
ನವದೆಹಲಿ, ಆಗಸ್ಟ್ 27: ಪರ್ಚೇಸಿಂಗ್ ಪವರ್ ಪ್ಯಾರಿಟಿಯಲ್ಲಿ ಭಾರತದ ಆರ್ಥಿಕತೆಯು (GDP on PPP terms) ಮುಂದಿನ ಕೆಲ ವರ್ಷಗಳಲ್ಲಿ ವಿಶ್ವದ ಎರಡನೇ ಅತಿದೊಡ್ಡದು ಎನಿಸಲಿದೆ. ಐಎಂಎಫ್ ಮಾಡಿದ ಅಂದಾಜುಗಳನ್ನು ಆಧರಿಸಿ ಇವೈ ಎನ್ನುವ ಏಜೆನ್ಸಿ ಒಂದು ವರದಿ ಪ್ರಕಟಿಸಿದ್ದು, ಅದರ ಪ್ರಕಾರ 2038ರೊಳಗೆ ಭಾರತದ ಜಿಡಿಪಿ (ಪಿಪಿಪಿ) 34.2 ಟ್ರಿಲಿಯನ್ ಡಾಲರ್ ಆಗಬಹುದು. ಅದು ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆ ಎನಿಸಲಿದೆ.
ಈ ವರ್ಷ (2025) ಭಾರತೀಯ ಕೆಲಸಗಾರರ ಸರಾಸರಿ ವಯಸ್ಸು 28.8 ವರ್ಷ ಇದೆ. ದೊಡ್ಡ ಆರ್ಥಿಕತೆಗಳ ಪೈಕಿ ಈ ಸರಾಸರಿ ವಯಸ್ಸು ಅತ್ಯುತ್ತಮ ಎನಸಿದೆ. ಜೊತೆಗೆ, ಭಾರತದಲ್ಲಿ ಉಳಿತಾಯ ದರ ಬಹಳ ಅಧಿಕ ಇದೆ. ಸರ್ಕಾರದ ಸಾಲದ ಮಟ್ಟವೂ ಕಡಿಮೆ ಆಗುತ್ತಿದೆ. 2024ರಲ್ಲಿ ಜಿಡಿಪಿಯ ಶೇ. 81.3ರಷ್ಟು ಸಾಲ ಇತ್ತು. 2030ರಲ್ಲಿ ಅದು ಶೇ. 75.8ಕ್ಕೆ ಇಳಿಯಬಹುದು. ಬೇರೆ ದೊಡ್ಡ ಆರ್ಥಿಕತೆಯ ದೇಶಗಳ ಸಾಲದ ಮಟ್ಟ ಹೆಚ್ಚುತ್ತಲೇ ಇದೆ. ಇವೈ ವರದಿಯಲ್ಲಿ ಈ ಎಲ್ಲಾ ಅಂಶಗಳನ್ನು ಉಲ್ಲೇಖಿಸಿ ಭಾರತದ ಪಿಪಿಪಿ ಆಧಾರಿತ ಜಿಡಿಪಿ ಬಹಳ ಉತ್ತಮವಾಗಿ ಏರಿಕೆ ಆಗಲಿರುವುದನ್ನು ತಿಳಿಸಿದೆ.
ಐಎಂಎಫ್ ವರದಿ ಆಧರಿಸಿ ತನ್ನ ವರದಿ ರೂಪಿಸಿರುವ ಇವೈ, 2030ರೊಳಗೆ ಭಾರತದ ಆರ್ಥಿಕತೆ (ಪಿಪಿಪಿ) 20.7 ಟ್ರಿಲಿಯನ್ ಡಾಲರ್ ಮುಟ್ಟಬಹುದು. 2038ರಲ್ಲಿ 34.2 ಟ್ರಿಲಿಯನ್ ಡಾಲರ್ ಆಗಬಹುದು. ಚೀನಾ ದೇಶದ ಜಿಡಿಪಿ (ಪಿಪಿಪಿ) 2030ರಲ್ಲಿ 42.2 ಟ್ರಿಲಿಯನ್ ಡಾಲರ್ ಆಗುವ ನಿರೀಕ್ಷೆ ಇದೆ. ಆದರೆ, ಹೆಚ್ಚುತ್ತಿರುವ ಸಾಲ ಮತ್ತು ಕೆಲಸಗಾರರು ವಯಸ್ಸು ಚೀನಾದ ವೇಗವನ್ನು ಕುಂಠಿತಗೊಳಿಸಹುದು. ಅಮೆರಿಕದ ಸಾಲದ ಮಟ್ಟ ಅಧಿಕಗೊಳ್ಳುತ್ತಲೇ ಹೋಗುತ್ತದೆ. ಅದರ ಬೆಳವಣಿಗೆಯೂ ಮಂದವಾಗಿರುತ್ತದೆ ಎನ್ನುವ ಅಭಿಪ್ರಾಯವನ್ನು ಇವೈ ವರದಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಅಮೆರಿಕದ ಶೇ. 50 ಟ್ಯಾರಿಫ್ ಚಾಲ್ತಿಗೆ; ಬಾಧಿತವಾಗುವ ಭಾರತೀಯ ಸೆಕ್ಟರ್ಗಳ್ಯಾವುವು? ಇಲ್ಲಿದೆ ಡೀಟೇಲ್ಸ್
ಇನ್ನು ರಿಯಲ್ ಜಿಡಿಪಿ ಲೆಕ್ಕಾಚಾರದಲ್ಲಿ ಭಾರತದ ಆರ್ಥಿಕತೆ 2047ರೊಳಗೆ 30 ಟ್ರಿಲಿಯನ್ ಡಾಲರ್ ಮುಟ್ಟುವ ನಿರೀಕ್ಷೆ ಅಥವಾ ಗುರಿ ಇದೆ. ಅಮೆರಿಕ ಅಥವಾ ಚೀನಾವನ್ನು ಹಿಂದಿಕ್ಕಿ ಎರಡನೇ ಸ್ಥಾನ ಏರಲು ಇನ್ನೂ ಹಲವು ವರ್ಷ ಬೇಕಾಗಬಹುದು ಎಂದು ಹೇಳಲಾಗುತ್ತಿದೆ.
ಜಿಡಿಪಿ ಎಂದರೆ ಒಂದು ದೇಶದಲ್ಲಿ ಉತ್ಪಾದನೆಯಾಗುವ ಸರಕು ಮತ್ತು ಸೇವೆಗಳ ಒಟ್ಟಾರೆ ಮೌಲ್ಯ. ಇದನ್ನು ಬೇರೆ ಬೇರೆ ವಿಧಾನದಲ್ಲಿ ಅಳೆಯಲಾಗುತ್ತದೆ. ನಾಮಿನಲ್ ಜಿಡಿಪಿಯಲ್ಲಿ ಪ್ರಸಕ್ತ ಹಣದ ಮೌಲ್ಯದ ಆಧಾರದಲ್ಲಿ ಅಳೆಯುತ್ತದೆ. ರಿಯಲ್ ಜಿಡಿಪಿಯಲ್ಲಿ ಹಣದುಬ್ಬರದ ಲೆಕ್ಕಾಚಾರವನ್ನೂ ಸೇರಿಸಲಾಗುತ್ತದೆ.
ಹಾಗೆಯೇ, ಪರ್ಚೇಸಿಂಗ್ ಪವರ್ ಪ್ಯಾರಿಟಿ ಆಧಾರವಾಗಿ ಜಿಡಿಪಿ ಲೆಕ್ಕಾಚಾರ ಮಾಡಲಾಗುತ್ತದೆ. ಒಂದು ವಸ್ತುವಿನ ಖರೀದಿ ಶಕ್ತಿ ಬೇರೆ ಬೇರೆ ದೇಶಗಳಲ್ಲಿ ಎಷ್ಟಿದೆ ಎಂಬುದು ಪಿಪಿಪಿಯ ಲೆಕ್ಕಾಚಾರ.
ಇದನ್ನೂ ಓದಿ: ಎಚ್1ಬಿ ವೀಸಾ ವ್ಯವಸ್ಥೆಯೇ ಒಂದು ‘ಮೋಸ’; ಹೊಸ ವರಾತ ತೆಗೆದ ಅಮೆರಿಕ; ಭಾರತೀಯರಿಗೆ ಹೊಸ ತಲೆನೋವು
ಉದಾಹರಣೆಗೆ, ಅಮೆರಿಕದಲ್ಲಿ ಒಂದು ಒಂದು ಸರಕಿನ ಬೆಲೆ 100 ಡಾಲರ್ ಇದೆ ಎಂದಿಟ್ಟುಕೊಳ್ಳಿ. ಅದೇ ಮಾದರಿಯ ಆಟಿಕೆಯು ಭಾರತದಲ್ಲಿ 15,000 ರುಪಾಯಿಗೆ ಸಿಗುತ್ತದೆ ಎಂದು ಭಾವಿಸಿ. ಈಗ ಡಾಲರ್ ಮತ್ತು ರುಪಾಯಿ ಕರೆನ್ಸಿಯ ವಿನಿಮಯ ದರದ ಲೆಕ್ಕ ಬರುತ್ತದೆ. ಒಂದು ಡಾಲರ್ಗೆ 87.79 ರೂ ಎಕ್ಸ್ಚೇಂಜ್ ರೇಟ್ ಇದೆ ಎಂದಾದಲ್ಲಿ, ಭಾರತದಲ್ಲಿ ಆ ಸರಕಿನ ಬೆಲೆ 170 ಡಾಲರ್ ಆಗುತ್ತದೆ.
ಈಗ ಪಿಪಿಪಿಯನ್ನು ಲೆಕ್ಕ ಮಾಡಿದರೆ 170/100 = 1.7 ಆಗುತ್ತದೆ. ಅಂದರೆ, ಅಮೆರಿಕದಲ್ಲಿ ಒಂದು ಡಾಲರ್ ಆಗುವ ಅದೇ ಸರಕನ್ನು ಭಾರತದಲ್ಲಿ ಖರೀದಿಸಲು 1.7 ಡಾಲರ್ ತೆರಬೇಕಾಗುತ್ತದೆ. ಈ ರೀತಿ ಪರ್ಚೇಸ್ ಪವರ್ ಪ್ಯಾರಿಟಿಯನ್ನು ಗಣಿಸಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ