ನವದೆಹಲಿ, ಆಗಸ್ಟ್ 31: ಈ ಹಣಕಾಸು ವರ್ಷದ ಮೊದಲ ಕ್ವಾರ್ಟರ್ನಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಆರ್ಬಿಐ ನಿರೀಕ್ಷಿಸಿದ್ದಕ್ಕಿಂತ ತುಸು ಕಡಿಮೆ ಆಗಿದೆ. ಸರ್ಕಾರ ಇಂದು ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ 2023ರ ಏಪ್ರಿಲ್ನಿಂದ ಜೂನ್ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಭಾರತದ ಆರ್ಥಿಕತೆ ಶೇ. 7.8ರಷ್ಟು ಹೆಚ್ಚಿದೆ. ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿನ (2022ರ ಏಪ್ರಿಲ್ನಿಂದ ಜೂನ್ವರೆಗೆ) ಜಿಡಿಪಿ ಬೆಳವಣಿಗೆಗೆ ಹೋಲಿಸಿದರೆ ಆಗಿರುವ ಹೆಚ್ಚಳ. ಇನ್ನು ಹಿಂದಿನ ಕ್ವಾರ್ಟರ್ನಲ್ಲಿ, ಅಂದರೆ 2023ರ ಜನವರಿಯಿಂದ ಮಾರ್ಚ್ವರೆಗಿನ ಅವಧಿಯಲ್ಲಿ ಜಿಡಿಪಿ ಶೇ. 6.1ರಷ್ಟು ಹೆಚ್ಚಳವಾಗಿತ್ತು.
ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಹಿಂದಿನ ಎಂಪಿಸಿ ಸಭೆಯಲ್ಲಿ, ಮೊದಲ ಕ್ವಾರ್ಟರ್ನಲ್ಲಿ ಶೇ. 8ರಷ್ಟು ಜಿಡಿಪಿ ಹೆಚ್ಚಬಹುದು ಎಂದು ನಿರೀಕ್ಷಿಸಿತ್ತು. ಇತ್ತೀಚೆಗೆ ರಾಯ್ಟರ್ಸ್ ನಡೆಸಿದ ಸಮೀಕ್ಷೆ ಅಥವಾ ಪೋಲ್ನಲ್ಲಿ ವಿವಿಧ ಕಾರ್ಪೊರೇಟ್ ಆರ್ಥಿಕ ತಜ್ಞರು ಅಂದಾಜಿಸಿದ ಪ್ರಕಾರ ಸರಾಸರಿಯಾಗಿ ಜಿಡಿಪಿ ಶೇ. 8ಕ್ಕಿಂತ ತುಸು ಹೆಚ್ಚು ಬೆಳೆಯಬಹುದು ಎಂಬ ಅಂದಾಜಿತ್ತು. ವಾಸ್ತವವಾಗಿ ಆಗಿರುವ ಜಿಡಿಪಿ ಬೆಳವಣಿಗೆ ಸರಿಸುಮಾರು ಆ ಅಂದಾಜಿಗೆ ಸಮೀಪ ಇದೆ.
ಇದನ್ನೂ ಓದಿ: ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆ ಆಗಿದೆ, ಯಾವ್ಯಾವುದಕ್ಕೆ ಲಿಂಕ್ ಆಗಿದೆ? ತಿಳಿಯುವ ಸುಲಭ ವಿಧಾನ ಇಲ್ಲಿದೆ
2023-24ರ ಏಪ್ರಿಲ್ನಿಂದ ಜೂನ್ವರೆಗಿನ ಕ್ವಾರ್ಟರ್ನಲ್ಲಿ ವಿವಿಧ ದೇಶಗಳ ಜಿಡಿಪಿ ಬೆಳವಣಿಗೆಯನ್ನು ಗಮನಿಸಿದರೆ, ಭಾರತದ್ದು ಅತಿವೇಗದ ಬೆಳವಣಿಗೆಯಾಗಿದೆ. ಚೀನಾದ ಜಿಡಿಪಿ ಇದೇ ಅವಧಿಯಲ್ಲಿ ಸಾಧಿಸಿದ್ದು ಶೇ. 6.3ರಷ್ಟು ಪ್ರಗತಿ ಮಾತ್ರವೇ. ಜಪಾನ್ ಶೇ. 6, ಅಮೆರಿಕ ಶೇ. 2.1ರಷ್ಟು ಜಿಡಿಪಿ ವೃದ್ಧಿ ಕಂಡಿವೆ. ಬ್ರಿಟನ್ ದೇಶದ ಜಿಡಿಪಿ ಕೇವಲ 0.4ರಷ್ಟು ಮಾತ್ರ ಬೆಳೆದರೆ, ಜರ್ಮನಿಯ ಆರ್ಥಿಕ ಪ್ರಗತಿ ಮೈನಸ್ ಶೇ. 0.2ಕ್ಕೆ ಕುಸಿದಿದೆ.
ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್ಎಸ್ಒ) ಬಿಡುಗಡೆ ಮಾಡಿದ ದತ್ತಾಂಶದಲ್ಲಿ ಜಿಡಿಪಿ ವಿವರ ಒದಗಿಸಲಾಗಿದೆ. 2023-24ರ ಹಣಕಾಸು ವರ್ಷದ ಮೊದಲ ಕ್ವಾರ್ಟರ್ನಲ್ಲಿ ಒಟ್ಟಾರೆ ರಿಯಲ್ ಜಿಡಿಪಿ 40.37 ಲಕ್ಷಕೋಟಿ ರೂ ಮಟ್ಟದಲ್ಲಿರಬಹುದು ಎಂದು ಅಂದಾಜಿಸಲಾಗಿದೆ. 2022-23ರ ಹಣಕಾಸು ವರ್ಷದ ಇದೇ ಕ್ವಾರ್ಟರ್ನಲ್ಲಿ ಜಿಡಿಪಿ 37.44 ಲಕ್ಷಕೋಟಿ ರೂ ಇತ್ತು. ಅದಕ್ಕೆ ಹೋಲಿಸಿದರೆ ಈ ವರ್ಷ ಶೇ. 7.8ರಷ್ಟು ಜಿಡಿಪಿ ಬೆಳೆದಿದೆ.
ಇದನ್ನೂ ಓದಿ: ಮೊದಲ ತ್ರೈಮಾಸಿಕದಲ್ಲಿ ಶೇ. 8ಕ್ಕಿಂತ ಹೆಚ್ಚು ಆರ್ಥಿಕವೃದ್ಧಿ ಸಾಧ್ಯತೆ; ಆರ್ಥಿಕತಜ್ಞರ ಸರಾಸರಿ ಲೆಕ್ಕಾಚಾರ
ಆದರೆ, 2021-22ರ ಮೊದಲ ಕ್ವಾರ್ಟರ್ಗೆ ಹೋಲಿಸಿದರೆ ಕಳೆದ ವರ್ಷದ ಕ್ವಾರ್ಟರ್ನಲ್ಲಿ ಜಿಡಿಪಿ ಬರೋಬ್ಬರಿ ಶೇ. 13.1ರಷ್ಟು ಹೈಜಂಪ್ ಆಗಿತ್ತು.
ಭಾರತದ ಹಣಕಾಸು ಶಿಸ್ತಿಗೆ ಕೈಗನ್ನಡಿಯಾಗುವ ವಿತ್ತೀಯ ಕೊರತೆ ಮೊದಲ ಕ್ವಾರ್ಟರ್ನಲ್ಲಿ ಶೇ. 33.9ರಷ್ಟು ಇರುವುದು ಗೊತ್ತಾಗಿದೆ. ದತ್ತಾಂಶದ ಪ್ರಕಾರ 2023ರ ಏಪ್ರಿಲ್ನಿಂದ ಜುಲೈವರೆಗಿನ ಅವದಿಯಲ್ಲಿ ವಿತ್ತೀಯ ಕೊರತೆ 6.06 ಲಕ್ಷಕೋಟಿ ರೂನಷ್ಟಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:59 pm, Thu, 31 August 23