Blinkit:ಹತ್ತು ನಿಮಿಷಗಳಲ್ಲಿ ಮನೆ ಮನೆಗೆ ಡೆಲಿವರಿ ವ್ಯವಸ್ಥೆ ಕೈಬಿಟ್ಟ ಬ್ಲಿಂಕಿಟ್
ಗಿಗ್ ಕಾರ್ಮಿಕರ ಮುಷ್ಕರ ಮತ್ತು ಸುರಕ್ಷತೆಯ ಕಳವಳಗಳ ಹಿನ್ನೆಲೆಯಲ್ಲಿ ಬ್ಲಿಂಕಿಟ್ ತನ್ನ 10 ನಿಮಿಷಗಳ ಮನೆ ಮನೆಗೆ ಡೆಲಿವರಿ ವ್ಯವಸ್ಥೆಯನ್ನು ಕೈಬಿಟ್ಟಿದೆ. ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ ಮಧ್ಯ ಪ್ರವೇಶಿಸಿ, ಕಂಪನಿಗಳಿಗೆ ವಿತರಣಾ ಸಮಯದ ಮಿತಿಗಳನ್ನು ತೆಗೆದುಹಾಕಲು ಸಲಹೆ ನೀಡಿದ ನಂತರ ಈ ನಿರ್ಧಾರ ಬಂದಿದೆ. ಇತರ ಆನ್ಲೈನ್ ಆ್ಯಪ್‌ಗಳೂ ಇಂತಹ ಬದ್ಧತೆಗಳನ್ನು ತೆಗೆಯಲು ಒಪ್ಪಿವೆ.

ನವದೆಹಲಿ, ಜನವರಿ 13: ಕೇವಲ ಹತ್ತು ನಿಮಿಷಗಳಲ್ಲಿ ಮನೆ ಮನೆಗೆ ವಸ್ತುಗಳನ್ನು ಡೆಲಿವರಿ ಮಾಡುವ ವ್ಯವಸ್ಥೆಯನ್ನು ಬ್ಲಿಂಕಿಟ್(Blinkit) ಕೈಬಿಟ್ಟಿದೆ. ಉದ್ಯೋಗ ಮತ್ತು ಸಾಮಾಜಿಕ ಭದ್ರತೆಗೆ ಒತ್ತಾಯಿಸಿ ಇತ್ತೀಚಿಗೆ ಡಿ. 31ರಂದು ಸ್ವಿಗ್ಗಿ, ಜೊಮ್ಯಾಟೋ, ಪ್ಲಿಪ್ಕಾರ್ಟ್, ಬ್ಲಿಂಕಿಟ್ ಸೇರಿ ಆನ್ಲೈನ್ ಆ್ಯಪ್ಗಳ ಗಿಗ್ ಕಾರ್ಮಿಕರು ಮುಷ್ಕರ ನಡೆಸಿದ್ದರು.
ಮುಷ್ಕರ ಅಷ್ಟೇನೂ ಪ್ರಭಾವ ಬೀರದಿದ್ದರು, ಕೆಲವು ಬದಲಾವಣೆ ಮಾಡಲು ಕಂಪನಿಗಳು ಒಪ್ಪಿಕೊಂಡಿತ್ತು. ಇನ್ನು ಕಾರ್ಮಿಕರು 10 ನಿಮಿಷಗಳ ವಿತರಣಾ ಆಯ್ಕೆಯನ್ನು ತೆಗೆಯುವಂತೆ ಬೇಡಿಕೆಯನ್ನು ಇಟ್ಟಿದ್ದರು. ಹತ್ತು ನಿಮಿಷಗಳ ವಿತರಣಾ ಮಾದರಿಯಿಂದಾಗಿ ಸವಾರರು ತೀವ್ರ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಅವರ ಸುರಕ್ಷತೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಸಾರ್ವಜನಿಕರಿಂದ ಈ ಬಗ್ಗೆ ಚರ್ಚೆ ನಡೆದಿತ್ತು.
ಈ ವಿಚಾರದಲ್ಲಿ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ ಮಧ್ಯ ಪ್ರವೇಶಿಸಿದ್ದು, ನಂತರ ಬ್ಲಿಂಕಿಟ್ ಎಲ್ಲಾ ಬ್ರ್ಯಾಂಡ್ ಪ್ಲ್ಯಾಟ್ಫಾರಂಗಳಿಂದ ತನ್ನ 10 ನಿಮಿಷಗಳ ಡೆಲಿವರಿ ವ್ಯವಸ್ಥೆಯನ್ನು ತೆಗೆದುಹಾಕಿದೆ. ಮಾಂಡವಿಯಾ ಅವರು ಬ್ಲಿಂಕಿಟ್, ಜೆಪ್ಟೊ, ಸ್ವಿಗ್ಗಿ ಮತ್ತು ಜೊಮಾಟೊ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನಂತರ, ಕಾರ್ಮಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಕಟ್ಟುನಿಟ್ಟಾದ ವಿತರಣಾ ಸಮಯದ ಮಿತಿಗಳನ್ನು ತೆಗೆದುಹಾಕುವಂತೆ ಕಂಪನಿಗಳಿಗೆ ಸಲಹೆ ನೀಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಮತ್ತಷ್ಟು ಓದಿ: ತಡರಾತ್ರಿ ಇಲಿ ಪಾಷಾಣ ಆರ್ಡರ್ ಮಾಡಿದ ಮಹಿಳೆಯ ಜೀವ ಉಳಿಸಿದ ಡೆಲಿವರಿ ಬಾಯ್!
ನಾಲ್ಕು ಕಂಪನಿಗಳು ತಮ್ಮ ಬ್ರ್ಯಾಂಡ್ ಜಾಹೀರಾತುಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ವಿತರಣಾ ಸಮಯದ ಬದ್ಧತೆಗಳನ್ನು ತೆಗೆದುಹಾಕುವುದಾಗಿ ಸರ್ಕಾರಕ್ಕೆ ಭರವಸೆ ನೀಡಿವೆ. ಹೊಸ ವರ್ಷದ ದಿನದಂದು ಗಿಗ್ ಕಾರ್ಮಿಕರ ಮುಷ್ಕರದ ನಡುವೆಯೂ ಜೊಮಾಟೊ ಮತ್ತು ಬ್ಲಿಂಕಿಟ್ ಒಟ್ಟಾಗಿ ದಾಖಲೆಯ 75 ಲಕ್ಷ ಆರ್ಡರ್‌ಗಳನ್ನು ಗ್ರಾಹಕರಿಗೆ ತಲುಪಿಸಿವೆ ಎನ್ನಲಾಗಿದೆ.
ಬ್ಲಿಂಕಿಟ್‌ನಲ್ಲಿ ಸ್ವೀಕರಿಸಿದ ಆರ್ಡರ್ ಅನ್ನು ಪ್ಯಾಕ್ ಮಾಡಲು 2.5 ನಿಮಿಷಗಳು ಬೇಕಾಗುತ್ತದೆ. ಅಲ್ಲಿಂದ ವಿತರಣೆಯ ಅಂತರ 2 ಕಿ.ಮೀ ಇದೆ. ನೀವು ಗಂಟೆಗೆ 15 ಕಿ.ಮೀ ವೇಗದಲ್ಲಿ ಪ್ರಯಾಣಿಸಿದರೂ, ನೀವು 8 ನಿಮಿಷಗಳಲ್ಲಿ ಸ್ಥಳವನ್ನು ತಲುಪಬಹುದು. ಇದಲ್ಲದೆ, ತಡವಾಗಿ ವಿತರಣೆ ಮಾಡಿದರೆ ತಮ್ಮ ಏಜೆಂಟರಿಗೆ ದಂಡ ವಿಧಿಸಲಾಗುವುದಿಲ್ಲ ಎಂದು ಹೇಳಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:39 pm, Tue, 13 January 26




