ಜಾಗತಿಕ ಸಂಕಷ್ಟ ಕಾಲದಲ್ಲೂ ಆರ್ಥಿಕ ಅಭಿವೃದ್ಧಿ ವೇಗದಲ್ಲಿ ಭಾರತವೇ ನಂ. 1: ವಿಶ್ವಸಂಸ್ಥೆ ಅಂದಾಜು

UN report doesn't lose hope on Indian economy: ವಿಶ್ವ ಸಂಸ್ಥೆಯ ವರ್ಲ್ಡ್ ಎಕನಾಮಿಕ್ ಸಿಚುವೇಶನ್ ಅಂಡ್ ಪ್ರಾಸ್​​ಪೆಕ್ಟ್ಸ್ (ಡಬ್ಲ್ಯುಇಎಸ್​​ಪಿ) ಮಧ್ಯವರ್ಷದ ವರದಿ ಪ್ರಕಾರ ಭಾರತದ ಆರ್ಥಿಕತೆ ಈ ವರ್ಷ ಶೇ. 6.3ರಷ್ಟು ಬೆಳೆಯಬಹುದು. ಜನವರಿಯಲ್ಲಿ ಮಾಡಿದ ಅಂದಾಜು ಪ್ರಕಾರ ಶೇ. 6.6 ಜಿಡಿಪಿ ದರ ಇರಬಹುದು ಎಂದಿತ್ತು. ಎರಡು ತಿಂಗಳ ಹಿಂದಿನ ಅಂದಾಜಿನಲ್ಲಿ ಅದು ಶೇ. 6.4ಕ್ಕೆ ಇಳಿದಿತ್ತು. ಈಗ ಮತ್ತಷ್ಟು ನಿರೀಕ್ಷೆ ಇಳಿಸಿದೆ. ಆದರೂ ಕೂಡ ಪ್ರಮುಖ ಆರ್ಥಿಕತೆಗಳ ಪೈಕಿ ಭಾರತವೇ ಅತಿ ವೇಗದ ಬೆಳವಣಿಗೆ ದಾಖಲಿಸಬಹುದು.

ಜಾಗತಿಕ ಸಂಕಷ್ಟ ಕಾಲದಲ್ಲೂ ಆರ್ಥಿಕ ಅಭಿವೃದ್ಧಿ ವೇಗದಲ್ಲಿ ಭಾರತವೇ ನಂ. 1: ವಿಶ್ವಸಂಸ್ಥೆ ಅಂದಾಜು
ಭಾರತದ ಆರ್ಥಿಕತೆ

Updated on: May 16, 2025 | 12:39 PM

ನವದೆಹಲಿ, ಮೇ 16: ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ (Indian economy) ವೇಗ ತುಸು ತಗ್ಗಬಹುದಾದರೂ ಪ್ರಮುಖ ಆರ್ಥಿಕತೆಗಳ ಪೈಕಿ ಭಾರತವೇ ಈ ವರ್ಷ ಮುಂಚೂಣಿಯಲ್ಲಿರುತ್ತದೆ. ವಿಶ್ವಸಂಸ್ಥೆ ಮಾಡಿರುವ ಅಂದಾಜು ಪ್ರಕಾರ 2024-25ರಲ್ಲಿ ಭಾರತದ ಜಿಡಿಪಿ ದರ ಶೇ. 6.3ರಷ್ಟಿರಬಹುದು. ಹಿಂದಿನ ಸಲ ಮಾಡಿದ ಅಂದಾಜು ಪ್ರಕಾರ ಜಿಡಿಪಿ ದರ ಶೇ. 6.4 ಇರಬಹುದು ಎಂದಿತ್ತು. ಈಗ 10 ಮೂಲಾಂಕಗಳಷ್ಟು ದರವನ್ನು ತನ್ನ ಅಂದಾಜಿನಲ್ಲಿ ಇಳಿಸಿದೆ. ಜನವರಿಯಲ್ಲಿ ಮಾಡಿದ್ದ ಅಂದಾಜು ಪ್ರಕಾರ ಜಿಡಿಪಿ ಶೇ. 6.6ರಷ್ಟು ಬೆಳೆಯಬಹುದು ಎಂದಿತ್ತು.

ಆದರೆ, ಜಾಗತಿಕವಾಗಿ ಇರುವ ಆರ್ಥಿಕ ಹಿನ್ನಡೆಯ ವಾತಾವರಣವನ್ನು ಗಣನೆಗೆ ತೆಗೆದುಕೊಂಡರೆ ಭಾರತದ ಶೇ. 6.3 ಬೆಳವಣಿಗೆ ನಿಜಕ್ಕೂ ಗಮನಾರ್ಹವಾದುದು ಎಂಬುದು ವಿಶ್ವ ಸಂಸ್ಥೆಯ ವರದಿ ಈಗ ಮಾಡಿರುವ ಪ್ರಶಂಸೆ.

ವಿಶ್ವ ಸಂಸ್ಥೆಯು ನಿನ್ನೆ ಈ ವರ್ಷದ ಮಧ್ಯಭಾಗದ ವಿಶ್ವ ಆರ್ಥಿಕ ಸಂದರ್ಭ ಮತ್ತು ಅವಲೋಕನ (ಡಬ್ಲ್ಯುಇಎಸ್​​ಪಿ) ವರದಿ ಬಿಡುಗಡೆ ಮಾಡಿದೆ. ವಿಶ್ವ ಆರ್ಥಿಕತೆ ಈಗ ಬಹಳ ಸೂಕ್ಷ್ಮ ಗಳಿಗೆಯಲ್ಲಿದೆ. ವ್ಯಾಪಾರ ಕಗ್ಗಂಟು ಹೆಚ್ಚಿದೆ, ನೀತಿಯಲ್ಲಿ ಅನಿಶ್ಚಿತತೆ ಇದೆ. ಇವು ಜಾಗತಿಕ ಆರ್ಥಿಕ ಬೆಳವಣಿಗೆಯನ್ನು ದುರ್ಬಲಗೊಳಿಸಿದೆ ಎಂದು ಈ ವರದಿಯು ಎಚ್ಚರಿಸಿದೆ. ಇದರ ಪ್ರಕಾರ, ಈ ವರ್ಷ ಜಾಗತಿಕ ಆರ್ಥಿಕತೆ ಶೇ. 2.4ರಷ್ಟು ಬೆಳೆಯಬಹುದು. ಈ ಹಿನ್ನೆಲೆಯಲ್ಲಿ ಭಾರತದ ಅಭಿವೃದ್ಧಿ ದರ ಆಶಾದಾಯಕ ಎನಿಸುತ್ತದೆ.

ಇದನ್ನೂ ಓದಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಭಾರತಕ್ಕೆ ಆಗುವ ಪ್ರಯೋಜನ ಅಷ್ಟಿಷ್ಟಲ್ಲ… ಇಲ್ಲಿದೆ ಅನುಕೂಲಗಳ ವಿವರ

ಚೀನಾದ ಆರ್ಥಿಕತೆ ಶೇ. 4.6, ಅಮೆರಿಕದ ಜಿಡಿಪಿ ಶೇ. 1.6, ಜಪಾನ್​​ನದ್ದು ಶೇ. 0.7, ಐರೋಪ್ಯ ಒಕ್ಕೂಟದ್ದು ಶೇ. 1ರಷ್ಟು ಬೆಳೆಯಬಹುದು. ಜರ್ಮನಿ ಮೈನಸ್ 0.1 ಪ್ರತಿಶತ ಬೆಳವಣಿಗೆ ದಾಖಲಿಸಬಹುದು ಎಂದು ಅಂದಾಜಿಸಲಾಗಿದೆ. ಹೆಚ್ಚಿನ ಶ್ರೀಮಂತ ದೇಶಗಳ ಆರ್ಥಿಕ ಬೆಳವಣಿಗೆ ಶೇ. 3ಕ್ಕಿಂತಲೂ ಕಡಿಮೆಯೇ ಇರಲಿದೆ.

ಭಾರತದಲ್ಲಿ ಹಣದುಬ್ಬರ, ನಿರುದ್ಯೋಗ ಸಮಸ್ಯೆಯಲ್ಲಿ ಸುಧಾರಣೆ

ವಿಶ್ವಸಂಸ್ಥೆಯ ಈ ವರದಿ ಪ್ರಕಾರ ಭಾರತದಲ್ಲಿ 2024ರಲ್ಲಿ ಶೇ. 4.9ರಷ್ಟು ಇದ್ದ ಹಣದುಬ್ಬರವು 2025ರಲ್ಲಿ ಶೇ. 4.3ಕ್ಕೆ ಇಳಿಯಬಹುದು. ಇದು ಆರ್​​ಬಿಐ ಹಾಕಿಕೊಂಡ ಶೇ. 4ರ ಹಣದುಬ್ಬರ ಗುರಿಯ ಸಮೀಪವೇ ಇದೆ. ಹೀಗಾಗಿ, ಭಾರತಕ್ಕೆ ಈ ವರ್ಷ ಬೆಲೆ ಏರಿಕೆ ಸಮಸ್ಯೆ ಹೆಚ್ಚಾಗಿ ಕಾಡದೇ ಹೋಗಬಹುದು.

ಇದನ್ನೂ ಓದಿ: ಪರ್ಸನಲ್ ಲೋನ್: ಮೇಲ್ನೋಟಕ್ಕೆ ಗೊತ್ತಾಗದ ಶುಲ್ಕಗಳು ಹಲವು; ನೀವು ತಿಳಿದಿರಬೇಕಾದ ಸಂಗತಿಗಳಿವು..

ಇನ್ನು, ನಿರುದ್ಯೋಗ ಕೂಡ ಈ ವರ್ಷ ಹೆಚ್ಚು ಸಮಸ್ಯಾತ್ಮಕ ಎನಿಸುವುದಿಲ್ಲ. ಆರ್ಥಿಕತೆ ಸ್ಥಿರವಾಗಿರುವುದರಿಂದ ನಿರುದ್ಯೋಗ ಸಮಸ್ಯೆ ಕಾಡದೇ ಹೋಗಬಹುದು. ಆದರೆ, ಮಹಿಳೆಯರನ್ನು ಉದ್ಯೋಗ ಕ್ಷೇತ್ರದಲ್ಲಿ ಇನ್ನಷ್ಟು ಒಳಗೊಳ್ಳುವ ಅವಶ್ಯಕತೆ ಇದೆ ಎಂದು ಈ ವರದಿಯಲ್ಲಿ ಸಲಹೆ ನೀಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ