
ನವದೆಹಲಿ, ಮೇ 4: ಪಹಲ್ಗಾಂ ಉಗ್ರ ದಾಳಿ ಬಳಿಕ ಪಾಕಿಸ್ತಾನ (Pakistan) ವಿರುದ್ಧ ಭಾರತದ ಕಠಿಣ ನಿಲುವು ಮುಂದುವರಿದಿದೆ. ಸಿಂಧೂ ನದಿನೀರು ಒಪ್ಪಂದ ರದ್ದು ಮಾಡಿದ್ದು, ರಾಜತಾಂತ್ರಿಕ ಸಂಬಂಧ ಕಡಿದಿದ್ದು, ಅಟ್ಟಾರಿ ಗಡಿ ಬಂದ್ ಮಾಡಿದ್ದು, ವಾಯು ಪ್ರದೇಶವನ್ನು ನಿರ್ಬಂಧಿಸಿದ್ದು ಹೀಗೆ ಸಾಲ ಸಾಲು ಕ್ರಮಗಳನ್ನು ಭಾರತ ತೆಗೆದುಕೊಂಡಿದೆ. ಇಷ್ಟಕ್ಕೆ ಸುಮ್ಮನಾಗದ ಭಾರತ ಇನ್ನೂ ಮುಂದುವರಿದು ನಿನ್ನೆ ಒಂದೇ ದಿನ ಮೂರು ಕ್ರಮಗಳನ್ನು ಪಾಕಿಸ್ತಾನದ ವಿರುದ್ಧ ಕೈಗೊಂಡಿದೆ.
ಪಾಕಿಸ್ತಾನ ಮೂಲಕ ಯಾವುದೇ ಸರಕುಗಳನ್ನು ನೇರವಾಗಿಯಾಗಲೀ ಪರೋಕ್ಷವಾಗಿಯಾಗಲೀ ಆಮದು ಮಾಡಿಕೊಳ್ಳದಂತೆ ಭಾರತವು ನಿಷೇಧ ಹೇರಿದೆ. ಈ ಕ್ರಮ ಕೂಡಲೇ ಜಾರಿಯಾಗಲಿದೆ. ಅಂತಾರಾಷ್ಟ್ರೀಯ ವ್ಯಾಪಾರದ ವೇಳೆ ನಿಷೇಧಗಳಿಂದ ತಪ್ಪಿಸಿಕೊಳ್ಳಲು ಒಂದು ದೇಶದ ಮಾಲನ್ನು ಬೇರೆ ದೇಶಕ್ಕೆ ಸಾಗಿಸಿ, ಆ ಮೂಲಕ ರಫ್ತು ಮಾಡುವ ಒಂದು ಕಳ್ಳತಂತ್ರ ಇದೆ. ಭಾರತ ಇಂಥದ್ದಕ್ಕೂ ಕಡಿವಾಣ ಹಾಕಿ ಪಾಕಿಸ್ತಾನದಿಂದ ಪರೋಕ್ಷ ವ್ಯಾಪಾರವನ್ನೂ ನಿಲ್ಲಿಸಿದೆ.
ಇದನ್ನೂ ಓದಿ: ಅವಧಿಗೂ ಮುನ್ನವೇ ಕೃಷ್ಣಮೂರ್ತಿ ಸುಬ್ರಮಣಿಯನ್ ಅವರ ಐಎಂಎಫ್ ಮಂಡಳಿ ಅವಧಿ ಮೊಟಕುಗೊಳಿಸಿದ ಭಾರತ
ಪಾಕಿಸ್ತಾನದ ಯಾವ ಹಡಗುಗಳು ಭಾರತದ ಯಾವುದೇ ಬಂದುಗಳನ್ನು ಪ್ರವೇಶಿಸದಂತೆ ನಿಷೇಧಿಸಲಾಗಿದೆ. ಹಾಗೆಯೇ, ಭಾರತದ ಯಾವ ಹಡಗು ಕೂಡ ಪಾಕಿಸ್ತಾನದ ಬಂದರುಗಳನ್ನು ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ.
ಭಾರತದ ಆಸ್ತಿಗಳು ಮತ್ತು ಸೌಕರ್ಯಗಳ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಪಾಕಿಸ್ತಾನದಿಂದ ಭಾರತಕ್ಕೆ ಯಾವುದೇ ಪೋಸ್ಟ್ ಬರದಂತೆ ನಿರ್ಬಂಧಿಸಲಾಗಿದೆ. ಪಾಕಿಸ್ತಾನದೊಂದಿಗೆ ಭಾರತ ಪೂರ್ಣವಾಗಿ ಪೋಸ್ಟಲ್ ಸರ್ವಿಸ್ ಲಿಂಕ್ ಅನ್ನು ಕಡಿದುಕೊಂಡಿದೆ. ನೆಲದ ಮೂಲಕವಾಗಲಿ, ಆಕಾಶದಿಂದಲಾಗಲೀ ಪಾಕಿಸ್ತಾನದಿಂದ ಭಾರತಕ್ಕೆ ಯಾವುದೇ ಪತ್ರ ಇತ್ಯಾದಿ ಪಾರ್ಸಲ್ ಬರದಂತೆ, ಅಥವಾ ಇಲ್ಲಿಂದ ಪಾಕಿಸ್ತಾನಕ್ಕೆ ಅವು ಹೋಗದಂತೆ ಭಾರತ ನಿಷೇಧಿಸಿದೆ.
ಇದನ್ನೂ ಓದಿ:
ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರರು ದಾಳಿ ನಡೆಸಿ 28 ಪ್ರವಾಸಿಗರನ್ನು ಬಲಿಪಡೆದ ಘಟನೆ ಬಳಿಕ ಭಾರತ ಕೈಗೊಳ್ಳುತ್ತಿರುವ ವಿವಿಧ ಕ್ರಮಗಳ ಮುಂದುವರಿದ ಭಾಗ ಇದು. ಪುಲ್ವಾಮ ದಾಳಿಗೆ ಪ್ರತಿಯಾಗಿ ಭಾರತ ಪಾಕಿಸ್ತಾನದ ಬಾಲಾಕೋಟ್ನಲ್ಲಿ ಏರ್ಸ್ಟ್ರೈಕ್ ನಡೆಸಿತ್ತು. ಈ ಬಾರಿ ಇನ್ನೂ ದೊಡ್ಡ ಮಟ್ಟದಲ್ಲಿ ಪ್ರತೀಕಾರ ಕ್ರಮ ತೆಗೆದುಕೊಳ್ಳುವುದಾಗಿ ಭಾರತ ಹೇಳಿದೆ. ಆದರೆ, ಯಾವಾಗ ಮತ್ತು ಯಾವ ಕ್ರಮ ಎಂಬುದನ್ನು ಸೇನೆಯೇ ನಿರ್ಧರಿಸಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ