ಬೆಂಗಳೂರಿಗೆ ಹೋಗಿ ಬಂದಾಗೆಲ್ಲಾ ಉತ್ಸಾಹ ಇಮ್ಮಡಿಸುತ್ತೆ: ಮರ್ಸಿಡಸ್ ಬೆಂಜ್ ಸಿಇಒ ಒಲಾ ಕ್ಯಾಲೆನಿಯಸ್
Mercedes Benz CEO Ola Kallenius speaks about Bengaluru: ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕಿರಿಯಿಂದ ರೋಸತ್ತುಹೋಗಿದ್ದೇನೆ ಎಂದು ಹೇಳುವವರ ಮಧ್ಯೆ ಮರ್ಸಿಡೆಸ್ ಬೆಂಜ್ ಸಿಇಒ ಭಿನ್ನವಾಗಿ ನಿಂತಿದ್ದಾರೆ. ತಾನು ಬೆಂಗಳೂರಿಗೆ ಹೋಗಿ ಬಂದಾಗೆಲ್ಲಾ ಉತ್ಸಾಹ ಎರಡು ಪಟ್ಟು ಹೆಚ್ಚುತ್ತದೆ ಎಂದು ಒಲಾ ಕ್ಯಾಲೆನಿಯಸ್ ಹೇಳಿದ್ದಾರೆ. ಎಕ್ಸ್ನಲ್ಲಿ ಅವರು ಮಾತನಾಡಿರುವ ವಿಡಿಯೋವೊಂದು ಪೋಸ್ಟ್ ಆಗಿದೆ. ಅದಕ್ಕೆ ಸಾಕಷ್ಟು ಜನರು ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್ 26: ಭಾರತದ ಸಿಲಿಕಾನ್ ಸಿಟಿ ಎನಿಸಿದ ಬೆಂಗಳೂರು ಟ್ರಾಫಿಕ್ ಕಿರಿಕಿರಿ, ಮಾಲಿನ್ಯಕ್ಕೆ ಅಪಖ್ಯಾತಿ ಹೊಂದಿದೆ. ಕೆಲ ಜನರು ಮತ್ತು ಉದ್ಯಮಿಗಳು ಬೆಂಗಳೂರನ್ನು ದೂಷಿಸುವುದು ಟ್ರೆಂಡಿಂಗ್ ಆಗುತ್ತಿದೆ. ಇಂಥ ಹೊತ್ತಲ್ಲಿ ಮರ್ಸಿಡಸ್ ಬೆಂಜ್ ಸಂಸ್ಥೆಯ ಸಿಇಒ ಒಲಾ ಕ್ಯಾಲೆನಿಯಸ್ (Mercedes Benz CEO Ola Kallenius) ಅವರು ಬೆಂಗಳೂರನ್ನು ಹಾಡಿ ಹೊಗಳಿದ್ದಾರೆ. ಬರ್ಲಿನ್ ಗ್ಲೋಬಲ್ ಡೈಲಾಗ್ (Berlin Global Dialogue) ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಒಲಾ ಕ್ಯಾಲೆನಿಯಸ್ ಅವರು, ತಾನು ಬೆಂಗಳೂರಿಗೆ ಹೋಗಿ ಬಂದಾಗೆಲ್ಲಾ ಉತ್ಸಾಹ ಇಮ್ಮಡಿಗೊಳ್ಳುತ್ತದೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.
‘ನೀವು ಜಗತ್ತಿನೆಲ್ಲೆಡೆ ಹೊಸ ಪ್ರತಿಭೆಗಳನ್ನು ಸ್ವಾಗತಿಸಬೇಕು. ನಾನು ಬೆಂಗಳೂರಿಗೆ ಹೋದಾಗೆಲ್ಲಾ, ಎರಡು ಪಟ್ಟು ಉತ್ಸಾಹದೊಂದಿಗೆ ಮರಳಿ ಬರುತ್ತೇನೆ. ಈ ನಗರದಲ್ಲಿರುವ ಸಾಫ್ಟ್ವೇರ್ ಪ್ರತಿಭಾ ಸಮೂಹವು ಬಹಳ ಅದ್ಭುತವಾಗಿದೆ’ ಎಂದು ಮರ್ಸಿಡಸ್ ಬೆಂಜ್ ಸಿಇಒ ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಕರೆನ್ಸಿ ಇಲ್ಲ, ದೊಡ್ಡ ಸೇನೆ ಇಲ್ಲ, ಕಳ್ಳಕಾಕರಿಲ್ಲ; ರಾತ್ರಿ ಮನೆಗಳಿಗೆ ಬೀಗ ಹಾಕಲ್ಲ; ಜಗತ್ತಿನಲ್ಲಿದೆ ಇಂಥದ್ದೂ ಒಂದು ದೇಶ
‘ಬೆಂಗಳೂರಿನಲ್ಲಿ ಬಹಳ ಚೆನ್ನಾಗಿ ಜರ್ಮನ್ ಭಾಷೆ ಮಾತನಾಡುವವರನ್ನು ಕಂಡಿದ್ದೇನೆ. ಅಂಥವರು ಸಿಕ್ಕಾಗ, ತಾವು ಜರ್ಮನಿಯಲ್ಲಿ ಎಲ್ಲಿ ಓದಿದ್ದು ಅಂತ ಕೇಳುತ್ತೇನೆ. ಆದರೆ ಅವರು ತಾನು ಜರ್ಮನಿಗೆ ಯಾವತ್ತೂ ಹೋಗಿಯೇ ಇಲ್ಲ ಎನ್ನುತ್ತಾರೆ. ನನಗೆ ಇಂಥ ಸ್ಫೂರ್ತಿಗಳೇ ಬೇಕು. ಇಂಥ ಪ್ರತಿಭೆಗಳು ಇರುವ ಕಡೆ ನಾವು ಹೋಗುತ್ತೇವೆ’ ಎಂದು ಒಲಾ ಕ್ಯಾಲೆನಿಯಸ್ ಹೇಳಿದ್ದಾರೆ.
ಮರ್ಸಿಡೆಸ್ ಬೆಂಜ್ ಸಿಇಒ ಅವರ ಈ ಹೇಳಿಕೆಗೆ ಆನ್ಲೈನ್ನಲ್ಲಿ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರು ಸಾಕಷ್ಟು ಪ್ರತಿಭೆಗಳ ಸಮೂಹವೇ ಬೆಂಗಳೂರಿನಲ್ಲಿದೆ. ವಿಶ್ವದ ಪ್ರಮುಖ ಟೆಕ್ ನೆಲೆಯಾಗಿ ಬೆಂಗಳೂರು ಬೆಳೆದಿದೆ ಎಂದು ಹಲವರು ಕಾಮೆಂಟಿಸಿದ್ದಾರೆ.
ಮರ್ಸಿಡೆಸ್ ಸಿಇಒ ಮಾತನಾಡಿರುವ ವಿಡಿಯೋ
“Every time I go to Bangalore, I come back twice as energised. I meet people who speak fluent German and have never been to Germany. We will go to where that kind of talent is,” says Mercedes-Benz CEO pic.twitter.com/T9DhqDddot
— Shashank Mattoo (@MattooShashank) October 25, 2025
ಇದನ್ನೂ ಓದಿ: ಭಾರತದಿಂದ 7nm ಚಿಪ್ ಯೋಜನೆ; ಇದಾಗಲಿದೆ ಗೇಮ್ ಚೇಂಜರ್; ಯಾಕೆ ಈ ಚಿಪ್ ಮಹತ್ವದ್ದು ಗೊತ್ತಾ?
‘ಬೆಂಗಳೂರಿನಲ್ಲಿ 400ಕ್ಕೂ ಅಧಿಕ ಜರ್ಮನ್ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಭಾರತದ ಶೇ. 38ರಷ್ಟು ಟೆಕ್ ರಫ್ತು ಬೆಂಗಳೂರಿನಿಂದ ಹೋಗುತ್ತಿದೆ. ಎಂಜಿನಿಯರುಗಳು, ಸ್ಟಾರ್ಟಪ್ಗಳು, ಗ್ಲೋಬಲ್ ಆರ್ ಅಂಡ್ ಡಿಗಳು ಹೀಗೆ ಒಳ್ಳೆಯ ಮಿಶ್ರಣ ಇದೆ. ಮರ್ಸಿಡೆಸ್ಗೂ ಬೆಂಗಳೂರು ಹಿಡಿಸಿದ್ದರೆ ಅಚ್ಚರಿ ಏನಿಲ್ಲ’ ಎಂದು ಒಬ್ಬರು ಎಕ್ಸ್ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಮರ್ಸಿಡೆಸ್ ಬೆಂಜ್ ಸಿಇಒ ಬೆಂಗಳೂರನ್ನು ಹೊಗಳಿರುವ ರೀತಿ ಬಗ್ಗೆ ಋಣಾತ್ಮಕ ಸ್ಪಂದನೆಯೂ ಸಿಕ್ಕಿದೆ. ವಿದೇಶೀ ಭಾಷೆ ಕಲಿತವರನ್ನು ವಿಶ್ವ ದರ್ಜೆ ಪ್ರತಿಭೆ ಎಂದು ಪರಿಗಣಿಸುವುದು ಎಷ್ಟು ಸರಿ ಎಂದು ಹಲವರು ಪ್ರಶ್ನಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 9:31 pm, Sun, 26 October 25




