ದಳಪತಿಯಿಂದ ಬಿಜೆಪಿ ದೂರ ಉಳಿದಿದ್ದು ಯಾಕೆ? ರಜನೀ ವಿರುದ್ಧ ಟಿವಿಕೆ ಆಡಿದ ಆ ಒಂದು ಮಾತು ಕಾರಣವಾ?
TVK leader's statement on Rajinikanth made NDA stop reaching to Vijay's party: ದಳಪತಿ ವಿಜಯ್ ಅವರ ಟಿವಿಕೆ ಪಕ್ಷದೊಂದಿಗೆ ಎನ್ಡಿಎ ಮೈತ್ರಿ ಮಾಡಿಕೊಳ್ಳಲು ಮುಂದಾಗಿತ್ತು. ಆದರೆ, ಟಿವಿಕೆ ಪಕ್ಷದ ಮುಖಂಡರೊಬ್ಬರು ರಜನೀಕಾಂತ್ ಬಗ್ಗೆ ಆಡಿದ ಆ ಒಂದು ಮಾತು, ಈ ಮೈತ್ರಿ ಸಾಧ್ಯತೆಯನ್ನು ದೂರ ಮಾಡಿತು ಎನ್ನಲಾಗಿದೆ. ಡಿಎಂಕೆ ಬೆದರಿಕೆಗೆ ಬಗ್ಗೆ ರಜನೀ ರಾಜಕೀಯ ಪ್ರವೇಶ ಮಾಡಲಿಲ್ಲ ಎಂದು ಟಿವಿಕೆ ಮುಖಂಡ ಹೇಳಿದ್ದು ಎಐಎಡಿಎಂ, ಬಿಜೆಪಿ ಮುಖಂಡರಿಗೆ ಪಥ್ಯವೆನಿಸಿಲ್ಲ.

ಚೆನ್ನೈ, ಮಾರ್ಚ್ 17: ಕಾಲಿವುಡ್ ಸ್ಟಾರ್ ದಳಪತಿ ವಿಜಯ್ ಕಟ್ಟಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಜೊತೆ ಎನ್ಡಿಎ ಮೈತ್ರಿ ಮಾಡಿಕೊಳ್ಳಬಹುದು ಎಂದು ಹಲವು ದಿನಗಳ ಕಾಲ ಹರಿದಾಡಿದ್ದ ಸುದ್ದಿ, ಹಾಗೆಯೇ, ತಣ್ಣಗಾಗಿ ಹೋಗಿದೆ. ಯಾಕೆ ಈ ಮೈತ್ರಿ ಸಾಧ್ಯತೆಯ ಸುದ್ದಿ ನಿಂತು ಹೋಯಿತು ಎನ್ನುವುದು ಕುತೂಹಲದ ಸಂಗತಿ ಎನಿಸಿದೆ. ವರದಿಗಳ ಪ್ರಕಾರ, ಟಿವಿಕೆ ಪಕ್ಷದ ಮುಖಂಡರೊಬ್ಬರು ಸೂಪರ್ಸ್ಟಾರ್ ರಜನೀಕಾಂತ್ ವಿಚಾರದಲ್ಲಿ ಆಡಿದ ಆ ಒಂದು ಮಾತು ಎನ್ಡಿಎ ಪಾಳಯಕ್ಕೆ ಅಸಮಾಧಾನ ತಂದಿತು ಎನ್ನಲಾಗಿದೆ.
ರಜನೀಕಾಂತ್ ಬಗ್ಗೆ ಟಿವಿಕೆ ಮುಖಂಡ ಹೇಳಿದ್ದಿದು…
ಕೆಲ ದಿನಗಳ ಹಿಂದೆ ಟಿವಿಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಆಧವ್ ಅರ್ಜುನ ಅವರು ರಜನೀಕಾಂತ್ ರಾಜಕೀಯ ಪ್ರಯತ್ನವನ್ನು ಲೇವಡಿ ಮಾಡುವ ರೀತಿಯಲ್ಲಿ ಹೇಳಿಕೆ ನೀಡಿದ್ದರು. ಡಿಎಂಕೆ ಬಲಿಷ್ಠರಿಂದ ಬೆದರಿಕೆ ಬಂದಿದ್ದರಿಂದ ರಜನೀಕಾಂತ್ ಅವರು ರಾಜಕೀಯ ಪ್ರವೇಶದ ನಿರ್ಧಾರದಿಂದ ಹಿಂದಕ್ಕೆ ಸರಿದಿದ್ದರು ಎಂದು ಟಿವಿಕೆ ಮುಖಂಡ ಹೇಳಿದ್ದರು. ಡಿಎಂಕೆಯ ಬೆದರಿಕೆಗೆ ರಜನೀಕಾಂತ್ ಬಗ್ಗಿದರೂ, ತಮ್ಮ ನಾಯಕ ದಳಪತಿ ವಿಜಯ್ ಬಗ್ಗಿಲ್ಲ ಎಂಬಂತೆ ಆ ಹೇಳಿಕೆ ಬಿಂಬಿತವಾಗಿತ್ತು.
ಇದನ್ನೂ ಓದಿ: ರಾಜ್ಯಸಭಾ ಚುನಾವಣೆಯಲ್ಲಿ ಬಿಹಾರ, ಒಡಿಶಾದಲ್ಲಿ ಎನ್ಡಿಎಗೆ ಭರ್ಜರಿ ಗೆಲುವು; ಕಾಂಗ್ರೆಸ್ಗೆ ಮುಖಭಂಗ
ದಳಪತಿ ವಿಜಯ್ ಅವರನ್ನು ಹೊಗಳುವ ಭರದಲ್ಲಿ ರಜನೀಕಾಂತ್ಗೆ ಅವಹೇಳನ ಮಾಡಲಾಗಿದೆ ಎಂಬುದು ಎನ್ಡಿಎ ಮೈತ್ರಿಕೂಟದ ಬಿಜೆಪಿ ಹಾಗೂ ಎಐಎಡಿಎಂ ಪಕ್ಷಗಳ ಮುಖಂಡರ ಅಸಮಾಧಾನ. ‘ರಜನೀಕಾಂತ್ ಬಹಳ ಗೌರವ ಪಡೆದಿರುವ ವ್ಯಕ್ತಿ. ಅವರ ಘನತೆಗೆ ಕುಂದು ತರುವ ರೀತಿಯಲ್ಲಿ ಮಾತನಾಡಿರುವುದನ್ನು ಸ್ವೀಕರಿಸಲು ಆಗುವುದಿಲ್ಲ. ರಾಜಕೀಯ ಪ್ರವೇಶಿಸುವುದು ಒಬ್ಬ ವ್ಯಕ್ತಿಯ ಹಕ್ಕು. ರಾಜಕೀಯ ಪ್ರವೇಶ ಮಾಡದಿರುವುದೂ ಕೂಡ ಅವರ ಹಕ್ಕೇ. ಅವರು ತಮ್ಮ ನಿರ್ಧಾರದ ಹಿಂದಿನ ಕಾರಣಗಳನ್ನು ತಿಳಿಸಿದ್ದಾರೆ. ಅದನ್ನು ಗೌರವಿಸಬೇಕು’ ಎಂದು ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಪಳನಿಸ್ವಾಮಿ ಹೇಳಿದ್ದಾರೆ.
ಬಿಜೆಪಿ ನಾಯಕ ಕೆ ಅಣ್ಣಾಮಲೈ ಕೂಡ ಟಿವಿಕೆ ಮುಖಂಡನ ಹೇಳಿಕೆಯನ್ನು ಖಂಡಿಸಿದ್ದಾರೆ. ಒಬ್ಬ ಸೂಪರ್ಸ್ಟಾರ್ 50ಕ್ಕೂ ಹೆಚ್ಚು ವರ್ಷ ತನ್ನ ಸ್ಟಾರ್ ಪಟ್ಟವನ್ನು ಉಳಿಸಿಕೊಳ್ಳುತ್ತಿರುವುದು ಆತನ ಮಾನಸಿಕ ಸ್ಥೈರ್ಯವನ್ನು ತೋರಿಸುತ್ತದೆ ಎಂದು ಅಣ್ಣಾಮಲೈ ತಿಳಿಸಿದ್ದಾರೆ.
ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಿಂದ ಗುಜರಾತ್ಗೆ ಬಂದ ಭಾರತದ ಎರಡನೇ ಎಲ್ಪಿಜಿ ಟ್ಯಾಂಕರ್ ನಂದಾದೇವಿ
ರಜನೀಕಾಂತ್ ಅವರು ಕೆಲ ವರ್ಷಗಳ ಹಿಂದೆ ಸಕ್ರಿಯ ರಾಜಕಾರಣ ಪ್ರವೇಶ ಮಾಡಲು ಯೋಚಿಸುತ್ತಿರುವುದಾಗಿ ಹೇಳಿದ್ದರು. ಆದರೆ, ಕೆಲ ದಿನಗಳ ನಂತರ ತಮ್ಮ ನಿರ್ಧಾರವನ್ನು ಕೈಬಿಟ್ಟಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
