Economy: ಖಾಸಗಿ ಬಂಡವಾಳ ವೆಚ್ಚ ಬರದಿದ್ದರೂ ಇದೇ ಆರ್ಥಿಕ ವೇಗ ಉಳಿಯಲು ಸಾಧ್ಯ: ಟಿವಿ ಸೋಮನಾಥನ್

|

Updated on: Feb 04, 2024 | 5:39 PM

Finance Secretary TV Somanathan Speaks: ಖಾಸಗಿ ವಲಯದಿಂದ ಬಂಡವಾಳ ವೆಚ್ಚ ಹೆಚ್ಚಲಿ ಬಿಡಲಿ ಭಾರತದ ಆರ್ಥಿಕತೆಯ ವೇಗ ಕಡಿಮೆ ಆಗುವುದಿಲ್ಲ ಎಂದು ಹಣಕಾಸು ಕಾರ್ಯದರ್ಶಿ ಹೇಳಿದ್ದಾರೆ. ಭಾರತದ ಆಂತರಿಕ ವೆಚ್ಚ ಹೆಚ್ಚುತ್ತಿರುವುದರಿಂದ ಕಳೆದ ಮೂರು ವರ್ಷಗಳಿಂದ ಆರ್ಥಿಕ ಬೆಳವಣಿಗೆ ಶೇ. 7ರ ದರಕ್ಕಿಂತ ಹೆಚ್ಚಿದೆ. ಸರ್ಕಾರದ ಬಂಡವಾಳ ವೆಚ್ಚವೂ ಹೆಚ್ಚಾಗುತ್ತಿದೆ. ಖಾಸಗಿ ವಲಯದಿಂದಲೂ ವೆಚ್ಚ ಬರತೊಡಗಿದರೆ ಬೆಳವಣಿಗೆ ಇನ್ನೂ ಚುರುಕಾಗುತ್ತದೆ.

Economy: ಖಾಸಗಿ ಬಂಡವಾಳ ವೆಚ್ಚ ಬರದಿದ್ದರೂ ಇದೇ ಆರ್ಥಿಕ ವೇಗ ಉಳಿಯಲು ಸಾಧ್ಯ: ಟಿವಿ ಸೋಮನಾಥನ್
ಭಾರತದ ಆರ್ಥಿಕತೆ
Follow us on

ನವದೆಹಲಿ, ಫೆ. 4: ಖಾಸಗಿ ವಲಯದಿಂದ ಬಂಡವಾಳ ವೆಚ್ಚ ಹರಿದುಬರದೇ ಹೋದರೂ ಈಗಿರುವ ಬೆಳವಣಿಗೆ ದರ (economic growth rate) ಉಳಿಸಿಕೊಳ್ಳುವಷ್ಟು ಸುದೃಢತೆ ಭಾರತದ ಆರ್ಥಿಕತೆಗೆ ಇದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿ ಟಿ.ವಿ. ಸೋಮನಾಥನ್ (finance secretary TV Somanathan) ಅಭಿಪ್ರಾಯಪಟ್ಟಿದ್ದಾರೆ. ಈ ವರ್ಷ ಯಾವ ಬೆಳವಣಿಗೆ ದರ ಇದೆ ಅದಕ್ಕಿಂತ ವೇಗ ಕಡಿಮೆ ಆಗುವಂತಹ ಯಾವ ಕ್ರಮವನ್ನೂ ಸರ್ಕಾರ ತೆಗೆದುಕೊಂಡಿಲ್ಲ. ಖಾಸಗಿ ಬಂಡವಾಳ ಹೂಡಿಕೆ ಬರದೇ ಹೋದರೂ ಇದೇ ವೇಗ ಮುಂದುವರಿಯುತ್ತದೆ. ಖಾಸಗಿ ವೆಚ್ಚ ಹೆಚ್ಚಾದರೆ ಆರ್ಥಿಕ ಪ್ರಗತಿಯ ವೇಗವೂ ಹೆಚ್ಚುತ್ತದೆ ಎಂದು ಸೋಮನಾಥನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಭಾರತದ ಸಾಂಖ್ಯಿಕ ಸಚಿವಾಲಯ (ministry of statistics) ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ 2023-24ರ ಹಣಕಾಸು ವರ್ಷದ ಮೊದಲಾರ್ಧದಲ್ಲಿ, ಅಂದರೆ 2023ರ ಏಪ್ರಿಲ್​ನಿಂದ ಸೆಪ್ಟೆಂಬರ್​ವರೆಗಿನ ಅವಧಿಯಲ್ಲಿ ಭಾರತದ ಆರ್ಥಿಕತೆ ಶೇ. 7.6ರಷ್ಟು ಬೆಳೆದಿದೆ. ಹಣಕಾಸು ಸಚಿವಾಲಯ ಮಾಡಿರುವ ಅಂದಾಜು ಪ್ರಕಾರ ಭಾರತದ ಆರ್ಥಿಕ ಬೆಳವಣಿಗೆ 2024-25ರ ಹಣಕಾಸು ವರ್ಷದಲ್ಲಿ ಶೇ. 7ರಷ್ಟಿರಬಹುದು ಎಂದಿದೆ. ಆರ್​ಬಿಐನ ಅಂದಾಜು ಕೂಡ ಬಹುತೇಕ ಇಷ್ಟೇ ಇದೆ.

ಆಂತರಿಕ ಬೇಡಿಕೆಯ ಶಕ್ತಿಯು ಕಳೆದ ಮೂರು ವರ್ಷಗಳಿಂದ ಆರ್ಥಿಕತೆಯನ್ನು ಶೇ. 7ರ ದರದಲ್ಲಿ ಬೆಳೆಸುತ್ತಿದೆ. ಖಾಸಗಿ ವಲಯದಿಂದ ಹೂಡಿಕೆ ಬರದೇ ಇದ್ದಾಗ್ಯೂ ಈ ವೃದ್ಧಿ ಕಾಣಲು ನಮಗೆ ಸಾಧ್ಯವಾಗಿದೆ. ವರ್ಷಕ್ಕಿಂತ ಮುಂದಿನ ವರ್ಷ ಹೆಚ್ಚು ವ್ಯಯಿಸುತ್ತೇವೆ ಎಂದು ಮನಿಕಂಟ್ರೋಲ್ ಜಾಲತಾಣಕ್ಕೆ ಮೊನ್ನೆ (ಫೆ. 2) ನೀಡಿದ ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಭಾರತದ ಫಾರೆಕ್ಸ್ ರಿಸರ್ವ್ಸ್ 616.733 ಬಿಲಿಯನ್ ಡಾಲರ್​ಗೆ ಹೆಚ್ಚಳ

ಕಳೆದ ಕೆಲ ವರ್ಷಗಳಿಂದ ಸರ್ಕಾರದಿಂದಲೇ ಬಂಡವಾಳ ವೆಚ್ಚ ಹೆಚ್ಚಾಗಿ ಆಗುತ್ತಿದೆ. ಮುಂದಿನ ಹಣಕಾಸು ವರ್ಷಕ್ಕೆ (2024-25) ಸರ್ಕಾರ 11.1 ಲಕ್ಷ ಕೋಟಿ ರೂ ಅನ್ನು ನಿಯೋಜಿಸಿದೆ. 2023-24ರ ಹಣಕಾಸು ವರ್ಷದಲ್ಲಿ ಸರ್ಕಾರದ ಬಂಡವಾಳ ವೆಚ್ಚವಾಗಿ 10 ಲಕ್ಷ ಕೋಟಿ ರೂ ತೆಗೆದಿರಿಸಲಾಗಿತ್ತು. 2022-23ರ ಹಣಕಾಸು ವರ್ಷದಕ್ಕೆ ಹೋಲಿಸಿದರೆ 2023-24ರಲ್ಲಿ ಸರ್ಕಾರದ ಬಂಡವಾಳ ವೆಚ್ಚದಲ್ಲಿ ಶೇ. 33ರಷ್ಟು ಹೆಚ್ಚಾಗಿತ್ತು. 2024-25ರಲ್ಲಿ ಇದರ ಏರಿಕೆ ಶೇ. 11.1ರಷ್ಟು ಮಾತ್ರವೇ ಆಗಿದೆ. ಆದರೆ, 2022-23 ಮತ್ತು 2023-24ರ ವರ್ಷಗಳಲ್ಲಿ ಆಗಿರುವ ಬೆಳವಣಿಗೆ ವ್ಯತ್ಯಾಸ ಪರಿಗಣಿಸಿದರೆ ಶೇ. 11ರಷ್ಟು ಬಂಡವಾಳ ವೆಚ್ಚ ಹೆಚ್ಚಳ ಕಡಿಮೆ ಏನಲ್ಲ ಎಂಬುದು ಸೋಮನಾಥನ್ ಅವರ ಅನಿಸಿಕೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ