AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರಾಸೆ ಮೂಡಿಸಿದ ಜಿಡಿಪಿ ದರ; ಎರಡನೇ ಕ್ವಾರ್ಟರ್​ನಲ್ಲಿ ಶೇ. 5.4ರಷ್ಟು ಮಾತ್ರ ಬೆಳೆದ ಆರ್ಥಿಕತೆ

India GDP grows 5.4% in 2024 July-September: ಭಾರತದ ಜಿಡಿಪಿ 2024ರ ಜುಲೈನಿಂದ ಸೆಪ್ಟೆಂಬರ್​ನಲ್ಲಿ ಶೇ. 5.4ರಷ್ಟು ಮಾತ್ರ ಬೆಳೆದಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಆರ್ಥಿಕತೆ ಶೇ. 8.1ರಷ್ಟು ಹಿಗ್ಗಿತ್ತು. ಏಪ್ರಿಲ್​ನಿಂದ ಜೂನ್​​ವರೆಗಿನ ಕ್ವಾರ್ಟರ್​ನಲ್ಲಿ 6.7 ಪ್ರತಿಶತದಷ್ಟು ಜಿಡಿಪಿ ಹೆಚ್ಚಿತ್ತು. ಆದರೆ, ಎರಡನೇ ಕ್ವಾರ್ಟರ್​ನಲ್ಲಿ ಎಲ್ಲರ ಅಂದಾಜಿಗಿಂತಲೂ ಕಡಿಮೆ ಜಿಡಿಪಿ ದರ ಬಂದಿದೆ.

ನಿರಾಸೆ ಮೂಡಿಸಿದ ಜಿಡಿಪಿ ದರ; ಎರಡನೇ ಕ್ವಾರ್ಟರ್​ನಲ್ಲಿ ಶೇ. 5.4ರಷ್ಟು ಮಾತ್ರ ಬೆಳೆದ ಆರ್ಥಿಕತೆ
ಜಿಡಿಪಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 29, 2024 | 4:35 PM

Share

ನವದೆಹಲಿ, ನವೆಂಬರ್ 29: ಭಾರತದ ಆರ್ಥಿಕ ಬೆಳವಣಿಗೆ ಎರಡನೇ ಕ್ವಾರ್ಟರ್​ನಲ್ಲಿ ನಿರಾಸೆ ಮೂಡಿಸಿದೆ. 2024ರ ಜುಲೈನಿಂದ ಸೆಪ್ಟೆಂಬರ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಕೇವಲ ಶೇ. 5.4ರಷ್ಟು ಬೆಳೆದಿದೆ. ಕಳೆದ ಎಂಟು ಕ್ವಾರ್ಟರ್​ಗಳಲ್ಲಿ ಇದು ಅತಿ ನಿಧಾನಗತಿಯ ಬೆಳವಣಿಗೆಯಾಗಿದೆ. ಈ ಹಣಕಾಸು ವರ್ಷದ ಎರಡನೇ ಕ್ವಾರ್ಟರ್​ನಲ್ಲಿ ಆರ್ಥಿಕತೆ ಶೇ. 6.2ರಿಂದ ಶೇ. 6.9ರ ಶ್ರೇಣಿಯಲ್ಲಿ ಬೆಳೆಯಬಹುದು ಎಂದು ಹೆಚ್ಚಿನ ತಜ್ಞರು ಅಂದಾಜಿಸಿದ್ದರು. ಆದರೆ, ಎಲ್ಲರ ನಿರೀಕ್ಷೆ ಹುಸಿಯಾಗುವ ರೀತಿಯಲ್ಲಿ ಜಿಡಿಪಿ ದರ ಇದೆ. ಇಂದು ಶುಕ್ರವಾರ ಸರ್ಕಾರವೇ ಬಿಡುಗಡೆ ಮಾಡಿದ ಅಧಿಕೃತ ದತ್ತಾಂಶದಲ್ಲಿ ಈ ಮಾಹಿತಿ ಇದೆ.

‘ಎರಡನೇ ಕ್ವಾರ್ಟರ್​ನಲ್ಲಿ ಜಿಡಿಪಿ ಶೇ. 5.4ರಷ್ಟು ಬೆಳೆದಿರಬಹುದು ಎಂದು ಅಂದಾಜಿಸಲಾಗಿದೆ. ಹಿಂದಿನ ಹಣಕಾಸು ವರ್ಷದ (2023-24) ಎರಡನೇ ಕ್ವಾರ್ಟರ್​ನಲ್ಲಿ ಜಿಡಿಪಿ ಶೇ. 8.1ರಷ್ಟು ಬೆಳೆದಿತ್ತು’ ಎಂದು ಹಣಕಾಸು ಸಚಿವಾಲಯ ಇಂದು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಭಾರತದಲ್ಲಿ ಸಹಕಾರಿ ಮತ್ತು ಫ್ರೀಲ್ಯಾನ್ಸ್ ಕ್ಷೇತ್ರಗಳಲ್ಲಿ 20 ಕೋಟಿ ಉದ್ಯೋಗಗಳ ಸೃಷ್ಟಿ ನಿರೀಕ್ಷೆ

ಹಿಂದಿನ ಕ್ವಾರ್ಟರ್​ನಲ್ಲಿ, ಅಂದರೆ 2024ರ ಏಪ್ರಿಲ್​ನಿಂದ ಜೂನ್​ವರೆಗಿನ ಕ್ವಾರ್ಟರ್​ನಲ್ಲಿ ಜಿಡಿಪಿ ಶೇ. 6.7ರಷ್ಟು ಹೆಚ್ಚಳ ಆಗಿತ್ತು. ವರ್ಷದ ಹಿಂದಿನ ಕ್ವಾರ್ಟರ್​ನಲ್ಲಿ ಶೇ. 8.1ರಷ್ಟು ಹೆಚ್ಚಳ ಆಗಿತ್ತು. ಎರಡಕ್ಕೂ ಹೋಲಿಸಿದರೆ ಈ ಬಾರಿಯ ಜಿಡಿಪಿ ದರ ಬಹಳ ಕಡಿಮೆಗೊಂಡಿದೆ.

ಶೇ. 6ಕ್ಕಿಂತಲೂ ಕಡಿಮೆ ಇದ್ದರೂ ಭಾರತದ ಜಿಡಿಪಿ ದರ ವಿಶ್ವದಲ್ಲಿ ಗರಿಷ್ಠ ಎನಿಸಿದೆ. ಪ್ರಮುಖ ಆರ್ಥಿಕತೆಗಳ ಪೈಕಿ ಭಾರತವೇ ಅತಿಹೆಚ್ಚು ಬೆಳವಣಿಗೆ ತೋರಿದೆ. ಜುಲೈನಿಂದ ಸೆಪ್ಟೆಂಬರ್ ಕ್ವಾರ್ಟರ್​ನಲ್ಲಿ ಅಮೆರಿಕದ ಜಿಡಿಪಿ ಶೇ. 2.8ರಷ್ಟು ಬೆಳೆದಿದೆ. ಬ್ರಿಟನ್ ದೇಶದ ಆರ್ಥಿಕತೆ ಹಿಗ್ಗಿರುವುದು 10 ಮೂಲಾಂಕಗಳಷ್ಟು ಮಾತ್ರವೇ. ಇನ್ನು, ಚೀನಾದ ಆರ್ಥಿಕತೆ ಶೇ. 4.6ರಷ್ಟು ಬೆಳೆದರೆ ಜಪಾನ್ ಜಿಡಿಪಿ ಬೆಳವಣಿಗೆ ಶೇ. 1ಕ್ಕಿಂತಲೂ ಕಡಿಮೆಯೇ ಇದೆ.

ಇದನ್ನೂ ಓದಿ: ಮೋದಿ ನಾಯಕತ್ವದಲ್ಲಿ ಭಾರತದಲ್ಲಿ ಒಳ್ಳೆಯ ಕೆಲಸಗಳಾಗುತ್ತಿವೆ: ಜಾಗತಿಕ ಹೂಡಿಕೆದಾರ ಜಿಮ್ ರೋಜರ್ಸ್ ಅನಿಸಿಕೆ

ಕೋವಿಡ್ ಬರುವವರೆಗೂ ಮೂರ್ನಾಲ್ಕು ದಶಕಗಳ ಕಾಲ ನಿರಂತರವಾಗಿ ಉನ್ನತ ಮಟ್ಟದ ಜಿಡಿಪಿ ಬೆಳವಣಿಗೆ ಕಂಡಿದ್ದ ಚೀನಾ ಈ ವರ್ಷ ಶೇ. 5ರಷ್ಟು ಆರ್ಥಿಕ ಬೆಳವಣಿಗೆ ಕಂಡರೆ ಅದೇ ಹೆಚ್ಚು ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More