ಅಮೆರಿಕದಲ್ಲಿ ಅದಾನಿ ಮೇಲೆ ಆರೋಪ; ಇದು ಖಾಸಗಿ ಸಂಸ್ಥೆಗಳ ವಿಚಾರ ಮಾತ್ರ ಎಂದ ಭಾರತ ಸರ್ಕಾರ

Gautam Adani case: ಅಮೆರಿಕದಲ್ಲಿ ಗೌತಮ್ ಅದಾನಿ ಪ್ರಕರಣದ ಬಗ್ಗೆ ಭಾರತ ಸರ್ಕಾರ ಮೊದಲ ಬಾರಿಗೆ ಸ್ಪಂದಿಸಿದೆ. ಇದು ಖಾಸಗಿ ಸಂಸ್ಥೆಗಳು ಹಾಗು ವ್ಯಕ್ತಿಗಳನ್ನು ಒಳಗೊಂಡಿರುವ ಪ್ರಕರಣವಾಗಿದೆ. ಭಾರತ ಸರ್ಕಾರಕ್ಕೂ ಇದಕ್ಕೂ ಸದ್ಯಕ್ಕೆ ಕಾನೂನಾತ್ಮಕ ನಂಟಿಲ್ಲ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ.

ಅಮೆರಿಕದಲ್ಲಿ ಅದಾನಿ ಮೇಲೆ ಆರೋಪ; ಇದು ಖಾಸಗಿ ಸಂಸ್ಥೆಗಳ ವಿಚಾರ ಮಾತ್ರ ಎಂದ ಭಾರತ ಸರ್ಕಾರ
ಗೌತಮ್ ಅದಾನಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 29, 2024 | 6:28 PM

ನವದೆಹಲಿ, ನವೆಂಬರ್ 29: ಗೌತಮ್ ಅದಾನಿ ಹಾಗೂ ಇತರರ ವಿರುದ್ಧ ಅಮೆರಿಕದಲ್ಲಿ ಲಂಚದ ಆರೋಪ ದಾಖಲಾಗಿದೆ ಎನ್ನಲಾದ ವಿಚಾರದ ಬಗ್ಗೆ ಭಾರತ ಸರ್ಕಾರ ಮೊದಲ ಬಾರಿಗೆ ಪ್ರತಿಕ್ರಿಯಿಸಿದೆ. ಆರೋಪ ದಾಖಲು ಮಾಡುವ ಬಗ್ಗೆ ಮುಂಚಿತವಾಗಿ ತಮಗೆ ಯಾವ ಮಾಹಿತಿಯನ್ನೂ ಅಮೆರಿಕದಿಂದ ನೀಡಲಾಗಿರಲಿಲ್ಲ. ಅಮೆರಿಕದಿಂದ ಸಮನ್ಸ್​​ಗಾಗಲೀ ಅಥವಾ ವಾರಂಟ್​ಗಾಗಲೀ ತಮಗೆ ಈವರೆಗೂ ಬಂದಿಲ್ಲ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇಂದು ಶುಕ್ರವಾರ ಸ್ಪಷ್ಟಪಡಿಸಿದೆ.

ಎಎನ್​ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ವಿದೇಶಾಂಗ ವ್ಯವಹಾರಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಈ ಪ್ರಕರಣವು ಖಾಸಗಿ ಸಂಸ್ಥೆಗಳು ಮತ್ತು ವ್ಯಕ್ತಿಗಳು ಹಾಗೂ ಅಮೆರಿಕದ ನ್ಯಾಯ ಇಲಾಖೆ ಭಾಗಿಯಾಗಿರುವ ಒಂದು ಕಾನೂನು ವ್ಯಾಜ್ಯವಾಗಿದೆ ಎಂದು ಹೇಳಿದ್ದಾರೆ.

‘ಇಂಥ ಪ್ರಕರಣಗಳಲ್ಲಿ ಸ್ಥಾಪಿತ ವಿಧಾನಗಳು ಮತ್ತು ಕಾನೂನು ಕ್ರಮಗಳು ಇರುತ್ತವೆ. ಅವನ್ನು ಪಾಲಿಸಬಹುದು ಎಂದು ಭಾವಿಸಿದ್ದೇವೆ. ಈ ಪ್ರಕರಣದ ಬಗ್ಗೆ ಭಾರತ ಸರ್ಕಾರಕ್ಕೆ ಮುಂಚಿತವಾಗಿ ಮಾಹಿತಿ ನೀಡಲಾಗಿಲ್ಲ. ಈ ವಿಚಾರದ ಬಗ್ಗೆ ಅಮೆರಿಕ ಸರ್ಕಾರದ ಜೊತೆ ನಾವು ಯಾವುದೇ ಸಂವಾದವನ್ನೂ ಮಾಡಿಲ್ಲ…’ ಎಂದು ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.

ಇದನ್ನೂ ಓದಿ: ಅದಾನಿ ಗ್ರೂಪ್​ಗೆ ಬೆಂಬಲ ವ್ಯಕ್ತಪಡಿಸಿದ ಅಬುಧಾಬಿ ಐಎಚ್​ಸಿ, ಶ್ರೀಲಂಕಾ ಪೋರ್ಟ್ ಟ್ರಸ್ಟ್ ಮತ್ತು ತಾಂಜಾನಿಯಾ

‘ವಿವಿಧ ದೇಶಗಳ ನಡುವೆ ಪರಸ್ಪರ ಕಾನೂನಾತ್ಮಕ ಹೊಂದಾಣಿಕೆ ಇರುತ್ತದೆ. ಯಾವುದೇ ವ್ಯಕ್ತಿಗೆ ಸಮನ್ಸ್ ನೀಡಲು ಅಥವಾ ಅರೆಸ್ಟ್ ವಾರಂಟ್ ನೀಡಲು ವಿದೇಶೀ ಸರ್ಕಾರವೊಂದು ಮನವಿ ಸಲ್ಲಿಸುವುದು ಇದರ ಭಾಗವಾಗಿರುತ್ತದೆ. ಇಂಥ ಮನವಿಗಳನ್ನು ಅವುಗಳ ಮೆರಿಟ್ ಆಧಾರದ ಮೇಲೆ ಪರಿಶೀಲನೆ ಮಾಡಲಾಗುತ್ತದೆ. ಅಮೆರಿಕದ ವತಿಯಿಂದ ಈ ಪ್ರಕರಣದಲ್ಲಿ ನಮಗೆ ಯಾವುದೇ ಮನವಿ ಬಂದಿಲ್ಲ. ಈ ಪ್ರಕರಣವು ಖಾಸಗಿ ಸಂಸ್ಥೆಗಳಿಗೆ ಸಂಬಂಧಿಸಿದ್ದಾಗಿದೆ. ಈ ಹಂತದಲ್ಲಿ ಭಾರತ ಸರಕಾರವು ಕಾನೂನಾತ್ಮಕವಾಗಿ ಯಾವ ಪಾತ್ರ ಹೊಂದಿಲ್ಲ’ ಎಂದಿದ್ದಾರೆ.

ಅಮೆರಿಕದಲ್ಲಿ ಅದಾನಿ ವಿರುದ್ಧ ಏನಿದು ಕೇಸ್?

ಭಾರತೀಯ ಅಧಿಕಾರಿಗಳಿಗೆ ಲಂಚ ನೀಡಿ ಭಾರತದಲ್ಲಿ ಸೌರ ವಿದ್ಯುತ್ ಮಾರಾಟದ ಗುತ್ತಿಗೆ ಪಡೆಯಲಾಗಿದೆ. ಅದಾನಿ ಗ್ರೂಪ್​ಗೆ ಸೇರಿದ ಅದಾನಿ ಗ್ರೀನ್ ಎನರ್ಜಿ ಸಂಸ್ಥೆಗೆ 20 ವರ್ಷದ ಅವಧಿಯಲ್ಲಿ 2 ಬಿಲಿಯನ್ ಡಾಲರ್ ಲಾಭ ಈ ಗುತ್ತಿಗೆಗಳಿಂದ ಸಿಗಲಿದೆ ಎಂದು ಅಮೆರಿಕದ ನ್ಯಾಯ ಇಲಾಖೆಯು ನ್ಯೂಯಾರ್ಕ್​ನ ಡಿಸ್ಟ್ರಿಕ್ಟ್ ಕೋರ್ಟ್​​ವೊಂದರಲ್ಲಿ ಆರೋಪ ದಾಖಲಿಸಿದೆ. ಕಳೆದ ವಾರ ಬಂದ ಮಾಧ್ಯಮ ವರದಿಗಳಲ್ಲಿ ಗೌತಮ್ ಅದಾನಿ, ಸಾಗರ್ ಅದಾನಿ ಸೇರಿದಂತೆ 8 ಜನರ ವಿರುದ್ಧ ಆರೋಪ ದಾಖಲಾಗಿದೆ ಎನ್ನಲಾಗಿತ್ತು.

ಇದನ್ನೂ ಓದಿ: ಅಮೆರಿಕದ ಚಾರ್ಜ್​ಶೀಟ್​ನಲ್ಲಿ ಗೌತಮ್ ಅದಾನಿ ವಿರುದ್ಧ ಲಂಚದ ಆರೋಪವಿಲ್ಲ: ಅದಾನಿ ಗ್ರೀನ್ ಸ್ಪಷ್ಟನೆ

ಆದರೆ, ಗೌತಮ್ ಅದಾನಿ, ಸಾಗರ್ ಅದಾನಿ ಅಥವಾ ವಿನೀತ್ ಜೈನ್ ಅವರ ಹೆಸರಾಗಲೀ ಈ ಆರೋಪದಲ್ಲಿ ಪ್ರಸ್ತಾಪ ಆಗಿಲ್ಲ ಎಂದು ಅದಾನಿ ಗ್ರೂಪ್ ಸ್ಪಷ್ಟಪಡಿಸಿದೆ. ಮಾಧ್ಯಮಗಳಲ್ಲಿ ಬಂದ ವರದಿಯಲ್ಲಿನ ಅಂಶಗಳು ಸತ್ಯಕ್ಕೆ ದೂರವಾದುದು ಎಂದು ಅದಾನಿ ಗ್ರೀನ್ ಎನರ್ಜಿ ಸಂಸ್ಥೆ ಹೇಳಿದ್ದು, ಕಾನೂನು ಕ್ರಮಕ್ಕೆ ಸಿದ್ಧ ಇರುವುದಾಗಿ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ