Smartphone Export: ಭಾರತದ ಸ್ಮಾರ್ಟ್​ಫೋನ್ ರಫ್ತು; ಸ್ಯಾಮ್ಸಂಗ್​ ಹಿಂದಿಕ್ಕಲಿದೆ ಆ್ಯಪಲ್

| Updated By: ಗಣಪತಿ ಶರ್ಮ

Updated on: Dec 05, 2022 | 6:56 PM

ಏಪ್ರಿಲ್ - ಅಕ್ಟೋಬರ್ ಅವಧಿಯಲ್ಲಿ ಭಾರತವು ಒಟ್ಟು 5 ಶತಕೋಟಿ ಡಾಲರ್​ ಮೌಲ್ಯದ ಸ್ಮಾರ್ಟ್​​ಫೋನ್​ಗಳನ್ನು ರಫ್ತು ಮಾಡಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ವರ್ಷ ಸ್ಮಾರ್ಟ್​​ಫೋನ್​ಗಳ ರಫ್ತು ಪ್ರಮಾಣದಲ್ಲಿ ಶೇಕಡಾ 127ರಷ್ಟು ಹೆಚ್ಚಾಗಿದೆ.

Smartphone Export: ಭಾರತದ ಸ್ಮಾರ್ಟ್​ಫೋನ್ ರಫ್ತು; ಸ್ಯಾಮ್ಸಂಗ್​ ಹಿಂದಿಕ್ಕಲಿದೆ ಆ್ಯಪಲ್
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಭಾರತದಿಂದ ಅತಿಹೆಚ್ಚು ಸ್ಮಾರ್ಟ್​ಫೋನ್​ಗಳನ್ನು (Smartphone) ರಫ್ತು (Export) ಮಾಡುವ ಕಂಪನಿಗಳ ಪೈಕಿ ದಕ್ಷಿಣ ಕೊರಿಯಾ ಮೂಲದ ಸ್ಯಾಮ್ಸಂಗ್​ (Samsung) ಅನ್ನು ಆ್ಯಪಲ್ (Apple) ಶೀಘ್ರದಲ್ಲೇ ಹಿಂದಿಕ್ಕುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ಆ್ಯಪಲ್​ ಸ್ಮಾರ್ಟ್​ಫೋನ್​ಗಳ ರಫ್ತು ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಏಪ್ರಿಲ್ – ಅಕ್ಟೋಬರ್ ಅವಧಿಯಲ್ಲಿ 2.2 ಶತಕೋಟಿ ಡಾಲರ್ ಮೌಲ್ಯದ ಸ್ಮಾರ್ಟ್​ಫೋನ್​ಗಳನ್ನು ಆ್ಯಪಲ್​ ರಫ್ತು ಮಾಡಿದ್ದರೆ, ಸ್ಯಾಮ್ಸಂಗ್ 2.8 ಶತಕೋಟಿ ಡಾಲರ್ ಮೌಲ್ಯದ ಸ್ಮಾರ್ಟ್​​ಫೋನ್​ಗಳನ್ನು ರಫ್ತು ಮಾಡಿದೆ ಎಂದು ‘ಫೈನಾನ್ಶಿಯಲ್ ಎಕ್ಸ್​ಪ್ರೆಸ್’ ವರದಿ ಮಾಡಿದೆ.

ಏಪ್ರಿಲ್ – ಅಕ್ಟೋಬರ್ ಅವಧಿಯಲ್ಲಿ ಭಾರತವು ಒಟ್ಟು 5 ಶತಕೋಟಿ ಡಾಲರ್​ ಮೌಲ್ಯದ ಸ್ಮಾರ್ಟ್​​ಫೋನ್​ಗಳನ್ನು ರಫ್ತು ಮಾಡಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ವರ್ಷ ಸ್ಮಾರ್ಟ್​​ಫೋನ್​ಗಳ ರಫ್ತು ಪ್ರಮಾಣದಲ್ಲಿ ಶೇಕಡಾ 127ರಷ್ಟು ಹೆಚ್ಚಾಗಿದೆ. ಉತ್ಪಾದನೆ ಸಂಯೋಜಿತ ಭತ್ಯೆ (PLI) ಯೋಜನೆಯಡಿ ಉಭಯ ಕಂಪನಿಗಳು ಭಾರತದಲ್ಲಿ ಸ್ಮಾರ್ಟ್​​ಫೋನ್ ತಯಾರಿಸುತ್ತಿವೆ.

ಫಾಕ್ಸ್​ಕಾನ್, ಪೆಗಾಟ್ರಾನ್ ಹಾಗೂ ವಿಸ್ಟ್ರಾನ್​ ಕಂಪನಿಗಳು ಭಾರತದಲ್ಲಿ ಆ್ಯಪಲ್ ಸ್ಮಾರ್ಟ್​ಫೋನ್ ತಯಾರಿಸುತ್ತಿವೆ. 21ನೇ ಹಣಕಾಸು ವರ್ಷದ ಸ್ಮಾರ್ಟ್​ಫೋನ್ ರಫ್ತಿನಲ್ಲಿ ಆ್ಯಪಲ್ ಪಾಲು ಶೇಕಡಾ 10ರಷ್ಟು ಇದ್ದುದು 22ನೇ ಹಣಕಾಸು ವರ್ಷದಲ್ಲಿ ಶೇಕಡಾ 50ಕ್ಕೆ ತಲುಪಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: Tata Group: ಭಾರತದಲ್ಲಿ ಐಫೋನ್ ತಯಾರಿಸುವ ವಿಸ್ಟ್ರಾನ್ ಬೆಂಗಳೂರು ಘಟಕ ಖರೀದಿಗೆ ಟಾಟಾ ಒಲವು

ದೇಶದ ಎಲೆಕ್ಟ್ರಾನಿಕ್ಸ್ ರಫ್ತು 21ನೇ ಹಣಕಾಸು ವರ್ಷದ ಏಪ್ರಿಲ್ – ಅಕ್ಟೋಬರ್ ಅವಧಿಯಲ್ಲಿ 7.87 ಶತಕೋಟಿ ಡಾಲರ್ ಇದ್ದುದು, 22ನೇ ಹಣಕಾಸು ವರ್ಷದಲ್ಲಿ 12.14 ಶತಕೋಟಿ ಡಾಲರ್​ಗೆ ಹೆಚ್ಚಾಗಿದೆ. ಒಟ್ಟು ರಫ್ತಿನಲ್ಲಿ ಶೇಕಡಾ 30ರಷ್ಟು ಮೊಬೈಲ್ ಫೋನ್​ ಪಾಲಿದೆ.

ಸ್ಮಾರ್ಟ್‌ಫೋನ್ ರಫ್ತು ದ್ವಿಗುಣಗೊಂಡಿರುವುದು ಎಲೆಕ್ಟ್ರಾನಿಕ್ಸ್ ರಫ್ತು ಹೆಚ್ಚಳಕ್ಕೆ ಕಾರಣವಾಗಿದೆ. ಚೀನಾ ಹಾಗೂ ವಿಯೆಟ್ನಾಂ ಜತೆ ಪೈಪೋಟಿಗೂ ಕಾರಣವಾಗಿದೆ. ಪೂರೈಕೆ ಸರಪಳಿ, ಹೂಡಿಕೆ ಭಾವನೆ ಉನ್ನತ ಮಟ್ಟದಲ್ಲಿರುವಂತೆ ನಾವು ನೋಡಿಕೊಳ್ಳಬೇಕಿದೆ ಎಂದು ‘ಇಂಡಿಯಾ ಸೆಲ್ಯುಲರ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್​​ನ (ಐಸಿಇಎ)’ ಅಧ್ಯಕ್ಷ ಪಂಕಜ್ ಮೊಹಿಂದ್ರೂ ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ