ನಿಮ್ಮನ್ನು ಬೇಡ ಎನ್ನುವ ಜಾಗದಲ್ಲಿ ಯಾಕಿರುತ್ತೀರಿ, ಭಾರತಕ್ಕೆ ಬನ್ನಿ: ಅನಿವಾಸಿ ಭಾರತೀಯರಿಗೆ ಶ್ರೀಧರ್ ವೆಂಬು ಕರೆ

Why stay where you are not welcome, Sridhar Vembu tells Indian diaspora: ಭಾರತಕ್ಕೆ ಅತ್ಯುತ್ತಮ ಪ್ರತಿಭೆಗಳ ಅಗತ್ಯ ಇದೆ. ನೀವು ಭಾರತಕ್ಕೆ ಬನ್ನಿ ಎಂದು ಅನಿವಾಸಿ ಭಾರತೀಯರಿಗೆ ಉದ್ಯಮಿ ಶ್ರೀಧರ್ ವೆಂಬು ಕರೆ ನೀಡಿದ್ದಾರೆ. ನಿಮ್ಮನ್ನು ಬೇಡ ಎನ್ನುವ ಜಾಗದಲ್ಲಿ ಯಾಕೆ ಇರುತ್ತೀರಿ. ಭಾರತ ಮಾತೆ ನಿಮ್ಮನ್ನು ಸ್ವಾಗತಿಸುತ್ತಿದ್ದಾಳೆ ಎಂದು ಜೋಹೋ ಸಂಸ್ಥಾಪಕರು ಹೇಳಿದ್ದಾರೆ. ಡೇನಿಯೆಲ್ ಡೀ ಮಾರ್ಟಿನೋ ಅವರ ಅಂಕಿ ಅಂಶಗಳನ್ನು ಉಲ್ಲೇಖಿಸಿ, ಶ್ರೀಧರ್ ವೆಂಬು ಎಕ್ಸ್​ನಲ್ಲಿ ಈ ಮೇಲಿನ ಹೇಳಿಕೆ ಕೊಟ್ಟಿದ್ದಾರೆ.

ನಿಮ್ಮನ್ನು ಬೇಡ ಎನ್ನುವ ಜಾಗದಲ್ಲಿ ಯಾಕಿರುತ್ತೀರಿ, ಭಾರತಕ್ಕೆ ಬನ್ನಿ: ಅನಿವಾಸಿ ಭಾರತೀಯರಿಗೆ ಶ್ರೀಧರ್ ವೆಂಬು ಕರೆ
ಶ್ರೀಧರ್ ವೆಂಬು

Updated on: Oct 27, 2025 | 12:17 PM

ಚೆನ್ನೈ, ಅಕ್ಟೋಬರ್ 27: ಉತ್ಕೃಷ್ಟ ಜೀವನ ಮತ್ತು ವೃತ್ತಿ ಅಪೇಕ್ಷಿಸಿ ಅಮೆರಿಕಕ್ಕೆ ಹೋದ ಭಾರತೀಯ ಸಮುದಾಯದವರ ಮೇಲೆ ಜನಾಂಗೀಯ ದ್ವೇಷ ತೋರುವ ಪ್ರಕರಣಗಳು ಹೆಚ್ಚುತ್ತಿವೆ. ಭಾರತೀಯರು ಅಮೆರಿಕನ್ನರ ಕೆಲಸಗಳನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂದು ಹೇಳುವವರ ಸಂಖ್ಯೆ ಹೆಚ್ಚುತ್ತಿದೆ. ವಲಸಿಗರು ಬೇಡ ಎನ್ನುವ ಧೋರಣೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಹೇಳುತ್ತಿದ್ದಾರೆ. ವಲಸಿಗರ ಪೈಕಿ ಹೆಚ್ಚಿನ ಅಭಿವೃದ್ಧಿ ತೋರಿರುವ ಭಾರತೀಯ ಸಮುದಾಯದವರ ಮೇಲೆ ದ್ವೇಷ ಕಾರುವುದು ಹೆಚ್ಚುತ್ತಿದೆ. ಇದೇ ಸಂದರ್ಭದಲ್ಲಿ ವಿದೇಶಗಳಲ್ಲಿ ನೆಲಸಿರುವ ಅನಿವಾಸಿ ಭಾರತೀಯರು ಭಾರತಕ್ಕೆ ಬಂದು ತಮ್ಮ ಸೇವೆ ಸಲ್ಲಿಸುವ ಅವಶ್ಯಕತೆ ಹೆಚ್ಚಿದೆ ಎನ್ನುವ ಕರೆಗಳೂ ಕೇಳಿಬರುತ್ತಿವೆ. ಈ ಕರೆಗಳಿಗೆ ಉದ್ಯಮಿ ಶ್ರೀಧರ್ ವೆಂಬು (Sridhar Vembu) ಧ್ವನಿಗೂಡಿಸಿದ್ದಾರೆ.

ಇತ್ತೀಚೆಗೆ ತಮ್ಮ ಎಕ್ಸ್​ನಲ್ಲಿ ಒಂದು ಪೋಸ್ಟ್ ಹಾಕಿರುವ ಜೋಹೋ ಸಹ-ಸಂಸ್ಥಾಪಕರಾದ ಶ್ರೀಧರ್ ವೆಂಬು ಅವರು, ಭಾರತಕ್ಕೆ ಈಗ ಅತ್ಯುತ್ತಮ ಪ್ರತಿಭೆಗಳ ಅವಶ್ಯಕತೆ ಇದೆ. ಅನಿವಾಸಿ ಭಾರತೀಯರು ಭಾರತಕ್ಕೆ ಬರಲು ಆಲೋಚಿಸಬೇಕು ಎಂದು ಕರೆ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗೆ ಹೋಗಿ ಬಂದಾಗೆಲ್ಲಾ ಉತ್ಸಾಹ ಇಮ್ಮಡಿಸುತ್ತೆ: ಮರ್ಸಿಡಸ್ ಬೆಂಜ್ ಸಿಇಒ ಒಲಾ ಕ್ಯಾಲೆನಿಯಸ್

‘ಭಾರತೀಯರು ತಾವು ವಲಸೆ ಹೋದ ದೇಶಕ್ಕೆ ಅತಿಹೆಚ್ಚು ಕೊಡುಗೆ ನೀಡುತ್ತಾರೆ. ಅತ್ಯುತ್ತಮವಾದವರನ್ನು ಭಾರತ ಹೊರದೇಶಗಳಿಗೆ ಕಳುಹಿಸುತ್ತದೆ. ಮುಂದಿನ ತಲೆಮಾರಿನ ಜನರಲ್ಲಿ ಅತ್ಯುತ್ತಮವಾದವರನ್ನು ಭಾರತ ಉಳಿಸಿಕೊಳ್ಳುತ್ತದೆಂದು ಆಶಿಸಿದ್ದೇನೆ. ಈಗಾಗಲೇ ಹೊರಗೆ ಹೋದ ಕೆಲ ಪ್ರತಿಭೆಗಳನ್ನು ಭಾರತ ಆಕರ್ಷಿಸಲಿ’ ಎಂದು ಶ್ರೀಧರ್ ವೆಂಬು ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಬರೆದಿದ್ದಾರೆ.

‘ವಲಸಿಗರ ದೃಷ್ಟಿಯಿಂದ ಹೇಳುವುದಾದರೆ, ನಿಮ್ಮನ್ನು ಬೇಡ ಎನ್ನುವ ಕಡೆ ನೀವು ಯಾಕೆ ಇರಬೇಕು? ಭಾರತ ಮಾತೆಗೆ ನಿಮ್ಮ ಅಗತ್ಯ ಇದೆ, ನಿಮ್ಮನ್ನು ಸ್ವಾಗತಿಸುತ್ತಾಳೆ. ತವರಿಗೆ ಬನ್ನಿರಿ… ಸಮೃದ್ಧ ಮತ್ತು ಸುದೃಢ ಭಾರತ ನಿರ್ಮಿಸೋಣ’ ಎಂದು ವೆಂಬು ಕರೆ ನೀಡಿದ್ದಾರೆ.

ಶ್ರೀಧರ್ ವೆಂಬು ಅವರ ಎಕ್ಸ್ ಪೋಸ್ಟ್

ಎಲ್ಲಾ ವಲಸಿಗರ ಪೈಕಿ ಭಾರತೀಯ ಮೂಲದವರು ಅತಿಹೆಚ್ಚು ಕೊಡುಗೆ ನೀಡುತ್ತಾರೆ ಎಂಬುದನ್ನು ಖಚಿತಪಡಿಸುವ, ತಾವೇ ನಡೆಸಿರುವ ಹೊಸ ಸಂಶೋಧನೆಯ ಅಂಕಿ ಅಂಶಗಳನ್ನು ಡೇನಿಯಲ್ ಡೀ ಮಾರ್ಟಿನೋ ಅವರು ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದರು. ಅದನ್ನು ಉಲ್ಲೇಖಿಸಿರುವ ಶ್ರೀಧರ್ ವೆಂಬು, ಅನಿವಾಸಿ ಭಾರತೀಯರಿಗೆ ತವರಿಗೆ ಬರಬೇಕೆಂದು ಕರೆ ಕೊಟ್ಟಿದ್ದಾರೆ.

ಇದನ್ನೂ ಓದಿ: ಕರೆನ್ಸಿ ಇಲ್ಲ, ದೊಡ್ಡ ಸೇನೆ ಇಲ್ಲ, ಕಳ್ಳಕಾಕರಿಲ್ಲ; ರಾತ್ರಿ ಮನೆಗಳಿಗೆ ಬೀಗ ಹಾಕಲ್ಲ; ಜಗತ್ತಿನಲ್ಲಿದೆ ಇಂಥದ್ದೂ ಒಂದು ದೇಶ

ಶ್ರೀಧರ್ ವೆಂಬು ಅವರು ತಮ್ಮ ಜೋಹೋ ಕಾರ್ಪೊರೇಶನ್ ಸಂಸ್ಥೆಯನ್ನು ಕಟ್ಟಿ ಅಮೆರಿಕದಲ್ಲಿ ಅದನ್ನು ಬೆಳೆಸಿ, ಕೆಲ ವರ್ಷಗಳ ಹಿಂದಷ್ಟೇ ಭಾರತಕ್ಕೆ ವಾಪಸ್ಸಾಗಿ ಇಲ್ಲಿಯೇ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ವಾಟ್ಸಾಪ್​ಗೆ ಪರ್ಯಾಯವೆಂದು ಪರಿಗಣಿಸಬಹುದಾದ ಅರಟ್ಟೈ ಆ್ಯಪ್ ಸೇರಿದಂತೆ ಹಲವು ಉತ್ಪನ್ನಗಳನ್ನು ಜೋಹೋ ಸಂಸ್ಥೆ ಹೊರತಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ