ನವದೆಹಲಿ, ಅಕ್ಟೋಬರ್ 27: ಭಾರತದಲ್ಲಿ ಕಳೆದ ಹತ್ತು ವರ್ಷದಲ್ಲಿ ಆದಾಯ ಅಸಮಾನತೆ ಗಣನೀಯವಾಗಿ ತಗ್ಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಯನವೊಂದು ಹೇಳುತ್ತಿದೆ. 2013-14ರಿಂದ 2022-23ರ ಹಣಕಾಸು ವರ್ಷಗಳ ಅವಧಿಯಲ್ಲಿ ಐದು ಲಕ್ಷ ರೂವರೆಗಿನ ವಾರ್ಷಿಕ ಆದಾಯವಂತರ ಆದಾಯ ಅಸಮಾನತೆಯ ಅಂತರ ಶೇ. 74.2ರಷ್ಟು ಇಳಿಮುಖವಾಗಿದೆ ಎಂದು ಎಸ್ಬಿಐ ಅಧ್ಯಯನ ವರದಿಯೊಂದು ಹೇಳಿದೆ.
ಭಾರತದಲ್ಲಿ ಆದಾಯ ಅಸಮಾನತೆಯ ಅಂತರ ಹೆಚ್ಚುತ್ತಿದೆ. ಶ್ರೀಮಂತರು ಹೆಚ್ಚು ಶ್ರೀಮಂತರಾಗುತ್ತಿದ್ದಾರೆ. ಬಡವರು ಇನ್ನಷ್ಟು ಬಡವರಾಗುತ್ತಿದ್ದಾರೆ ಎನ್ನುವಂತಹ ಹಲವು ವರದಿಗಳು ಬೆಳಕಿಗೆ ಬರುತ್ತಿರುವ ಹೊತ್ತಲ್ಲೇ ಎಸ್ಬಿಐನ ಹೊಸ ವರದಿ ಹೊಸ ನೋಟ ಬೀರಿದೆ. 2013-14ರ ಹಣಕಾಸು ವರ್ಷ ಹಾಗೂ 2023-24ರ ಹಣಕಾಸು ವರ್ಷದಲ್ಲಿನ ಆದಾಯ ಅಸಮಾನತೆಯ ರೇಖೆಯನ್ನು ಎಸ್ಬಿಐ ಅಧ್ಯಯನದಲ್ಲಿ ಬಳಸಿ, ಆ ದತ್ತಾಂಶವನ್ನು ವಿಶ್ಲೇಷಿಸಲಾಗಿದೆ. ಅದರ ಪ್ರಕಾರ ಕೆಳಗಿನ ಆದಾಯ ಗುಂಪಿನ ಜನರ ಆದಾಯ ಮಟ್ಟವು ಏರುತ್ತಿರುವುದು ಸ್ಪಷ್ಟವಾಗಿ ತೋರ್ಪಡುತ್ತಿದೆಯಂತೆ.
‘ಐದು ಲಕ್ಷ ರೂವರೆಗಿನ ಆದಾಯ ಗಳಿಸುತ್ತಿದ್ದ ಜನರ ಆದಾಯ ಅಸಮಾನತೆಯ ಅಂತರ ಶೇ. 74.2ರಷ್ಟು ಕಡಿಮೆ ಆಗಿರುವುದು ವಿಶ್ಲೇಷಣೆಯಿಂದ ಗೊತ್ತಾಗುತ್ತದೆ. ಸರ್ಕಾರದ ನಿರಂತರ ಪ್ರಯತ್ನಗಳು ತಳಮಟ್ಟಕ್ಕೆ ತಲುಪುತ್ತಿರುವುದು ವೇದ್ಯವಾಗಿದೆ. ಕೆಳ ಆದಾಯ ಗುಂಪಿನ ಜನರ ಆದಾಯದಲ್ಲಿ ಹೆಚ್ಚಳ ಆಗುತ್ತಿದೆ,’ ಎಂದು ಎಸ್ಬಿಐನ ರಿಸರ್ಚ್ ಸ್ಟಡಿ ಹೇಳುತ್ತಿದೆ.
ಇದನ್ನೂ ಓದಿ: ಫಾಕ್ಸ್ಕಾನ್ನಿಂದ ಭಾರತದಲ್ಲಿ ಐಫೋನ್-16 ಪ್ರೋ ಫೋನ್ ತಯಾರಿಕೆ; ಇನ್ನಷ್ಟು ಫ್ಯಾಕ್ಟರಿ ಸ್ಥಾಪಿಸಲಿರುವ ಜೇಬಿಲ್
2013-14ರಿಂದ 2020-21ರ ಅವಧಿಯಲ್ಲಿ 3.5 ಲಕ್ಷ ರೂವರೆಗಿನ ಆದಾಯದ ಜನರು ಇತರ ಗುಂಪಿನೊದಿಗೆ ಇದ್ದ ಆದಾಯ ಅಸಮಾನತೆ ಅಂತರ ಶೇ. 31.8ರಿಂದ ಶೇ. 12.8ಕ್ಕೆ ತಗ್ಗಿದೆ. ಈ ಮೇಲಿನ ಗುಂಪಿನ ಆದಾಯವು ಅವರ ಸಂಖ್ಯೆಗೆ ಹೋಲಿಸಿದರೆ ಶೇ. 19ರಷ್ಟು ಹೆಚ್ಚಾಗಿದೆ ಎಂದು ಎಸ್ಬಿಐನ ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.
ಭಾರತದಲ್ಲಿ ಜನಸಾಮಾನ್ಯರ ಆದಾಯ ಹೆಚ್ಚುತ್ತಿರುವುದು ನೇರ ತೆರಿಗೆ ಸಂಗ್ರಹದಲ್ಲಿನ ಹೆಚ್ಚಳದಿಂದ ವೇದ್ಯವಾಗಿದೆ. ಸರ್ಕಾರದ ತೆರಿಗೆ ವ್ಯವಸ್ಥೆಯ ಸುಧಾರಣೆಯಿಂದಾಗಿ ನೇರ ತೆರಿಗೆ ಸಂಗ್ರಹ ಹೆಚ್ಚಿದೆ. ಸರ್ಕಾರಕ್ಕೆ ಬರುವ ಒಟ್ಟಾರೆ ತೆರಿಗೆ ಆದಾಯದಲ್ಲಿ ನೇರ ತೆರಿಗೆಗಳ ಪಾಲು ಶೇ. 56.7ರಷ್ಟಿದೆಯಂತೆ. ಇಷ್ಟು ಮಟ್ಟದ ನೇರ ತೆರಿಗೆಯು ಕಳೆದ 14 ವರ್ಷದಲ್ಲೇ ಅತ್ಯಧಿಕ ಎನ್ನಲಾಗಿದೆ.
ಇದನ್ನೂ ಓದಿ: ಪಿಎಂ ಮುದ್ರಾ ಸ್ಕೀಮ್; ಹೊಸ ವಿಭಾಗ ಸೇರ್ಪಡೆ; ಸಾಲದ ಮಿತಿ 20 ಲಕ್ಷ ರೂಗೆ ಹೆಚ್ಚಳ
ಗಮನಿಸುವ ಸಂಗತಿ ಎಂದರೆ ನೇರ ತೆರಿಗೆಗಳ ಪೈಕಿ ಕಾರ್ಪೊರೇಟ್ ಇನ್ಕಮ್ ಟ್ಯಾಕ್ಸ್ಗಿಂತ ಪರ್ಸನಲ್ ಇನ್ಕಮ್ ಟ್ಯಾಕ್ಸ್ ಹೆಚ್ಚು ವೇಗವಾಗಿ ಬೆಳೆಯುತ್ತಿದೆ. ಐಟಿ ರಿಟರ್ನ್ಸ್ ಫೈಲ್ ಮಾಡುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. 2022-23ರ ಹಣಕಾಸು ವರ್ಷದ ಐಟಿ ರಿಟರ್ನ್ಸ್ ಸಲ್ಲಿಸಿದವರ ಸಂಖ್ಯೆ 8.6 ಕೋಟಿ ಎನ್ನಲಾಗಿದೆ. ಹಿಂದಿನ ವರ್ಷದಲ್ಲಿ 7.3 ಕೋಟಿ ಇತ್ತು. ಐಟಿಆರ್ ಸಲ್ಲಿಸುವವರ ಸಂಖ್ಯೆ ಹೆಚ್ಚುತ್ತಿರುವುದು ತಳಮಟ್ಟದಲ್ಲಿ ಆದಾಯ ಹೆಚ್ಚಳ ಆಗುತ್ತಿರುವ ಸಂಕೇತ ಎಂದು ಭಾವಿಸಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ