
ನವದೆಹಲಿ, ಫೆಬ್ರುವರಿ 13: ರಷ್ಯಾದಿಂದ ಸುಮಾರು 10,000 ಕೋಟಿ ರೂ ಮೌಲ್ಯದ 288 ಎಸ್-400 ಕ್ಷಿಪಣಿಗಳನ್ನು ಖರೀದಿಸಲು ರಕ್ಷಣಾ ಖರೀದಿ ಮಂಡಳಿ (ಡಿಎಸಿ) ಅನುಮೋದನೆ ನೀಡಿದೆ. ಮೊನ್ನೆಯಷ್ಟೇ ಸರ್ಕಾರವು 114 ರಫೇಲ್ ಯುದ್ಧವಿಮಾನಗಳನ್ನು ಖರೀದಿಸುತ್ತಿರುವುದಾಗಿ ಘೋಷಿಸಿತ್ತು. ಇದರ ಬೆನ್ನಲ್ಲೇ ಇದೀಗ 3.6 ಲಕ್ಷ ಕೋಟಿ ರೂ ಮೌಲ್ಯದ ವಿವಿಧ ಯುದ್ಧ ಸಾಮಗ್ರಿಗಳನ್ನು ಭಾರತ ಖರೀದಿಸಲು ಹೊರಟಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ಡಿಎಸಿ ನಿನ್ನೆ ಗುರುವಾರ (ಫೆ. 12) ವಿವಿಧ ಖರೀದಿಗಳಿಗೆ ಎಒಎನ್ (ಅವಶ್ಯಕವೆಂದು ಮಾನ್ಯತೆ) ನೀಡಿದೆ.
ರಷ್ಯಾದಿಂದ 288 ಎಸ್-400 ಕ್ಷಿಪಣಿಗಳನ್ನು ಖರೀದಿಸಲಾಗುತ್ತಿದೆ. ಇದರಲ್ಲಿ 120 ಕಿರು ಶ್ರೇಣಿಯ ಕ್ಷಿಪಣಿಗಳು, 168 ದೂರ ಶ್ರೇಣಿಯ ಕ್ಷಿಪಣಿಗಳು ಸೇರಿವೆ. ಇವನ್ನು ವೇಗದ ಪ್ರಕ್ರಿಯೆಯಲ್ಲಿ (ಎಫ್ಟಿಪಿ) ತ್ವರಿತವಾಗಿ ಖರೀದಿಸಲಾಗುತ್ತದೆ.
ಆ್ಯಂಟಿ ಟ್ಯಾಂಕ್ ಮೈನ್ಗಳು (ವಿಭವ್, ಟಿ-72 ಟ್ಯಾಂಕ್ಗಳು, ಇನ್ಫ್ಯಾಂಟ್ರಿ ಕಾಂಬ್ಯಾಟ್ ವೆಹಿಕಲ್ಗಳು ಮೊದಲಾದವು ಈ ಪಟ್ಟಿಯಲ್ಲಿ ಇವೆ. ನೌಕಾಸೇನೆಗೆ 4 ಎಂಡಬ್ಲ್ಯು ಮರೈನ್ ಗ್ಯಾಸ್ ಟರ್ಬೈನ್ ಆಧಾರಿತ ಎಲೆಕ್ಟ್ರಿಕ್ ಪವರ್ ಜನರೇಟರ್, ಪಿ-8ಐ ಲಾಂಗ್ ರೇಂಜ್ ರೀಕಾನೈಸಾನ್ಸ್ ಏರ್ಕ್ರಾಫ್ಟ್ ಖರೀದಿ ಮಾಡಲಾಗುತ್ತದೆ.
ಇದನ್ನೂ ಓದಿ: ಭಾರತದಲ್ಲಿ ಹಣದುಬ್ಬರಕ್ಕೆ ಹೊಸ ಸ್ವರೂಪ; ಮೂಲ ವರ್ಷ ಬದಲಾವಣೆ; ಜನವರಿಯಲ್ಲಿ ಶೇ. 2.8 ಇನ್ಫ್ಲೇಶನ್ ದಾಖಲು
ಕರಾವಳಿ ಕಾವಲು ಪಡೆಗೆ ಅದರ ಡಾರ್ನಿಯರ್ ವಿಮಾನಕ್ಕಾಗಿ ಎಲೆಕ್ಟ್ರೋ ಆಪ್ತಿಕಲ್ ಸಿಸ್ಟಂ, ಇನ್ಫ್ರಾ ರೆಡ್ ಸಿಸ್ಟಂಗಳನ್ನು ಖರೀದಿಸಲು ಒಪ್ಪಲಾಗಿದೆ. ಇದರಿಂದ ಸಾಗರ ರಕ್ಷಣೆಯ ಕಾರ್ಯಕ್ಕೆ ಹೊಸ ಬಲ ಸಿಗುತ್ತದೆ.
ಭಾರತೀಯ ವಾಯುಪಡೆಗೆ ಎಸ್-400 ಕ್ಷಿಪಣಿಗಳ ಜೊತೆಗೆ 114 ರಫೇಲ್ ಯುದ್ಧ ವಿಮಾನಗಳ ಖರೀದಿಗೂ ಅನುಮೋದನೆ ಸಿಕ್ಕಿದೆ. ಈ ಪೈಕಿ 90 ಕ್ಷಿಪಣಿಗಳನ್ನು ಭಾರತದಲ್ಲೇ ತಯಾರಿಸಲಾಗುವುದು. ಈ ರಫೇಲ್ ಜೆಟ್ಗಳು ಭಾರತದ ವಾಯು ರಕ್ಷಣೆಯನ್ನು ಇನ್ನಷ್ಟು ಬಲಗೊಳಿಸಲಿವೆ.
ಇದನ್ನೂ ಓದಿ: ಹೊಸ ಆದಾಯ ತೆರಿಗೆ ಕಾಯ್ದೆಯಲ್ಲಿ ಪ್ಯಾನ್ ನಿಯಮಗಳ ಬದಲಾವಣೆ ಗಮನಿಸಿ…
ಆಪರೇಷನ್ ಸಿಂದೂರ್ ವೇಳೆ ಪಾಕಿಸ್ತಾನದ ಡ್ರೋನ್, ಕ್ಷಿಪಣಿಗಳ ದಾಳಿಯನ್ನು ಭಾರತದ ಎಸ್-400 ಟ್ರಯಂಫ್ ಡಿಫೆನ್ಸ್ ಸಿಸ್ಟಂ ಬಲವಾಗಿ ತಡೆದಿತ್ತು. ಈ ರಷ್ಯನ್ ನಿರ್ಮಿತ ಡಿಫೆನ್ಸ್ ಸಿಸ್ಟಂನಲ್ಲಿ ವಿವಿಧ ಶ್ರೇಣಿಯ ಕ್ಷಿಪಣಿಗಳ ಸಂಯೋಜನೆ ಇರುತ್ತದೆ. 40-400 ಕಿಮೀ ಶ್ರೇಣಿಯಲ್ಲಿ ಗುರಿ ಹೊಡೆದುರುಳಿಸಬಲ್ಲ ವಿವಿಧ ಕ್ಷಿಪಣಿಗಳ ವ್ಯವಸ್ಥೆಯಾದ ಇದು ವಿಶ್ವದ ಅತ್ಯಂತ ಪ್ರಬಲ ಏರ್ ಡಿಫೆನ್ಸ್ ಸಿಸ್ಟಂಗಳಲ್ಲಿ ಒಂದೆನಿಸಿದೆ.
ಆಪರೇಷನ್ ಸಿಂದೂರ್ ಸಮಯದಲ್ಲಿ ಸಾಕಷ್ಟು ಕ್ಷಿಪಣಿಗಳ ಬಳಕೆಯಾಗಿ ಹೋಗಿತ್ತು. ಅದನ್ನು ಭರ್ತಿ ಮಾಡಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ