ದೊಡ್ಡ ನಿರೀಕ್ಷೆ; ವಿಶ್ವದ ನಂಬರ್ ಒನ್ ಆಗಲಿದೆಯಂತೆ ಭಾರತ; ಆ ಕನಸು ನನಸಾಗೋದು ಯಾವಾಗ?

|

Updated on: Sep 24, 2024 | 5:06 PM

India's economic growth this century: ಭಾರತವು ವಿಶ್ವದಲ್ಲೇ ಅತಿದೊಡ್ಡ ಆರ್ಥಿಕತೆಯ ದೇಶವಾಗಿ 22ನೇ ಶತಮಾನಕ್ಕೆ ಅಡಿ ಇಡಲಿದೆ. ಪ್ರಸಕ್ತ ಶತಮಾನದ ಕೊನೆಯಲ್ಲಿ ಭಾರತದ ಜಿಡಿಪಿಯು ಚೀನಾದಕ್ಕಿಂತಲೂ ಎರಡು ಪಟ್ಟು ಹೆಚ್ಚಿರಲಿದೆ ಎಂದು ಭಾರತ ಅಮೆರಿಕ ಸ್ಟ್ರಾಟಿಜಿಕ್ ಪಾರ್ಟ್ನರ್​ಶಿಪ್ ಫೋರಂ ಮುಖ್ಯಸ್ಥ ಜಾನ್ ಚೇಂಬರ್ಸ್ ಹೇಳಿದ್ದಾರೆ. ಜೆಪಿ ಮಾರ್ಗನ್ ಸಿಇಒ ಜೇಮೀ ಡಿಮೋನ್ ಪ್ರಕಾರ ಐದಾರು ವರ್ಷದಲ್ಲಿ ಭಾರತದ ಜಿಡಿಪಿ 7 ಟ್ರಿಲಿಯನ್ ಡಾಲರ್ ಗಡಿ ಮುಟ್ಟಲಿದೆ.

ದೊಡ್ಡ ನಿರೀಕ್ಷೆ; ವಿಶ್ವದ ನಂಬರ್ ಒನ್ ಆಗಲಿದೆಯಂತೆ ಭಾರತ; ಆ ಕನಸು ನನಸಾಗೋದು ಯಾವಾಗ?
ಭಾರತದ ಆರ್ಥಿಕತೆ
Follow us on

ನವದೆಹಲಿ, ಸೆಪ್ಟೆಂಬರ್ 24: ಈ ಶತಮಾನದ ಮುಗಿಯುವಷ್ಟರಲ್ಲಿ ಭಾರತ ಆರ್ಥಿಕತೆಯು ಚೀನಾಗಿಂತ ಎರಡು ಪಟ್ಟು ಹೆಚ್ಚು ಇರಲಿದೆ. ಅಮೆರಿಕಾವನ್ನೂ ಮೀರಿಸಿ ಬೆಳೆಯಲಿದೆ. ಇದು ಸಿಸ್ಕೋ ವಿಶ್ರಾಂತ ಛೇರ್ಮನ್ ಜಾನ್ ಚೇಂಬರ್ಸ್ ಹೇಳಿದ್ದಾರೆ. ಭಾರತ ಅಮೆರಿಕ ತಂತ್ರಾತ್ಮಕ ಸಹಭಾಗಿತ್ವ ವೇದಿಕೆ (ಸ್ಟ್ರಾಟಿಜಿಕ್ ಪಾರ್ಟ್ನರ್​ಶಿಪ್ ಫೋರಂ) ಮುಖ್ಯಸ್ಥರೂ ಆಗಿರುವ ಜಾನ್ ಚೇಂಬರ್ಸ್ ಪ್ರಕಾರ ಮೂರು ನಾಲ್ಕು ದಶಕದಲ್ಲಿ ಭಾರತ ಎರಡನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಿ ಬೆಳೆಯಬಹುದು. ಎಕನಾಮಿಕ್ ಟೈಮ್ಸ್​ಗೆ ನೀಡಿದ ಸಂದರ್ಶನದಲ್ಲಿ ಭಾರತದ ಆರ್ಥಿಕತೆ ಬೆಳವಣಿಗೆಯ ಸಾಮರ್ಥ್ಯದ ಬಗ್ಗೆ ಕೆಲ ಆಸಕ್ತಿಕರ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

‘ನಾನು ಬಹಳ ದೂರಗಾಮಿಯಾಗಿ ಯೋಚಿಸಲು ಪ್ರಯತ್ನಿಸುತ್ತೇನೆ. ಶತಮಾನದ ಕೊನೆಯಲ್ಲಿ ಭಾರತದ ಆರ್ಥಿಕತೆ ಚೀನಾಗಿಂತ ಶೇ. 90ರಿಂದ 100ರಷ್ಟು ಹೆಚ್ಚು ದೊಡ್ಡದಿರಲಿದೆ. ಅಮೆರಿಕಕ್ಕಿಂತ ಶೇ. 30ರಿಂದ 40ರಷ್ಟು ಹೆಚ್ಚಿರಲಿದೆ. ಈ ಸಾಧ್ಯತೆ ಬಹಳ ದಟ್ಟವಾಗಿದೆ. ಭಾರತ ಯಾರೂ ಕೂಡ ನಿರೀಕ್ಷಿಸಿದುದಕ್ಕಿಂತಲೂ ವೇಗವಾಗಿ ಬೆಳೆದಿದೆ,’ ಎಂದು ಸಿಸ್ಕೋದ ಮಾಜಿ ಮುಖ್ಯಸ್ಥರು ಹೇಳಿದ್ದಾರೆ.

ಇದನ್ನೂ ಓದಿ: ಸಣ್ಣ ಪುಟ್ಟ ಐಪಿಒಗಳು ಗೋಲ್ಮಾಲಾ? ಎಸ್​ಎಂಇಗಳಿಂದ ಶೇ. 15 ಕಮಿಷನ್ ತಗೊಳ್ಳೋ ಐ ಬ್ಯಾಂಕುಗಳಿಂದ ಖೆಡ್ಡಾ? ಸೆಬಿ ತನಿಖೆ

ಜೆಪಿ ಮಾರ್ಗನ್ ಬ್ಯಾಂಕ್​ನ ಮುಖ್ಯಸ್ಥರಿಂದಲೂ ದೊಡ್ಡ ನಿರೀಕ್ಷೆ

ಅಮೆರಿಕದ ಅತಿದೊಡ್ಡ ಬ್ಯಾಂಕ್ ಆದ ಜೆಪಿ ಮಾರ್ಗನ್​ನ ಸಿಇಒ ಮತ್ತು ಛೇರ್ಮನ್ ಆಗಿರುವ ಜೇಮೀ ಡಿಮೋನ್ ಪ್ರಕಾರ, ಭಾರತ ಈ ದಶಕದ ಅಂತ್ಯದೊಳಗೆ, ಅಂದರೆ ಇನ್ನು ಐದಾರು ವರ್ಷದಲ್ಲಿ 7 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗಲಿದೆ.

ನರೇಂದ್ರ ಮೋದಿ ಅವರು ಪ್ರಬಲ ಪ್ರಧಾನಿಯಾಗಿ, ದೇಶದಲ್ಲಿ ಡಿಜಿಟಲ್ ಮತ್ತು ಭೌತಿಕ ಮೂಲಸೌಕರ್ಯ ವ್ಯವಸ್ಥೆಯನ್ನು ಬೆಳೆಸುತ್ತಿದ್ದಾರೆ. ಇದರಿಂದ ಅತ್ಯಾಧುನಿಕ ಮತ್ತು ಸುಧಾರಿತ ಉತ್ಪನ್ನ ಮತ್ತು ಸೇವೆಗಳ ತಯಾರಿಕೆಯಲ್ಲಿರುವ ಬಹುರಾಷ್ಟ್ರೀಯ ಸಂಸ್ಥೆಗಳು ಭಾರತಕ್ಕೆ ಬರುತ್ತಿವೆ ಎಂದು ಜೇಮೀ ಡಿಮೋನ್ ಹೇಳಿದ್ದಾರೆ.

ಇದನ್ನೂ ಓದಿ: ಈ ವರ್ಷ ಜಿಡಿಪಿ ಹೆಚ್ಚಳ ಶೇ. 6.8; ಮುಂದಿನ ಸಭೆಯಲ್ಲೇ ಆರ್​ಬಿಐನಿಂದ ಬಡ್ಡಿ ಇಳಿಕೆ: ಎಸ್ ಅಂಡ್ ಪಿ ನಿರೀಕ್ಷೆ

ಜೆಪಿ ಮಾರ್ಗನ್​ನ ಎಂಡಿಯಾಗಿರುವ ಜೇಮ್ಸ್ ಸುಲೈವಾನ್ ಅವರು ಮುಂದಿನ ಕೆಲ ವರ್ಷಗಳಲ್ಲಿ ಭಾರತಕ್ಕೆ ವಿದೇಶಗಳಿಂದ 100 ಬಿಲಿಯನ್ ಡಾಲರ್ (8.5 ಲಕ್ಷ ಕೋಟಿ ರೂ) ಬಂಡವಾಳ ಹರಿದುಬರಲಿದೆ ಎಂದು ನಿರೀಕ್ಷಿಸಿದ್ದಾರೆ. ಅವರ ಪ್ರಕಾರ ಈ ಬಂಡವಾಳವು ಆರ್ಥಿಕ ಬೆಳವಣಿಗೆಗೆ ಹೆಚ್ಚಿನ ಪುಷ್ಟಿ ಕೊಡುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ