Retail Inflation: ಕೊನೆಗೂ ಆರ್​ಬಿಐ ಸಹನೆಯ ಮಟ್ಟಕ್ಕೆ ಚಿಲ್ಲರೆ ಹಣದುಬ್ಬರ; ಶೇ 5.88ಕ್ಕೆ ಇಳಿಕೆ

| Updated By: Ganapathi Sharma

Updated on: Dec 12, 2022 | 6:20 PM

ಅಕ್ಟೋಬರ್​ ತಿಂಗಳಲ್ಲಿ ಶೇಕಡಾ 6.77 ಇದ್ದ ಚಿಲ್ಲರೆ ಹಣದುಬ್ಬರ ನವೆಂಬರ್​ನಲ್ಲಿ ಶೇಕಡಾ 5.88ಕ್ಕೆ ಇಳಿಕೆಯಾಗಿದೆ. ಇದರೊಂದಿಗೆ ಸತತ 11 ತಿಂಗಳ ಬಳಿಕ ಚಿಲ್ಲರೆ ಹಣದುಬ್ಬರ ಶೇಕಡಾ 6ಕ್ಕಿಂತ ಕೆಳಗಿಳಿದಂತಾಗಿದೆ.

Retail Inflation: ಕೊನೆಗೂ ಆರ್​ಬಿಐ ಸಹನೆಯ ಮಟ್ಟಕ್ಕೆ ಚಿಲ್ಲರೆ ಹಣದುಬ್ಬರ; ಶೇ 5.88ಕ್ಕೆ ಇಳಿಕೆ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಚಿಲ್ಲರೆ ಹಣದುಬ್ಬರ (Retail Inflation) ಪ್ರಮಾಣ ಕೊನೆಗೂ ಆರ್​​ಬಿಐ (RBI) ಸಹನೆಯ ಮಟ್ಟಕ್ಕೆ ಇಳಿಕೆಯಾಗಿದೆ. ಅಕ್ಟೋಬರ್​ ತಿಂಗಳಲ್ಲಿ ಶೇಕಡಾ 6.77 ಇದ್ದ ಚಿಲ್ಲರೆ ಹಣದುಬ್ಬರ ನವೆಂಬರ್​ನಲ್ಲಿ ಶೇಕಡಾ 5.88ಕ್ಕೆ ಇಳಿಕೆಯಾಗಿದೆ. ಇದರೊಂದಿಗೆ ಸತತ 11 ತಿಂಗಳ ಬಳಿಕ ಚಿಲ್ಲರೆ ಹಣದುಬ್ಬರ ಶೇಕಡಾ 6ಕ್ಕಿಂತ ಕೆಳಗಿಳಿದಂತಾಗಿದೆ. ಹಣದುಬ್ಬರಕ್ಕೆ ಸಂಬಂಧಿಸಿದ ದತ್ತಾಂಶವನ್ನು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (National Statistics Office) ಸೋಮವಾರ ಬಿಡುಗಡೆ ಮಾಡಿದೆ. ಹಣದುಬ್ಬರ ತಡೆಯುವ ಸಲುವಾಗಿ ಆರ್​ಬಿಐ ಹಣಕಾಸು ನೀತಿ ಸಮಿತಿಯು ಡಿಸೆಂಬರ್ 7ರಂದು ರೆಪೊ ದರವನ್ನು 35 ಮೂಲಾಂಶದಷ್ಟು ಹೆಚ್ಚಿಸಿ ಶೇಕಡಾ 6.25ಕ್ಕೆ ನಿಗದಿ ಮಾಡಿತ್ತು. 20206 ಮಾರ್ಚ್ ಒಳಗಾಗಿ ಚಿಲ್ಲರೆ ಹಣದುಬ್ಬರವನ್ನು ಶೇಕಡಾ 2ರಿಂದ 4ರ ಮಟ್ಟದಲ್ಲಿ ಇರುವಂತೆ ಮಾಡುವುದು ಆರ್​ಬಿಐ ಗುರಿಯಾಗಿದೆ.

ಗ್ರಾಹಕ ದರ ಆಧಾರಿತ ಹಣದುಬ್ಬದರ ಅರ್ಧದಷ್ಟು ಆಹಾರ ಹಣದುಬ್ಬರವೇ ಇದ್ದು, ನವೆಂಬರ್​​​ನಲ್ಲಿ ಶೇಕಡಾ 4.67ಕ್ಕೆ ಇಳಿಕೆಯಾಗಿದೆ. ಇದು ಅಕ್ಟೋಬರ್​ನಲ್ಲಿ ಶೇಕಡಾ 7.01ರಷ್ಟಿತ್ತು. ಚಿಲ್ಲರೆ ಹಣದುಬ್ಬರ ಸತತ ಮೂರು ತ್ರೈಮಾಸಿಕಗಳಿಂದಲೂ ಹೆಚ್ಚು ಅವಧಿಗೆ ಶೇಕಡಾ 6ರ ಮೇಲಿದ್ದುದರಿಂದ ಆರ್​ಬಿಐ ಹಣಕಾಸು ನೀತಿ ಸಮಿತಿ ಕಳೆದ ತಿಂಗಳು ವಿಶೇಷ ಸಭೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.

ಇದನ್ನೂ ಓದಿ: RBI Inflation Report: ಹಣದುಬ್ಬರ ಕುರಿತ ಆರ್​ಬಿಐ ವರದಿ ಬಹಿರಂಗಪಡಿಸಲಾಗದು; ಕೇಂದ್ರ

ಬಳಿಕ ಡಿಸೆಂಬರ್​​ 7ರಂದು ಹಣಕಾಸು ನೀತಿ ಸಮಿತಿ ಸಭೆಯ ಬಳಿಕ ರೆಪೊ ದರ ಹೆಚ್ಚಿಸಿದ್ದ ಆರ್​ಬಿಐ, ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣದುಬ್ಬರ ಸರಾಸರಿ ಶೇಕಡಾ 6.7ರಷ್ಟು ಇರಲಿದೆ ಎಂದು ಅಂದಾಜಿಸಿತ್ತು. ಆದರೆ, ಇದೀಗ ನವೆಂಬರ್ ತಿಂಗಳ ಚಿಲ್ಲರೆ ಹಣದುಬ್ಬರ ಸಹನೆಯ ಮಟ್ಟಕ್ಕೆ ಇಳಿಕೆಯಾಗಿರುವುದು ತುಸು ನಿರಾಳತೆ ಒದಗಿಸಿದೆ.

ಕೈಗಾರಿಕಾ ಉತ್ಪಾದನೆ ಕುಸಿತ, ವಿದ್ಯುತ್ ಉತ್ಪಾದನೆ ಹೆಚ್ಚಳ

ಅಕ್ಟೋಬರ್​ ತಿಂಗಳ ಕೈಗಾರಿಕಾ ಉತ್ಪಾದನಾ ಪ್ರಮಾಣ ಕಳೆದ ವರ್ಷ ಅದೇ ಅವಧಿಗೆ ಹೋಲಿಸಿದರೆ ಶೇಕಡಾ 4ರಷ್ಟು ಕುಸಿದಿರುವುದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಬಿಡುಗಡೆ ಮಾಡಿರುವ ಪ್ರತ್ಯೇಕ ದತ್ತಾಂಶಗಳಿಂದ ತಿಳಿದುಬಂದಿದೆ. ಉತ್ಪಾದನಾ ಕ್ಷೇತ್ರದ ಬೆಳವಣಿಗೆ ಅಕ್ಟೋಬರ್​ನಲ್ಲಿ ಶೇಕಡಾ 5.6ಕ್ಕೆ ಇಳಿಕೆಯಾಗಿದೆ. ಗಣಿಗಾರಿಕೆ ಕ್ಷೇತ್ರ ಶೇಕಡಾ 2.5 ಹಾಗೂ ವಿದ್ಯುತ್ ಉತ್ಪಾದನೆ ಶೇಕಡಾ 1.2ರಷ್ಟು ಹೆಚ್ಚಳವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:57 pm, Mon, 12 December 22