾರತದ ಫಾರೆಕ್ಸ್ ಇತಿಹಾಸದಲ್ಲೇ ಗರಿಷ್ಠ ಮಟ್ಟವಾಗಿದೆ.
ನವದೆಹಲಿ, ಮೇ 10: ಭಾರತದ ವಿದೇಶ ವಿನಿಮಯ ಮೀಸಲು ನಿಧಿ (Forex reserves) ಮೇ 3ರಂದು ಅಂತ್ಯಗೊಂಡ ವಾರದಲ್ಲಿ 3.66 ಬಿಲಿಯನ್ ಡಾಲರ್ನಷ್ಟು ಏರಿಕೆ ಕಂಡಿದೆ. ಇದರೊಂದಿಗೆ ಒಟ್ಟಾರೆ ಫಾರೆಕ್ಸ್ ನಿಧಿ 641.59 ಬಿಲಿಯನ್ ಡಾಲರ್ ಆಗಿದೆ. ಸತತ ಮೂರು ವಾರ ಕಾಲ ಇಳಿಕೆ ಕಂಡಿದ್ದ ನಿಧಿ ಗಮನಾರ್ಹ ಹೆಚ್ಚಳ ಕಂಡಿದೆ. ಆರ್ಬಿಐ ಇಂದು (ಮೇ 10) ಬಿಡುಗಡೆ ಮಾಡಿದ ದತ್ತಾಂಶದಲ್ಲಿ ಈ ಹೆಚ್ಚಳ ದಾಖಲಾಗಿದೆ. ಹಿಂದಿನ ವಾರದಲ್ಲಿ, ಅಂದರೆ ಏಪ್ರಿಲ್ 26ರ ವಾರದಲ್ಲಿ ಫಾರೆಕ್ಸ್ ರಿಸರ್ವ್ಸ್ 2.41 ಬಿಲಿಯನ್ ಡಾಲರ್ನಷ್ಟು ಕಡಿಮೆ ಆಗಿ 637.92 ಬಿಲಿಯನ್ ಡಾಲರ್ಗೆ ಇಳಿದಿತ್ತು.
ವಿದೇಶೀ ವಿನಿಮಯ ಮೀಸಲು ನಿಧಿಯಲ್ಲಿ ವಿದೇಶೀ ಕರೆನ್ಸಿ ಆಸ್ತಿ, ಚಿನ್ನದ ಆಸ್ತಿ, ಐಎಂಎಫ್ನೊಂದಿಗಿನ ಎಸ್ಡಿಆರ್ ಮತ್ತು ರಿಸರ್ವ್ ಪೊಸಿಶನ್ ಪ್ರಮುಖ ಭಾಗವಾಗಿವೆ. ಫಾರೀನ್ ಕರೆನ್ಸಿ ಅಸೆಟ್ಗಳು 4.45 ಬಿಲಿಯನ್ ಡಾಲರ್ನಷ್ಟು ಏರಿವೆ. ಸ್ಪೆಷಲ್ ಡ್ರಾಯಿಂಗ್ ರೈಟ್ಸ್ ಅಥವಾ ಎಸ್ಡಿಆರ್ಗಳು 2 ಮಿಲಿಯನ್ ಡಾಲರ್ನಷ್ಟು ಅಲ್ಪ ಏರಿಕೆ ಕಂಡಿವೆ. ಆದರೆ, ಚಿನ್ನದ ನಿಧಿ 653 ಮಿಲಿಯನ್ ಡಾಲರ್ನಷ್ಟು ತಗ್ಗಿದೆ. ಐಎಂಎಫ್ನೊಂದಿಗಿನ ಮೀಸಲು ನಿಧಿ ಕೂಡ 140 ಮಿಲಿಯನ್ ಡಾಲರ್ನಷ್ಟು ಕಡಿಮೆ ಆಗಿದೆ. ಆದರೆ, ವಿದೇಶೀ ಕರೆನ್ಸಿ ಆಸ್ತಿ ಸಂಗ್ರಹದಲ್ಲಿ ಗಣನೀಯ ಹೆಚ್ಚಳವಾದ್ದರಿಂದ ಒಟ್ಟಾರೆ ಫಾರೆಕ್ಸ್ ಮೀಸಲು ನಿಧಿಯಲ್ಲಿ ಏರಿಕೆ ಆಗಿದೆ.
ಮೇ 3ರಂದು, ಭಾರತದ ಫಾರೆಕ್ಸ್ ಮೀಸಲು ನಿಧಿ ವಿವರ
ಒಟ್ಟು ಫಾರೆಕ್ಸ್ ಮೀಸಲು ನಿಧಿ: 641.59 ಬಿಲಿಯನ್ ಡಾಲರ್
- ಫಾರೀನ್ ಕರೆನ್ಸಿ ಆಸ್ತಿ: 564.16 ಬಿಲಿಯನ್ ಡಾಲರ್
- ಗೋಲ್ಡ್ ರಿಸರ್ವ್ಸ್: 54.88 ಬಿಲಿಯನ್ ಡಾಲರ್
- ಎಸ್ಡಿಆರ್: 18.05 ಬಿಲಿಯನ್ ಡಾಲರ್
- ಐಎಂಎಫ್ನಲ್ಲಿ ಇರಿಸಿರುವ ನಿಧಿ: 4.50 ಬಿಲಿಯನ್ ಡಾಲರ್
ಏಪ್ರಿಲ್ 5ರಂದು ಭಾರತದ ಫಾರೆಕ್ಸ್ ಮೀಸಲು ನಿಧಿ 648.562 ಬಿಲಿಯನ್ ಡಾಲರ್ಗೆ ಏರಿಕೆ ಆಗಿತ್ತು. ಅದು ಸಾರ್ವಕಾಲಿಕ ಗರಿಷ್ಠ ಮಟ್ಟವಾಗಿದೆ. 2021ರಲ್ಲಿ 645 ಬಿಲಿಯನ್ ಡಾಲರ್ ಇದ್ದದ್ದು ಗರಿಷ್ಠ ಎಂಬ ದಾಖಲೆ ಹೊಂದಿತ್ತು. ಏಪ್ರಿಲ್ 5ರ ಬಳಿಕ ಸತತ ಮೂರು ವಾರ ಕಾಲ ಫಾರೆಕ್ಸ್ ಮೀಸಲು ನಿಧಿ ಕುಸಿತ ಕಂಡು ಈಗ ಮತ್ತೆ ಹೆಚ್ಚಳವಾಗಿದೆ.
ಇದನ್ನೂ ಓದಿ: ಊಲಾ, ಊಬರ್ಗೆ ಸೆಡ್ಡು ಹೊಡೆಯಲು ಪೇಟಿಎಂ ಎಂಟ್ರಿ; ಸಿಗಲಿದೆ ಆಟೊರಿಕ್ಷಾ ಬುಕಿಂಗ್ ಸೇವೆ
ಇತರ ದೇಶಗಳಿಗೆ ಹೋಲಿಸಿದರೆ ಫಾರೆಕ್ಸ್ ಮೀಸಲು ನಿಧಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿ ಮುಂದುವರಿದಿದೆ. ಚೀನಾ ಬಳಿ 3,225 ಬಿಲಿಯನ್ ಡಾಲರ್ನಷ್ಟು ಫಾರೆಕ್ಸ್ ರಿಸರ್ವ್ಸ್ ಹೊಂದಿದೆ. ಜಪಾನ್ ಬಳಿ 1,135 ಬಿಲಿಯನ್ ಡಾಲರ್ನಷ್ಟು ಫಾರೆಕ್ಸ್ ಸಂಪತ್ತು ಇದೆ. 868 ಬಿಲಿಯನ್ ಡಾಲರ್ನಷ್ಟು ಫಾರೆಕ್ಸ್ ನಿಧಿ ಹೊಂದಿರುವ ಸ್ವಿಟ್ವರ್ಲ್ಯಾಂಡ್ನ ನಂತರ ಸ್ಥಾನದಲ್ಲಿ ಭಾರತ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ