
ಮುಂಬೈ, ಫೆಬ್ರುವರಿ 21: ಪ್ರಸಕ್ತ ಹಣಕಾಸು ವರ್ಷದ (2024-25) ದ್ವಿತೀಯಾರ್ಧದಲ್ಲಿ ಭಾರತದ ಆರ್ಥಿಕ ಚಟುವಟಿಕೆ ಮತ್ತೆ ಹುರುಪು ಪಡೆದಿದೆ. ಇದರ ಕಿಡಿಯಿಂದ ಬೆಳವಣಿಗೆಯ ಹಾದಿ ಮತ್ತಷ್ಟು ದೂರ ಸಾಗಬಹುದು ಎಂದು ಆರ್ಬಿಐನ ಮಾಸಿಕ ಬುಲೆಟ್ನಲ್ಲಿ ತಿಳಿಸಲಾಗಿದೆ. ಜಾಗತಿಕ ಸವಾಲಿನ ವಾತಾರಣದ ಮಧ್ಯೆಯೂ 2025-26ರಲ್ಲಿ ಭಾರತದ ಆರ್ಥಿಕತೆ ಅತಿವೇಗದ ಬೆಳವಣಿಗೆ ಹೊಂದಬಹುದು ಎಂದು ಎಂದು ಐಎಂಎಫ್ ಮತ್ತು ವಿಶ್ವಬ್ಯಾಂಕ್ ಮಾಡಿರುವ ಅಂದಾಜನ್ನು ಆರ್ಬಿಐ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಈ ಬಾರಿಯ ಬಜೆಟ್ನಲ್ಲಿ ತೆಗೆದುಕೊಳ್ಳಲಾಗಿರುವ ಕೆಲ ನಿರ್ಧಾರಗಳನ್ನು ಆರ್ಬಿಐ ಶ್ಲಾಘಿಸಿದೆ. ಹಣಕಾಸು ಶಿಸ್ತು ಮತ್ತು ಪ್ರಗತಿಯ ಗುರಿ ಎರಡೂ ಉದ್ದೇಶಗಳನ್ನು ಬಜೆಟ್ನಲ್ಲಿ ಸಮತೋಲಿತವಾಗಿ ಒಳಗೊಳ್ಳಲಾಗಿದೆ. ಗೃಹ ಆದಾಯ ಮತ್ತು ಅನುಭೋಗ ಹೆಚ್ಚಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಪ್ರಗತಿ ಹೆಚ್ಚಿಸಲು ಬಂಡವಾಳ ವೆಚ್ಚದತ್ತಲೂ ಗಮನ ಕೊಡಲಾಗಿದೆ ಎಂದು ಆರ್ಬಿಐನ ಮಾಸಿಕ ಬುಲೆಟ್ನಲ್ಲಿ ವಿಶ್ಲೇಷಿಸಲಾಗಿದೆ.
ರೀಟೇಲ್ ಹಣದುಬ್ಬರ ಜನವರಿಯಲ್ಲಿ ಶೇ. 4.3ರಕ್ಕೆ ಇಳಿದಿದೆ. ಇದು ಐದು ತಿಂಗಳಲ್ಲೇ ಅತಿಕಡಿಮೆ ಹಣದುಬ್ಬರ ಸ್ಥಿತಿಯಾಗಿದೆ. ಮುಂಗಾರು ಫಸಲು ಉತ್ತಮವಾಗಿ ಬಂದು ಆಹಾರವಸ್ತುಗಳು ಮಾರುಕಟ್ಟೆಗೆ ಬಂದಿದ್ದರಿಂದ ತರಕಾರಿ ಬೆಲೆ ಸಾಕಷ್ಟು ಕಡಿಮೆ ಆಗಿದೆ. ಇದರಿಂದಾಗಿ ಹಣದುಬ್ಬರ ದರ ಇಳಿಯಲು ಸಾಧ್ಯವಾಯಿತು ಎಂಬುದನ್ನು ಆರ್ಬಿಐ ವರದಿಯಲ್ಲಿ ಗಮನಿಸಲಾಗಿದೆ.
ಇದನ್ನೂ ಓದಿ: ಓಪನ್ ಅಕ್ಸೆಸ್ ಮೂಲಕ ವಿದ್ಯುತ್ ಖರೀದಿ; ಸೆಂಟ್ರಲ್ ರೈಲ್ವೆಗೆ ಆರು ಸಾವಿರ ಕೋಟಿ ರೂ ಉಳಿತಾಯ
ಹಿಂದಿನ ಕ್ವಾರ್ಟರ್ಗೆ ಹೋಲಿಸಿದರೆ ಮೂರನೇ ಕ್ವಾರ್ಟರ್ನಲ್ಲಿ (ಅಕ್ಟೋಬರ್ನಿಂದ ಡಿಸೆಂಬರ್) ಔದ್ಯಮಿಕ ಚಟುವಟಿಕೆ ಉತ್ತಮಗೊಂಡಿದೆ. ಜನವರಿಯಲ್ಲಿನ ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ನ ದತ್ತಾಂಶವು ಇದನ್ನು ದೃಢಪಡಿಸುತ್ತದೆ.
ಟ್ರಾಕ್ಟರ್ಗಳ ಮಾರಾಟ, ಇಂಧನ ಬಳಕೆ ಹೆಚ್ಚಳ, ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ, ಇತ್ಯಾದಿ ಅಂಶಗಳು ಒಟ್ಟಾರೆ ಆರ್ಥಿಕತೆ ಚುರುಕುಗೊಂಡಿರುವುದರ ಸಂಕೇತವಾಗಿವೆ ಎಂಬುದನ್ನು ಈ ಬುಲೆಟ್ನಲ್ಲಿ ಎತ್ತಿ ತೋರಿಸಲಾಗಿದೆ.
ಭಾರತದ ಆರ್ಥಿಕತೆ ಡಿಸೆಂಬರ್ ಅಂತ್ಯದ ಕ್ವಾರ್ಟರ್ನಲ್ಲಿ ನಿರೀಕ್ಷೆಗಿಂತ ತುಸು ಹೆಚ್ಚೇ ಬೆಳವಣಿಗೆ ಕಾಣಬಹುದು ಎಂಬುದು ಆರ್ಥಿಕ ತಜ್ಞರ ಸಮೀಕ್ಷೆಯಿಂದ ವ್ಯಕ್ತವಾಗಿದೆ. ಎಕನಾಮಿಕ್ ಟೈಮ್ಸ್ ನಡೆಸಿದ ಪೋಲಿಂಗ್ನಲ್ಲಿ, ಭಾರತದ ಜಿಡಿಪಿ ದರ ಅಕ್ಟೋಬರ್ನಿಂದ ಡಿಸೆಂಬರ್ವರೆಗಿನ ಕ್ವಾರ್ಟರ್ನಲ್ಲಿ ಶೇ. 6.3ರಷ್ಟಿರಬಹುದು ಎನ್ನುವ ಸರಾಸರಿ ಅಂದಾಜು ಸಿಕ್ಕಿದೆ. ಪೋಲಿಂಗ್ನಲ್ಲಿ ಪಾಲ್ಗೊಂಡಿದ್ದ ವಿವಿಧ ಆರ್ಥಿಕ ತಜ್ಞರು ಜಿಡಿಪಿ ದರ ಶೇ. 5.8ರಿಂದ ಶೇ. 6.5ರ ಶ್ರೇಣಿಯಲ್ಲಿ ಅಂದಾಜು ಮಾಡಿದ್ದರು. ಸರಾಸರಿಯಾಗಿ ಅದು ಶೇ. 6.3ರಷ್ಟಾಗುತ್ತದೆ.
ಇದನ್ನೂ ಓದಿ: ಪಿಎಂ ಇಂಟರ್ನ್ಶಿಪ್ ಸ್ಕೀಮ್; 2ನೇ ಸುತ್ತಿನಲ್ಲಿ 1 ಲಕ್ಷ ಇಂಟರ್ನಿಗಳಿಗೆ ಅವಕಾಶ
ಆರ್ಬಿಐನ ಎಂಪಿಸಿ ಸಭೆಯಲ್ಲಿ ಮಾಡಲಾಗಿದ್ದ ಅಂದಾಜು ಪ್ರಕಾರ ಡಿಸೆಂಬರ್ ಕ್ವಾರ್ಟರ್ನಲ್ಲಿ ಆರ್ಥಿಕತೆ ಶೇ. 6.2ರಷ್ಟು ಬೆಳೆಯಬಹುದು ಎನ್ನಲಾಗಿತ್ತು. ಈಗ ಬೇರೆ ಬೇರೆ ಆರ್ಥಿಕ ತಜ್ಞರು ಬೆಳವಣಿಗೆ ವಿಚಾರದಲ್ಲಿ ಹೆಚ್ಚು ಆಶಾದಾಯಕವಾಗಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ