Luggage Rules: ರೈಲುಗಳಲ್ಲಿ ಹೊಸ ಲಗೇಜ್ ನಿಯಮ; ಗಂಟುಮೂಟೆ ಕಟ್ಟಿ ರೈಲು ಹತ್ತುವ ಮುನ್ನ ಹುಷಾರ್
Indian railways proposed new baggage rules: ಭಾರತೀಯ ರೈಲ್ವೇಸ್ ತನ್ನ ಪ್ರಯಾಣಿಕರ ಕ್ಷೇಮ ಮತ್ತು ಟ್ರೈನುಗಳಲ್ಲಿ ನೈರ್ಮಲ್ಯತೆ ಕಾಪಾಡಲು ಹೊಸ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಹೊಸ ಬ್ಯಾಗೇಜು (ಲಗೇಜ್) ನಿಯಮಗಳನ್ನು ಜಾರಿಗೆ ತರುತ್ತಿದೆ. ರೈಲು ಪ್ರಯಾಣಿಕರು ತಮ್ಮೊಂದಿಗೆ ಉಚಿತವಾಗಿ ಕೊಂಡೊಯ್ಯಬಲ್ಲ ಲಗೇಜುಗಳ ತೂಕ 35ರಿಂದ 70 ಕಿಲೋವರೆಗೂ ಮಾತ್ರ ಅನುಮತಿ ಇರುತ್ತದೆ.

ನವದೆಹಲಿ, ಆಗಸ್ಟ್ 19: ರೈಲುಗಳಲ್ಲಿ ಇಷ್ಟಬಂದಂತೆ ಲಗೇಜುಗಳನ್ನು ಕೊಂಡೊಯ್ಯು ಮುನ್ನ ಎಚ್ಚರ. ಏರ್ಪೋರ್ಟ್ ಮಾದರಿಯಲ್ಲಿ ಬ್ಯಾಗೇಜ್ ನಿಯಮಗಳನ್ನು ಜಾರಿಗೆ ತರಲು ಹೊರಟಿದೆ ರೈಲ್ವೇಸ್. ಹೆಚ್ಚಿನ ರೈಲು ಪ್ರಯಾಣಿಕರಿಗೆ ಕಿರಿಕಿರಿ, ಅನಾನುಕೂಲತೆಗಳನ್ನು ತಪ್ಪಿಸಲು ಮತ್ತು ರೈಲ್ವೆ ಇಲಾಖೆಗೆ (Indian Railways) ಆದಾಯ ಹೆಚ್ಚಿಸಲು ಹೊಸ ಲಗೇಜು ನಿಯಮಗಳನ್ನು ತರಲಾಗುತ್ತಿದೆ. ದೊಡ್ಡ ಲಗೇಜುಗಳಿಗೆ ದಂಡ ಅಥವಾ ಶುಲ್ಕ ವಿಧಿಸಲಾಗುತ್ತದೆ. ಇಂಥದ್ದೊಂದು ಪ್ರಸ್ತಾವವನ್ನು ರೈಲ್ವೇಸ್ ಮಾಡಿದೆ.
ರೈಲುಗಳಲ್ಲಿ ಎಷ್ಟು ಲಗೇಜು ಕೊಂಡೊಯ್ಯಬಹುದು?
ಭಾರತೀಯ ರೈಲ್ವೇಸ್ ಮಾಡಿರುವ ಪ್ರಸ್ತಾಪದ ಪ್ರಕಾರ, ಫಸ್ಟ್ ಕ್ಲಾಸ್ ಎಸಿ ರೈಲುಗಳಲ್ಲಿ 70 ಕಿಲೋವರೆಗಿನ ತೂಕದ ಲಗೇಜು ಕೊಂಡೊಯ್ಯಬಹುದು. ಎಸಿ ಟೂ ಟಯರ್ ಟ್ರೈನುಗಳಲ್ಲಿ 50 ಕಿಲೋ, ಎಸಿ ಥ್ರೀ ಟಯರ್ ಟ್ರೈನುಗಳಲ್ಲಿ 40 ಕಿಲೋ, ಸ್ಲೀಪರ್ ಕ್ಲಾಸ್ಗಳಲ್ಲಿ 40 ಕಿಲೋ, ಜನರಲ್ ಕ್ಲಾಸ್ಗಳಲ್ಲಿ 35 ಕಿಲೋ ತೂಕದ ಲಗೇಜುಗಳನ್ನು ಪ್ರಯಾಣಿಕರು ಕೊಂಡೊಯ್ಯಬಹುದು.
ಇದನ್ನೂ ಓದಿ: ಭಾರತದಲ್ಲಿ ಮೊದಲ ಬಾರಿಗೆ ರೈಲು ಹಳಿ ಮೂಲಕ ಸೌರ ವಿದ್ಯುತ್ ಉತ್ಪಾದನೆ; ಪೂರ್ಣ ನವೀಕರಣ ಇಂಧನದತ್ತ ರೈಲ್ವೇಸ್
ಇಲ್ಲಿದೆ ಅನುಮತಿಸಿದ ಲಗೇಜು ತೂಕ
- ಎಸಿ ಫಸ್ಟ್ ಕ್ಲಾಸ್: 70 ಕಿಲೋ
- ಎಸಿ ಟೂ ಟಯರ್: 50 ಕಿಲೋ
- ಎಸಿ ಥ್ರೀ ಟಯರ್: 40 ಕಿಲೋ
- ಸ್ಲೀಪರ್ ಕ್ಲಾಸ್: 40 ಕಿಲೋ
- ಜನರಲ್ ಕ್ಲಾಸ್: 35 ಕಿಲೋ
ರೈಲು ನಿಲ್ದಾಣಗಳಲ್ಲಿರುವ ಎಲೆಕ್ಟ್ರಾನಿಕ್ ವೈಟಿಂಗ್ ಮೆಷಿನ್ಗಳಲ್ಲಿ ಪ್ರಯಾಣಿಕರು ತಮ್ಮ ಲಗೇಜುಗಳ ತೂಕ ಹಾಕಿಸಬೇಕು. ನಿಗದಿಗಿಂತ ಹೆಚ್ಚು ತೂಕದ ಲಗೇಜುಗಳಿಗೆ ಹೆಚ್ಚುವರಿ ಶುಲ್ಕಗಳನ್ನು ವಿಧಿಸಲಾಗುತ್ತದೆ. ತೂಕ ಕಡಿಮೆ ಇದ್ದು ಗಾತ್ರದಲ್ಲಿ ದೊಡ್ಡದಾಗಿದ್ದರೂ ದಂಡ ತೆರಬೇಕಾಗುತ್ತದೆ. ಆದರೆ, ಗಾತ್ರ ಎಷ್ಟು ಮಿತಿಯಲ್ಲಿರಬೇಕು ಎನ್ನುವ ಮಾಹಿತಿ ಗೊತ್ತಾಗಿಲ್ಲ.
ವಿಮಾನ ನಿಲ್ದಾಣಗಳಲ್ಲಿ ಲಗೇಜುಗಳ ಸುತ್ತಳತೆಯು (ಉದ್ದ, ಅಗಲ, ದಪ್ಪ) 158 ಸೆಂಟಿಮೀಟರ್ಗಿಂತ ಹೆಚ್ಚಿರಬಾರದು. ಒಬ್ಬ ವ್ಯಕ್ತಿ ಒಂದು ಕೈಚೀಲ ಹಾಗೂ ಪರ್ಸ್, ಲ್ಯಾಪ್ಟಾಪ್ ಇತ್ಯಾದಿ ಪರ್ಸನಲ್ ಐಟಂ ಅನ್ನು ಶುಲ್ಕ ನೀಡದೆಯೇ ಕೊಂಡೊಯ್ಯಬಹುದು. ಇದೇ ರೀತಿಯ ನಿಯಮವನ್ನು ರೈಲ್ವೇಸ್ ಕೂಡ ಮಾಡಬಹುದು.
ಇದನ್ನೂ ಓದಿ: ಕೇವಲ 45 ಪೈಸೆಗೆ 10 ಲಕ್ಷ ರೂ ಇನ್ಷೂರೆನ್ಸ್; ಇದು ರೈಲು ಪ್ರಯಾಣಿಕರಿಗೆ ಸಿಗೋ ಅವಕಾಶ
ಈಗಿರುವ ನಿಯಮಗಳ ಪ್ರಕಾರವೂ ನೀವು ಹೆಚ್ಚಿನ ತೂಕದ ಲಗೇಜುಗಳನ್ನು ಕೊಂಡೊಯ್ದರೆ ಶುಲ್ಕ ತೆರಬೇಕಾಗುತ್ತದೆ. ಪ್ರಸ್ತಾವಿತ ನಿಯಮಗಳು ಹೆಚ್ಚಿನ ಶುಲ್ಕಗಳನ್ನು ವಿಧಿಸಲು ಅವಕಾಶ ಕೊಡುತ್ತವೆ.
ರೈಲ್ವೆ ನಿಲ್ದಾಣಗಳಲ್ಲಿ ಪ್ರೀಮಿಯಮ್ ಔಟ್ಲೆಟ್ಗಳು…
ಮಾಲ್ಗಳಲ್ಲಿ ಕಂಡು ಬರುವ ಪ್ರೀಮಿಯಮ್ ಸಿಂಗಲ್ ಬ್ರ್ಯಾಂಡ್ ಔಟ್ಲೆಟ್ಗಳು ಮುಂದಿನ ದಿನಗಳಲ್ಲಿ ರೈಲು ನಿಲ್ದಾಣಗಳಲ್ಲೂ ಕಂಡುಬರಲಿವೆ. ಬಟ್ಟೆ, ಪಾದರಕ್ಷೆ, ಎಲೆಕ್ಟ್ರಾನಿಕ್ಸ್ ಇತ್ಯಾದಿ ಉತ್ಪನ್ನಗಳಿಗೆ ಪ್ರತ್ಯೇಕ ಬ್ರ್ಯಾಂಡ್ ಔಟ್ಲೆಟ್ಗಳು ತಲೆ ಎತ್ತಲಿವೆ. ಪ್ರಯಾಣಿಕರಿಗೆ ಹೆಚ್ಚಿನ ಆಯ್ಕೆ ನೀಡಲು ಮತ್ತು ರೈಲ್ವೇಸ್ಗೆ ಹೆಚ್ಚುವರಿ ಆದಾಯ ಸೃಷ್ಟಿಸಲು, ಹಾಗೂ ರೈಲ್ವೆ ನಿಲ್ದಾಣಗಳು ಹೆಚ್ಚು ಆಧುನಿಕವಾಗಿ ಕಾಣುವಂತಾಗಲು ಈ ಕ್ರಮ ತೆಗೆದುಕೊಳ್ಳಲು ಯೋಜಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




