ಮುಂಬೈ, ಅಕ್ಟೋಬರ್ 27: ಐಟಿ ವೆಚ್ಚ ತಗ್ಗಿಸುವ ಬ್ಯಾಕ್ ಆಫೀಸ್ ಉದ್ಯಮದಿಂದ ಎಐ ಶಕ್ತ ಇನ್ನೋವೇಶನ್ ಇಕೋಸ್ಟಂ ಇರುವ ಫ್ರಂಟ್ ಆಫೀಸ್ ಉದ್ಯಮಕ್ಕೆ ಬದಲಾಗುವ ಅವಕಾಶ ಭಾರತಕ್ಕೆ ಇದೆ ಎಂದು ವಿಶ್ವದ ಅತಿದೊಡ್ಡ ಚಿಪ್ ತಯಾರಕ ಸಂಸ್ಥೆ ನಿವಿಡಿಯಾದ ಸಿಇಒ ಜೆನ್ಸೆನ್ ಹುವಾಂಗ್ ಅಭಿಪ್ರಾಯಪಟ್ಟಿದ್ದಾರೆ. ಎಐ ಸಾಮರ್ಥ್ಯಗಳನ್ನು ಹೆಚ್ಚಿಸಲು ಬೇಕಾದ ಎಲ್ಲಾ ಪ್ರಮುಖ ಸಂಪನ್ಮೂಲಗಳ ಲಭ್ಯತೆ ಭಾರತಕ್ಕೆ ಇದೆ. ಸರ್ವಶಕ್ತಿ ಬಳಸಿ ಮುಂದಡಿ ಇಡಬೇಕು ಎಂಬುದು ಜೆನ್ಸೆನ್ ಅವರು ಭಾರತಕ್ಕೆ ನೀಡಿರುವ ಸಲಹೆ.
‘ಐಟಿ ವೆಚ್ಚ ತಗ್ಗಿಸುವ ಉದ್ಯಮ ಮತ್ತು ಕಾರ್ಮಿಕ ಹೊರಗುತ್ತಿಗೆ ಉದ್ಯಮವಾಗಿರುವ ನೀವು ಎಐ ಉತ್ಪಾದನಾ ಉದ್ಯಮವಾಗಿ ಬೆಳೆದುಕೊಳ್ಳಬೇಕು. ನಿಮ್ಮೆಲ್ಲಾ ಶಕ್ತಿಯೊಂದಿಗೆ ನೀವು ಮುಂದಕ್ಕೆ ಹೆಜ್ಜೆ ಹಾಕಬೇಕು. ಎಐನ ಪ್ರತಿಯೊಂದು ಅಂಶವೂ, ನೈಸರ್ಗಿಕ ಸಂಪನ್ಮೂಲಗೆಲ್ಲವೂ ಇಲ್ಲಿ ಲಭ್ಯ ಇವೆ. ಡಿಜಿಟಲ್ ಆರ್ಥಿಕತೆ ಇದೆ. ಸಾಕಷ್ಟು ಡಾಟಾ ಲಭ್ಯ ಇದೆ. ಕಂಪ್ಯೂಟರ್ ಸೈನ್ಸ್, ಕಂಪ್ಯೂಟಿಂಗ್ನ ಆಳವಾದ ಜ್ಞಾನ ನಿಮಗಿದೆ. ಎಐ ಉದ್ಯಮವಾಗಲು, ಇಂಟೆಲಿಜೆನ್ಸ್ ತಯಾರಿಸಲು ನಿಮಗೆ ಇಂಧನ, ಡಾಟಾ ಮತ್ತು ಕಂಪ್ಯೂಪರ್ ವಿಜ್ಞಾನದ ಪರಿಣಿತಿ ಅಗತ್ಯವಿದೆ. ಈ ಮೂರೂ ಕೂಡ ನಿಮ್ಮಲ್ಲಿ ಇದೆ,’ ಎಂದು ಹುವಾಂಗ್ ಜೆನ್ಸೆನ್ ಹೇಳಿದ್ದಾರೆ.
ಇದನ್ನೂ ಓದಿ: ನೋಯಲ್ ಟಾಟಾ ಮತ್ತು ಛೇರ್ಮನ್ ಸ್ಥಾನದ ಮಧ್ಯೆ ಅಡ್ಡಗೋಡೆಯಾದ ನಿಯಮ
ನಿವಿಡಿಯಾ ಸಿಇಒ ಪ್ರಕಾರ ಭಾರತಕ್ಕಿರುವ ನೈಸರ್ಗಿಕ ಸಂಪನ್ಮೂಲವೆಂದರೆ ಅದರ ಡಾಟಾ. ಭಾರತದ ಈ ದತ್ತಾಂಶವು ಭಾರತಕ್ಕೇ ಸೇರಿದ್ದು. ಈ ಡಾಟಾವನ್ನು ಬೇರೆ ಯಾರೋ ಹೆಕ್ಕಿ ಅದನ್ನು ಸಂಸ್ಕರಿಸಿ, ಅದರಿಂದ ಮೌಲ್ಯಯುತ ಉತ್ಪನ್ನವಾಗಿ ಪರಿವರ್ತಿಸುವಂತಾಗಬಾರದು. ಅದನ್ನು ನೀವೇ ಸ್ವತಃ ಮಾಡಬಹುದು ಎಂದಿದ್ದಾರೆ.
ಇಂಟೆಲ್, ಎಎಂಡಿಯಂತಹ ಕಂಪನಿಗಳನ್ನು ಮೀರಿಸಿ ಚಿಪ್ ಕ್ಷೇತ್ರದಲ್ಲಿ ಬೆಳೆದಿರುವ ನಿವಿಡಿಯಾ, ಆಧುನಿಕ ಎಐ ಕ್ರಾಂತಿಯ ಹರಿಕಾರ ಎನಿಸಿದೆ. ಜಗತ್ತಿನ ಅತಿದೊಡ್ಡ ಮಾರುಕಟ್ಟೆ ಸಂಪತ್ತಿನ ಕಂಪನಿಗಳಲ್ಲಿ ಅದೂ ಒಂದು. ಸೂಪರ್ ಕಂಪ್ಯೂಟರ್ ಮತ್ತು ಎಐ ಕಾರ್ಯಗಳಿಗೆ ನಿವಿಡಿಯಾದ ಜಿಪಿಯು ಚಿಪ್ಗಳು ಅತ್ಯವಶ್ಯವಾಗಿವೆ. ಆದರೆ, ಜೆನ್ಸೆನ್ ಅವರ ಪ್ರಕಾರ ನಿವಿಡಿಯಾದ ಮೂರನೇ ಒಂದು ಭಾಗವು ಭಾರತಲ್ಲೇ ಇದೆಯಂತೆ.
ಇದನ್ನೂ ಓದಿ: ಫಾಕ್ಸ್ಕಾನ್ನಿಂದ ಭಾರತದಲ್ಲಿ ಐಫೋನ್-16 ಪ್ರೋ ಫೋನ್ ತಯಾರಿಕೆ; ಇನ್ನಷ್ಟು ಫ್ಯಾಕ್ಟರಿ ಸ್ಥಾಪಿಸಲಿರುವ ಜೇಬಿಲ್
ಅಂದರೆ, ಕಂಪನಿಯ ಹಿರಿಯ ನಾಯಕತ್ವ ಭಾರತದವರೇ ಇದ್ದಾರೆ. ಕಂಪನಿಯ ಮೂರನೇ ಒಂದು ಭಾಗದ ಎಂಜಿನಿಯರುಗಳು ಭಾರತದವರೇ ಆಗಿದ್ದಾರೆ. ನಿವಿಡಿಯಾ ಚಿಪ್ಗಳನ್ನು ಭಾರತ ಡಿಸೈನ್ ಮಾಡುತ್ತದೆ. ಸಾಕಷ್ಟು ಅಲ್ಗಾರಿದಂಗಳನ್ನೂ ಇಲ್ಲೇ ಅಭಿವೃದ್ದಿ ಮಾಡಲಾಗುತ್ತದೆ ಎಂದು ಜೆನ್ಸೆನ್ ಹುವಾಂಗ್ ತಿಳಿಸಿದ್ದಾರೆ.
‘ಏನನ್ನೂ ನಿರೀಕ್ಷಿಸದೇ ಭಾರತಕ್ಕೆ ಬಂದೆ. ಆದರೆ, ಅಪ್ರತಿಮ ಉತ್ಸಾಹ ಮತ್ತು ಆಶಯದೊಂದಿಗೆ ಇಲ್ಲಿಂದ ಮರಳುತ್ತಿದ್ದೇನೆ. ಇಲ್ಲಿರುವ ಸ್ಟಾರ್ಟಪ್ಗಳ ಸಂಖ್ಯೆ, ಎಐನ ಅವಕಾಶದ ಅರಿವು, ಉತ್ಸಾಹ ಇವೆಲ್ಲವೂ ಅಸಾಧಾರಣವಾದುದು. ಭಾರತಕ್ಕೆ ಇರುವ ಅವಕಾಶ ನಿಜಕ್ಕೂ ಅದ್ವಿತೀಯವಾದುದು,’ ಎಂದು ಜೆನ್ಸೆನ್ ಬಣ್ಣಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ