UPI Payments: ಯುಪಿಐ ಅಳವಡಿಕೆಗೆ 13 ರಾಷ್ಟ್ರಗಳ ಒಲವು; ಅಶ್ವಿನಿ ವೈಷ್ಣವ್

|

Updated on: Feb 14, 2023 | 2:37 PM

ಪ್ರಪಂಚದಾದ್ಯಂತ, ಕೆಲವೇ ಕೆಲವು ಕಂಪನಿಗಳು ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಏಕಸ್ವಾಮ್ಯಗೊಳಿಸಿರುವುದನ್ನು ನೀವು ಕಾಣುತ್ತಿದ್ದೀರಿ. ಆದರೆ, ಭಾರತದಲ್ಲಿ ನಾವು ವ್ಯವಸ್ಥೆಯನ್ನು ಮುಕ್ತವಾಗಿರಿಸಿದ್ದೇವೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

UPI Payments: ಯುಪಿಐ ಅಳವಡಿಕೆಗೆ 13 ರಾಷ್ಟ್ರಗಳ ಒಲವು; ಅಶ್ವಿನಿ ವೈಷ್ಣವ್
ಪ್ರಾತಿನಿಧಿಕ ಚಿತ್ರ
Image Credit source: financialexpress.com
Follow us on

ನವದೆಹಲಿ: ದೇಶದ ಏಕೀಕೃತ ಪಾವತಿ ವ್ಯವಸ್ಥೆ ಅಥವಾ ಯೂನಿಫೈಡ್ ಪೇಮೆಂಟ್ಸ್ ಇಂಟರ್​​ಫೇಸ್ (UPI) ಡಿಜಿಟಲ್ ಪಾವತಿ ವ್ಯವಸ್ಥೆ ಅಳವಡಿಸಿಕೊಳ್ಳಲು 13 ರಾಷ್ಟ್ರಗಳು ಒಲವು ತೋರಿಸಿವೆ. ಈ ವಿಚಾರವಾಗಿ ಸಾಮನ್ಯ ಜ್ಞಾಪನಾ ಪತ್ರಕ್ಕೆ (MoUs) ಸಹಿ ಹಾಕಿವೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ತಿಳಿಸಿದ್ದಾರೆ. ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಜಿ20 ಸದಸ್ಯ ರಾಷ್ಟ್ರಗಳ ಡಿಜಿಟಲ್ ಆರ್ಥಿಕತೆ ಕಾರ್ಯಕಾರಿ ಸಮಿತಿಯ ಸಭೆಯ ಬಳಿಕ ಅವರು ಈ ಮಾಹಿತಿ ನೀಡಿದ್ದಾರೆ. ಸಿಂಗಾಪುರ ಈಗಾಗಲೇ ಯುಪಿಐ ಅಳವಡಿಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಳಿಸಿದೆ ಎಂದು ಅವರು ಹೇಳಿದ್ದಾರೆ. ‘ಪ್ರಪಂಚದಾದ್ಯಂತ, ಕೆಲವೇ ಕೆಲವು ಕಂಪನಿಗಳು ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಏಕಸ್ವಾಮ್ಯಗೊಳಿಸಿರುವುದನ್ನು ನೀವು ಕಾಣುತ್ತಿದ್ದೀರಿ. ಆದರೆ, ಭಾರತದಲ್ಲಿ ನಾವು ವ್ಯವಸ್ಥೆಯನ್ನು ಮುಕ್ತವಾಗಿರಿಸಿದ್ದೇವೆ’ ಎಂದು ಸಚಿವರು ಹೇಳಿದ್ದಾರೆ.

‘ಗೂಗಲ್ ಕೂಡ ತನ್ನದೇ ಆದ ಪಾವತಿ ವ್ಯವಸ್ಥೆಯನ್ನು ಬಿಟ್ಟು ಯುಪಿಐ ಅಳವಡಿಸಿಕೊಂಡಿದೆ. ಅಮೆರಿಕದ ಫೆಡ್​​ಗೆ ಪತ್ರ ಬರೆದು, ಭಾರತದ ಪಾವತಿ ವ್ಯವಸ್ಥೆ ಪ್ರಜಾಪ್ರಭುತ್ವದ ತಳಹದಿಯಲ್ಲಿ ರೂಪುಗೊಂಡಿದೆ ಎಂದು ಉಲ್ಲೇಖಿಸಿದೆ. 2 ರೂ.ಗಳಿಂದ 2 ಲಕ್ಷ ರೂ.ವರೆಗೆ ಪಾವತಿ ಮಾಡಬಹುದಾಗಿದ್ದು, ಸರಾಸರಿ ಪಾವತಿ ಸಮಯ 2 ಸೆಕೆಂಡ್​ ಅಷ್ಟೇ ಇದೆ’ ಎಂದು ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: PhonePe: ಫೋನ್​ಪೇ ಮೂಲಕ ಇನ್ನು ವಿದೇಶಗಳಲ್ಲೂ ಹಣ ಪಾವತಿ ಮಾಡಬಹುದು

22ನೇ ಹಣಕಾಸು ವರ್ಷದಲ್ಲಿ ನಡೆದ ಒಟ್ಟಾರೆ ಹಣ ವಹಿವಾಟಿನಲ್ಲಿ ಶೇ 52ರಷ್ಟು ಯುಪಿಐ ಮೂಲಕ ನಡೆದಿದೆ ಎಂದು ಬಜೆಟ್​ಗೂ ಮುನ್ನ ಮಂಡನೆ ಮಾಡಿದ ಆರ್ಥಿಕ ಸಮೀಕ್ಷಾ ವರದಿಯಲ್ಲಿ ಸರ್ಕಾರ ತಿಳಿಸಿತ್ತು. 19ನೇ ಹಣಕಾಸು ವರ್ಷದಲ್ಲಿ ಯುಪಿಐ ವಹಿವಾಟು ಕೇವಲ ಶೇ 17ರಷ್ಟಿತ್ತು. ವರ್ಷದಿಂದ ವರ್ಷಕ್ಕೆ ಯುಪಿಐ ಜನಪ್ರಿಯತೆ ಹೆಚ್ಚುತ್ತಿರುವುದನ್ನು ಇದು ಸೂಚಿಸಿದೆ.

ವಿದೇಶಗಳಲ್ಲೂ ಹಣ ಪಾವತಿಗೆ ಫೋನ್​ಪೇ ಅವಕಾಶ

ಯುಪಿಐಯಲ್ಲಿ ಅತಿದೊಡ್ಡ ಪಾಲು ಹೊಂದಿರುವ ಫೋನ್​ಪೇ ಈಗಾಗಲೇ ವಿದೇಶಗಳಲ್ಲಿ ಹಣ ಪಾವತಿಗೆ ಅನುವು ಮಾಡಿಕೊಟ್ಟಿದೆ. ಪ್ರಸ್ತುತ ಯುಎಇ, ಸಿಂಗಾಪುರ, ಮಾರಿಷಸ್, ನೇಪಾಳ ಹಾಗೂ ಭೂತಾನ್​​ನಲ್ಲಿ ಫೋನ್​ಪೇ ಸ್ಥಳೀಯ ಕ್ಯುಆರ್ ಕೋಡ್ ವ್ಯವಸ್ಥೆ ಮೂಲಕ ಕಾರ್ಯನಿರ್ವಹಿಸುತ್ತಿದೆ. ಇದರಿಂದ ವಿದೇಶ ಪ್ರಯಾಣ ಕೈಗೊಳ್ಳುವವರಿಗೆ ಪಾವತಿ ಮತ್ತಷ್ಟು ಸುಲಭವಾಗಲಿದೆ. ಬಳಕೆದಾರನ ಬ್ಯಾಂಕ್ ಖಾತೆಯಿಂದ ವಿದೇಶಿ ಕರೆನ್ಸಿ ಪಾವತಿಯಾಗಲಿದೆ. ಇದು ಅಂತಾರಾಷ್ಟ್ರೀಯ ಡೆಬಿಟ್ ಕಾರ್ಡ್ ಟ್ರಾನ್ಸಾಕ್ಷನ್​​​ನಂತೆಯೇ ಕಾರ್ಯನಿರ್ವಹಿಸಲಿದೆ ಎಂದು ಫೋನ್​ಪೇ ಕಳೆದ ವಾರ ತಿಳಿಸಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ