ನವದೆಹಲಿ, ನವೆಂಬರ್ 29: ಭಾರತದ ಆರ್ಥಿಕ ಬೆಳವಣಿಗೆ ಎರಡನೇ ಕ್ವಾರ್ಟರ್ನಲ್ಲಿ ನಿರಾಸೆ ಮೂಡಿಸಿದೆ. 2024ರ ಜುಲೈನಿಂದ ಸೆಪ್ಟೆಂಬರ್ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಕೇವಲ ಶೇ. 5.4ರಷ್ಟು ಬೆಳೆದಿದೆ. ಕಳೆದ ಎಂಟು ಕ್ವಾರ್ಟರ್ಗಳಲ್ಲಿ ಇದು ಅತಿ ನಿಧಾನಗತಿಯ ಬೆಳವಣಿಗೆಯಾಗಿದೆ. ಈ ಹಣಕಾಸು ವರ್ಷದ ಎರಡನೇ ಕ್ವಾರ್ಟರ್ನಲ್ಲಿ ಆರ್ಥಿಕತೆ ಶೇ. 6.2ರಿಂದ ಶೇ. 6.9ರ ಶ್ರೇಣಿಯಲ್ಲಿ ಬೆಳೆಯಬಹುದು ಎಂದು ಹೆಚ್ಚಿನ ತಜ್ಞರು ಅಂದಾಜಿಸಿದ್ದರು. ಆದರೆ, ಎಲ್ಲರ ನಿರೀಕ್ಷೆ ಹುಸಿಯಾಗುವ ರೀತಿಯಲ್ಲಿ ಜಿಡಿಪಿ ದರ ಇದೆ. ಇಂದು ಶುಕ್ರವಾರ ಸರ್ಕಾರವೇ ಬಿಡುಗಡೆ ಮಾಡಿದ ಅಧಿಕೃತ ದತ್ತಾಂಶದಲ್ಲಿ ಈ ಮಾಹಿತಿ ಇದೆ.
‘ಎರಡನೇ ಕ್ವಾರ್ಟರ್ನಲ್ಲಿ ಜಿಡಿಪಿ ಶೇ. 5.4ರಷ್ಟು ಬೆಳೆದಿರಬಹುದು ಎಂದು ಅಂದಾಜಿಸಲಾಗಿದೆ. ಹಿಂದಿನ ಹಣಕಾಸು ವರ್ಷದ (2023-24) ಎರಡನೇ ಕ್ವಾರ್ಟರ್ನಲ್ಲಿ ಜಿಡಿಪಿ ಶೇ. 8.1ರಷ್ಟು ಬೆಳೆದಿತ್ತು’ ಎಂದು ಹಣಕಾಸು ಸಚಿವಾಲಯ ಇಂದು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಭಾರತದಲ್ಲಿ ಸಹಕಾರಿ ಮತ್ತು ಫ್ರೀಲ್ಯಾನ್ಸ್ ಕ್ಷೇತ್ರಗಳಲ್ಲಿ 20 ಕೋಟಿ ಉದ್ಯೋಗಗಳ ಸೃಷ್ಟಿ ನಿರೀಕ್ಷೆ
ಹಿಂದಿನ ಕ್ವಾರ್ಟರ್ನಲ್ಲಿ, ಅಂದರೆ 2024ರ ಏಪ್ರಿಲ್ನಿಂದ ಜೂನ್ವರೆಗಿನ ಕ್ವಾರ್ಟರ್ನಲ್ಲಿ ಜಿಡಿಪಿ ಶೇ. 6.7ರಷ್ಟು ಹೆಚ್ಚಳ ಆಗಿತ್ತು. ವರ್ಷದ ಹಿಂದಿನ ಕ್ವಾರ್ಟರ್ನಲ್ಲಿ ಶೇ. 8.1ರಷ್ಟು ಹೆಚ್ಚಳ ಆಗಿತ್ತು. ಎರಡಕ್ಕೂ ಹೋಲಿಸಿದರೆ ಈ ಬಾರಿಯ ಜಿಡಿಪಿ ದರ ಬಹಳ ಕಡಿಮೆಗೊಂಡಿದೆ.
ಶೇ. 6ಕ್ಕಿಂತಲೂ ಕಡಿಮೆ ಇದ್ದರೂ ಭಾರತದ ಜಿಡಿಪಿ ದರ ವಿಶ್ವದಲ್ಲಿ ಗರಿಷ್ಠ ಎನಿಸಿದೆ. ಪ್ರಮುಖ ಆರ್ಥಿಕತೆಗಳ ಪೈಕಿ ಭಾರತವೇ ಅತಿಹೆಚ್ಚು ಬೆಳವಣಿಗೆ ತೋರಿದೆ. ಜುಲೈನಿಂದ ಸೆಪ್ಟೆಂಬರ್ ಕ್ವಾರ್ಟರ್ನಲ್ಲಿ ಅಮೆರಿಕದ ಜಿಡಿಪಿ ಶೇ. 2.8ರಷ್ಟು ಬೆಳೆದಿದೆ. ಬ್ರಿಟನ್ ದೇಶದ ಆರ್ಥಿಕತೆ ಹಿಗ್ಗಿರುವುದು 10 ಮೂಲಾಂಕಗಳಷ್ಟು ಮಾತ್ರವೇ. ಇನ್ನು, ಚೀನಾದ ಆರ್ಥಿಕತೆ ಶೇ. 4.6ರಷ್ಟು ಬೆಳೆದರೆ ಜಪಾನ್ ಜಿಡಿಪಿ ಬೆಳವಣಿಗೆ ಶೇ. 1ಕ್ಕಿಂತಲೂ ಕಡಿಮೆಯೇ ಇದೆ.
ಇದನ್ನೂ ಓದಿ: ಮೋದಿ ನಾಯಕತ್ವದಲ್ಲಿ ಭಾರತದಲ್ಲಿ ಒಳ್ಳೆಯ ಕೆಲಸಗಳಾಗುತ್ತಿವೆ: ಜಾಗತಿಕ ಹೂಡಿಕೆದಾರ ಜಿಮ್ ರೋಜರ್ಸ್ ಅನಿಸಿಕೆ
ಕೋವಿಡ್ ಬರುವವರೆಗೂ ಮೂರ್ನಾಲ್ಕು ದಶಕಗಳ ಕಾಲ ನಿರಂತರವಾಗಿ ಉನ್ನತ ಮಟ್ಟದ ಜಿಡಿಪಿ ಬೆಳವಣಿಗೆ ಕಂಡಿದ್ದ ಚೀನಾ ಈ ವರ್ಷ ಶೇ. 5ರಷ್ಟು ಆರ್ಥಿಕ ಬೆಳವಣಿಗೆ ಕಂಡರೆ ಅದೇ ಹೆಚ್ಚು ಎನ್ನಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ