ನವದೆಹಲಿ, ಜನವರಿ 16: ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಿರುವ ಭಾರತ ಮುಂದಿನ ವರ್ಷ ಇನ್ನೊಂದು ಹಂತ ಮೇಲೇರಬಹುದು. ಉದ್ಯಮ ಸಂಘಟನೆಯಾದ ಪಿಎಚ್ಡಿಸಿಸಿಐ ಪ್ರಕಾರ 2026ರಲ್ಲಿ ಭಾರತದ ಆರ್ಥಿಕತೆಯು ಜಪಾನ್ ಅನ್ನು ಮೀರಿಸಿ ನಾಲ್ಕನೇ ಸ್ಥಾನಕ್ಕೆ ಏರರಬಹುದು. ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 6.8ರಷ್ಟು ಹೆಚ್ಚಬಹುದು. ಮುಂಬರುವ ಹಣಕಾಸು ವರ್ಷದಲ್ಲಿ (2025-26) ಜಿಡಪಿ ಶೇ. 7.7ರಷ್ಟು ಹೆಚ್ಚಬಹುದು. ಇದರಿಂದ ಜಪಾನ್ ಜಿಡಿಪಿಗಿಂತ ಭಾರತದ ಜಿಡಿಪಿ ಹೆಚ್ಚಬಹುದು ಎಂದು ಪಿಎಚ್ಡಿಸಿಸಿಐ ನಿರೀಕ್ಷಿಸಿದೆ.
ಕಳೆದ ಮೂರು ವರ್ಷಗಳಿಂದ ಭಾರತದ ಆರ್ಥಿಕತೆಯು ಹಲವು ಸವಾಲುಗಳ ನಡುವೆಯೂ ಬೆಳವಣಿಗೆ ಹೊಂದುತ್ತಿದೆ. 2026ರೊಳಗೆ ಜಪಾನ್ ಅನ್ನು ಹಿಂದಿಕ್ಕೆ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಬಹುದು ಎಂದು ಪಿಎಚ್ಡಿ ವಾಣಿಜ್ಯ ಮತ್ತು ಉದ್ಯಮ ಮಂಡಳಿ ಅಧ್ಯಕ್ಷ ಹೇಮಂತ್ ಜೈನ್ ಅವರು ಹೇಳಿದರೆಂದು ಬ್ಯುಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆ ವರದಿ ಮಾಡಿದೆ.
ಇದನ್ನೂ ಓದಿ: Income tax cut: ಕೇಂದ್ರ ಬಜೆಟ್ 2025: ಆದಾಯ ತೆರಿಗೆ ಪ್ರಮಾಣ ಇಳಿಕೆ ಸಾಧ್ಯತೆ
ಹಣದುಬ್ಬರ ಸಾಕಷ್ಟು ಇಳಿಕೆ ಆಗುವ ನಿರೀಕ್ಷೆ ಇರುವುದರಿಂದ ಆರ್ಬಿಐ ತನ್ನ ರಿಪೋ ದರವನ್ನು ಕಡಿಮೆಗೊಳಿಸುವ ಸಾಧ್ಯತೆ ಇದೆ ಎಂದು ಪಿಎಚ್ಡಿಸಿಸಿಐ ಅಭಿಪ್ರಾಯಪಟ್ಟಿದೆ. ಫೆಬ್ರವರಿಯಲ್ಲಿ ಆರ್ಬಿಐನ ಎಂಪಿಸಿ ಸಭೆ ನಡೆಯಲಿದ್ದು ಆ ವೇಳೆ ರಿಪೋ ದರವನ್ನು 25 ಮೂಲಾಂಕಗಳಷ್ಟು ಕಡಿಮೆ ಮಾಡಬಹುದು ಎಂಬುದು ಅದರ ಅನಿಸಿಕೆ. ಸದ್ಯ ರಿಪೋ ದರ ಶೇ. 6.5ರಷ್ಟಿದೆ.
ಹಣದುಬ್ಬರ ದರ ಶೇ. 4ರಿಂದ ಶೇ. 2.5ರ ಶ್ರೇಣಿಗೆ ತಲುಪುವ ಸಾಧ್ಯತೆ ಇದೆ. ಹಾಗೇನಾದರೂ ಆದಲ್ಲಿ ಆರ್ಬಿಐಗೆ ಬಡ್ಡಿದರ ಇಳಿಸಲು ಹೆಚ್ಚು ಅವಕಾಶ ಇರಲಿದೆ.
ಮಧ್ಯಮವರ್ಗದವರ ಮೇಲೆ ಆದಾಯ ತೆರಿಗೆ ಅತಿಯಾಯಿತು ಎಂಬುದು ಪಿಎಚ್ಡಿಸಿಸಿಐನ ಅನಿಸಿಕೆ. ಗರಿಷ್ಠ ಆದಾಯ ತೆರಿಗೆ ದರದ ಬಗ್ಗೆಯೂ ಅದು ಅಸಮಾಧಾನ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಹಿಂಡನ್ಬರ್ಗ್ ರಿಸರ್ಚ್ ಬಂದ್; ಅದಾನಿ ಸಾಮ್ರಾಜ್ಯ ಅಲುಗಾಡಿಸಿದ್ದ ಅಮೆರಿಕದ ಶಾರ್ಟ್ಸೆಲ್ಲರ್ ಸಂಸ್ಥೆ ಮುಚ್ಚಿದ್ದು ಯಾಕೆ?
ಭಾರತದಲ್ಲಿ 15 ಲಕ್ಷ ರೂ ಮೇಲ್ಪಟ್ಟ ಆದಾಯಗಳಿಗೆ ಗರಿಷ್ಠ ಶೇ. 30ರಷ್ಟು ತೆರಿಗೆ ಹಾಕಲಾಗುತ್ತಿದೆ. 15 ಲಕ್ಷ ರೂ ಆದಾಯ ಗಳಿಸುತ್ತಿರುವವರು ಅಪ್ಪಟ ಮಧ್ಯಮ ವರ್ಗದವರು. ಇವರಿಗೆ ಗರಿಷ್ಠ ಟ್ಯಾಕ್ಸ್ ವಿಧಿಸುವುದು ಸರಿಯಲ್ಲ. ಇದು 40 ಲಕ್ಷ ರೂಗಿಂತ ಹೆಚ್ಚಿನ ಆದಾಯಕ್ಕೆ ಗರಿಷ್ಠ ಟ್ಯಾಕ್ಸ್ ವಿಧಿಸಲಿ. ಹಾಗೆಯೇ, ಗರಿಷ್ಠ ಟ್ಯಾಕ್ಸ್ ಶೇ. 30ರಷ್ಟಿದೆ. ಇದೂ ಕೂಡ ಅತಿಯಾಯಿತು. ಇದನ್ನು ಶೇ. 25ಕ್ಕಾದರೂ ಇಳಿಸಲಿ ಎಂಬುದು ಪಿಎಚ್ಡಿಸಿಸಿಐನ ಶಿಫಾರಸು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ