
ಪುಣೆ, ಜನವರಿ 13: ಭಾರತದ ಆರ್ಥಿಕ ಬೆಳವಣಿಗೆಗೆ ಉತ್ಪಾದನಾ ಕ್ಷೇತ್ರದ (Manufacturing sector) ಕೊಡುಗೆ ಬಹಳ ಮುಖ್ಯ. ಭಾರತವು ಸೇವಾ ಕ್ಷೇತ್ರದ ಮೇಲಿನ ಅವಲಂಬನೆ ಕಡಿಮೆ ಮಾಡಿ, ಉತ್ಪಾದನಾ ಕ್ಷೇತ್ರಕ್ಕೆ ಗಮನ ಕೊಡಬೇಕು. ಭಾರತವು ಸೇವಾ ಮನೋಭಾವ ಬಿಟ್ಟು ಉತ್ಪಾದಕ ಮನೋಭಾವ ತಳೆಯಬೇಕು ಎಂದು ಭಾರತ್ ಫೋರ್ಜ್ ಕಂಪನಿಯ ಛೇರ್ಮನ್ ಮತ್ತು ಎಂಡಿಯಾದ ಬಾಬಾ ಕಲ್ಯಾಣಿ (Baba Kalyani) ಕರೆ ನೀಡಿದ್ದಾರೆ.
ಮಹಾರಾಷ್ಟ್ರದ ಪುಣೆ ನಗರದಲ್ಲಿ ನಡೆದ ಪಬ್ಲಿಕ್ ಪಾಲಿಸಿ ಫೆಸ್ಟಿವಲ್ 2026 ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಬಾಬಾ ಕಲ್ಯಾಣಿ ಅವರು, ಜಿಡಿಪಿಗೆ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್ನ ಕೊಡುಗೆ ಎರಡು ಪಟ್ಟು ಹೆಚ್ಚಬೇಕು ಎನ್ನುವ ಸಲಹೆ ನೀಡಿದ್ದಾರೆ. ಜಿಡಿಪಿಗೆ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್ನ ಕೊಡುಗೆ ಶೇ. 15 ಇತ್ತು. ಇದು ಈಗ ಶೇ.. 13ಕ್ಕೆ ಇಳಿಕೆಯಾಗಿದೆ. ಇದು ಶೇ. 25ಕ್ಕೆ ಹೆಚ್ಚಬೇಕು ಎಂದೂ ಅವರು ಅಭಿಪ್ರಾಯಪಟ್ಟಿದ್ಧಾರೆ.
ಇದನ್ನೂ ಓದಿ: ಭಾರತ-ಅಮೆರಿಕದ ಮಧ್ಯೆ ಮುಖ್ಯ ಖನಿಜಗಳ ವಿಚಾರಕ್ಕೆ ಸಭೆ; ಭಾರತಕ್ಕೇನು ಲಾಭ?
‘ದೀರ್ಘಕಾಲ ನಾವು ಸರ್ವಿಸಸ್ ಮೇಲೆ ಗಮನ ಹರಿಸಿದ್ದೇವೆ. ಉತ್ಪನ್ನಗಳನ್ನು ಸೃಷ್ಟಿಸುವುದು ಹೇಗೆಂದು ನಾವು ಕಲಿಯಬೇಕು. ವಿದೇಶೀ ಕಂಪನಿಗಳಿಗೆ ಸೇವೆ ನೀಡುತ್ತಾ ಹೋದರೆ ಭಾರತವೇನೂ ಪ್ರಗತಿ ಹೊಂದುವುದಿಲ್ಲ. ಭಾರತೀಯ ಕಂಪನಿಗಳು ಐಟಿ ಸರ್ವಿಸ್ನಲ್ಲಿ ಯಶಸ್ವಿಯಾದರೂ ಯಾರೂ ಕೂಡ ಒಂದೇ ಒಂದು ಉತ್ಪನ್ನ ಅಭಿವೃದ್ಧಿಪಡಿಸಿಲ್ಲ. ಈ ಕಂಪನಿಗಳು ಟ್ಯಾಕ್ಸ್ ಸೌಲಭ್ಯ ಪಡೆಯುವುದರಲ್ಲೇ ತೃಪ್ತವಾಗುತ್ತವೆ. ಇನ್ನೋವೇಶನ್ಗೆ ಪ್ರಯತ್ನಿಸುತ್ತಿಲ್ಲ’ ಎಂದು ಭಾರತ್ ಫೋರ್ಜ್ ಕಂಪನಿಯ ಮುಖ್ಯಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ದೇಶಕ್ಕೆ ಈಗ ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಸಾಕಾಗಲ್ಲ, ಸ್ಪೀಡ್ ಆಫ್ ಡೂಯಿಂಗ್ ಬ್ಯುಸಿನಸ್ ಬೇಕು ಎಂದು ಹೇಳುವ ಬಾಬಾ ಕಲ್ಯಾಣಿ, ಈ ವಿಚಾರದಲ್ಲಿ ಚಂದ್ರಬಾಬು ನಾಯ್ಡು ಅವರ ಧೋರಣೆಯನ್ನು ಎತ್ತಿ ತೋರಿಸಿದ್ದಾರೆ. ಆಂಧ್ರಪ್ರದೇಶದಲ್ಲಿ ತಮ್ಮ ಭಾರತ್ ಫೋರ್ಜ್ ಕಂಪನಿಗೆ ಬೃಹತ್ ಘಟಕ ನಿರ್ಮಿಸಲು 1,000 ಎಕರೆ ಜಾಗವನ್ನು ಕೇವಲ 15 ದಿನದಲ್ಲಿ ವ್ಯವಸ್ಥೆ ಮಾಡಿದ ಸಂಗತಿಯನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಜರ್ಮನಿ ಅಧ್ಯಕ್ಷ ಫ್ರೆಡರಿಚ್ ಮೆರ್ಜ್ ಮತ್ತು ನರೇಂದ್ರ ಮೋದಿಯಿಂದ ಸಿಇಒಗಳ ಸಭೆ
ಭಾರತ್ ಫೋರ್ಜ್ ಒಂದು ಕಾಲದಲ್ಲಿ ಫೋರ್ಜಿಂಗ್ ಸರ್ವಿಸ್ಗೆ ಸೀಮಿತವಾಗಿತ್ತು. ನಂತರ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ಕ್ರಮೇಣವಾಗಿ ವಿಸ್ತರಣೆ ಹೊಂದುತ್ತಾ ಬಂದಿದೆ. ಎಲೆಕ್ಟ್ರಾನಿಕ್ಸ್, ಡಿಫೆನ್ಸ್, ಡ್ರೋನ್ ಉತ್ಪನ್ನಗಳನ್ನು ತಯಾರಿಸುತ್ತಿದೆ. ಬೆಂಜ್, ಟೊಯೊಟಾ, ಹೊಂಡಾ, ವೋಲ್ವೋ, ಫೋರ್ಡ್, ಜನರಲ್ ಮೋಟಾರ್ಸ್ ಮೊದಲಾದ ಒಇಎಂಗಳಿಗೆ (ವಾಹನ ತಯಾರಕರು) ಬಿಡಿಭಾಗಗಳನ್ನು ತಯಾರಿಸಿ ಸರಬರಾಜು ಮಾಡುತ್ತದೆ. ರಾಲ್ಸ್ ರಾಯ್ಸ್ ಕಂಪನಿಗೆ ಟರ್ಬೈನ್ ಬ್ಲೇಡ್ ಮತ್ತು ಶಾಫ್ಟ್ಗಳನ್ನು ತಯಾರಿಸುತ್ತದೆ. ಏರ್ಬಸ್ ಕಂಪನಿಗೆ ಲ್ಯಾಂಡಿಂಗ್ ಗೇರ್ ತಯಾರಿಸಿಕೊಡುತ್ತದೆ. ಭಾರತದ ಸೇನೆಗೆ ಹಲವು ಮಿಲಿಟರಿ ಉತ್ಪನ್ನಗಳನ್ನೂ ತಯಾರಿಸುತ್ತದೆ. ಬಾಬಾ ಕಲ್ಯಾಣಿ ಅವರು ತಮ್ಮ ಕಂಪನಿ ಎಷ್ಟು ಗಣನೀಯವಾಗಿ ಬೆಳೆದಿದೆ ಎಂಬುದಕ್ಕೆ ಉದಾಹರಣೆಯಾಗಿ, ಹೇಗೆ ಜರ್ಮನ್ ಮತ್ತು ಜಪಾನೀ ಕಂಪನಿಗಳು ಭಾರತ್ ಫೋರ್ಜ್ನ ಸ್ಪರ್ಧೆ ಎದುರಿಸಲು ಕಷ್ಟಪಡುತ್ತಿವೆ ಎಂಬುದನ್ನು ತಿಳಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ