ಭಾರತ-ಅಮೆರಿಕ ವ್ಯಾಪಾರ ಒಪ್ಪಂದ: ಜೂನ್ 1-4ಕ್ಕೆ ಭಾರತದಲ್ಲಿರಲಿದ್ದಾರೆ ಟ್ರಂಪ್ ಆಪ್ತ ಸಲಹೆಗಾರರು

India-US Trade Deal: ಅಮೆರಿಕದ ಟ್ರಂಪ್ ಸರ್ಕಾರದ ಉನ್ನತ ಮಟ್ಟದ ನಿಯೋಗವು ಭಾರತಕ್ಕೆ ಭೇಟಿ ನೀಡಲಿದ್ದು, ಭಾರತ-ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದ ಅಂತಿಮಗೊಳಿಸುವುದು ಇದರ ಮುಖ್ಯ ಉದ್ದೇಶ. ಸುಂಕ ಕಡಿತ, ರಕ್ಷಣೆ, ತಂತ್ರಜ್ಞಾನ ಮತ್ತು ಸೆಮಿಕಂಡಕ್ಟರ್ ವಲಯಗಳಲ್ಲಿ ಹೂಡಿಕೆ ಹೆಚ್ಚಿಸುವ ಬಗ್ಗೆ ಚರ್ಚೆ ನಡೆಯಲಿದೆ. ಇದು ಉಭಯ ದೇಶಗಳ ಆರ್ಥಿಕ ಸಂಬಂಧಗಳನ್ನು ಬಲಪಡಿಸಿ, ಮುಂಬರುವ ಮೋದಿ-ಟ್ರಂಪ್ ಶೃಂಗಸಭೆಗೆ ದಾರಿ ಮಾಡಿಕೊಡಲಿದೆ.

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ: ಜೂನ್ 1-4ಕ್ಕೆ ಭಾರತದಲ್ಲಿರಲಿದ್ದಾರೆ ಟ್ರಂಪ್ ಆಪ್ತ ಸಲಹೆಗಾರರು
ಭಾರತ ಅಮೆರಿಕ
Image Credit source: vifiindia

Updated on: May 27, 2026 | 9:20 PM

ನವದೆಹಲಿ, ಮೇ 27: ಭಾರತ ಮತ್ತು ಅಮೆರಿಕ ನಡುವಿನ ಮುಕ್ತ ವ್ಯಾಪಾರ ಒಪ್ಪಂದವನ್ನು (India US free trade agreement) ಅಂತಿಮಗೊಳಿಸುವ ನಿಟ್ಟಿನಲ್ಲಿ ಗಮನಾರ್ಹ ಬೆಳವಣಿಗೆಯೊಂದು ನಡೆಯಲಿದ್ದು, ಟ್ರಂಪ್ ಸರ್ಕಾರದ ಉನ್ನತ ಮಟ್ಟದ ಅಧಕಾರಿಗಳ ತಂಡವೊಂದು ಭಾರತಕ್ಕೆ ಭೇಟಿ ನೀಡಲಿದೆ. ಟ್ರಂಪ್ ಅವರಿಗೆ ಆಪ್ತರಾಗಿರುವ ಅಮೆರಿಕದ ಉನ್ನತ ಮಟ್ಟದ ಅಧಿಕಾರಿಗಳು ಮತ್ತು ಸಲಹೆಗಾರರ ತಂಡವು ಭಾರತ-ಅಮೆರಿಕ ದ್ವಿಪಕ್ಷೀಯ ಮುಕ್ತ ವ್ಯಾಪಾರ ಒಪ್ಪಂದದ (Bilateral Trade Agreement) ಕುರಿತು ನಿರ್ಣಾಯಕ ಮಾತುಕತೆ ನಡೆಸಲು ಬರುವ ಸೋಮವಾರ ನವದೆಹಲಿಗೆ ಭೇಟಿ ನೀಡಲಿದ್ದಾರೆ. ಜೂನ್ 1ರಿಂದ 4ರವರೆಗೆ ಭಾರತದ ತಂಡದೊಂದಿಗೆ ಇದು ಸತತ ಮಾತುಕತೆಗಳಲ್ಲಿ ನಿರತವಾಗಿರಲಿದೆ.

ಭೇಟಿಯ ಪ್ರಮುಖ ಉದ್ದೇಶ ಮತ್ತು ಅಜೆಂಡಾ

ಭಾರತ ಮತ್ತು ಅಮೆರಿಕ ನಡುವೆ ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿರುವ ಸಮಗ್ರ ವ್ಯಾಪಾರ ಒಪ್ಪಂದಕ್ಕೆ ಒಂದು ಅಂತಿಮ ರೂಪ ನೀಡುವುದು ಈ ಭೇಟಿಯ ಮುಖ್ಯ ಉದ್ದೇಶವಾಗಿದೆ. ಉಭಯ ದೇಶಗಳ ನಡುವಿನ ಸುಂಕ (Tariffs) ಮತ್ತು ರಫ್ತು-ಆಮದು ನಿಯಮಗಳ ಸರಳೀಕರಣದ ಕುರಿತು ಇಲ್ಲಿ ಚರ್ಚೆಯಾಗಲಿದೆ.

ಇದನ್ನೂ ಓದಿ: ಎಚ್​ಡಿಎಫ್​ಸಿಯಿಂದ 45 ಕೋಟಿ ರೂ ಅಕ್ರಮ ಬಡ್ಡಿ ಪಾವತಿ ವಿವಾದ; ಆರೋಪ ನಿರಾಕರಿಸಿದ ಬ್ಯಾಂಕ್

ರಕ್ಷಣೆ (Defence), ಸೆಮಿಕಂಡಕ್ಟರ್, ಕೃತಕ ಬುದ್ಧಿಮತ್ತೆ (AI), ನವೀಕರಿಸಬಹುದಾದ ಇಂಧನ ಹಾಗೂ ತಂತ್ರಜ್ಞಾನ ವಲಯಗಳಲ್ಲಿ ಅಮೆರಿಕದ ಹೂಡಿಕೆಯನ್ನು ಭಾರತದಲ್ಲಿ ಹೆಚ್ಚಿಸುವ ಹಾಗೂ ಭಾರತೀಯ ಕಂಪನಿಗಳಿಗೆ ಅಮೆರಿಕದ ಮಾರುಕಟ್ಟೆಯಲ್ಲಿ ಹೆಚ್ಚಿನ ಮುಕ್ತ ಅವಕಾಶ ಕಲ್ಪಿಸುವ ಬಗ್ಗೆ ಉನ್ನತ ಮಟ್ಟದ ಮಾತುಕತೆ ನಡೆಯಲಿದೆ.

ಡೊನಾಲ್ಡ್ ಟ್ರಂಪ್ ಅವರು “ಅಮೆರಿಕಾ ಫಸ್ಟ್” (America First) ನೀತಿಯನ್ನು ಅನುಸರಿಸುತ್ತಿದ್ದರೂ, ಚೀನಾಕ್ಕೆ ಪರ್ಯಾಯವಾಗಿ ಜಾಗತಿಕ ಪೂರೈಕೆ ಸರಪಳಿಯಲ್ಲಿ (Supply Chain) ಭಾರತವನ್ನು ಅತ್ಯಂತ ವಿಶ್ವಾಸಾರ್ಹ ಪಾಲುದಾರ ರಾಷ್ಟ್ರವನ್ನಾಗಿ ನೋಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ದ್ವಿಪಕ್ಷೀಯ ಮಾತುಕತೆ ಜಾಗತಿಕವಾಗಿ ಭಾರಿ ಮಹತ್ವ ಪಡೆದುಕೊಂಡಿದೆ.

ಭಾರತದ ನಿರೀಕ್ಷೆಗಳೇನು?

ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಉನ್ನತ ಅಧಿಕಾರಿಗಳು ಅಮೆರಿಕ ನಿಯೋಗವನ್ನು ಎದುರುಗೊಳ್ಳಲಿದ್ದು, ಭಾರತೀಯ ಉತ್ಪನ್ನಗಳ ಮೇಲಿನ ಸುಂಕ ಕಡಿತಕ್ಕೆ ಒತ್ತಾಯಿಸುವ ಸಾಧ್ಯತೆಯಿದೆ. ವಿಶೇಷವಾಗಿ ಐಟಿ ಸೇವೆಗಳು, ಔಷಧ ಉತ್ಪಾದನೆ (Pharmaceuticals) ಮತ್ತು ಕೃಷಿ ಉತ್ಪನ್ನಗಳ ರಫ್ತಿಗೆ ಅಮೆರಿಕದಲ್ಲಿ ಹೆಚ್ಚಿನ ವಿನಾಯಿತಿಗಳನ್ನು ಪಡೆಯಲು ಭಾರತ ಯೋಜಿಸಿದೆ.

ಇದನ್ನೂ ಓದಿ: ಷೇರುಬಜಾರಲ್ಲಿ ಅದಾನಿ ಪವರ್ ಅಬ್ಬರ; ಮಾರುಕಟ್ಟೆ ಮೌಲ್ಯದಲ್ಲಿ ಇನ್ಫೋಸಿಸ್ ಹಿಂದಿಕ್ಕಿದ್ದು ಹೇಗೆ?

ಸೋಮವಾರ ಆರಂಭವಾಗಲಿರುವ ಈ ಉನ್ನತ ಮಟ್ಟದ ಸಭೆಯು ಮುಂಬರುವ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ನಡೆಯಬಹುದಾದ ಅಧಿಕೃತ ಶೃಂಗಸಭೆಗೆ ದಾರಿಯಾಗಲಿದ್ದು, ಉಭಯ ದೇಶಗಳ ಆರ್ಥಿಕ ಪ್ರಗತಿಗೆ ಹೊಸ ವೇಗ ನೀಡುವ ನಿರೀಕ್ಷೆಯಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us