
ನವದೆಹಲಿ, ಆಗಸ್ಟ್ 20: ಇಂಡಿಯಾ ಪೋಸ್ಟ್ ಸಂಸ್ಥೆ 5,800 ಕೋಟಿ ರೂ ವೆಚ್ಚದಲ್ಲಿ ಅತ್ಯಾಧುನಿಕ ಪೋಸ್ಟಲ್ ತಂತ್ರಜ್ಞಾನವನ್ನು (Advanced Postal Technology) ಅಳವಡಿಸುತ್ತಿದೆ. ಇದು ಪೂರ್ಣಗೊಂಡರೆ ಭಾರತದ ಪೋಸ್ಟಲ್ ವಿಭಾಗದ ಚಹರೆಯೇ ಬದಲಾವಣೆ ಆಗಲಿದೆ. ಇಂಡಿಯಾ ಪೋಸ್ಟ್ ವಿಶ್ವ ದರ್ಜೆಯ ಪಬ್ಲಿಕ್ ಲಾಜಿಸ್ಟಿಕ್ಸ್ ಸಂಸ್ಥೆಯಾಗಿ ಮಾರ್ಪಾಡಾಗಲಿದೆ. ಆಧುನಿಕ ಲಾಜಿಸ್ಟಿಕ್ಸ್ ಕಂಪನಿಗಳಿರುವ ರೀತಿಯ ಇನ್ಫ್ರಾಸ್ಟ್ರಕ್ಚರ್ ಅನ್ನು ಅಂಚೆ ಕಚೇರಿಗಳು ಹೊಂದಿರಲಿವೆ.
ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಈ ಮಹತ್ವದ ಯೋಜನೆಯನ್ನು ಪ್ರಕಟಿಸಿದ್ದಾರೆ. ‘ಇಂಡಿಯಾ ಪೋಸ್ಟ್ ಸಂಸ್ಥೆಯು ದೇಶಾದ್ಯಂತ ಅಡ್ವಾನ್ಸಡ್ ಪೋಸ್ಟಲ್ ಟೆಕ್ನಾಲಜಿಯನ್ನು (ಎಪಿಟಿ) ಅಳವಡಿಸಲಾಗುತ್ತಿದೆ. ಇದು ಭಾರತದ ಡಿಜಿಟಲ್ ಪ್ರಯಾಣದಲ್ಲಿ ಐತಿಹಾಸಿಕ ಹಾದಿ ಎನಿಸಿದೆ. ಐಟಿ 2.0 ಅಡಿಯಲ್ಲಿ 5,800 ಕೋಟಿ ರೂ ಹೂಡಿಕೆ ಮಾಡಲಾಗುತ್ತಿರುವ ಈ ಅಡ್ವಾನ್ಸ್ಡ್ ಟೆಕ್ನಾಲಜಿಯು ಇಂಡಿಯಾ ಪೋಸ್ಟ್ ಅನ್ನು ವರ್ಲ್ಡ್ ಕ್ಲಾಸ್ ಪಬ್ಲಿಕ್ ಲಾಜಿಸ್ಟಿಕ್ಸ್ ಸಂಸ್ಥೆಯಾಗಿ ಪರಿವರ್ತಿಸಲಿದೆ’ ಎಂದು ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ.
ಇದನ್ನೂ ಓದಿ: ಇನ್ಷೂರೆನ್ಸ್ ಕ್ಷೇತ್ರಕ್ಕೆ ಜಿಎಸ್ಟಿ ವಿನಾಯಿತಿಯ ಧಮಾಕ; ಸರ್ಕಾರದ ಮುಂದಿದೆ ಮಹತ್ವದ ಪ್ರಸ್ತಾಪ
ಈ ಅತ್ಯಾಧುನಿಕ ತಂತ್ರಜ್ಞಾನಗಳ ಅಳವಡಿಕೆಯಿಂದ ಅಂಚೆ ಕಚೇರಿಗಳು ಆಧುನಿಕಗೊಳ್ಳಲಿವೆ, ಹಲವು ರೀತಿಯ ಸೌಲಭ್ಯಗಳನ್ನು ಗ್ರಾಹಕರು ಅನುಭವಿಸಲು ಸಾಧ್ಯವಾಗಲಿದೆ. ಯಾವುದೇ ಬ್ಯಾಂಕ್ನ ಗ್ರಾಹಕರು ಅಂಚೆ ಕಚೇರಿಗಳಲ್ಲಿ ಡಿಜಿಟಲ್ ಟ್ರಾನ್ಸಾಕ್ಷನ್ ಮಾಡುವುದು ಇತ್ಯಾದಿ ಸೌಲಭ್ಯಗಳು ಸಿಗಲಿವೆ.
ಈಗ ಅಂಚೆ ಕಚೇರಿಗಳಲ್ಲಿ ಯುಪಿಐ ಟ್ರಾನ್ಸಾಕ್ಷನ್ ಅವಕಾಶ ಇದೆಯಾದರೂ ಪೋಸ್ಟಲ್ ಪೇಮೆಂಟ್ ಬ್ಯಾಂಕ್ ಅಕೌಂಟ್ಗಳನ್ನು ಹೊಂದಿದ್ದವರಿಗೆ ಮಾತ್ರ ಅದು ಸೀಮಿತವಾಗಿದೆ. ಈಗ ಯಾವುದೇ ಬ್ಯಾಂಕ್ ಅಕೌಂಟ್ ಇರುವ ಯುಪಿಐನಿಂದ ಅಂಚೆ ಕಚೇರಿಗಳಲ್ಲಿ ಪಾವತಿ ಮಾಡಲು ಸಾಧ್ಯವಾಗಲಿದೆ.
ಇದನ್ನೂ ಓದಿ: ರೈಲುಗಳಲ್ಲಿ ಹೊಸ ಲಗೇಜ್ ನಿಯಮ; ಗಂಟುಮೂಟೆ ಕಟ್ಟಿ ರೈಲು ಹತ್ತುವ ಮುನ್ನ ಹುಷಾರ್
ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾ ಆಶಯದ ಸ್ಫೂರ್ತಿಯಲ್ಲಿ ಸುಧಾರಿತ ಪೋಸ್ಟಲ್ ತಂತ್ರಜ್ಞಾನವನ್ನು ಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಹೊಸ ಟೆಕ್ನಾಲಜಿಯು ರಿಯಲ್ ಟೈಮ್ನಲ್ಲಿ ನಿರ್ಧಾರ ತೆಗೆದುಕೊಳ್ಳಲು ನೆರವಾಗುತ್ತದೆ. ಇ-ಕಾಮರ್ಸ್ಗೆ ಪುಷ್ಟಿ ಕೊಡುತ್ತದೆ, ಕಾರ್ಯಾಚರಣೆ ವೆಚ್ಚವನ್ನು ಕಡಿತಗೊಳಿಸುತ್ತದೆ ಎಂದು ಸಚಿವರು ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ